ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (Citizenship Amendment Act – CAA) ಜಾರಿಗೆ ತಡೆ ಕೋರಿದ ಅರ್ಜಿಗಳನ್ನು ಮಾರ್ಚ್ 19 ರಂದು ಆಲಿಸಲು ಸುಪ್ರೀಂ ಕೋರ್ಟ್ (Supreme court) ಶುಕ್ರವಾರ ಒಪ್ಪಿಕೊಂಡಿದೆ.
ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ಅವರ ಮುಂದೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal) ಅವರು, ಈ ವಿಷಯವನ್ನು ಮುಂದಿನ ವಾರ ಪಟ್ಟಿ ಮಾಡಲಾಗುವುದು ಎಂದು ಹೇಳಿದರು. 2019ರಿಂದ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಲಾದ ಇನ್ನೂರಕ್ಕೂ ಹೆಚ್ಚು ಅರ್ಜಿಗಳು CAAಯ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿವೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೀಡಾಗಿ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಪ್ರವೇಶಿಸಿದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವಕ್ಕೆ ದಾರಿ ಮಾಡಿಕೊಡುವ ಕಾನೂನನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಸಂಸತ್ತು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಇದನ್ನು ಜಾರಿ ಮಾಡಲಾಗಿದೆ. ಡಿಸೆಂಬರ್ 2019ರಲ್ಲಿ ಕಾನೂನು ಮಾಡಲಾಗಿತ್ತು. ಸೋಮವಾರ ಅದರ ನಿಯಮಗಳನ್ನು ಹೊರಡಿಸಿತು.
ಕಾಯಿದೆಯ ಅಧಿಸೂಚನೆಯು ವಿಪಕ್ಷ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಅಧಿಸೂಚಿತ ನಿಯಮಗಳು ಅಸಾಂವಿಧಾನಿಕ, ತಾರತಮ್ಯದ್ದು ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ಪೌರತ್ವದ ತತ್ವಗಳ ಉಲ್ಲಂಘನೆಯಾಗಿದೆ ಎಂದು ವಿಪಕ್ಷಗಳು ಹೇಳಿವೆ. ಮುಸ್ಲಿಮರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಪೌರತ್ವವನ್ನು ಧಾರ್ಮಿಕ ಗುರುತಿಗೆ ಜೋಡಿಸಿದ್ದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳನ್ನು ಈ ಕಾನೂನು ದುರ್ಬಲಗೊಳಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.
ಆದರೆ, ಸಿಎಎ ಪೌರತ್ವವನ್ನು ನೀಡುವುದರ ಕುರಿತು ಇದೆ ಹೊರತು ದೇಶದ ಯಾವುದೇ ನಾಗರಿಕರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ. ಸರ್ಕಾರ ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಈ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
“ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ನಾವು ಇದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಅವರದು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಇತಿಹಾಸ. ಆದರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಇತಿಹಾಸ ವಿಭಿನ್ನ. ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳುವುದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ನೀಡಿದ ಪ್ರತಿಯೊಂದು ಭರವಸೆಯೂ ಈಡೇರಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: CAA: ಭಾರತದಲ್ಲಿ ಸಿಎಎ ಜಾರಿ; ಮತ್ತೆ ಅಮೆರಿಕದ ಅಧಿಕ ಪ್ರಸಂಗ