Site icon Vistara News

CM Medal: ಕಳ್ಳತನ ಪ್ರಕರಣದಲ್ಲಿ ಸಸ್ಪೆಂಡ್‌ ಆದ ಮುಖ್ಯ ಪೇದೆಗೆ ಮುಖ್ಯಮಂತ್ರಿಗಳ ಪದಕ! ಇದೇನಿದು ಅಂತಿದಾರೆ ಜನ

cm medal saleem pasha

ಮೈಸೂರು: ತಿಂಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದ ಕಳ್ಳತನ (Theft) ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಸಹಕರಿಸಿದ ಆರೋಪ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪದಿಂದ ಅಮಾನತ್ತಾಗಿದ್ದ (Suspned) ಪೊಲೀಸ್‌ ಪೇದೆ (Police constable) ಈ ಬಾರಿ ಸ್ವಾತಂತ್ರ್ಯೋತ್ಸವದಲ್ಲಿ (Independence Day 2024) ಮುಖ್ಯಮಂತ್ರಿ ಸೇವಾ ಪದಕ (CM Medal) ಪಡೆದಿದ್ದು, ಇದೀಗ ವಿಪಕ್ಷಗಳಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗೆ ಕಾರಣವಾಗಿದೆ.

ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೇವಾ ಪದಕ ವಿಜೇತರ ಪಟ್ಟಿಯಲ್ಲಿ ಈ ಸಸ್ಪೆಂಡ್‌ ಆದ ಪೇದೆಯ ಹೆಸರಿದೆ. ಕರ್ನಾಟಕದ ಮುಖ್ಯಮಂತ್ರಿಗಳಿಂದ ಸೇವಾ ಪದಕ ಪಡೆಯುತ್ತಿರುವ ಈ ಪೇದೆಯ ಹೆಸರು ಸಲೀಂ ಪಾಶಾ. ಮೈಸೂರಿನಲ್ಲಿ ಎರಡು ದಶಕದಿಂದ ಕೆಲಸ ಮಾಡುತ್ತಿರುವ ಪೇದೆ ಸಲೀಂ. ಮೈಸೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಆದರೆ ಕಳೆದ ತಿಂಗಳು ಕಳವು ಪ್ರಕರಣವೊಂದರಲ್ಲಿ ಅವರ ಸಹಕಾರವೂ ಇದೆ ಎನ್ನುವ ಕಾರಣಕ್ಕೆ ಅಮಾನತುಪಡಿಸಲಾಗಿತ್ತು.

ಇದಲ್ಲದೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳವಿಗೆ ಪರೋಕ್ಷ ಸಹಕಾರ, ದಾಖಲೆಗಳ ಸೋರಿಕೆ ಮಾಡಿರುವ ಆರೋಪಗಳ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನ ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಸಲೀಂ ಪಾಶಾ ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣರಾಗಿರುತ್ತಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳು ಸೋರಿಕೆಯಾಗಿ ಸಾರ್ವಜನಿಕರ ಸ್ವತ್ತುಗಳು ಹೆಚ್ಚು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವುದಾಗಿ ಕಾರಣ ನೀಡಿ ಸಲೀಂ ಪಾಷಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತರು ಆದೇಶದಲ್ಲಿ ತಿಳಿಸಿದ್ದರು. ಈಗಲೂ ಸಲೀಂ ಅಮಾನತಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ನಡೆದಿದೆ.

ಸಲೀಂ ಕಳೆದ ವರ್ಷ ಕೆಲಸ ಮಾಡಿದ್ದ ಮೈಸೂರು ಸಿಸಿಬಿ ಘಟಕದಲ್ಲಿನ ಸೇವೆ ಆಧರಿಸಿ ಈ ವರ್ಷ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪಾಶಾ ಅಮಾನತುಗೊಳ್ಳುವ ಮುಂಚೆಯೇ ಮೈಸೂರು ನಗರ ಪೊಲೀಸ್‌ ಆಯುಕ್ತರಿಂದ ಶಿಫಾರಸ್ಸು ಆಗಿ ಹೋಗಿದ್ದ ಪಟ್ಟಿಯಲ್ಲಿ ಇವರ ಹೆಸರಿತ್ತು. ಅದನ್ನು ಗೃಹ ಇಲಾಖೆ ಪ್ರಕಟಿಸಿ ಎಡವಟ್ಟು ಮಾಡಿದೆ. ಒಂದು ತಿಂಗಳ ಹಿಂದೆ ಅಮಾನತಾದರೂ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯ ಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದ್ದೂ ಅಲ್ಲದೇ ಗೃಹ ಇಲಾಖೆ ಇಂತಹ ಅಂಶಗಳನ್ನು ಗಮನಿಸದೇ ಪ್ರಶಸ್ತಿ ಪ್ರಕಟಿಸುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಇದು 2023ರ ಕರ್ತವ್ಯದ ಆಧಾರದ ಮೇಲೆ ನೀಡಿರುವ ಪ್ರಶಸ್ತಿ. ಈ ವರ್ಷದ್ದು ಅಲ್ಲ ಎಂದು ಅನಾಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಾನತುಗೊಂಡ, ಈ ವರ್ಷ ಕರ್ತವ್ಯ ಲೋಪದಲ್ಲಿ ಸಿಲುಕಿದ ಪೊಲೀಸ್‌ ಪ್ರತಿಷ್ಠಿತ ಹಾಗೂ ಗೌರವಯುತ ಪ್ರಶಸ್ತಿ ಸ್ವೀಕರಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: CM Award : ಕಳಂಕಿತ ಡಿವೈಎಸ್ಪಿ ಜಾವೀದ್​ಗೆ ಸಿಎಂ ಪದಕ ನೀಡುವಂತೆ ಶಿಫಾರಸು; ಶಾಸಕ ಕಂದಕೂರ ವಿರೋಧ

Exit mobile version