ಬೆಂಗಳೂರು: ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರತಿಕೂಲ ಹವಾಮಾನಕ್ಕೆ (Uttarkashi Trekking Tragedy) ಸಿಲುಕಿ ಕರ್ನಾಟಕದ ನಾಲ್ವರು ಸೇರಿ 9 ಚಾರಣಿಗರು ಮೃತಪಟ್ಟಿರುವ ಘಟನೆ ನಡೆದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಸಹಸ್ತ್ರ ತಾಲ್ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದಾಗ ಪ್ರತಿಕೂಲ ಹವಾಮಾನದಿಂದ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ಸುಜಾತ ಬೆಂಗಳೂರು (52), ಸಿಂಧು (47), ಚಿತ್ರಾ (48), ಪದ್ಮಿನಿ (45), ವೆಂಕಟೇಶ್ ಪ್ರಸಾದ್ (52, ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ KPS (50), ವಿನಾಯಕ್ ಎಂದು ಗುರುತಿಸಲಾಗಿದೆ.
ಸೌಮ್ಯಾ (36), ವಿನಯ್ (49), ಶಿವಜ್ಯೋತಿ (46), ಸುಧಾಕರ್ (64), ಸ್ಮೃತಿ (41), ಸೀನಾ (48), ಮಧುರೆಡ್ಡಿ (52), ಜಯಪ್ರಕಾಶ್ (61), ಭರತ್ (53), ಅನಿಲ್ ಭಟ್ಟ್ (52), ವಿವೇಕ್ ಶ್ರೀಧರ್ ಗಾಯಾಳುಗಳಾಗಿದ್ದಾರೆ.
ಮೇ 29ರಂದು ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಹಾಗೂ ಮೂವರು ಟೂರ್ ಗೈಡ್‌ಗಳು ಸೇರಿ 22 ಮಂದಿ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದರು. ಹಿಮಾಲಯ ಪರ್ವತಗಳಲ್ಲಿ ಸುಮಾರು 4,400 ಮೀಟರ್ ಎತ್ತರದಲ್ಲಿ ಶಾಸ್ತ್ರತಾಳ್ ಸರೋವರವಿದೆ. ಈ ಸರೋವರ ನೋಡಲು ಚಾರಣಿಗರು ತೆರಳಿದ್ದರು.
ಸಹಸ್ತ್ರ ತಾಲ್‌ನಿಂದ ಬೇಸ್ ಕ್ಯಾಂಪ್‌ಗೆ ಮರಳುತ್ತಿದ್ದಾಗ ಪ್ರತಿಕೂಲ ಹವಾಮಾನಕ್ಕೆ ಚಾರಣಿಗರು ಸಿಲುಕಿದ್ದರು. ಈ ವೇಳೆ ಎರಡು ವಾಹನದಲ್ಲಿ 8 ಮಂದಿ ಬೇಸ್ ಕ್ಯಾಂಪ್‌ಗೆ ಮರಳಿದ್ದು, 13 ಮಂದಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ 9 ಮಂದಿ ಮೃತಪಟ್ಟಿದ್ದು, ಇನ್ನುಳಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕದ ಚಾರಣಿಗರ ತಂಡವೊಂದು ಉತ್ತರಾಖಂಡದಲ್ಲಿ ಪ್ರತಿಕೂಲ ವಾತಾವರಣದಲ್ಲಿ ಸಿಲುಕಿದೆ. ಪ್ರಸ್ತುತ ಕೆಲವರು ಈಗ ಕೊಹ್ಲಿ ಶಿಬಿರದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ನಾವು ಈಗಾಗಲೇ ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿದೆ. ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Prajwal Revanna Case: ಪ್ರಜ್ವಲ್ ರೇವಣ್ಣ ಮನೆಯಲ್ಲಿ ಪತ್ತೆಯಾಯ್ತು ಸಂಶಯಾಸ್ಪದ ಕಲೆ ಇರುವ ಬೆಡ್‌ಶೀಟ್!
ಈ ಬಗ್ಗೆ ಸಚಿವ ಕೃಷ್ಣ ಬೈರೆಗೌಡ ಪ್ರತಿಕ್ರಿಯಿಸಿ, ಉತ್ತರಾಖಂಡ್‌ನಲ್ಲಿ ರಾಜ್ಯದ ಟ್ರೆಕ್ಕಿಂಗ್ ಟೀಂ ಸಿಲುಕಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ರಕ್ಷಣೆ ಸಂಬಂಧ ಉತ್ತರಾಖಂಡ ಸರ್ಕಾರದ ಜೊತೆ ಮಾತನಾಡಲಾಗಿದೆ. ಖುದ್ದು ತೆರಳಿ ಕಾರ್ಯಚರಣೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಿಂದ ಡೆಹ್ರಾಡೂನ್‌ಗೆ ಹೊರಟಿರುವುದಾಗಿ ತಿಳಿಸಿದ್ದಾರೆ.
ಇನ್ನು ಉತ್ತರಾಖಂಡಕ್ಕೆ ಟ್ರೆಕ್ಕಿಂಗ್ ಹೋದ ತಂಡದ ರಕ್ಷಣಾ ಕಾರ್ಯಕ್ಕಾಗಿ ಐಎಎಸ್ ಅಧಿಕಾರಿ ವಿಪುಲ್ ಬನ್ಸಲ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಉತ್ತರಾಖಾಂಡ ಸರ್ಕಾರದ ಜೊತೆ ನಿರಂತರ ಸಂಪರ್ಕ ಬೆಳಸಲು ಸಮನ್ವಯ ಅಧಿಕಾರಿಯಾಗಿ ಇವರನ್ನು ನೇಮಕ ಮಾಡಲಾಗಿದೆ.