Site icon Vistara News

Tungabhadra Dam: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್‌ ಅಳವಡಿಸುವ ಕಾರ್ಯ; ತಜ್ಞ ಕನ್ನಯ್ಯ ನಾಯ್ಡು ಸಾಹಸ

cm siddaramaiah tungabhadra dam

ವಿಜಯನಗರ: ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಮುರಿದುಹೋಗಿರುವ 19ನೇ ನಂಬರ್‌ ಗೇಟ್ (19 gate crash) ಅನ್ನು ಮತ್ತೆ ಅಳವಡಿಸುವ ಕಾರ್ಯ ಇಂದಿನಿಂದಲೇ ಆರಂಭವಾಗುತ್ತಿದೆ. ಡ್ಯಾಂ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನೀರು ಇರುವಾಗಲೇ ಗೇಟ್ ಅಳವಡಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ನೀರು ಇರುವಾಗ ಶಟರ್‌ಗಳನ್ನು ಹೇಗೆ ಸೆಟ್ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿರುವ ಕನ್ನಯ್ಯ ನಾಯ್ಡು ಆ್ಯಂಡ್ ಟೀಂ 20 ಅಡಿ ಅಗಲ, 12 ಅಡಿ ಉದ್ದದ ಕಟ್ ಮಾಡಿ ರೆಡಿ ಇರಿಸಿಕೊಂಡಿದೆ. ಈಗ ಗೇಟ್ ಮುಚ್ಚಿದರೆ ಜಲಾಶಯದಲ್ಲಿ ಸಾಕಷ್ಟು ನೀರು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸುಮಾರು 60 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದುಹೋಗಲಿದೆ.

ಕನ್ನಯ್ಯ ನಾಯ್ಡು ಅವರ ಪ್ರಯತ್ನದಿಂದ ನೀರು ಉಳಿಯುವ ಭರವಸೆ ಮೂಡಿದೆ. ಪರಿಣಿತರಾದ ಕನ್ನಯ್ಯ ನಾಯ್ಡು ಅವರಿಂದ ನೀರು ಉಳಿಸುವ ಪ್ರಯತ್ನ ನಡೆದಿದ್ದು, ಬಳ್ಳಾರಿಯ ಜಿಂದಾಲ್‌ನಿಂದ ಬೃಹತ್‌ ಯಂತ್ರಗಳು ಬಂದಿವೆ. ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್, ಹೊಸಳ್ಳಿಯ ಹಮೀದ್ ಎಂಜನಿಯರ್ಸ್‌ಗಳಲ್ಲಿ ಗೇಟ್‌ ರೆಡಿ ಮಾಡಲಾಗಿದೆ.

ಕನ್ನಯ್ಯ ನಾಯ್ಡು ಹೇಳಿದ್ದೇನು?

ಕ್ರೆಸ್ಟ್‌ ಪರಿಣತ ಎಂದೇ ಖ್ಯಾತಿ ಪಡೆದಿರುವ ಹಿರಿಯ ತಜ್ಞ ಕನ್ನಯ್ಯ ನಾಯ್ಡು ಸ್ಥಳದಲ್ಲಿದ್ದು, ಒಟ್ಟಾರೆ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಸಿಎಂ ಆಗಮನಕ್ಕೂ ಮುನ್ನವೇ ಜಲಾಶಯಕ್ಕೆ ಆಗಮಿಸಿದ್ದ ಕನ್ನಯ್ಯ ನೇತೃತ್ವದ ತಜ್ಞರ ತಂಡ ಅದರ ಪರಿಶೀಲನೆ ನಡೆಸಿತ್ತು.

ಕ್ರೆಸ್ಟ್ ತಜ್ಞ ಅಂತಲೇ ಪ್ರಖ್ಯಾತಿ ಹೊಂದಿರೋ ಕನ್ಹಯ್ಯ ನಾಯ್ಡು ಹೇಳಿರುವ ಪ್ರಕಾರ, ಒಂದೇ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ನೀರು ನಿಲ್ಲಿಸುವುದು ಕಷ್ಟ. 48 ಟನ್ ಭಾರದ ಗೇಟ್ ಒಂದೇ ಬಾರಿಗೆ ಇಳಿಸುವುದು ಕಷ್ಟ. ಒಟ್ಟು ಐವತ್ತು ಟನ್ ಭಾರದ ಕಬ್ಬಿಣದ ಗೇಟ್‌ನಲ್ಲಿ ಐದು ಪೀಸ್‌ಗಳನ್ನು ಒಂದೊಂದಾಗಿ ಇಳಿಸಬೇಕು. ಮೂರು ನಾಲ್ಕು ಕಡೆ ಗೇಟ್ ನಿರ್ಮಾಣವಾಗುತ್ತಿದೆ.

ನಾಳೆಯಿಂದ ಒಂದೊಂದೇ ಪೀಸ್‌ಗಳನ್ನು ಕೂರಿಸುತ್ತೇವೆ. ಭಗವಂತನ ಮೇಲೆ ಭಾರ ಹಾಕಿ ಕೆಲಸ ಪ್ರಾರಂಭ ಮಾಡುತ್ತೇವೆ. ನೀರು ಉಳಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಗೇಟ್ ಆಯುಷ್ಯ ಸುಮಾರು 40 ವರ್ಷ ಇರುತ್ತದೆ. ಇದೀಗ ಜಲಾಶಯಕ್ಕೆ 70 ವರ್ಷವಾಗಿದೆ. ಉತ್ತಮವಾಗಿ ಎಲ್ಲ ರೀತಿಯ ಮೆಂಟೆನೆನ್ಸ್ ಮಾಡಿದ್ದೇವೆ. ಇದೀಗ ಹೊಸ ಪ್ರಯತ್ನ ಮಾಡಿ ನೀರು ನಿಲ್ಲಿಸುತ್ತೇವೆ. ಇದು ತಾತ್ಕಾಲಿಕ. ನೀರು ಕಡಿಮೆಯಾದ ಮೇಲೆ ‌ಮತ್ತೊಮ್ಮೆ ಗೇಟ್ ಕೂಡಿಸಬೇಕು ಎಂದು ಕನ್ನಯ್ಯ ನಿನ್ನೆ ತಿಳಿಸಿದ್ದರು.

ಸಿಎಂ ಹೇಳಿದ್ದೇನು?

“70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೇಟ್ ಒಡೆದಿದೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ. ಇದನ್ನು ಆಗಲೇ ತಯಾರು ಮಾಡಲಾಗ್ತಿದೆ. ನಾಳೆಯಿಂದ ಗೇಟ್ ಕೂಡಿಸೋ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ಬಹಳ ಅನುಭವಿ ಅವರು, ಅವರ ನೇತೃತ್ವದಲ್ಲಿ ನಾಳೆಯಿಂದ ತಾತ್ಕಾಲಿಕ ಗೇಟ್ ಕೂಡಿಸಲಾಗ್ತದೆ. ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಭೇಟಿಯ ಬಳಿಕ ಹೇಳಿದ್ದರು.

ಇದನ್ನೂ ಓದಿ: CM Siddaramaiah: ಬೆಂಗಳೂರಿನಲ್ಲಿ ಸಿಎಂ‌ ಸಿದ್ದರಾಮಯ್ಯಗೆ ಟೆನ್ಷನ್; ದೆಹಲಿಯಲ್ಲಿ ಡಿಕೆ‌ ಶಿವಕುಮಾರ್ ಲಾಬಿ

Exit mobile version