ಹಾಸನ: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷ್ಯ ನೀಡಲು ಪೊಲೀಸ್ ಠಾಣೆಗೆ ಹೋಗಿ ತಾವಾಗಿಯೇ ಎಂಎಲ್‌ಸಿ ಸೂರಜ್ ರೇವಣ್ಣ (Suraj Revanna Case) ಸಿಕ್ಕಿಬಿದ್ದಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ರಾತ್ರಿ ಕೇಸ್ ದಾಖಲಾದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಎಡಿಜಿಪಿ ಆರ್ ಹಿತೇಂದ್ರ ಅವರು ಆದೇಶ ಹೊರಡಿಸಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 92/2024 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಮುಂದಿನ ತನಿಖೆಗಾಗಿ ಖುದ್ದು ಸಿಐಡಿ ಕಚೇಇಗೆ ತೆರಳಿ ಕೇಸ್ ಫೈಲ್ ಅನ್ನು ಸಿಐಡಿಗೆ ಹಸ್ತಾಂತರ ಮಾಡುವಂತೆ ಹಾಸನ ಎಸ್‌ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಕೇಸ್ ಫೈಲ್ ಹಾಗೂ ಆರೋಪಿ ಸಮೇತ ಹೊಳೆನರಸೀಪುರ ಪೊಲೀಸರು ಮಧ್ಯಾಹ್ನದ ನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ | Suraj Revanna Case: ಸಾಕ್ಷಿ ನೀಡಲು ಠಾಣೆಗೆ ಬಂದು ಪೊಲೀಸ್ ಬಲೆಗೆ ಬಿದ್ದ ಸೂರಜ್ ರೇವಣ್ಣ
ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506, 34 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಡಿಜಿ ಕಚೇರಿಯಲ್ಲಿ ಜೂನ್ 21ರಂದು ಸಂತ್ರಸ್ತ ಹಾಗೂ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಹಾಸನ ಎಸ್‌ಪಿಗೆ ದೂರಿನ ಪ್ರತಿ ಮೇಲ್ ಮಾಡಲಾಗಿತ್ತು. ಹೀಗಾಗಿ ಸಂತ್ರಸ್ತನನ್ನು ಕರೆಸಿ ಮಾಹಿತಿ ಪಡೆದ ಪೊಲೀಸರು ಜೂನ್ 22ರಂದು ರಾತ್ರಿ ಕೇಸ್ ದಾಖಲಿಸಿಕೊಂಡಿದ್ದರು. ನಂತರ ವಿಚಾರಣೆಗಾಗಿ ಸೂರಜ್ ರೇವಣ್ಣ ಠಾಣೆಗೆ ಆಗಮಿಸಿದ ವೇಳೆ ಅವರನ್ನು ಶನಿವಾರ ರಾತ್ರಿ ಅರೆಸ್ಟ್ ಮಾಡಲಾಗಿತ್ತು.
ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಾಕ್ಷಿ ನೀಡಲು ಸೂರಜ್ ಪೊಲೀಸ್ ಠಾಣೆಗೆ ತೆರಳಿದ್ದರು. ಆಡಿಯೊ ರೆಕಾರ್ಡ್, ಫೋಟೊ ಹಾಗೂ ಇತರ ದಾಖಲೆ ನೀಡುವ ಸಲುವಾಗಿ ಸೂರಜ್ ಹೋಗಿದ್ದರು. ಬಂಧನ ಸಾಧ್ಯತೆಯ ನಿರೀಕ್ಷೆ ಮಾಡದೆ ಹೋಗಿದ್ದ ಸೂರಜ್ ರೇವಣ್ಣ ಅವರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಾನೂನು ತನಿಖೆ ಸುಳಿಗೆ ಸಿಲುಕಿದ ರೇವಣ್ಣ ಕುಟುಂಬ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಮಗ ರೇವಣ್ಣ ಕುಟುಂಬಕ್ಕೆ ಇದೀಗ ಭಾರಿ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನವಾಗಿದೆ. ಸಂತ್ರಸ್ತೆ ಅಪಹರಣ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ರೇವಣ್ಣ ಹೊರಬಂದಿದ್ದಾರೆ. ಇದೇ ಸಂತ್ರಸ್ತೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಭವಾನಿ ರೇವಣ್ಣ ಬಂಧನ ಭೀತಿ ಎದುರಿಸಿದ್ದರು. ಇದೀಗ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಸೂರಜ್ ಕೂಡ ಅರೆಸ್ಟ್ ಆಗಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಸಂಕಷ್ಟ ಜೆಡಿಎಸ್ ನಾಯಕ ರೇವಣ್ಣ ಅವರನ್ನು ಹೈರಾಣ ಮಾಡಿದೆ.
ಏನಿದು ಪ್ರಕರಣ?
ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದರು.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗ ಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯದಿಂದ ದೇಹದ ಹಲವು ಭಾಗಗಳಲ್ಲಿ ಕಚ್ಚಿದ ಗುರುತುಗಳಿವೆ, ಮರ್ಮಾಂಗದ ಮೇಲೂ ಗಾಯವಾಗಿದೆ ಎಂದು ದೂರುದಾರ ಆರೋಪಿಸಿದ್ದರು.
ಇದನ್ನೂ ಓದಿ | Suraj Revanna Case: ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ; ದೂರು ಸಲ್ಲಿಸಿದ ವ್ಯಕ್ತಿ ವಿರುದ್ಧ ಎಫ್‌ಐಆರ್!
ಮತ್ತೊಂದೆಡೆ ದೂರು ನೀಡಿದ್ದ ವ್ಯಕ್ತಿ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.