Site icon Vistara News

Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

uttara kannada landslide shirur

ಕಾರವಾರ: ಅಂಕೋಲಾ ಶಿರೂರು ಗುಡ್ಡಕುಸಿತ (Uttara Kannada Landslide, Ankola landslide) ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ (search Operation) 12ನೇ ದಿನಕ್ಕೆ ಕಾಲಿಟ್ಟಿದೆ. ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ 11 ಮಂದಿ ಪೈಕಿ 8 ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ನದಿಯಲ್ಲಿ ಶೋಧ ಮುಂದುವರಿದಿದೆ. ಕೇರಳದ ಡ್ರೈವರ್‌ ಶೋಧಕ್ಕಾಗಿ ಹೆಚ್ಚಿನ ಪ್ರಯತ್ನ ವಹಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Kerala CM Pinarayi Vijayan) ಮನವಿ ಮಾಡಿದ್ದಾರೆ.

ಈಗಾಗಲೇ ಹೆದ್ದಾರಿಯಲ್ಲಿ ಬಿದ್ದಿದ್ದ ಟನ್ನುಗಟ್ಟಲೆ ಮಣ್ಣನ್ನು ಅಲ್ಲಿಂದ ತೆರವು ಮಾಡಲಾಗಿದೆ. ಹೋಟೆಲ್‌ ಅವಶೇಷಗಳೂ ದೊರೆತಿವೆ. ಆದರೆ ಇನ್ನೂ ಮೂವರ ಶವಗಳು ಮಾತ್ರ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ದೆಹಲಿಯ ಎನ್‌ಡಿಆರ್‌ಎಫ್ ತಂಡ‌ ಡ್ರೋನ್ ಮೂಲಕ ಸ್ಕ್ಯಾನಿಂಗ್ ನಡೆಸಿದ್ದು, ನದಿಯಲ್ಲಿ ಸ್ಕ್ಯಾನಿಂಗ್ ಮೂಲಕ ಲಾರಿ ಇರುವ ಸ್ಥಳ ಗುರುತು ಮಾಡಲಾಗಿದೆ. ಆದರೆ ಡೈವಿಂಗ್ ಮಾಡಿ ಲಾರಿಯನ್ನು ಪರಿಶೀಲಿಸಲು ನದಿಯ ಹರಿವು ಅಡ್ಡಿಯಾಗಿದೆ. ಡೈವಿಂಗ್‌ಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಫ್ಲೋಟಿಂಗ್ ಫ್ಲಾಟ್‌ಫಾರಂ ತರಿಸುತ್ತಿದೆ. ಇಂದು ಫ್ಲೋಟಿಂಗ್ ಫ್ಲಾಟ್‌ಫಾರಂ ಬಳಸಿ ನದಿಯಲ್ಲಿರುವ ಲಾರಿಯ ಶೋಧಕ್ಕೆ ಪ್ರಯತ್ನಿಸಲಾಗುತ್ತದೆ.

ನದಿಯಲ್ಲಿ ಕೂಡ ಮಣ್ಣು ಸಂಗ್ರಹವಾಗಿದ್ದು, ಮಣ್ಣಿನಡಿ ನಾಪತ್ತೆಯಾಗಿರುವವರಿಗೆ ಶೋಧ ನಡೆಯಬೇಕಿದೆ. ಗುಡ್ಡಕುಸಿತದಿಂದ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಕಾರ್ಯ ಪೂರ್ಣವಾಗಿದ್ದು, ಹೆದ್ದಾರಿ ಸಂಚಾರ ಪುನರಾರಂಭಕ್ಕೆ ಜಿಯಾಲಾಜಿಸ್ಟ್ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರಕ್ಕೆ ಹೆದ್ದಾರಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡು ವಾಹನಗಳಿಗೆ ಅವಕಾಶ ಕೊಡಬೇಕಿದೆ.

ಪಿಣರಾಯಿ ವಿಜಯನ್ ಮೊರೆ

ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್‌ ಪತ್ತೆಗೆ ಹೆಚ್ಚಿನ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕೇರಳ‌ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ದಕ್ಷಿಣ ಮತ್ತು ಪೂರ್ವ ನೌಕಾ ಕಮಾಂಡ್‌ಗಳಿಂದ ಹೆಚ್ಚಿನ ಮುಳುಗು ತಜ್ಞರನ್ನು ನೇಮಿಸಲು, ರಿಮೋಟ್ ಚಾಲಿತ ವಾಹನಗಳು, ಆಧುನಿಕ ಉಪಕರಣಗಳನ್ನು ಶೋಧ ಕಾರ್ಯಕ್ಕೆ ನೀಡಲು ಅವರು ಮನವಿ ಮಾಡಿದ್ದಾರೆ.

ಜುಲೈ 16ರಂದು ನಡೆದಿದ್ದ ಗುಡ್ಡಕುಸಿತ ದುರಂತದಲ್ಲಿ ಕೇರಳ ಮೂಲದ ಲಾರಿ ನಾಪತ್ತೆಯಾಗಿತ್ತು. ಲಾರಿಯಲ್ಲಿದ್ದ ಚಾಲಕ ಅರ್ಜುನ ಸಹ ನಾಪತ್ತೆಯಾಗಿದ್ದರು. ಇದುವರೆಗೂ ನಾಪತ್ತೆಯಾಗಿರುವವರಿಗಾಗಿ ಶೋಧ ಮುಂದುವರಿದಿದೆ.

ಅರ್ಜುನ್‌ಗಾಗಿ ಇಡೀ ಕೇರಳ ಪ್ರಾರ್ಥಿಸುತ್ತಿದೆ: ಶಾಸಕ ಕೆ.ಎಂ.ಆಶ್ರಫ್

ಒಂದು ವಾರ ಕಳೆದರೂ ಅಲ್ಲಿದ್ದ ಹೋಟೆಲ್ ಆಗಲಿ ಅಥವಾ ಲಾರಿ ಡ್ರೈವರ್ ಅರ್ಜುನ್‌ನ ಸುಳಿವು ಸಿಕ್ಕಿರಲಿಲ್ಲ. ಮೊನ್ನೆ (ಗುರುವಾರ) ದೆಹಲಿ ತಂಡ ನಡೆಸಿದ ಡ್ರೋನ್ ಕಾರ್ಯಚರಣೆಯಲ್ಲಿ ನದಿಯಲ್ಲಿ ಲಾರಿ ಹಾಗೂ ಕ್ಯಾಬಿನ್ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ ನದಿಯ ಹರಿವು ಹೆಚ್ಚಾಗಿದ್ದ ಕಾರಣ ಶೋಧ ಕಾರ್ಯವನ್ನು ಮುಂದುವರೆಸಲು ಆಗಲಿಲ್ಲ. ಹೀಗಾಗಿ ಶುಕ್ರವಾರ ಎರಡು ಬೃಹತ್ ಹಿಟಾಚಿಗಳ ಮೂಲಕ ದಡದಲ್ಲಿನ ಮಣ್ಣು ತೆರವು ಕೆಲಸ ಮುಂದುವರಿಸಲಾಯಿತು. ಜತೆಗೆ ಇನ್ನುಳಿದ ಮೂವರಿಗಾಗಿ ಹೋಟೆಲ್ ಇದ್ದ ಜಾಗದಲ್ಲೇ ಪುನಃ ಹುಡುಕಾಟ ನಡೆದಿದೆ. ಸ್ಥಳೀಯ ಶಾಸಕ ಸತೀಶ್ ಸೈಲ್ ತಡರಾತ್ರಿಯವರೆಗೂ ಸ್ಥಳದಲ್ಲೇ ಹಾಜರಿದ್ದರು.

ಮಂಜೇಶ್ವರದ ಶಾಸಕ ಕೆ.ಎಂ. ಆಶ್ರಫ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಲಕ ಅರ್ಜುನಗಾಗಿ ಇಡೀ ಕೇರಳ ಜನತೆ ಪ್ರಾರ್ಥನೆ ಮಾಡುತ್ತಿದೆ. ಪ್ರತಿಕ್ಷಣವೂ ಅರ್ಜುನ ಜೀವಂತವಾಗಿ ಸಿಕ್ಕೇ ಸಿಗುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ. ದೇಶವು ಇದಕ್ಕೂ ದೊಡ್ಡ ಸಮಸ್ಯೆಗಳನ್ನು ಎದುರಿಸಿದೆ, ನಾವು ಹಿಂಜರಿಯದೆ ಆದಷ್ಟು ಬೇಗ ಅರ್ಜುನ ಬಳಿಗೆ ತಲುಪಿ ಅವನನ್ನು ಮೇಲೇತ್ತುವ ಕೆಲಸ ಆಗಬೇಕು. ಇವತ್ತಿನ ಕಾರ್ಯಾಚರಣೆಯಲ್ಲಿ ಲಾರಿ ಸಿಗುವ ಭರವಸೆ ಇದೆ, ಇಲ್ಲವಾದರೆ ನಮ್ಮ ಹನ್ನೊಂದು ದಿನದ ಶ್ರಮ ವ್ಯರ್ಥವಾಗುತ್ತದೆ. ಹಾಗಾಗಿ ಶುಕ್ರವಾರ ಫಲಿತಾಂಶ ಬಂದೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದರು.

ಕೇರಳ ಲೋಕಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವ ರಿಯಾಜ್ ಅಹ್ಮದ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ದೆಹಲಿ ತಜ್ಞರ ತಂಡದಿಂದ ಲಾರಿ ಇರುಬಹುದಾಗಿದೆ ಎನ್ನುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತ ಜತೆಗೆ ಸಭೆ ನಡೆಸಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿವರ ಜತೆಗೆ ಕೇರಳದ ಶಾಸಕರಾದ ಸಚ್ಚಿನ್ ದೇವ್, ಅಶ್ರಫ್ ಉಪಸ್ಥಿತರಿದ್ದು, ಶಾಸಕ ಸತೀಶ್ ಸೈಲ್ ಸಮ್ಮುಖದಲ್ಲೆ ಸಭೆ ನಡೆಯಿತು. ಇದೇ ವೇಳೆ ಜಿಲ್ಲಾಡಳಿತ ಮೃತ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ಕೇರಳ ಸಚಿವರ ಕೈಯಲ್ಲೇ ವಿತರಿಸಿದರು.

ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

Exit mobile version