ಲಂಡನ್: ಸುರಕ್ಷತೆಯ ದೃಷ್ಟಿಯಿಂದ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಜನ ಹೆಚ್ಚಿನ ದುಡ್ಡು ಕೊಟ್ಟು ಖರೀದಿಸುತ್ತಾರೆ. ಐಫೋನ್ ಹಾಗೂ ಐಮ್ಯಾಕ್‌ಗಳನ್ನು ಇದೇ ಕಾರಣಕ್ಕಾಗಿ ಖರೀದಿಸುತ್ತಾರೆ. ಆದರೆ, ಲಂಡನ್‌ನಲ್ಲಿ ವ್ಯಕ್ತಿಯೊಬ್ಬ ಸುರಕ್ಷತೆಗೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಆ್ಯಪಲ್ ಕಂಪನಿ (Apple Company) ವಿರುದ್ಧವೇ ಮೊಕದ್ದಮೆ ಹೂಡಿದ್ದಾನೆ. ವ್ಯಕ್ತಿಯೊಬ್ಬ ಐಮ್ಯಾಕ್‌ನಲ್ಲಿ ಲೈಂಗಿಕ ಕಾರ್ಯಕರ್ತೆ (Sex Worker) ಜತೆ ಚಾಟ್ ಮಾಡಿದ್ದು, ಆ ಮೆಸೇಜ್‌ಗಳನ್ನು ಬಳಿಕ ಡಿಲೀಟ್ ಮಾಡಿದ್ದಾನೆ. ಆದರೆ, ಪರ್ಮನೆಂಟ್ ಆದ ಮೆಸೇಜ್‌ಗಳು ಹೆಂಡತಿಗೆ ಕಾಣಿಸಿದ ಕಾರಣ ವ್ಯಕ್ತಿಯು ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಹೌದು, ಲಂಡನ್ ಉದ್ಯಮಿಯೊಬ್ಬ ಆ್ಯಪಲ್ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಉದ್ಯಮಿಯ ಮನೆಯಲ್ಲಿರುವ ಸದಸ್ಯರ ಬಳಕೆಗಾಗಿ ಐಮ್ಯಾಕ್ ಇದೆ. ಐಮ್ಯಾಕ್‌ನಲ್ಲಿ ಐಮೆಸೇಜ್ ಮೂಲಕ ಹಲವು ಸೆಕ್ಸ್ ವರ್ಕರ್‌ಗಳ ಜತೆ ರೊಮ್ಯಾಂಟಿಕ್ ಆಗಿ ಚಾಟ್ (Sexting) ಮಾಡಿದ್ದಾನೆ. ಐಮ್ಯಾಕ್‌ನಲ್ಲಿ ಕಳುಹಿಸಿದ ಮೆಸೇಜ್‌ಗಳನ್ನು ಆತ ತನ್ನ ಐಫೋನ್‌ನಲ್ಲಿ ಡಿಲೀಟ್ ಮಾಡಿದ್ದಾನೆ. ಪರ್ಮನೆಂಟ್ ಆಗಿ ಮೆಸೇಜ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಆದರೂ, ಈ ಮೆಸೇಜ್‌ಗಳನ್ನು ಪತ್ನಿಯು ಪತ್ತೆಹಚ್ಚಿದ್ದಾರೆ. ಇದು ಉದ್ಯಮಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ
ಪತಿಯು ರೆಡ್‌ಲೈಟ್ ಏರಿಯಾದ ಲಲನೆಯರ ಜತೆ ‘ಸರಸ’ದ ಮೆಸೇಜ್‌ಗಳನ್ನು ಮಾಡಿರುವುದು ಪತ್ತೆ ಹಚ್ಚಿದ ಪತ್ನಿಯು ಈಗ ವಿಚ್ಛೇದನ ಅರ್ಜಿ ಹಾಕಿದ್ದಾರೆ. ಅಷ್ಟೇ ಅಲ್ಲ, ಸುಮಾರು 52 ಕೋಟಿ ರೂ. (50 ಲಕ್ಷ ಪೌಂಡ್ಸ್) ಜೀವನಾಂಶ ಕೊಡಬೇಕು ಎಂದು ಕೋರ್ಟ್ ಮೊರೆಹೋಗಿದ್ದಾರೆ. ಇದು ಈಗ ಹೆಸರು ಹೇಳಲು ಇಚ್ಛಿಸದ ಉದ್ಯಮಿಗೆ ಪೇಚಾಟ ತಂದಿದೆ. ಹೆಂಡತಿ ಇದ್ದರೂ ಬೇರೆ ಹೆಣ್ಣುಮಕ್ಕಳ ಜತೆ ಚಾಟ್ ಮಾಡಿದ್ದರಿಂದ ಕುಟುಂಬಸ್ಥರು ಹಾಗೂ ಗೆಳೆಯರ ಎದುರು ಅವಮಾನ ಆಗಿದೆ. ಇದರ ಮಧ್ಯೆಯೇ ಪತ್ನಿಯು ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆ್ಯಪಲ್ ವಿರುದ್ಧ ಕೇಸ್ ಏಕೆ?
ಐಮ್ಯಾಕ್‌ನಲ್ಲಿ ಮಾಡಿದ ಮೆಸೇಜ್‌ಗಳನ್ನು ಐಫೋನ್‌ನಲ್ಲಿ ಡಿಲೀಟ್ ಮಾಡಿದ್ದರಿಂದ ಉದ್ಯಮಿಯ ಪತ್ನಿಗೆ ಐಮ್ಯಾಕ್‌ನಲ್ಲಿ ಮಾಡಿದ ಮೆಸೇಜ್‌ಗಳು ಸಿಕ್ಕಿವೆ. ಹಾಗಾಗಿ, “ಲಿಂಕ್ ಆದ ಡಿವೈಸ್‌ಗಳ ಮೂಲಕ ಕಳುಹಿಸಿದ ಮೆಸೇಜ್‌ಗಳನ್ನು ಎಲ್ಲ ಕಡೆಯೂ ಡಿಲೀಟ್ ಮಾಡಬೇಕು ಎಂಬುದರ ಕುರಿತು ಆ್ಯಪಲ್ ಕಂಪನಿಯು ಗ್ರಾಹಕರಿಗೆ ಮಾಹಿತಿ ನೀಡಿಲ್ಲ. ಇದರಿಂದ ನಾನೀಗ ನನ್ನ ಪತ್ನಿ, ಅಪಾರ ಪ್ರಮಾಣದ ಹಣ ಕಳೆದುಕೊಳ್ಳುವಂತಾಗಿದೆ” ಎಂದು ಉದ್ಯಮಿಯು ಕೋರ್ಟ್ ಮೊರೆ ಹೋಗಿದ್ದಾನೆ.
ಇದನ್ನೂ ಓದಿ: Murder Case : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಿದಳು ಹೆಂಡತಿ