Site icon Vistara News

Suraj Revanna Case: ಸೂರಜ್ ರೇವಣ್ಣ ಮತ್ತೆ 2 ದಿನ ಸಿಐಡಿ ಕಸ್ಟಡಿಗೆ; ವಕೀಲ ದೇವರಾಜೇಗೌಡಗೆ ಜಾಮೀನು

Suraj Revanna Case

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣನನ್ನು (Suraj Revanna Case) ಮತ್ತೆ ಎರಡು ದಿನ ಸಿಐಡಿ ಕಸ್ಟಡಿಗೆ ನೀಡಲು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಆದೇಶ ನೀಡಿದ್ದಾರೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ವಕೀಲ ದೇವರಾಜೇಗೌಡಗೆ ಜಾಮೀನು ಸಿಕ್ಕಿದೆ.

ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ದಾಖಲಾದ ಪ್ರಕರಣದಲ್ಲಿ ಜೂನ್‌ 22ರಂದು ಸೂರಜ್‌ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಸೂರಜ್‌ನ ಹಾಜರುಪಡಿಸಲಾಗಿತ್ತು. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌ ಸೂರಜ್‌ಗೆ ಜುಲೈ 3ರವರೆಗೆ ಕಸ್ಟಡಿ ವಿಸ್ತರಿಸಿದೆ.

ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ ಮತ್ತೆ ಆರು ದಿನ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಅಶೋಕ್ ನಾಯಕ್ ಮನವಿ ಮಾಡಿದರು. ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಬೇಕಿದೆ, ಪ್ರತಿನಿತ್ಯ ಏನೆಲ್ಲಾ ತನಿಖೆ ನಡೆದಿದೆ, ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಎಂಟು ದಿನ ಕಸ್ಟಡಿಯಲ್ಲಿದ್ದಾಗ ಏನಾದೂ ತೊಂದರೆ ನೀಡಿದರಾ ಎಂದು ಸೂರಜ್‌ಗೆ ಜಡ್ಜ್ ಪ್ರಶ್ನೆ ಕೇಳಿದರು. ಯಾವುದೇ ತೊಂದರೆ ನೀಡಿಲ್ಲ ಎಂದು ಸೂರಜ್ ಉತ್ತರಿಸಿದ್ದಾರೆ. ಬಳಿಕ 2 ದಿನ ಕಸ್ಟಡಿ ವಿಸ್ತರಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.

ಇದನ್ನೂ ಓದಿ | New Criminal Law: ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ ಹಾಸನದಲ್ಲಿ ದಾಖಲು, ಯಾವ ಕೇಸ್?‌

ವಕೀಲ ದೇವರಾಜೇಗೌಡಗೆ ಜಾಮೀನು

Prajwal Revanna case Devaraje Gowda should be given mental treatment says Congress

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ವಕೀಲ ದೇವರಾಜೇಗೌಡಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. 2023ರ ಡಿ.29ರಂದು ರಂದು ಅತ್ಯಾಚಾರ ಮಾಡಿದ್ದಾರೆ ಎಂದು 2024ರ ಏ.1 ರಂದು ಸಂತ್ರಸ್ತೆ ದೂರು ನೀಡಿದ್ದರು. ಇದಕ್ಕೂ ಮೊದಲು ಹನಿಟ್ರ್ಯಾಪ್ ಎಂದು ದೇವರಾಜೇಗೌಡ ಮಾ.28 ರಂದು ದೂರು ನೀಡಿದ್ದರು. ಇದೀಗ ಪ್ರಕರಣದಲ್ಲಿ ವಕೀಲ ದೇವರಾಜೇಗೌಡಗೆ ಜಾಮೀನು ನೀಡಲಾಗಿದೆ.

ಮಾರ್ಚ್ 29 ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆ ಪತಿ ದೂರು ನೀಡಿದ್ದರು. ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ದೇವರಾಜೇಗೌಡ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ಬಳಿಕ ವಕೀಲ ದೇವರಾಜೇಗೌಡಗೆ ನ್ಯಾ. ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿ ಆದೇಶಿಸಿದೆ.

ವಕೀಲ ದೇವರಾಜೇಗೌಡ ಬಂಧನವಾಗಿದ್ದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು.

Exit mobile version