ಹೊಸದಿಲ್ಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (Citizenship Amendment Act – CAA) ಜಾರಿ ಬಗ್ಗೆ ಅಮೆರಿಕ (United States) ಅಧಿಕ ಪ್ರಸಂಗದ ಮಾತಾಡಿದೆ. ಸಿಎಎ ನಿಯಮಗಳ ಅಧಿಸೂಚನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ಅಮೆರಿದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದು, ಕಾಯಿದೆಯ ಅನುಷ್ಠಾನವನ್ನು ಯುಎಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ.
“ಮಾರ್ಚ್ 11ರಂದು ತರಲಾದ ಪೌರತ್ವ (ತಿದ್ದುಪಡಿ) ಕಾಯಿದೆಯ ಅಧಿಸೂಚನೆಯ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಈ ಕಾಯಿದೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಕಾನೂನಿನಡಿಯಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಪರಿಗಣಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾಗಿವೆ” ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೀಡಾಗಿ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಪ್ರವೇಶಿಸಿದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವಕ್ಕೆ ದಾರಿ ಮಾಡಿಕೊಡುವ ಕಾನೂನನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಸಂಸತ್ತು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಇದನ್ನು ಜಾರಿ ಮಾಡಲಾಗಿದೆ. ಡಿಸೆಂಬರ್ 2019ರಲ್ಲಿ ಕಾನೂನು ಮಾಡಲಾಗಿತ್ತು.
#WATCH | On CAA implementation, US State Department Spokesperson Matthew Miller says, "We are concerned about the notification of Citizenship (Amendment) Act. We are closely monitoring
— ANI (@ANI) March 15, 2024
how this Act will be implemented. Respect for religious freedom and equal treatment under the… pic.twitter.com/55Xhog4Itp
ಕಾಯಿದೆಯ ಅಧಿಸೂಚನೆಯು ವಿಪಕ್ಷ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಅಧಿಸೂಚಿತ ನಿಯಮಗಳು ಅಸಾಂವಿಧಾನಿಕ, ತಾರತಮ್ಯದ್ದು ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ಪೌರತ್ವದ ತತ್ವಗಳ ಉಲ್ಲಂಘನೆಯಾಗಿದೆ ಎಂದು ವಿಪಕ್ಷಗಳು ಹೇಳಿವೆ. ಮುಸ್ಲಿಮರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಪೌರತ್ವವನ್ನು ಧಾರ್ಮಿಕ ಗುರುತಿಗೆ ಜೋಡಿಸಿದ್ದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳನ್ನು ಈ ಕಾನೂನು ದುರ್ಬಲಗೊಳಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.
ಆದರೆ, ಸಿಎಎ ಪೌರತ್ವವನ್ನು ನೀಡುವುದರ ಕುರಿತು ಇದೆ ಹೊರತು ದೇಶದ ಯಾವುದೇ ನಾಗರಿಕರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ. ಸರ್ಕಾರ ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಈ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
“ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ನಾವು ಇದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಅವರದು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಇತಿಹಾಸ. ಆದರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಇತಿಹಾಸ ವಿಭಿನ್ನ. ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳುವುದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ನೀಡಿದ ಪ್ರತಿಯೊಂದು ಭರವಸೆಯೂ ಈಡೇರಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: Amit Shah: ರಾಜಿ ಇಲ್ಲ, ಸಿಎಎ ವಾಪಸ್ ಪಡೆಯಲ್ಲ; ಅಮಿತ್ ಶಾ ಸ್ಪಷ್ಟ ಸಂದೇಶ