ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ತ್ರತಾಲ್ ಶಿಖರ (Sahstra Tal Summit) ಏರಲು ಹೋಗಿದ್ದ ಬೆಂಗಳೂರಿನ 22 ಮಂದಿಯ ಚಾರಣಿಗರ (Trekkers) ತಂಡದಲ್ಲಿ 13 ಮಂದಿ ಮಾತ್ರ ಪಾರಾಗಿದ್ದಾರೆ. 9 ಮಂದಿ ಮೃತಪಟ್ಟಿದ್ದಾರೆ. ವಿಪರೀತ ಹಿಮಗಾಳಿ (blizzard), ಪ್ರತಿಕೂಲ ಹವಾಮಾನದಿಂದಾಗಿ ಈ ದುರ್ಘಟನೆ (Trekking Tragedy) ಸಂಭವಿಸಿದೆ. ಚಾರಣಿಗರಲ್ಲಿ ಬದುಕುಳಿದವರು ಅಲ್ಲಿ ಏನು ನಡೆಯಿತು ಎಂಬ ಚಿತ್ರಣವನ್ನು ಕೊಟ್ಟಿದ್ದಾರೆ.
ಕರ್ನಾಟಕ ಮೌಂಟನೀರಿಂಗ್ ಇನ್ಸ್ಟಿಟ್ಯೂಟ್ ಮುಖಾಂತರ ಉತ್ತರಾಖಂಡದ ಸಹಸ್ತ್ರತಾಲ್‌ಗೆ ಮೇ 29ರಂದು ಕರ್ನಾಟಕದ 22 ಜನರ ಗುಂಪು ಚಾರಣಕ್ಕೆ ತೆರಳಿತ್ತು. 21 ಚಾರಣಿಗರು ಮತ್ತು ಒಬ್ಬರು ಗೈಡ್ ಅನ್ನೊಳಗೊಂಡ ಟೀಂ ಇದಾಗಿತ್ತು. ಅಲ್ಲಿನ ಕುಫ್ರಿ ಟಾಪ್ ಎಂಬ ಶಿಖರಕ್ಕೆ ಹತ್ತಿ ಮರಳುತ್ತಿದ್ದಾಗ ಹವಾಮಾನ ಕೆಟ್ಟು ವಿಪರೀತ ಹಿಮಗಾಳಿ ಬೀಸಲಾರಂಭಿಸಿದೆ. ಇಳಿಯುವ ದಾರಿ ಮುಚ್ಚಿಹೋಗಿದ್ದು, ಹಿಂದಿರುಗಲು ಗೊತ್ತಾಗಿಲ್ಲ. ಎಲ್ಲರೂ ಅಲ್ಲೇ ಬಂಡೆಗಳನ್ನು ಆಶ್ರಯಿಸಿ ಪಾರಾಗಲು ಯತ್ನಿಸಿದ್ದಾರೆ. ಆದರೆ 9 ಜನ ಮೃತಪಟ್ಟಿದ್ದಾರೆ. ನಿನ್ನೆ 5 ಜನರ ಮೃತದೇಹ ಪತ್ತೆಯಾಗಿದ್ದು, ಇಂದು ಬೆಳಗ್ಗೆ 4 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇಂದು ಸಂಜೆ ಬೆಂಗಳೂರಿಗೆ ಮೃತದೇಹಗಳನ್ನು ತರುವ ಸಾಧ್ಯತೆ ಇದೆ. ವಿಶೇಷ ವಿಮಾನದಲ್ಲಿ ಮೃತ ದೇಹಗಳು ರವಾನೆಯಾಗಲಿವೆ. ಸಚಿವ ಕೃಷ್ಣಬೈರೇಗೌಡ ಡೆಹ್ರಾಡೂನ್‌ಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆಯುತ್ತಿದ್ದಾರೆ.
ಬದುಕುಳಿದ ಚಾರಣಿಗ, 52 ವರ್ಷದ ಮಧು ಕಿರಣ್ ರೆಡ್ಡಿ ಎಂಬವರು ಘಟನೆಯನ್ನು ವಿವರಿಸಿದ್ದಾರೆ: “ನಮ್ಮಲ್ಲಿ ಹೆಚ್ಚಿನವರು ಅನುಭವಿ ಚಾರಣಿಗರು. 25ರಿಂದ 30 ಚಾರಣ ಮಾಡಿದ್ದೇನೆ. ಜೂನ್ 3ರ ಮಧ್ಯಾಹ್ನ ಸಹಸ್ತ್ರ ತಾಲ್ ಶಿಖರದಲ್ಲಿ ಸಂತೋಷದಿಂದ ಸಮಯ ಕಳೆದ ನಂತರ ನಮ್ಮ ಗುಂಪು ಬೇಸ್ ಕ್ಯಾಂಪ್‌ಗೆ ಹಿಂತಿರುಗುತ್ತಿತ್ತು. ಇಬ್ಬರು ಸದಸ್ಯರು ಮುಖ್ಯ ಗುಂಪಿನ ಮುಂದೆ ಇದ್ದರು. ಅವರಿಗೆ ಏನೂ ಆಗಲಿಲ್ಲ. ಮಧ್ಯಾಹ್ನ 3.30ರ ಸುಮಾರಿಗೆ ಹಿಮ ಬಿರುಗಾಳಿ ಬೀಸಲಾರಂಭಿಸಿತು. ಗೋಚರತೆ ತಪ್ಪಿಹೋಯಿತು. ಅಲ್ಲಿಯವರೆಗೆ ಚಾರಣಕ್ಕೆ ಏನೂ ಕಷ್ಟವಾಗಿರಲಿಲ್ಲ. ಹಿಮಗಾಳಿ ನಾಲ್ಕು ಗಂಟೆಗಳ ಕಾಲ ಬೀಸಿತು. ನಮಗಿಂತ ಒಂದು ಅಡಿ ಮುಂದಿರುವುದೂ ಕಾಣುತ್ತಿರಲಿಲ್ಲ.”
“ಹಿಂತಿರುಗುವ ದಾರಿ ಕಾಣುವವರೆಗೆ ಅಲ್ಲಿಯೇ ಇರಲು ನಿರ್ಧರಿಸಿದೆವು. ನಾವೆಲ್ಲ ದೊಡ್ಡ ಬಂಡೆಯ ಕೆಳಗೆ ಆಶ್ರಯ ಪಡೆದೆವು. ಆ ರಾತ್ರಿಯಲ್ಲಿ ಚಳಿಯಿಂದಾಗಿ ನಮ್ಮ ಮುಂದೆಯೇ ಇಬ್ಬರು ಸತ್ತರು. ಬೆಳಗಿನ ವೇಳೆಗೆ ಇತರ ಇಬ್ಬರು ಸಾವನ್ನಪ್ಪಿದರು. ಮರುದಿನ ಇನ್ನೂ ಐದು ಮಂದಿ ಸಾವನ್ನಪ್ಪಿದರು. ಅಂತಿಮವಾಗಿ ನಮ್ಮ ದಾರಿ ಕಾಣಲಾರಂಭಿಸಿದಾಗ ಹಿಂದಿರುಗಿದೆವು. ನಮ್ಮ ಮೂಲ ಶಿಬಿರದಿಂದ ಕೇವಲ ಒಂದು ಗಂಟೆ ದೂರದಲ್ಲಿದ್ದೆವು ಎಂಬುದು ನಂತರ ಗೊತ್ತಾಯಿತು” ಎಂದು ಅವರು ಹೇಳಿದ್ದಾರೆ.
ಎಲ್ಲಾ ಒಂಬತ್ತು ಮಂದಿ ಹೈಪೋಥರ್ಮಿಯಾದಿಂದ ಸಾವನ್ನಪ್ಪಿದ್ದಾರೆ. ಗುಂಪಿನ ಎಲ್ಲಾ ಸದಸ್ಯರ ಬಳಿಯೂ ಸಾಕಷ್ಟು ಥರ್ಮಲ್‌ಗಳು, ರಕ್‌ಸಾಕ್‌ಗಳು ಮತ್ತು ಪೊಂಚೋಗಳನ್ನು ಒಳಗೊಂಡಂತೆ ಅಗತ್ಯ ಸಿದ್ಧತೆಗಳಿದ್ದರೂ ಹೀಗಾಗಿದೆ.
ಬದುಕುಳಿದ ಚಾರಣಿಗರ ತಂಡದೊಂದಿಗೆ ಡೆಹ್ರಾಡೂನ್‌ನಲ್ಲಿ ಸಚಿವ ಕೃಷ್ಣಬೈರೇಗೌಡ ಮುಖಾಮುಖಿಯಾಗಿದ್ದು, ಅಲ್ಲಿ ನಡೆದದ್ದೇನು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
“ಜೂನ್ 3ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಿಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ.
ಚಾರಣದ ಗಮ್ಯ ತಲುಪಿ ವಾಪಸ್ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತವು ಪ್ರಾರಂಭವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡಿದೆ. ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದಾರೆ. ಹಿಮ ಮತ್ತು ಹಿಮಗಾಳಿಯು ಚಾರಣಿಗರು ವಾಪಸ್ ಶಿಬಿರಕ್ಕೆ ಹಿಂದಿರುಗುವುದನ್ನು ಅಸಾಧ್ಯಗೊಳಿಸಿದೆ. ಗೋಚರತೆಯೂ ಶೂನ್ಯಕ್ಕೆ ಇಳಿದಿದೆ.
ಡೆಹ್ರಾಡೂನ್ ಚಾರಣಿಗರ ತಂಡದೊಂದಿಗಿನ ಚರ್ಚೆಯಿಂದ ನಾನು ಸಂಗ್ರಹಿಸಿದ ಮಾಹಿತಿ:
— Krishna Byre Gowda (@krishnabgowda) June 5, 2024
ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಿಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್… https://t.co/Ua4VbKbmt9
ಆ ರಾತ್ರಿ ಎಲ್ಲರೂ ಒಟ್ಟಿಗೆ ಕಳೆದಿದ್ದಾರೆ. ಆದರೆ, ಈ ವೇಳೆ ಹಿಮಗಾಳಿಯ ತೀವ್ರತೆಗೆ ಕೆಲವರು ಅದೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 4 ರ ಬೆಳಿಗ್ಗೆ, ಮೊಬೈಲ್ ಸಂಪರ್ಕ ಸಿಗಬಹುದಾದ ಸ್ಥಳಕ್ಕೆ ತಂಡದ ಮಾರ್ಗದರ್ಶಕ ತಲುಪಿದ್ದಾನೆ. ಈ ನಡುವೆ ಶಿಬಿರಕ್ಕೆ ಹಿಂತಿರುಗುವ ಸ್ಥಿತಿಯಲ್ಲಿದ್ದ ಕೆಲವು ಚಾರಣಿಗರು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಬಿರದ ಕಡೆಗೆ ಹೊರಟಿದ್ದಾರೆ. ಮಾರ್ಗದರ್ಶಕ ಶಿಬಿರಕ್ಕೆ ಬಂದು ಸಿಕ್ಕಿಬಿದ್ದ ಚಾರಣಿಗರನ್ನು ಕಾಪಾಡಲು ಬೇಕಾದ ಸಾಮಗ್ರಿಗಳೊಂದಿಗೆ ಮತ್ತೆ ಹಿಂತಿರುಗಿದ್ದಾರೆ.
ಜೂನ್ 4ರ ಸಂಜೆ ವೇಳೆಗೆ ಮಾರ್ಗದರ್ಶಿಯು ಫೋನ್ ಸಿಗ್ನಲ್ ಲಭ್ಯವಿರುವ ಸ್ಥಳವನ್ನು ತಲುಪಿಕೊಂಡಿದ್ದು, ಪರಿಸ್ಥಿತಿಯ ಬಗ್ಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆ ಮತ್ತು ಭಾರತೀಯ ಪರ್ವತಾರೋಹಣ ಒಕ್ಕೂಟ ಸಂಸ್ಥೆಗಳಿಗೆ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.
ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಜೂನ್ 4 ರ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆಗಳ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಭೂ ಸೇನೆ, ವಾಯುಪಡೆ, ಎಸ್‌ಡಿಆರ್‌ಎಫ್ ಮತ್ತು ವಿವಿಧ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಜೂನ್ 5 ರ ಬೆಳಿಗ್ಗೆ 5 ಗಂಟೆ ವೇಳೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.”
Racing against time, #IAF helicopters have successfully evacuated three survivors and the mortal remains of five trekkers, out of the 15 trekkers who were trapped in severe weather while trekking to Sahastra Tal, Uttarkashi.
— Indian Air Force (@IAF_MCC) June 5, 2024
Due to the high altitude and undulating terrain, the… pic.twitter.com/lfzE1FHnnD
ಮೃತಪಟ್ಟವರು:
1) ಸುಜಾತ, ಬೆಂಗಳೂರು -52 ವರ್ಷ
2) ಸಿಂಧು , ಪ್ರಾಯ-47 ವರ್ಷ
3) ಚಿತ್ರಾ, ಪ್ರಾಯ-48 ವರ್ಷ
4) ಪದ್ಮಿನಿ ವಯಸ್ಸು 45 ವರ್ಷ
5) ವೆಂಕಟೇಶ್ ಪ್ರಸಾದ್ 52 ವರ್ಷ
6) ಅನಿತಾ, ಪ್ರಾಯ 61 ವರ್ಷ
7) ಆಶಾ ಸುಧಾಕರ, ಪ್ರಾಯ 72 ವರ್ಷ
8) ಪದ್ಮನಾಭನ್ ಕೆಪಿಎಸ್, ವಯಸ್ಸು 50 ವರ್ಷ
9) ವಿನಾಯಕ್
ರಕ್ಷಣೆಗೊಳಗಾದವರು:
1) ಸೌಮ್ಯಾ, 36 ವರ್ಷ
2) ವಿನಯ್, 49 ವರ್ಷ
3) ಶಿವಜ್ಯೋತಿ- 46 ವರ್ಷ
4) ಸುಧಾಕರ್, 64 ವರ್ಷ
5) ಸ್ಮೃತಿ, 41 ವರ್ಷ
6) ಸೀನಾ, 48 ವರ್ಷ
7) ಮಧುರೆಡ್ಡಿ- 52 ವರ್ಷ
8) ಜಯಪ್ರಕಾಶ್- 61 ವರ್ಷ
9) ಭರತ್- 53 ವರ್ಷ
10) ಅನಿಲ್ ಭಟ್- 52 ವರ್ಷ
11) ವಿವೇಕ್ ಶ್ರೀಧರ್
12) ರಿತಿಕಾ ಜಿಂದಾಲ್
13) ನವೀನ್ ಎ.
ಇದನ್ನೂ ಓದಿ: Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ