Site icon Vistara News

Udupi Gang War: ಉಡುಪಿಯನ್ನು ಬೆಚ್ಚಿ ಬೀಳಿಸಿದ ಗ್ಯಾಂಗ್ ವಾರ್; ಮಾರಾಮಾರಿಯ ವಿಡಿಯೊ ವೈರಲ್‌, ಇಬ್ಬರ ಬಂಧನ

Udupi Gang War

ಉಡುಪಿ: ತಡರಾತ್ರಿ ವೇಳೆ ನಡೆದಿರುವ ಗ್ಯಾಂಗ್ ವಾರ್ (Udupi Gang War) ನಗರವನ್ನು ಬೆಚ್ಚಿಬೀಳಿಸಿದೆ. ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಎರಡು ತಂಡಗಳ 6 ಯುವಕರು ಪರಸ್ಪರ ಕಾರುಗಳಿಂದ ಡಿಕ್ಕಿ ಹೊಡೆದುಕೊಂಡು, ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 18 ರಂದು ತಡರಾತ್ರಿ ನಡೆದ ಘರ್ಷಣೆಯ ವಿಡಿಯೊ ಸದ್ಯ ವೈರಲ್ ಆಗಿದೆ. ಉಡುಪಿಯ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯ ಬಳಿ ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಒಂದು ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದ್ದು, ಈ ವೇಳೆ ಅಡ್ಡ ಬಂದ ತಂಡದ ಒಬ್ಬ ಸದಸ್ಯನಿಗೂ ಕಾರು ಗುದ್ದಿದೆ. ಕಾಪು ಮೂಲದ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಯುವಕರ ಮಾರಾಮಾರಿಯನ್ನು ಹತ್ತಿರದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ.

ಉಡುಪಿಯಲ್ಲಿ ಗ್ಯಾಂಗ್ ವಾರ್ ದೃಶ್ಯಗಳು ವೈರಲ್ ಆದ ಬಳಿಕ ಸಾರ್ವಜನಿಕರು ಭಯಭೀತರಾಗಿದ್ದು, ಜನರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.

ಇಬ್ಬರನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ ಗ್ಯಾಂಗ್ ವಾರ್ ಪ್ರಕರಣ ಸಂಬಂಧ ಕಾಪು ಮೂಲದ ಗರುಡ ಗ್ಯಾಂಗ್‌ನ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಕಾಪು ಮೂಲದ ಆಶಿಕ್ ಮತ್ತು ಗುಜ್ಜರಬೆಟ್ಟು ಮೂಲದ ರಾಕೀಬ್ ಬಂಧಿತರು. ಕೃತ್ಯದಲ್ಲಿ ಭಾಗಿಯಾದ ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಪ್ರಕರಣದಲ್ಲಿ ಬಳಸಲಾದ ಎರಡು ಕಾರು, ಬೈಕ್, ತಲವಾರ್ ಮತ್ತು ಡ್ಯಾಗರ್ ವಶಕ್ಕೆ ಪಡೆಯಲಾಗಿದೆ. ವಿಡಿಯೊ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಉಡುಪಿ ಪೊಲೀಸರು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಬಾಲಕನ ಅಜ್ಜನೂ ಪೊಲೀಸ್‌ ವಶಕ್ಕೆ

ಒಂದೇ ಗ್ಯಾಂಗಿನ ಎರಡು ಗುಂಪುಗಳ ನಡುವೆ ಗಲಾಟೆ: ಪೊಲೀಸ್ ವರಿಷ್ಠಾಧಿಕಾರಿ

ಎರಡು ತಂಡಗಳ ನಡುವೆ ಮಾರಾಮಾರಿ ವಿಚಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಪ್ರತಿಕ್ರಿಯಿಸಿ, ಉಡುಪಿ ನಗರದಲ್ಲಿ ಪ್ರಕರಣ ನಡೆದಿದೆ. ಒಂದೇ ಗ್ಯಾಂಗಿನ ಎರಡು ಗುಂಪುಗಳು ಗಲಾಟೆ ಮಾಡಿಕೊಂಡಿವೆ. ಈ ದೃಶ್ಯಾವಳಿ ಈಗ ವೈರಲ್ ಆಗಿದೆ. ಮೇ 20ಕ್ಕೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಇಬ್ಬರು ಆರೋಪಿಗಳ ಬಂಧನವಾಗಿದೆ. ಸ್ವಿಫ್ಟ್ ಕಾರು, ದ್ವಿಚಕ್ರ ವಾಹನಗಳು, ಚಾಕು ತಲವಾರ್ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿ ಆದವರನ್ನು ಶೀಘ್ರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದು ದೇಶಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಕರ್ನಾಟಕ ಮಾಡೆಲ್: ಬಿಜೆಪಿ ಟೀಕೆ

ಉಡುಪಿ ಗ್ಯಾಂಗ್‌ ವಾರ್‌ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿ, ಇದು ಕರ್ನಾಟಕ ಮಾಡೆಲ್! ಗ್ಯಾಂಗ್ ವಾರ್‌ಗಳು, ಯುವತಿಯರ ಮೇಲೆ ಅತ್ಯಾಚಾರ, ಹಲ್ಲೆ, ಹತ್ಯೆ, ಬಾಂಬ್ ಬ್ಲಾಸ್ಟ್‌ಗಳು, ಗಾಂಜಾ, ಅಫೀಮು, ರೇವ್ ಪಾರ್ಟಿಗಳು, ಪಾಕೈಸ್ತಾನ್ ಜಿಂದಾಬಾದ್ ಘೋಷಣೆಗಳು ಸೇರಿ ಇತ್ಯಾದಿಗಳು ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಕಾಮನ್ ಆಗಿದೆ.

ಉಗ್ರರು, ಮತಾಂಧರು, ಪುಂಡರು, ಕಿಡಿಗೇಡಿಗಳು ರೌಡಿಗಳಿಗೆ ಸಿದ್ದರಾಮಯ್ಯ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿರುವ ಪರಿಣಾಮವೇ ಇಂದು ಅರಾಜಕತೆ ಸೃಷ್ಟಿಯಾಗಿದೆ. ಇದು ದೇಶಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಕರ್ನಾಟಕ ಮಾಡೆಲ್ ಎಂದು ಟೀಕಿಸಿದೆ.

ಕ್ರಿಮಿನಲ್‌ಗಳಿಗೆ ಸರ್ಕಾರದ ಭಯವಿಲ್ಲದಂತಾಗಿದೆ: ಸುನೀಲ್‌ ಕುಮಾರ್

ಉಡುಪಿ ಗ್ಯಾಂಗ್‌ ವಾರ್‌ ಬಗ್ಗೆ ರಾಜ್ಯ ಸರ್ಕಾರವನ್ನು ಮಾಜಿ ಸಚಿವ ಸುನೀಲ್‌ ಕುಮಾರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಶವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್‌ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಕಿಡಿಕಾರಿದ್ದಾರೆ.

ಉಡುಪಿ, ದಕ್ಷಿಣ ಕನ್ನಡದಂಥ‌ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡಿ ರಾಜ್ಯದಲ್ಲಿ ಈಗ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್‌ಗಳು ವಿಜೃಂಭಿಸುವಂತಾಗಿದೆ. ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.

ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ನಿಮಗೆ ಸ್ವಾಗತ. ಆದರೆ ಇಲ್ಲಿಂದ ಹೊರಡುವುದಕ್ಕೆ ಮೊದಲು ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಹೋಗಿ.

Exit mobile version