ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಪಾಕಿಸ್ತಾನದಲ್ಲಿನ ಬ್ರಿಟಿಷ್ ರಾಯಭಾರಿ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಜೇನ್ ಮ್ಯಾರಿಯಟ್ ಜನವರಿ 10ರಂದು ಪಿಒಕೆಯ ಮೀರಪುರಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಭೇಟಿ ಅತ್ಯಂತ ಆಕ್ಷೇಪಾರ್ಹ. ಇದು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಕ್ರಮವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ಷೇಪಿಸಿದೆ. ಇದರ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್‌ಗೆ ತೀವ್ರ ಪ್ರತಿಭಟನೆಯನ್ನೂ ಸಲ್ಲಿಸಿದ್ದಾರೆ. ಇದು ನಿರ್ಲಕ್ಷಿಸಬಹುದಾದ ಸಂಗತಿಯಲ್ಲ.
ಜಮ್ಮು- ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವಂಥವು. ಪಾಕ್ ಆಕ್ರಮಿತ ಕಾಶ್ಮೀರವೂ ಕೂಡ, ಅದರ ಹೆಸರೇ ಸೂಚಿಸುವಂತೆ, ಪಾಕಿಸ್ತಾನದಿಂದ ಆಕ್ರಮಣಕ್ಕೆ ಒಳಗಾಗಿರುವ ಪ್ರದೇಶ. ಇಲ್ಲಿ ಭೇಟಿ ನೀಡಿರುವ ಜೇನ್ ಮ್ಯಾರಿಯಟ್, ಇಂಗ್ಲೆಂಡ್‌ಗೆ ಮೀರಪುರದ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 70 ಪ್ರತಿಶತದಷ್ಟು ಬ್ರಿಟಿಷ್ ಪಾಕಿಸ್ತಾನಿಯರು ಮೀರಪುರ ಮೂಲದವರು, ಈ ಸಮುದಾಯದ ಹಿತಾಸಕ್ತಿ ಇಂಗ್ಲೆಂಡ್ ಜೊತೆಗೆ ತಳುಕು ಹಾಕಿಕೊಂಡಿದೆ ಎಂದಿದ್ದಾರೆ. ಈ ಮಾತು ನಿಜವೇ ಇರಬಹುದು. ಆದರೆ ಅವರು ಮೀರಪುರಕ್ಕೆ ಭೇಟಿ ನೀಡಿದುದು ಸರಿಯಾದ ನಡೆಯಲ್ಲ. 2023ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಅಮೆರಿಕ ರಾಯಭಾರಿ ಡೇವಿಡ್ ಬ್ಲೋಮ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-
ಬಾಲ್ಟಿಸ್ತಾನ್‌ಗೆ ಭೇಟಿ ನೀಡಿದಾಗಲೂ ಇದೇ ರೀತಿಯ ವಿವಾದ ಉಂಟಾಗಿತ್ತು. ಆಗಲೂ ಕೇಂದ್ರ ಸರ್ಕಾರ ಈ ಕುರಿತು ತಕರಾರು ವ್ಯಕ್ತಪಡಿಸಿತ್ತು.
ಈ ವರ್ತನೆಯನ್ನು ಯಾಕೆ ಆಕ್ಷೇಪಿಸಬೇಕು? ಯಾಕೆಂದರೆ ಇದು ಅಂತಾರಾಷ್ಟ್ರೀಯವಾಗಿ, ಜಾಗತಿಕವಾಗಿ ಗುರುತಿಸಲ್ಪಡುವ ರಾಜಾತಂತ್ರಿಕ ನಡೆ. ಉದಾಹರಣೆಗೆ, ಹೊಸದೊಂದು ರಾಷ್ಟ್ರ ಹುಟ್ಟಿಕೊಂಡರೆ, ಅದು ತಾನು ಉದಯವಾಗಿದ್ದೇನೆ ಎಂದು ಘೋಷಿಸಿಕೊಂಡರೆ ಸಾಲದು. ಅದನ್ನು ಹಲವು ದೇಶಗಳು ʼಹೌದು, ಇದು ಒಂದು ಸ್ವತಂತ್ರ ದೇಶʼ ಎಂದು ಗುರುತಿಸಬೇಕು; ಅದರೊಂದಿಗೆ ವಿದೇಶಾಂಗ ವ್ಯವಹಾರಗಳನ್ನು ಆರಂಭಿಸಬೇಕು. ವಿಶ್ವಸಂಸ್ಥೆಯೂ ಅದನ್ನು ಮಾನ್ಯ ಮಾಡಬೇಕು. ಜಗತ್ತಿನಲ್ಲಿ ಇನ್ನೂ ಗುರುತಿಸಲ್ಪಡದ ಅರೆಬರೆ ದೇಶಗಳು ಎಷ್ಟೋ ಇವೆ. ಹೀಗೆ ಸ್ವತಂತ್ರ, ಸಾರ್ವಭೌಮ ರಾಷ್ಟ್ರಗಳ ನಡೆಯು ಒಂದು ದೇಶದ ಮಾನ್ಯತೆ, ಅದರ ಪ್ರಾಂತ್ಯಗಳ ಮಾನ್ಯತೆ, ಅದರ ಗಡಿಗಳ ಗುರುತಿಸುವಿಕೆ ಎಲ್ಲದಕ್ಕೂ ಮೂಲವಾಗುತ್ತದೆ. ಅಮೆರಿಕ, ಬ್ರಿಟನ್‌ನಂಥ ದೇಶಗಳು ಪಾಕಿಸ್ತಾನದ ಮೂಲಕ ಅಲ್ಲಿನ ಆಕ್ರಮಿತ ಪ್ರದೇಶಕ್ಕೆ ಭೇಟಿ ನೀಡುವುದು ಎಂದರೆ ಅದು ಪಾಕಿಸ್ತಾನದ ಪ್ರಾಂತ್ಯ ಎಂದು ಜಾಗತಿಕವಾಗಿ ಅಲಿಖಿತವಾಗಿ ಒಪ್ಪಿಗೆ ನೀಡಿದಂತಾಗುತ್ತದೆ.
ಆದರೆ ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಪ್ರದೇಶವಲ್ಲ. ಅದು ಭಾರತಕ್ಕೆ ಸೇರಿದ ಜಾಗ; ಆದರೆ ಅದೀಗ ಪಾಕ್‌ನ ವಶದಲ್ಲಿದೆ ಅಷ್ಟೆ. 1947ರಿಂದೀಚೆಗೆ ಅದು ವಿವಾದಿತ ಪ್ರದೇಶವಾಗಿದೆ. ಐತಿಹಾಸಿಕವಾಗಿ, ಪಾಕ್ ಆಕ್ರಮಿತ ಕಾಶ್ಮೀರ, ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಪ್ರಭುತ್ವದ ಭಾಗವಾಗಿತ್ತು. 1947ರಲ್ಲಿ ದೇಶ ಸ್ವತಂತ್ರಗೊಂಡಾಗ ಜಮ್ಮು ಮತ್ತು ಕಾಶ್ಮೀರದ ಆಡಳಿತಗಾರ ಮಹಾರಾಜ ಹರಿ ಸಿಂಗ್ ಅವರು ಸ್ವತಂತ್ರ ಡೊಮಿನಿಯನ್ ಸ್ಥಾನಮಾನವನ್ನು ಆರಿಸಿಕೊಂಡರು. ಈ ಪ್ರದೇಶದ ರೈತರ ಮೇಲೆ ಹರಿ ಸಿಂಗ್ ವಿಧಿಸಿದ ದಂಡನಾತ್ಮಕ ತೆರಿಗೆಗಳಿಂದಾಗಿ 1947ರಲ್ಲಿ ಪೂಂಚ್‌ನಲ್ಲಿ ದಂಗೆ ಉಂಟಾಯಿತು. ಅದೇ ವರ್ಷದ ಅಕ್ಟೋಬರ್‌ನಲ್ಲಿ, ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ವಾಯವ್ಯ ಗಡಿ ಪ್ರಾಂತ್ಯದ ಸಾವಿರಾರು ಪಶ್ತೂನ್ ಬುಡಕಟ್ಟು ಜನರು ಜಮ್ಮು ಮತ್ತು ಕಾಶ್ಮೀರವನ್ನು ಮಹಾರಾಜರ ಆಳ್ವಿಕೆಯಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಒಳನುಸುಳಿದರು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ದೇಶದ ರಸ್ತೆ ಮೂಲಸೌಕರ್ಯದಲ್ಲಿ ಕ್ರಾಂತಿ
ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮಹಾರಾಜರು ವಿಫಲರಾದರು. ಪೂಂಚ್ ಜಿಲ್ಲೆಯ ಬಹುಭಾಗದ ಮೇಲೆ ಬಂಡುಕೋರರು ನಿಯಂತ್ರಣ ಸಾಧಿಸಿದರು. ಮುಜಫರಾಬಾದ್ ಮತ್ತು ಬಾರಾಮುಲ್ಲಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಮಹಾರಾಜರು ಭಾರತ ಸರ್ಕಾರದ ಸಹಾಯವನ್ನು ಕೋರಿದರು. ಭಾರತ ಸರ್ಕಾರ ಒಪ್ಪಿಕೊಂಡಿತು. ಇದೇ ಸಂದರ್ಭದಲ್ಲಿ ಮಹಾರಾಜರು ಭಾರತ ಸೇರಲು ಒಪ್ಪಿಗೆ ನೀಡಿದರು. ಭಾರತೀಯ ಪಡೆಗಳನ್ನು ಶ್ರೀನಗರಕ್ಕೆ ಶೀಘ್ರವಾಗಿ ರವಾನಿಸಲಾಯಿತು; ಭಾರತ ಮತ್ತು ಪಾಕಿಸ್ತಾನಿ ಸೇನೆಗಳ ನಡುವೆ ಯುದ್ಧ ಪ್ರಾರಂಭವಾಯಿತು. ಮುಂದೆ ಕದನ ವಿರಾಮ ಘೋಷಿಸಿದಾಗ ಪಾಕ್‌ನ ವಶದಲ್ಲಿದ್ದ ಪ್ರದೇಶ, ಇಂದೂ ಹಾಗೆಯೇ ಇದೆ. ಇದು ನಂತರ ಪಂಡಿತ್ ಜವಾಹರಲಾಲ್ ನೆಹರೂ ಕಾರಣದಿಂದಾಗಿ ವಿಶ್ವಸಂಸ್ಥೆಗೆ ಹೋದ ಪರಿಣಾಮ, ಯಥಾಸ್ಥಿತಿ ಕಾಪಾಡಿಕೊಂಡಿದೆ. ಇದರರ್ಥ ಪಿಒಕೆ ಪಾಕಿಸ್ತಾನದ ನೆಲವೇ ಆಗಿಬಿಟ್ಟಿದೆ ಎಂದಲ್ಲ. ಮಹಾರಾಜ ಹರಿ ಸಿಂಗ್ ತನ್ನ ನೆಲವನ್ನು ಸೇರಿಸಿದ್ದು ಭಾರತದ ಜತೆಗೇ ಹೊರತು ಪಾಕ್ ಜತೆಗಲ್ಲ.
ಈ ಇತಿಹಾಸವನ್ನು ಅಮೆರಿಕ ಹಾಗೂ ಇಂಗ್ಲೆಂಡ್ ಅರ್ಥ ಮಾಡಿಕೊಳ್ಳಬೇಕು. ಪದೇ ಪದೇ ಅಲ್ಲಿಗೆ ಭೇಟಿ ನೀಡುವುದರಿಂದ ಅದು ಪಾಕಿಸ್ತಾನದ್ದೇ ನೆಲ ಎಂಬ ಭಾವ ಮೂಡಲು ಕಾರಣವಾಗುತ್ತದೆ. ಆದರೆ ಅದು ನಿಜವಲ್ಲ. ಇಂಥ ವಿವಾದಿತ ಭೇಟಿಗಳನ್ನು ನೀಡದಿರುವುದು ಭಾರತ ಹಾಗೂ ಈ ದೇಶಗಳ ಸೌಹಾರ್ದಮಯ ರಾಜತಾಂತ್ರಿಕ ಸಂಬಂಧಕ್ಕೆ ಹೆಚ್ಚು ಒಳ್ಳೆಯದು.