Site icon Vistara News

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

Uttarakhand Trekking Tragedy

ಬೆಂಗಳೂರು: ಉತ್ತರಾಖಂಡದ ಶಾಸ್ತ್ರತಾಳ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್‌ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜತೆ ದೂರವಾಣಿ ಮೂಲಕ ಮಾತನಾಡಿ ಸಿಎಂ ಅವರು, ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ.

ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಭರವಸೆ ನೀಡಿದ್ದಾರೆ.

ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಮೃತರಿಗೆ ಸಿಎಂ ಸಂತಾಪ

ಉತ್ತರಾಖಂಡದ ಶಾಸ್ತ್ರತಾಳ್‌ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ (Uttarakhand Trekking Tragedy) ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ | Drowned in Water: ನದಿಗೆ ಬಿದ್ದವನು ಬದುಕಿದ, ರಕ್ಷಿಸಲು ಹೋದವನು ಸತ್ತ

ಚಾರಣಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ 9 ಮಂದಿ ಸಾವು

Uttarkashi Trekking Tragedy

ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ (Uttarkashi Trekking Tragedy) ಸಿಲುಕಿ ಕರ್ನಾಟಕದ ಐವರು ಸೇರಿ 9 ಚಾರಣಿಗರು ಮೃತಪಟ್ಟಿರುವ ಘಟನೆ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್‌ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಶಾಸ್ತ್ರತಾಳ್‌ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದಾಗ ಪ್ರತಿಕೂಲ ಹವಾಮಾನದಿಂದ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ.

ಮೃತರನ್ನು ಸುಜಾತ ಬೆಂಗಳೂರು (52), ಸಿಂಧು (47), ಚಿತ್ರಾ (48), ಪದ್ಮಿನಿ (45), ವೆಂಕಟೇಶ್‌ ಪ್ರಸಾದ್‌ (52, ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ KPS (50), ವಿನಾಯಕ್ ಎಂದು ಗುರುತಿಸಲಾಗಿದೆ.

ಸೌಮ್ಯಾ (36), ವಿನಯ್ (49), ಶಿವಜ್ಯೋತಿ (46), ಸುಧಾಕರ್‌ (64), ಸ್ಮೃತಿ (41), ಸೀನಾ (48), ಮಧುರೆಡ್ಡಿ (52), ಜಯಪ್ರಕಾಶ್ (61), ಭರತ್ (53), ಅನಿಲ್ ಭಟ್ಟ್ (52), ವಿವೇಕ್ ಶ್ರೀಧರ್, ರಿತಿಕಾ ಜಿಂದಾಲ್, ನವೀನ್ ಸೇರಿ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಮೇ 29ರಂದು ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಹಾಗೂ ಮೂವರು ಟೂರ್‌ ಗೈಡ್‌ಗಳು ಸೇರಿ 22 ಮಂದಿ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದರು. ಹಿಮಾಲಯ ಪರ್ವತಗಳಲ್ಲಿ ಸುಮಾರು 4,400 ಮೀಟರ್‌ ಎತ್ತರದಲ್ಲಿ ಶಾಸ್ತ್ರತಾಳ್‌ ಸರೋವರವಿದೆ. ಈ ಸರೋವರ ನೋಡಲು ಚಾರಣಿಗರು ತೆರಳಿದ್ದರು.

ಶಾಸ್ತ್ರತಾಳ್‌ನಿಂದ ಬೇಸ್‌ ಕ್ಯಾಂಪ್‌ಗೆ ಮರಳುತ್ತಿದ್ದಾಗ ಪ್ರತಿಕೂಲ ಹವಾಮಾನಕ್ಕೆ ಚಾರಣಿಗರು ಸಿಲುಕಿದ್ದರು. ಈ ವೇಳೆ ಎರಡು ವಾಹನದಲ್ಲಿ 8 ಮಂದಿ ಬೇಸ್‌ ಕ್ಯಾಂಪ್‌ಗೆ ಮರಳಿದ್ದು, 13 ಮಂದಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ 9 ಮಂದಿ ಮೃತಪಟ್ಟಿದ್ದು, ಇನ್ನುಳಿದವರ ರಕ್ಷಣೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ | ‌Prajwal Revanna Case: ಪ್ರಜ್ವಲ್ ರೇವಣ್ಣ‌ ಮನೆಯಲ್ಲಿ ಪತ್ತೆಯಾಯ್ತು ಸಂಶಯಾಸ್ಪದ ಕಲೆ ಇರುವ ಬೆಡ್‌ಶೀಟ್!

ಈ ಬಗ್ಗೆ ಸಚಿವ ಕೃಷ್ಣ ಬೈರೆಗೌಡ ಪ್ರತಿಕ್ರಿಯಿಸಿ, ಉತ್ತರಾಖಂಡ್‌ನಲ್ಲಿ ರಾಜ್ಯದ ಟ್ರೆಕ್ಕಿಂಗ್ ಟೀಂ ಸಿಲುಕಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ರಕ್ಷಣೆ ಸಂಬಂಧ ಉತ್ತರಾಖಂಡ ಸರ್ಕಾರದ ಜೊತೆ ಮಾತನಾಡಲಾಗಿದೆ. ಖುದ್ದು ತೆರಳಿ ಕಾರ್ಯಚರಣೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಿಂದ ಡೆಹ್ರಾಡೂನ್‌ಗೆ ಹೊರಟಿರುವುದಾಗಿ ತಿಳಿಸಿದ್ದಾರೆ.

ಇನ್ನು ಉತ್ತರಾಖಂಡಕ್ಕೆ ಟ್ರೆಕ್ಕಿಂಗ್ ಹೋದ ತಂಡದ ರಕ್ಷಣಾ ಕಾರ್ಯಕ್ಕಾಗಿ ಐಎಎಸ್‌ ಅಧಿಕಾರಿ ವಿಪುಲ್ ಬನ್ಸಲ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಉತ್ತರಾಖಾಂಡ ಸರ್ಕಾರದ ಜೊತೆ ನಿರಂತರ ಸಂಪರ್ಕ ಬೆಳಸಲು ಸಮನ್ವಯ ಅಧಿಕಾರಿಯಾಗಿ ಇವರನ್ನು ನೇಮಕ ಮಾಡಲಾಗಿದೆ.

Exit mobile version