Site icon Vistara News

Thawar Chand Gehlot: ರಾಜ್ಯಪಾಲರಿಗೆ ಬಂತು ಬುಲೆಟ್‌ಪ್ರೂಫ್‌ ಕಾರು! ಥಟ್‌ ಅಂತ ಯಾಕೀ ಬದಲಾವಣೆ?

thawar chand gehlot car

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರ ವಾಹನದಲ್ಲಿ ಗುಪ್ತಚರ ಇಲಾಖೆಯ ಸಲಹೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಇದುವರೆಗೆ ಸಾಮಾನ್ಯ ಕಾರು ಬಳಸುತ್ತಿದ್ದ ರಾಜ್ಯಪಾಲರು (Karnataka Governor) ಇನ್ನು ಮುಂದೆ ಬುಲೆಟ್‌ ಪ್ರೂಫ್‌ ಕಾರು (Bullet proof Car) ಬಳಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ (prosecution) ಅನುಮತಿ ನೀಡಿದ ಬಳಿಕ ರಾಜ್ಯದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ರಾಜಭವನಕ್ಕೆ ನುಗ್ಗಲೂ ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು, ರಾಜ್ಯದ ಹಲವೆಡೆ ಗವರ್ನರ್‌ಗೆ ʼಗೋ ಬ್ಯಾಕ್‌ʼ ಪ್ರತಿಭಟನೆ ನಡೆಸಲಾಗಿತ್ತು. ಜೊತೆಗೆ, ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಲಾಗಿತ್ತು. ಕೆಲವು ಕಾಂಗ್ರೆಸ್ ನಾಯಕರಂತೂ ಎಲ್ಲೆ ಮೀರಿದ ಹೇಳಿಕೆಗಳನ್ನು ನೀಡಿದ್ದರು.

ಮಂಗಳೂರಿನ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜಾ, ಬಾಂಗ್ಲಾದೇಶದ ಪ್ರಧಾನಿಗೆ ಆದ ಸ್ಥಿತಿಯೇ ರಾಜ್ಯಪಾಲರಿಗೂ ಆಗಲಿದೆ ಎಂದು ಹೇಳಿದ್ದರು. ಈ ಕುರಿತು ಅವರ ಮೇಲೆ ಕೇಸು ದಾಖಲಿಸಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ, ಎಚ್ಚರಿಕೆ ವಗಹಿಸುವಂತೆ ಗುಪ್ತಚರ ಇಲಾಖೆಯು ರಾಜ್ಯಪಾಲರಿಗೆ ಸೂಚನೆ ನೀಡಿದೆ. ಹೀಗಾಗಿ, ಪ್ರವಾಸದಿಂದ ಬೆಂಗಳೂರಿಗೆ (Bengaluru) ವಾಪಸ್ ಆಗಿರುವ ಗೆಹ್ಲೋಟ್​ ಅವರು ಎಚ್ಚರಿಕೆ ಹೆಜ್ಜೆಯನ್ನಿಟ್ಟಿದ್ದಾರೆ. ನಿನ್ನೆ ಇಂದೋರ್‌ನಿಂ ವಾಪಸ್ ಆಗಿರುವ ರಾಜ್ಯಪಾಲರಿಗೆ ರಾಜ್ಯದ ಗುಪ್ತಚರ ಇಲಾಖೆಯಿಂದ ಬಿಪಿ ಕಾರು ನೀಡಲಾಗಿದೆ.

ರಾಜ್ಯಪಾಲರಾಗಿ ಗೆಹ್ಲೋಟ್ ಅವರು ರಾಜ್ಯಕ್ಕೆ ಆಗಮಿಸಿದ ಬಳಿಕ ಅವರು ಬುಲೆಟ್ ಪ್ರೂಫ್ ಇರುವ ಕಾರನ್ನು ಪಡೆದುಕೊಳ್ಳದೆ ಸಾಮಾನ್ಯ ಇನ್ನೋವಾ ಕಾರನ್ನೇ ಬಳಕೆ ಮಾಡಿದ್ದರು. ಕಳೆದ ಬಾರಿ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಬುಲೆಟ್ ಪ್ರೂಫ್ ಕಾರು ಪಡೆದಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಜೊತೆಗೆ, ಆಗಸ್ಟ್ 29ನೇ ತಾರೀಖಿನವರೆಗೆ ರಾಜ್ಯದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರಾಜ್ಯಪಾಲರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ರಾಜ್ಯಪಾಲರು ಹೈಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ನೃಪತುಂಗ ವಿವಿ ಮೊದಲ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕೆ ಕೂಡ ಗೈರಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಂದ ರಾಜ್ಯಪಾಲರು ದೂರ ಉಳಿದಿದ್ದಾರೆ. ಜೊತೆಗೆ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ವಿಶ್ವವಿದ್ಯಾಲಯಗಳ ವಾರ್ಷಿಕ ಘಟಿಕೋತ್ಸವಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಘಟಿಕೋತ್ಸವ ಆಯೋಜನೆ ಮಾಡಲಾಗಿದ್ದು, 2020-21 ರಿಂದ 2022-2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 792 ವಿದ್ಯಾರ್ಥಿಗಳಿಗೆ ಪದವಿ, 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಬೇಕಿತ್ತು. ಆದರೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ನಡೆದಿದೆ. ಈಗಾಗಲೇ ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಲು ಕರೆ ಕೊಟ್ಟಿವೆ.

ನೃಪತುಂಗ ವಿವಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿವಿ ಕುಲಪತಿ ಪ್ರೊ. ಶ್ರೀನಿವಾಸ್ ಎಸ್.ಬಳ್ಳಿ , ಸಿಂಡಿಕೇಟ್ ಸದಸ್ಯರು ಭಾಗಿಯಾಗಿದ್ದರು. ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ನ ಡಾ.ರಾಮಸ್ವಾಮಿ ಬಾಲ ಸುಬ್ರಮಣಿಯನ್, ಇನ್ಫೋಸಿಸ್‌ನ ದಿನೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: HD Kumaraswamy: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದ ಎಚ್‌ಡಿಕೆ

Exit mobile version