Site icon Vistara News

Moscow Attack: ಮಾಸ್ಕೋ ದಾಳಿ ಅಮೆರಿಕಕ್ಕೆ ಮೊದಲೇ ಗೊತ್ತಿತ್ತು! ಸಾವಿನ ಸಂಖ್ಯೆ 60ಕ್ಕೆ ಏರಿಕೆ, ಮೋದಿ ಸಂತಾಪ

Moscow Attack 2

ಮಾಸ್ಕೋ: ಮಾಸ್ಕೋದಲ್ಲಿ ಉಗ್ರರ ದಾಳಿ (Moscow Attack) ನಡೆಯುವ ಸಾಧ್ಯತೆಯ ಬಗ್ಗೆ ಅಮೆರಿಕ ಒಂದು ತಿಂಗಳ ಮೊದಲೇ ರಷ್ಯಾಕ್ಕೆ ಎಚ್ಚರಿಕೆ ನೀಡಿತ್ತು ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ. ಈ ನಡುವೆ, ಮಾಸ್ಕೋ ಸಂಗೀತ ಹಾಲ್‌ನಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದವರ ಸಂಖ್ಯೆ 60ಕ್ಕೆ ಏರಿದೆ.

“ಈ ತಿಂಗಳ ಆರಂಭದಲ್ಲಿ, ಯುಎಸ್ ಸರ್ಕಾರವು ಮಾಸ್ಕೋದಲ್ಲಿ (Moscow Attack) ಯೋಜಿತ ಸಂಭಾವ್ಯ ಭಯೋತ್ಪಾದಕ ದಾಳಿಯ (ISIS Attack) ಬಗ್ಗೆ ಮಾಹಿತಿಯನ್ನು ಹೊಂದಿತ್ತು. ಸಂಗೀತ ಕಚೇರಿಗಳೂ ಸೇರಿದಂತೆ ದೊಡ್ಡ ಸಾರ್ವಜನಿಕ ಕೂಟಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ರಷ್ಯನ್ನರಿಗೆ ಸೂಚನೆ ನೀಡಲಾಗಿತ್ತು” ಎಂದು ಅವರು ಹೇಳಿದ್ದಾರೆ.

ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ಏನಾಯಿತು?

ನಾಲ್ಕು ಮಂದಿ ಭಯೋತ್ಪಾದಕರ ಗುಂಪು ಮಾಸ್ಕೋದ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ಗೆ ನುಗ್ಗಿತು ಮತ್ತು ಅಲ್ಲಿ ನೆರೆದಿದ್ದ ಸಭಿಕರ ಮೇಲೆ ಗುಂಡಿನ ದಾಳಿ ಎಸಗಿತು. ಇದರಿಂದ ಜನ ಗಾಬರಿಯಾಗಿ ದಿಕ್ಕಾಪಾಲಾಗಿ ಓಡಲು ಶುರುಮಾಡಿದಾಗ ಕಾಲ್ತುಳಿತ ಕೂಡ ಉಂಟಾಯಿತು, ಇದೇ ಸಂದರ್ಭದಲ್ಲಿ ಉಗ್ರರು ಗ್ರೆನೇಡ್‌ಗಳನ್ನು ಸ್ಫೋಟಿಸಿದರು.

ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಹೀಗಾಗಿ ಬೆಂಕಿ ಹೊತ್ತಿಕೊಂಡು ಉರಿಯತೊಡಗಿದೆ. ನಂತರ ದಾಳಿಕೋರರು ಬಿಳಿ ಬಣ್ಣದ ರೆನಾಲ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.

ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಶುಕ್ರವಾರ ಟೆಲಿಗ್ರಾಮ್‌ನಲ್ಲಿ ಐಸಿಸ್-ಸಂಯೋಜಿತ ಸುದ್ದಿ ಸಂಸ್ಥೆ ಅಮಾಕ್ ಪ್ರಕಟಿಸಿದ ಕಿರು ಹೇಳಿಕೆಯಲ್ಲಿ, ಭಯೋತ್ಪಾದಕ ಗುಂಪು ರಷ್ಯಾದ ರಾಜಧಾನಿಯಲ್ಲಿ ಕ್ರಿಶ್ಚಿಯನ್ನರ ದೊಡ್ಡ ಸಭೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಿಕೊಂಡಿದೆ. ಮಾರಕ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆಗಾರಿಕೆಯನ್ನು ದೃಢೀಕರಿಸುವ ಗುಪ್ತಚರ ಮಾಹಿತಿಯನ್ನು ಅಮೆರಿಕದ ದೃಢಪಡಿಸಿದೆ.

ಭಾರತ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಮತ್ತಿತರ ಹಲವಾರು ದೇಶಗಳು ದಾಳಿಯನ್ನು ಖಂಡಿಸಿವೆ. ಅಮೆರಿಕದ ಈ ದಾಳಿಯನ್ನು “ಭಯಾನಕ” ಎಂದು ಕರೆದಿದೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಗೂ ಇದಕ್ಕೂ ಯಾವುದೇ ಸಂಬಂಧ ಕಂಡುಬರುತ್ತಿಲ್ಲ ಎಂದು ಹೇಳಿದೆ. ಉಕ್ರೇನ್‌ನ ಪ್ರೆಸಿಡೆನ್ಸಿ ಕೂಡ, “ತಮಗೆ ಈ ದಾಳಿಯೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದೆ. ದಾಳಿಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ವ ಮಾಹಿತಿ ಪಡೆದಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪುಟಿನ್ ಹಾರೈಸಿದ್ದಾರೆ.

ಮಾಸ್ಕೋದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ಭಾರತದ ನರೇಂದ್ರ ಮೋದಿ ಖಂಡಿಸಿದ್ದಾರೆ. “ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಈ ದುಃಖದ ಸಮಯದಲ್ಲಿ ಭಾರತ ಸರ್ಕಾರ ರಷ್ಯಾದ ಒಕ್ಕೂಟದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ” ಎಂದು ಪ್ರಧಾನಿ ಮೋದಿ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Moscow Attack: ಮಾಸ್ಕೋದಲ್ಲಿ ಐಸಿಸ್ ಉಗ್ರರ ಭಯಾನಕ ದಾಳಿ; 40 ಸಾವು; ಸಂಗೀತ ಕೇಳಲು ಬಂದವರ ಮೇಲೆ ಯದ್ವಾತದ್ವಾ ಗುಂಡಿಕ್ಕಿದರು

Exit mobile version