Site icon Vistara News

Tomato Price: ದಿಢೀರ್‌ ಕುಸಿದ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ತಳಮಳ

tomato price

ಕೋಲಾರ : ನಿಲ್ಲದ ಮಳೆಯ ಆರ್ಭಟದ (Karnataka Rain news) ಪರಿಣಾಮ ಕೋಲಾರದ ಕೆಂಪು ಸುಂದರಿ ಟೊಮೊಟೊ ಬೆಲೆ (Tomato Price) ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ.

ಒಂದು ವಾರದಿಂದ ಟೊಮೆಟೋ ಬಾಕ್ಸ್ ಬೆಲೆ ಸಾವಿರ ರೂಪಾಯಿ ಗಡಿ ದಾಟಿ ಟೊಮೆಟೊ ಬೆಳೆಗಾರನ (Tomato farmer) ಮುಖದಲ್ಲಿ ಮದಹಾಸ ಮೂಡಿಸಿತ್ತು. ಎರಡು ದಿನಗಳಿಂದ ದಿಢೀರನೇ ಕುಸಿತ ಕಂಡಿದ್ದು ಟೊಮೊಟೊ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಹದಿನೈದು ಕೆಜಿ ಬಾಕ್ಸ್ ಬೆಲೆ ಒಂದು ಸಾವಿರದ ನೂರ ಐವತ್ತರಿಂದ ಇನ್ನೂರರ ವರೆಗೆ ಮಾರಾಟವಾಗುತ್ತಿತ್ತು. ಆದರೆ ಎರಡು ದಿನಗಳಿಂದ ಟೊಮೊಟೊ ದಿಢೀರ್ ಎಂದು ಕುಸಿದಿದ್ದು 330ರಿಂದ 650 ರೂ.ಗೆ ಇಳಿದಿದೆ.

ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಗೆ ಪ್ರತಿ ದಿನ ಎರಡು ಲಕ್ಷಕ್ಕೂ ಹೆಚ್ಚು ಟೊಮೊಟೊ ಬಾಕ್ಸ್ (Tomato Box) ಬರುತ್ತಿವೆ. ಹೊರಗಿನ ಬೇಡಿಕೆಯಷ್ಟೇ ಟೊಮೊಟೊ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಧಾರಣೆ ಮಾತ್ರ ಕುಸಿತ ಕಂಡಿದೆ.

ಬೆಲೆ ಕುಸಿತಕ್ಕೆ ಕಾರಣವೇನು?

ದೇಶದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಟೊಮೊಟೊ ಸಾಗಾಣಿಕೆಗೆ ತೊಂದರೆಯಾಗಿದೆ. ಭಾರಿ ಮಳೆಯ ಹೊಡೆತದಿಂದ ರಸ್ತೆ ಸಂಪರ್ಕವಿಲ್ಲದೆ ಸಾಗಾಣಿಕೆಯಾದ ಟೊಮೆಟೊ ಲಾರಿಗಳು ಎಲ್ಲೆಂದರೆ ಅಲ್ಲಿ ನಿಂತಿವೆ. ಮಳೆ ಅಡ್ಡಿಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಟೊಮೊಟೊ ಧಾರಣೆ ಕುಸಿತವಾಗಿದೆ. ರೈತರು ಆತಂಕ ಪಡಬೇಕಿಲ್ಲ; ಮಳೆ ನಿಂತರೆ ಮತ್ತೆ ಟೊಮೆಟೊ ಧಾರಣೆ ಚೇತರಿಕೆಯಾಗಲಿದೆ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಕಿರಣ್ ಸ್ಪಷ್ಟಪಡಿಸಿದ್ದಾರೆ.

ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರ ಎಪಿಎಂಸಿ (Kolar APMC) ಮಾರುಕಟ್ಟೆಯಲ್ಲಿ ಕಳೆದ ವಾರ ಟೊಮೆಟೊಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಬಂದಿತ್ತು. 15 ಕೆ.ಜಿಯ ಬಾಕ್ಸ್​​ಗೆ 900ರಿಂದ 1200 ರೂ.ಗಳಿಗೆ ಹರಾಜಾಗಿತ್ತು. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.

ಕಳೆದ ವರ್ಷ ಇದೇ ಸಮಯದಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಬಂದು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಬಾಕ್ಸ್‌ಗೆ ಸುಮಾರು 2000ರಿಂದ 2700 ರೂ.ವರೆಗೂ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

ಕೋಲಾರ ಮತ್ತು‌ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್‌ನಲ್ಲಿ ಅತಿ‌ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ತಾಪಮಾನ, ಮಳೆ ಮತ್ತು ವೈರಸ್ ಹಾವಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಆವಕ ಕಡಿಮೆಯಾಗಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾನೆ.

ಮೊದಲು ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ‌ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತಿತ್ತು.‌ ಆದರೆ ಈಗ ಬರುತ್ತಿಲ್ಲ. ಆಗಸ್ಟ್ ತಿಂಗಳವರೆಗೂ ಟೊಮೆಟೊ ಸೀಜನ್‌ ಇರುವುದರಿಂದ ಟೊಮೆಟೊ ಬೆಲೆ ಇನ್ನೂ ಏರಿಕೆಯಾಗುವ ಸಂಭವವಿದೆ. ಕೋಲಾರದ ಟೊಮೆಟೊಗೆ ದೆಹಲಿ, ಒರಿಸ್ಸಾ, ಗುಜರಾಜ್​, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ಕಡೆ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

Exit mobile version