Site icon Vistara News

ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಬಗ್ಗೆ ಅಮೆರಿಕದ ದ್ವಂದ್ವ ನಿಲುವು

Khalistani movement

ಕೆನಡಾ ಆಯ್ತು, ಆಸ್ಟ್ರೇಲಿಯಾ ಆಯ್ತು, ಈಗ ಅಮೆರಿಕದಲ್ಲೂ ಖಲಿಸ್ತಾನಿ ಉಗ್ರರು (Khalistan Terrorists) ತಮ್ಮ ಬಾಲ ಬಿಚ್ಚಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿನ ಹಿಂದೂ ದೇವಾಲಯಕ್ಕೆ (Hindu Temple) ಖಲಿಸ್ತಾನಿ ಉಗ್ರರು ಹಾನಿ ಮಾಡಿದ್ದಾರೆ. ಮಂದಿರದ ಹೊರಭಾಗದ ಗೋಡೆಗಳ ಮೇಲೆ ಭಾರತ ವಿರೋಧಿ, ಖಲಿಸ್ತಾನಿ ಪರ ಘೋಷಣೆಗಳನ್ನು ಗೀಚಿ ವಿರೂಪಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಬರೆಯಲಾಗಿದೆ. ಭಾರತಕ್ಕೆ ದುಃಸ್ವಪ್ನವಾಗಿದ್ದ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆಯ ಹೆಸರನ್ನು ಬರೆಯಲಾಗಿದೆ. ಭಿಂದ್ರನ್‌ವಾಲೆ ಹೆಸರಿನ ಉಲ್ಲೇಖ ಹಿಂದೂಗಳಲ್ಲಿ ಹಿಂಸಾಚಾರದ ಭಯವನ್ನು ಸೃಷ್ಟಿಸಲೆಂದೇ ಆಗಿದೆ. ಇದಕ್ಕೆ ಅಮೆರಿಕದ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನಾವು ಗಮನಿಸಬೇಕಿದೆ.

ಖಲಿಸ್ತಾನಿ ಉಗ್ರರ ಈ ಕೃತ್ಯವನ್ನು ಭಾರತವೇನೋ ಖಂಡಿಸಿದೆ. ಇದು ಭಾರತೀಯ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿದೆ. ಅಮೆರಿಕ ಅಧಿಕಾರಿಗಳು ಈ ಕೂಡಲೇ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಒತ್ತಾಯಿಸಲಾಗಿದೆ. ಇಂತಹ ದ್ವೇಷದ ಅಪರಾಧಗಳ ಘಟನೆಗಳು ಅಮೆರಿಕದಲ್ಲಿ ಹಲವಾರು ಬಾರಿ ದಾಖಲಾಗಿವೆ. ಯುಎಸ್ ಮತ್ತು ಕೆನಡಾದಲ್ಲಿ ಇವು ಹೆಚ್ಚುತ್ತಿವೆ. ಆಗಸ್ಟ್‌ನಲ್ಲಿ, ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಕಾರ್ಯಕರ್ತರು ದೆಹಲಿಯಲ್ಲಿ ನಡೆದ G20 ಶೃಂಗಸಭೆಗೆ ಮುಂಚಿತವಾಗಿ ಖಲಿಸ್ತಾನ್ ಪರ ಗೀಚುಬರಹದೊಂದಿಗೆ ಐದು ಮೆಟ್ರೋ ನಿಲ್ದಾಣಗಳನ್ನು ವಿರೂಪಗೊಳಿಸಿದ್ದರು. ಎಸ್‌ಎಫ್‌ಐ ದೆಹಲಿ ಮೆಟ್ರೋ ಸ್ಟೇಷನ್‌ಗಳಲ್ಲಿ ʼದೆಹಲಿ ಬನೇಗಾ ಖಲಿಸ್ತಾನ್’ ಮತ್ತು ʼಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು. ಪಂಜಾಬ್‌ನಲ್ಲಿ ಹತ್ತಿಕ್ಕಲಾಗಿರುವ ಖಲಿಸ್ತಾನಿ ಉಗ್ರರ ಚಟುವಟಿಕೆಗೆ ಕೆನಡಾ ಹಾಗೂ ಅಮೆರಿಕ ಈಗ ನೀರು ಗೊಬ್ಬರ ಎರೆದು ಪೋಷಿಸುತ್ತಿವೆ.

ಅಮೆರಿಕದಲ್ಲಿ ನೆಲೆಸಿರುವ ಖಲಿಸ್ತಾನ್‌ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌, ಭಾರತದ ವಿರುದ್ಧ ಹಾಗೂ ಹಿಂದೂಗಳ ವಿರುದ್ಧ ಹಿಂಸಾಚಾರ ಎಸಗುವಂತೆ ಸಿಕ್ಖರಿಗೆ ಕರೆ ನೀಡುತ್ತಲೇ ಇದ್ದಾನೆ. ಈತ ಕೆನಡಾದಲ್ಲಿಯೂ ಪೌರತ್ವ ಹೊಂದಿದ್ದಾನೆ. ಇತ್ತೀಚೆಗೆ ಈತನನ್ನು ಕೊಲ್ಲಲು ಸಂಚು ಹೂಡಿದ ಆರೋಪದಲ್ಲಿ ನಿಖಿಲ್‌ ಗುಪ್ತಾ ಎಂಬ ಭಾರತೀಯ ವ್ಯಕ್ತಿಯನ್ನು ಝೆಕ್‌ ಗಣರಾಜ್ಯದಲ್ಲಿ ಬಂಧಿಸಲಾಗಿದೆ. ಇದಕ್ಕೆ ಅಮೆರಿಕ ತೀವ್ರವಾಗಿ ಪ್ರತಿಕ್ರಿಯಿಸಿತ್ತು. ಇದರ ಹಿಂದೆ ಭಾರತದ ಅಧಿಕಾರಿಗಳ ಕೈವಾಡ ಇದೆ ಎಂದು ಆರೋಪಿಸಿ, ಭಾರತ ಇದರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿತ್ತು. ತನ್ನದೇ ಆದ ತನಿಖೆ ಶುರು ಮಾಡಿದೆ. ಮಾತ್ರವಲ್ಲ ಭಾರತದ ಸ್ವತಂತ್ರ ತನಿಖೆಯಲ್ಲಿ ಮೂಗು ತೂರಿಸುತ್ತಲೂ ಇದೆ. ಎಲ್ಲಿಯವರೆಗೆ ಎಂದರೆ, ಅಮೆರಿಕ- ಭಾರತ ದ್ವಿಪಕ್ಷೀಯ ಸಂಬಂಧ ಇದರಿಂದ ಬೆದರಿಕೆಗೆ ಒಳಗಾಗಬಹುದು ಎಂಬಷ್ಟು. ಪನ್ನುನ್ ಅಮೆರಿಕದ ಪೌರ ಎಂಬ ಒಂದೇ ಕಾರಣ ಅದರ ಹಿನ್ನೆಲೆಯಲ್ಲಿದೆ.

ಆದರೆ ಹಿಂದೂ ದೇವಾಲಯ ಹಾನಿ ಮಾಡಿದ ಕೃತ್ಯದ ಬಗ್ಗೆ ಅಮೆರಿಕದ ಪ್ರತಿಕ್ರಿಯೆ ಬಹುತೇಕ ಶೂನ್ಯ. ಪನ್ನುನ್ ಭಾರತವಿದ್ರೋಹಿ ಎಂಬುದು ಅಮೆರಿಕಕ್ಕೆ ಗೊತ್ತೇ ಇದೆ. ಯಾಕೆಂದರೆ ಈತ ಆಗಾಗ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸುವ ಬೆದರಿಕೆಯನ್ನು ನೇರವಾಗಿಯೇ, ವಿಡಿಯೋ ಮೂಲಕ ಒಡ್ಡುತ್ತಾನೆ. ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿಯೂ ಈತ ಹೇಳಿದ್ದ. ತನ್ನ ಪೌರನೊಬ್ಬ ತನ್ನ ಮಿತ್ರರಾಷ್ಟ್ರದ ಸಾರ್ವಭೌಮತೆಗೆ ಬೆದರಿಕೆ ಒಡ್ಡಿದಾಗ ಆತನ ಮೇಲೆ ಅಮೆರಿಕ ಕಠಿಣ ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ಊಹೂಂ. ಹೋಗಲಿ, ಹಿಂದೂಗಳ ಸಮುದಾಯ ಅಮೆರಿಕದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಅಮೆರಿಕದ ಬೆಳವಣಿಗೆಗೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ಇಂಥ ಸಮುದಾಯಕ್ಕೆ ನೋವಾಗುವ ಕೃತ್ಯವನ್ನು ಯಾರಾದರೂ ಎಸಗಿದಾಗ, ಹಿಂದೂ ದೇಗುಲಕ್ಕೆ ಹಾನಿ ಎಸಗಿದಾಗ, ಅಂಥವರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಕ್ಷಿಪ್ರ ಕ್ರಮ ಕೈಗೊಳ್ಳಬೇಕಲ್ಲವೇ? ಅದೂ ಇಲ್ಲ. ಅಮೆರಿಕದ ಖಲಿಸ್ತಾನಿ ಉಗ್ರರ ಹಿಂದೆ ಪನ್ನುನ್‌ನ ಬೆಂಬಲ ಇದೆ ಎಂಬುದು ಸ್ಪಷ್ಟ. ಆದರೆ ಅಮೆರಿಕ ಈ ವಿಚಾರದಲ್ಲಿ ಪಂಚೇಂದ್ರಿಯಗಳನ್ನೂ ಮುಚ್ಚಿಕೊಂಡು ಕುಳಿತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಹೃದಯ ಜೋಪಾನ, ಅಪಾಯ ಹೆಚ್ಚಿಸಿದೆ ಕೊರೊನಾ

ಪನ್ನು ಹತ್ಯೆ ಸಂಚು ವಿಚಾರವಾಗಿ ಭಾರತಕ್ಕೆ ತಾಕೀತು ಮಾಡುವ ಅಮೆರಿಕ, ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ ಖಲಿಸ್ತಾನಿಗಳ ಮೇಲೂ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅದರ ನೈತಿಕತೆಗೆ ಬೆಲೆ. ಖಲಿಸ್ತಾನಿಗಳ ಪ್ರತ್ಯೇಕತಾವಾದದ ಸಂಚಿಗೆ ಕೆನಡಾ, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿನ ಹಿಂದೂ ಮಂದಿರಗಳು ಗುರಿಯಾಗುತ್ತಿವೆ. ಪನ್ನುನ್‌ನಂಥ ಖಲಿಸ್ತಾನಿ ಉಗ್ರನಿಗೆ, ಮಾದಕ ದ್ರವ್ಯ ಸರಬರಾಜುದಾರನಿಗೆ ಅಮೆರಿಕ ಆಸರೆ ನೀಡುತ್ತಿರುವುದು ಖಂಡನೀಯ. ಈ ಹಿಂದೆ ಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರನ್ನು ಬೆಳೆಸಲು ಹಣ, ಶಸ್ತ್ರಾಸ್ತ್ರ ಒದಗಿಸಿಕೊಟ್ಟ ಕುಖ್ಯಾತಿ ಅಮೆರಿಕಕ್ಕೆ ಇದೆ. ಕೊನೆಗೆ ಈ ತಾಲಿಬಾನಿಗಳಿಂದಲೇ ಅಮೆರಿಕ ಕೈಸುಟ್ಟುಕೊಳ್ಳಬೇಕಾಯಿತು ಕೂಡ. ಇದು ಅಮೆರಿಕ ಸರ್ಕಾರಕ್ಕೆ ನೆನಪಿರಲಿ. ಭಾರತದ ವಿಚಾರದಲ್ಲೂ ಖಲಿಸ್ತಾನಿಗಳನ್ನು ಬೆಳೆಸಿ ಅಮೆರಿಕ ಮತ್ತದೇ ತಪ್ಪು ಮಾಡದಿರಲಿ.

Exit mobile version