Site icon Vistara News

Electoral Bond: ಮಾಹಿತಿ ನೀಡಲು ಕಾಲಾವಧಿ ಕೋರಿದ ಎಸ್‌ಬಿಐ ಮನವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

America tortured Nikhil Gupta, Petition to the Supreme Court

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ (Electoral Bond) ಕುರಿತು ಮಾಹಿತಿ ನೀಡಲು ಹೆಚ್ಚಿನ ಕಾಲಾವಕಾಶ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ವಿಚಾರಣೆ ನಡೆಸಲಿದೆ. ವಿವರ ಸಲ್ಲಿಸಲು ಕೋರ್ಟ್ ಮಾರ್ಚ್ 6ರವರೆಗೆ ಕಾಲಾವಕಾಶ ನೀಡಿತ್ತು. ಬ್ಯಾಂಕ್ ಜೂನ್ 30 ರವರೆಗೆ ಸಮಯ ಬಯಸಿದೆ.

ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸಲಿದೆ. ಕಳೆದ ತಿಂಗಳು ಬಾಂಡ್‌ ಯೋಜನೆಯನ್ನು ಕೋರ್ಟ್‌ ರದ್ದುಗೊಳಿಸಿತ್ತು. ರಾಜಕೀಯ ಪಕ್ಷಗಳು ಪಡೆದ ಪ್ರತಿಯೊಂದು ಚುನಾವಣಾ ಬಾಂಡ್‌ಗಳ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಕೋರ್ಟ್‌ ಪೀಠವು ಬ್ಯಾಂಕ್‌ಗೆ ಆದೇಶಿಸಿತ್ತು.

ಇದರ ಜೊತೆಗೆ, ಲಾಭರಹಿತ ಸಂಸ್ಥೆಯಾದ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಆಂಡ್ ಕಾಮನ್ ಕಾಸ್‌ನ ಇನ್ನೊಂದು ಮನವಿಯನ್ನು ಸಹ ನ್ಯಾಯಾಲಯ ಆಲಿಸಲಿದೆ. ಇದು ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿದೆ. ಮಾರ್ಚ್ 6ರೊಳಗೆ ವಿವರಗಳನ್ನು ಸಲ್ಲಿಸುವಂತೆ ನೀಡಿದ ನ್ಯಾಯಾಲಯದ ಆದೇಶವನ್ನು ಬ್ಯಾಂಕ್ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಫೆಬ್ರವರಿ 15ರಂದು, ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪೀಠವು ರದ್ದುಗೊಳಿಸಿತ್ತು. ಇದು ಅನಾಮಧೇಯ ರಾಜಕೀಯ ದೇಣಿಗೆಯನ್ನು ಪೋಷಿಸುತ್ತದೆ. ಮುಕ್ತತೆ ಇಲ್ಲ. ಹೀಗಾಗಿ ಇದು ಅಸಾಂವಿಧಾನಿಕ ಎಂದು ನ್ಯಾಯಾಧೀಶರು ಹೇಳಿದ್ದರು. ಚುನಾವಣಾ ಬಾಂಡ್‌ಗಳು ಜನರ ಮಾಹಿತಿಯ ಹಕ್ಕನ್ನು ಉಲ್ಲಂಘಿಸಿವೆ. ಸಂವಿಧಾನದ 14ನೇ ವಿಧಿಯಲ್ಲಿರುವ ಸಮಾನತೆಯನ್ನು ಉಲ್ಲಂಘಿಸುಸುತ್ತದೆ. ಸಂವಿಧಾನದಲ್ಲಿ ನಿಗದಿಪಡಿಸಿದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ದಾನಿಗಳ ವಿವರ, ಅವರು ನೀಡಿದ ಮೊತ್ತ ಮತ್ತು ಸ್ವೀಕರಿಸಿದರ ವಿವರಗಳನ್ನು ಒದಗಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗವನ್ನು ಕೇಳಿದೆ. ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಮಾರ್ಚ್ 13ರೊಳಗೆ ಪ್ರಕಟಿಸಬೇಕು ಎಂದು ಅದು ಹೇಳಿದೆ. ಏಪ್ರಿಲ್ 12, 2019ರಿಂದ ಖರೀದಿಸಿದ ಬಾಂಡ್‌ಗಳ ವಿವರಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ನ್ಯಾಯಾಲಯವು ಎಸ್‌ಬಿಐಗೆ ಕೇಳಿದೆ.

ಮಾರ್ಚ್ 4ರಂದು, ಜೂನ್ 30ರವರೆಗೆ ಸಮಯವನ್ನು ವಿಸ್ತರಿಸಲು ಉನ್ನತ ನ್ಯಾಯಾಲಯವನ್ನು ಎಸ್‌ಬಿಐ ಕೇಳಿತ್ತು. ಮಾಹಿತಿ ಪ್ರತ್ಯೇಕಿಸಿ ಪಡೆಯುವುದು ಸಾಕಷ್ಟು ಸಮಯ ತೆಗೆದುಕೊಳ್ಳುವ ಕೆಲಸ ಎಂದು ಬ್ಯಾಂಕ್ ಹೇಳಿದೆ. ಅನಾಮಧೇಯತೆಯನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅದನ್ನು ಸಂಕೀರ್ಣಗೊಳಿಸಲಾಗಿದೆ. ಆದರೆ, ಇದು ಉದ್ದೇಶಪೂರ್ವಕ. ಎಸ್‌ಬಿಐ ಅನ್ನು ಬಿಜೆಪಿ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಮುಬಿಯುವವರೆಗೆ ಡೇಟಾವನ್ನು ಮುಚ್ಚಿಡುವ ತಂತ್ರವಿದು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಂಪೂರ್ಣ ಕಂಪ್ಯೂಟರೀಕೃತ ಬ್ಯಾಂಕ್ ಆಗಿರುವ ಎಸ್‌ಬಿಐ ಕೆಲವೇ ಕ್ಲಿಕ್‌ಗಳಲ್ಲಿ ಎಲ್ಲಾ ವಿವರಗಳನ್ನು ಕಲೆಹಾಕಬಹುದು. ಎಸ್‌ಬಿಐ 48 ಕೋಟಿ ಬ್ಯಾಂಕ್ ಖಾತೆಗಳು, 66,000 ಎಟಿಎಂಗಳನ್ನು ನಿರ್ವಹಿಸುತ್ತದೆ. ಸುಮಾರು 23,000 ಶಾಖೆಗಳನ್ನು ಹೊಂದಿದೆ. ಇದೀಗ ಕೇವಲ 22,217 ಎಲೆಕ್ಟೋರಲ್ ಬಾಂಡ್‌ಗಳ ಡೇಟಾವನ್ನು ನೀಡಲು ಎಸ್‌ಬಿಐ ಐದು ತಿಂಗಳು ಕೋರುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ ವಿವರ ನೀಡದ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

Exit mobile version