Site icon Vistara News

Temple Tax: ʼದೇವಾಲಯಗಳ ಆದಾಯದಿಂದ ತೆರಿಗೆ ಸಂಗ್ರಹʼಕ್ಕೆ ಬಿಜೆಪಿ ಕಟು ಟೀಕೆ, ವಿಜಯೇಂದ್ರ- ರಾಮಲಿಂಗಾರೆಡ್ಡಿ ಟ್ವೀಟ್‌ ವಾರ್

ಕುಕ್ಕೆ ಸುಬ್ರಹ್ಮಣ್ಯ

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ- 2024 (Karnataka Hindu Religious Institutions and Charitable Endowments Bill 2024) ಅನ್ನು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದನ್ನು ಬಿಜೆಪಿ (BJP) ಕಟುವಾಗಿ ಟೀಕಿಸಿದೆ. ವಿಧೇಯಕದಲ್ಲಿರುವ, ದೇವಾಲಯಗಳ ಆದಾಯದಲ್ಲಿ ತೆರಿಗೆ ಸಂಗ್ರಹಿಸುವ ನಿಯಮದ (temple tax) ಬಗ್ಗೆ ಬಿಜೆಪಿಗರು ಆಕ್ಷೇಪಿಸಿದ್ದು, ಕಾಂಗ್ರೆಸ್ (congress) ಸರ್ಕಾರವನ್ನು “ಹಿಂದೂ ವಿರೋಧಿ” (Anti-Hindu) ಎಂದು ಕರೆದಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹಾಗೂ ರಾಜ್ಯದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ (Muzarai minister) ರಾಮಲಿಂಗಾರೆಡ್ಡಿ (Ramalinga Reddy) ನಡುವೆ ಟ್ವೀಟ್‌ ವಾರ್‌ ಕೂಡ ನಡೆದಿದೆ.

₹1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ.10ರಷ್ಟು ತೆರಿಗೆ ಮತ್ತು ₹10 ಲಕ್ಷದಿಂದ ₹1 ಕೋಟಿವರೆಗಿನ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ.5ರಷ್ಟು ತೆರಿಗೆ ಸಂಗ್ರಹಿಸಲು ಈ ವಿಧೇಯಕ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ʼಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಬರಿದಾಗಿರುವ ತನ್ನ ಬೊಕ್ಕಸವನ್ನು ತುಂಬಲು ಬಯಸಿದೆʼ ಎಂದು ಆರೋಪಿಸಿದ್ದಾರೆ.

ವಿಜಯೇಂದ್ರ ಅವರ ಟ್ವೀಟ್‌ನ ಪೂರ್ಣ ರೂಪ ಹೀಗಿದೆ:

“ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ.”

“ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿಗೂ‌ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣವನ್ನು ಸರ್ಕಾರ ಬಾಚಿಕೊಳ್ಳಲಿದೆ, ಇದು ದರಿದ್ರತನವಲ್ಲದೇ ಬೇರೇನೂ ಅಲ್ಲ, ದೇವರ ಅರಿಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕೇ ಹೊರತೂ, ಅದು ಬೇರೊಂದು ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆಯಾಗುತ್ತದೆ.”

“ಇತರ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಎಂಬುದು ಕೋಟಿ ಭಕ್ತರ ಪ್ರಶ್ನೆಯಾಗಿದೆ. ಭಕ್ತರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಪಾಲು ಕಸಿಯುವ ಬದಲು ‘ಸರ್ಕಾರ ನಡೆಸಲು ನೆರವಾಗಿ’ ಎಂದು ದೇವಸ್ಥಾನಗಳ ಬಳಿ ಗೋಲಕಗಳನ್ನಿಡಲಿ. ಸಹಾನುಭೂತಿ ಮನಸ್ಸಿನ ಭಕ್ತರು ನಿಮ್ಮ ಸರ್ಕಾರಕ್ಕೆ ಕಾಣಿಕೆ ನೀಡಲೂಬಹುದು?”

ವಿಜಯೇಂದ್ರ ಅವರ ಟ್ವೀಟ್‌ಗೆ ಉತ್ತರಿಸಿರುವ ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಟ್ವೀಟ್‌ ಹೀಗಿದೆ:

“ವಿಜಯೇಂದ್ರ ಅವರೇ, ನೀವು ರಾಜಕೀಯ ಲಾಭಕ್ಕಾಗಿ ಕೇವಲ ಹಿಂದೂ ವಿರೋಧಿ ಧೋರಣೆ ಎಂದು ನಮ್ಮ ಸರ್ಕಾರವನ್ನು ದೂರುತ್ತಿದ್ದೀರಿ. ಒರಿಜಿನಲ್ ಹಿಂದೂಗಳು ನಾವು. ಇಷ್ಟು ವರ್ಷ ದೇವಸ್ಥಾನಗಳನ್ನು, ಹಿಂದುಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರಗಳೇ. ನಮ್ಮ ಸರ್ಕಾರವು ಯಾವ ಧರ್ಮದ ಮೇಲು ವಕ್ರ ದೃಷ್ಟಿ ಬೀರುವುದಿಲ್ಲ, ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಬಾಳುವುದೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ.”

“ನೀವು ಹೇಳುತ್ತಿರುವುದು ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯ ಮೇಲೆ ವಕ್ರದೃಷ್ಟಿ ಕಾಂಗ್ರೆಸ್ ಸರಕಾರ ಬೀರಿದೆ ಅಂತ. 2008ರಿಂದ 2013, 2019ರಿಂದ 2023ರವರೆಗೂ ನಿಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಆಗ ಕೂಡ ಈ ವಿಧೇಯಕ ಅನುಷ್ಠಾನದಲ್ಲಿತ್ತು. ಆಗ ಕೂಡ ನಿಮ್ಮ ಸರ್ಕಾರವು ಹಿಂದುಗಳ ಮೇಲೆ ವಕ್ರ ಕಣ್ಣು ಬೀರಿ ಆದಾಯ ಮಾಡಿಕೊಂಡಿದ್ದೀರಾ? ಆಗ ಕೂಡ ನಿಮ್ಮ ಆಡಳಿತದಲ್ಲಿ ದರಿದ್ರತನವಿತ್ತೆ? ಏಕೆಂದರೆ ಈ ವಿಧೇಯಕ 2001ರಿಂದ ಜಾರಿಯಲ್ಲಿದೆ.”

“ಯಾವ ಧರ್ಮದ ಆದಾಯದ ಮೇಲೂ ನಮ್ಮ ಕಾಂಗ್ರೆಸ್ ಸರ್ಕಾರದ ಕಣ್ಣು ಬೀಳುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ ಬಾಳುವುದೇ ಕಾಂಗ್ರೆಸ್ ಸರ್ಕಾರದ ಗುರಿ. ನೀವು ಎರಡು ಬಾರಿ ಆಡಳಿತದಲ್ಲಿದ್ದಿರಲ್ಲ. ಆಗ ಕೂಡ ಭಕ್ತರ ಹಣದಲ್ಲಿ ಬಿಜೆಪಿ ಸರ್ಕಾರ ಪಾಲು ಕಸಿಯುವ ಕೆಲಸ ಮಾಡಿತ? ನಿಮ್ಮ ಸುಳ್ಳು ಮೋಸದ ಪ್ರಚಾರವನ್ನು ರಾಜ್ಯದ ಜನತೆ ನಂಬುವುದಿಲ್ಲ” ಎಂದಿದ್ದಾರೆ.

ʼಬಿಜಪಿ ಕರ್ನಾಟಕʼ ಪಕ್ಷದ ಅಧಿಕೃತ ಎಕ್ಸ್‌ ಖಾತೆಯಿಂದ ಹೀಗೆ ಪೋಸ್ಟ್‌ ಮಾಡಲಾಗಿದೆ:

“ಅಂದು ಘಜ್ನಿ-ಘೋರಿ-ಔರಂಗಜೇಬ-ಟಿಪ್ಪು, ಇಂದು ಕಾಂಗ್ರೆಸ್-ಸಿದ್ದರಾಮಯ್ಯ. ಕರ್ನಾಟಕವನ್ನು ತನ್ನ ಕೆಟ್ಟ ತುಷ್ಟೀಕರಣದ ರಾಜಕಾರಣಕ್ಕೆ, ಪಂಚ ರಾಜ್ಯಗಳ ಚುನಾವಣೆಗಾಗಿ ಲೂಟಿ ಹೊಡೆದು, ಖಜಾನೆಯನ್ನು ಖಾಲಿ ಮಾಡಿರುವ @INCKarnatakaದ ದುಷ್ಟ ಕಣ್ಣು ಈಗ ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ.”

“ಖಜಾನೆಯನ್ನು ವಾಮಮಾರ್ಗದಲ್ಲಿ ತುಂಬಿಸಲು ಒಂದು ಕೋಟಿ ಆದಾಯದೊಳಗಿನ ದೇವಸ್ಥಾನಗಳು ಶೇ.5ರಷ್ಟು ಹಾಗೂ ಒಂದು ಕೋಟಿಗೂ ಹೆಚ್ಚು ಆದಾಯವಿರುವ ದೇವಸ್ಥಾನಗಳ ಶೇ.10ರಷ್ಟು ಆದಾಯವನ್ನು ಸರ್ಕಾರಕ್ಕೆ ನೀಡಬೇಕು ಎಂದು ಆದೇಶ ಹೊರಡಿಸಿದೆ.”

“ಸಾಲದ್ದಕ್ಕೆ ಹಿಂದೂ ದೇವಾಲಯದ ಆಡಳಿತ ಸಮಿತಿಗೆ ಅನ್ಯ ಧರ್ಮೀಯರು ಸಹ ಸದಸ್ಯರಾಗಬಹುದಂತೆ. ಇದು ಕರ್ನಾಟಕದ ಖಜಾನೆಯನ್ನು ಖಾಲಿ ಮಾಡಿದಂತೆ, ಹಿಂದೂ ದೇವಾಲಯಗಳನ್ನು ಅನ್ಯ ಧರ್ಮೀಯ ಸದಸ್ಯರ ಸಹಾಯದಿಂದ ದೇವಾಲಯದ ಬೊಕ್ಕಸವನ್ನು ಬರಿದು ಮಾಡುವ ಸಿಎಂ ಸಿದ್ದರಾಮಯ್ಯರವರ ದುರಾಲೋಚನೆ.”

“ಸಿಎಂ ಸಿದ್ದರಾಮಯ್ಯನವರೇ, ಹಿಂದೂ ದೇವರುಗಳು ಬೇಡ, ಆದರೆ ಮಜಾ ಮಾಡಲು, ಹೊಲಸು ಓಲೈಕೆ ರಾಜಕಾರಣ ನಡೆಸಲು ಹಿಂದೂ ದೇವಾಲಯಗಳ ದುಡ್ಡು ಬೇಕು ಎಂಬ ನಿಮ್ಮ ದುರ್ಬುದ್ಧಿಗೆ ಸಮಸ್ತ ಹಿಂದೂಗಳು ಉತ್ತರ ಕಲಿಸುವ ದಿನ ಅತೀ ಹತ್ತಿರದಲ್ಲಿದೆ. ಹಿಂದೂ ದೇವಾಲಯಗಳಿಗೆ ಅನ್ಯ ಧರ್ಮೀಯರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿಸುವ ಆದೇಶವನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ಘಜ್ನಿ-ಘೋರಿಯನ್ನೇ ಹಿಂದೂ ಧರ್ಮ ಬಿಟ್ಟಿಲ್ಲ, ಇನ್ನು ನೀವ್ಯಾವ ಲೆಕ್ಕ.”

ಇದನ್ನೂ ಓದಿ: Karnataka Budget Session 2024: ದೇವಸ್ಥಾನಗಳ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂ. ಸಿಗುವಂತೆ ವಿಧೇಯಕ!

Exit mobile version