Site icon Vistara News

ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ

cm Siddaramaiah And DK Shivakumar

cm Siddaramaiah And DK Shivakumar

ಕಾಂಗ್ರೆಸ್ ಪಕ್ಷ ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಹಲವಾರು ಉಚಿತ ಘೋಷಣೆಗಳನ್ನು ಪ್ರಕಟಿಸಿತ್ತು. ರಾಜ್ಯದ ಜನ ಈಗ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರು ಬಾಂಡ್ ಸಮೇತ ಭರವಸೆ ನೀಡಿದ್ದರು. ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ ಕಳೆದರೂ, ಮೊದಲ ಸಂಪುಟ ಸಭೆ ಮುಗಿದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕನಿಷ್ಠ, ಈ ಉಚಿತ ಯೋಜನೆಗಳು ಯಾರಿಗೆ ಸಿಗುತ್ತವೆ, ಯಾರಿಗೆ ಸಿಗುವುದಿಲ್ಲ ಎಂಬ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಪ್ರಮಾಣ ವಚನ ಸ್ವೀಕಾರದ ದಿನ ನಡೆದ ಮೊದಲ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಐದು ಗ್ಯಾರಂಟಿ ಯೋಚನೆಗಳ ಅನುಷ್ಠಾನ ಕುರಿತಂತೆ ಹೆಚ್ಚಿನ ವಿವರಗಳು ಹಾಗೂ ಗ್ಯಾರಂಟಿಗಳಿಗೆ ಇರುವ ಷರತ್ತುಗಳು ಮತ್ತು ನಿಯಮಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದರು.

ಆದರೆ ಎರಡನೇ ಹಂತದ ಸಂಪುಟ ರಚನೆ ಗೊಂದಲದಲ್ಲಿರುವ ಸಿಎಂ ಮತ್ತು ಡಿಸಿಎಂ ಎರಡನೇ ಸಭೆ ನಡೆಸಿಲ್ಲ; ಹೀಗಾಗಿ ಯಾವುದೇ ತೀರ್ಮಾನಕ್ಕೂ ಸರ್ಕಾರ ಬಂದಿಲ್ಲ. ಹಾಗಾಗಿ ಜನ ಗೊಂದಲಕ್ಕೊಳಗಾಗಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂಪಾಯಿ, ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳಿಗೆ 3000 ರೂಪಾಯಿ, ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1500 ರೂ. ಈ ಭರವಸೆಗಳಾಗಿವೆ. ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ನನಗೂ ಫ್ರೀ, ನಿಮಗೆಲ್ಲರಿಗೂ ಫ್ರೀ ಎಂದು ಘಂಟಾಘೋಷವಾಗಿ ಸಾರಿದ್ದರಿಂದ ಜನ ಎಲ್ಲರಿಗೂ ಉಚಿತ ಎಂದುಕೊಂಡುಬಿಟ್ಟಿದ್ದಾರೆ! ಈ ಉಚಿತ ಯೋಜನೆಗಳ ಬಗ್ಗೆ ರಾಜ್ಯದ ಮೂಲೆಮೂಲೆಗಳಲ್ಲಿ ಈಗ ಗದ್ದಲವೋ ಗದ್ದಲ ನಡೆಯುತ್ತಿದೆ. ಬಸ್ ಹತ್ತಿದ ಮಹಿಳೆಯರನೇಕರು ಟಿಕೆಟ್ ಪಡೆಯಲು ನಿರಾಕರಿಸುತ್ತಿದ್ದಾರೆ. ಇನ್ನೊಂದೆಡೆ, ಕರೆಂಟ್ ಬಿಲ್ ಕಟ್ಟಲು ನಿರಾಕರಿಸಿ, ಬಿಲ್‌ ಕೊಡಲು ಹೋದವರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಪಡೆಯಲು ಜನ ನೆಮ್ಮದಿ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ನಾಡಿನ ಬಹುತೇಕ ಜನ ಈಗ ತಮ್ಮ ಕೆಲಸ ಕಾರ್ಯ ಮರೆತು ಈ ಉಚಿತ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: Congress Guarantee: ಗ್ಯಾರಂಟಿ ಸ್ಕೀಮ್‌ ಜಾರಿಗೆ ಬರದಿದ್ದರೆ ರಾಜಕೀಯ ನಿವೃತ್ತಿ; ಕೈ ಶಾಸಕ ಕೋನರೆಡ್ಡಿ ಗ್ಯಾರಂಟಿ

ಈ ಗ್ಯಾರಂಟಿ ಸ್ಕೀಮ್‌ಗಳನ್ನು ಘೋಷಿಸುವ ಮುನ್ನ ರಾಜ್ಯದ ವಿತ್ತೀಯ ಸ್ಥಿತಿಗತಿ, ವಿತ್ತೀಯ ಕೊರತೆಯ ಸ್ಥಿತಿಗಳ ಬಗ್ಗೆ ಕಾಂಗ್ರೆಸ್‌ ಯೋಚಿಸಿದಂತಿಲ್ಲ. ಯೋಚಿಸಿದ್ದರೆ, ಈ ಗ್ಯಾರಂಟಿಗಳನ್ನು ಯಾರಿಗೆ ಸೀಮಿತಗೊಳಿಸಬೇಕು ಎಂಬ ನೆಲೆಯಲ್ಲಿ ಚಿಂತಿಸಿ ಹಾಗೆಯೇ ಘೋಷಿಸುತ್ತಿತ್ತೋ ಏನೋ. ಆದರೆ ಅದು ಹೆಚ್ಚಿನ ಮತಗಳನ್ನು ತರಲಾರದು ಎಂಬುದು ಖಾತ್ರಿಯಿರುವುದರಿಂದ, ಉಚಿತಗಳು ಎಲ್ಲರಿಗೂ ಹೇಳಲಾಗಿತ್ತು. ಅದೇ ಈಗ ಸರ್ಕಾರ ಟೇಕ್‌ಆಫ್‌ ಆಗುವ ಮುನ್ನವೇ ಕಿರಿಕಿರಿ ಸೃಷ್ಟಿಸಿದೆ. ಎಲ್ಲ ಗ್ಯಾರಂಟಿಗಳನ್ನೂ ಅಕ್ಷರಶಃ ಈಡೇರಿಸಲು ಬೊಕ್ಕಸ ಸಶಕ್ತವಾಗಿಲ್ಲ; ಈಡೇರಿಸದೆ ಇದ್ದರೆ ವಚನಭಂಗದ ಅಪಖ್ಯಾತಿಗಳು ಕಾಂಗ್ರೆಸ್‌ನ ಹೆಗಲೇರಲಿವೆ. ಪ್ರಸ್ತುತ ಸನ್ನಿವೇಶದಲ್ಲಿ ಜನರಲ್ಲಿ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಬೇಕಿದೆ. ಇಲ್ಲವಾದರೆ ಈ ಉಚಿತಗಳನ್ನು ಬಯಸುತ್ತಿರುವ ಜನರಿಗೂ ಸರ್ಕಾರಿ ಸಿಬ್ಬಂದಿಗೂ ಎಲ್ಲ ಕಡೆಗಳಲ್ಲೂ ಸಂಘರ್ಷ ಏರ್ಪಡಬಹುದು. ಸಾರ್ವಜನಿಕ ಶಾಂತಿ ಕದಡುವ ಇಂಥ ಸನ್ನಿವೇಶಕ್ಕೆ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿ.

Exit mobile version