ಮೈಸೂರು: ಒಮ್ಮೆ ಬಿಜೆಪಿಯ ಕಡು ವಿರೋಧಿಯಂತೆ, ಇನ್ನೊಮ್ಮೆ ಪ್ರಖರ ಪ್ರತಿಪಾದಕನಂತೆ ಮಾತನಾಡುವ ಮಾಜಿ ಸಚಿವ ವಿ. ಸೋಮಣ್ಣ (V Somanna), ಬಿಜೆಪಿ ಹೈಕಮಾಂಡ್ (BJP High command) ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ಪ್ರಕಟಿಸಿದ್ದಾರೆ.
ಡಿಸೆಂಬರ್ 6ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ಲೋಕಾರ್ಪಣೆಯ ಬಳಿಕ ದಿಲ್ಲಿಗೆ ಹೋಗುವುದಾಗಿ ಹೇಳಿದ್ದ ಸೋಮಣ್ಣಗೆ ಇನ್ನೂ ಹೈಕಮಾಂಡ್‌ನಿಂದ ಮಾತುಕತೆಗೆ ಗ್ರೀನ್ ಸಿಗ್ನಲ್ ಸಿಕ್ಕಿದಂತಿಲ್ಲ. ಸದ್ಯವೇ ಮೂರ್ನಾಲ್ಕು ಮಂದಿ ದೆಹಲಿಗೆ ತೆರಳಿ ಹೈಕಮಾಂಡ್ ಜತೆಗೆ ಮಾತುಕತೆ ನಡೆಸುವುದಾಗಿ ಮೈಸೂರಿನಲ್ಲಿ ಪ್ರಕಟಿಸಿದರು. ಅವರು ಇಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.
ಕಾರ್ತಿಕ ಮಾಸ ಮುಗಿದು ಇದೀಗ ಧನುರ್ಮಾಸ ಆರಂಭವಾಗುತ್ತಿದೆ. ಸದ್ಯದಲ್ಲೇ ಮೂರ್ನಾಲ್ಕು ಮಂದಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಹೈಕಮಾಂಡ್ ಭೇಟಿ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು. ಹೈಕಮಾಂಡ್ ಭೇಟಿ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಏನೆಲ್ಲಾ ಬೆಳವಣಿಗೆ ಆಯಿತು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ವಿವರಿಸಿದರು.
ಕೆಲವು ಬಿಜೆಪಿ ನಾಯಕರ ಸೋಲಿಗೆ ಹಿರಿಯ ನಾಯಕರೇ ನೇರ ಕಾರಣ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ವಿ. ಸೋಮಣ್ಣ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಪದೇಪದೆ ಅದೇ ವಿಚಾರ ಮಾತನಾಡುವುದು ಬೇಡ ಎಂದು ಹೇಳಿದರು.
ʻʻನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಲ್ಲ. ಆದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುತ್ತೇನೆʼʼ ಎಂದು ವಿ. ಸೋಮಣ್ಣ ಹೇಳಿದರು.
ಎಸ್‌ಟಿಎಸ್, ಶಿವರಾಮ ಹೆಬ್ಬಾರ್‌ಗೆ ಆಹ್ವಾನವಿತ್ತು!
ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಚಿ ಸಚಿವ ವಿ. ಸೋಮಣ್ಣ ಅವರು, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರಿಗೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು. ಹಾಗಾಗಿ ಅವರು ಹೋಗಿದ್ದಾರೆ. ಇಬ್ಬರೂ ಈ ಮೊದಲು ಕಾಂಗ್ರೆಸ್ ನಲ್ಲಿದ್ದವರು. ಊಟಕ್ಕೆ ಹೋದಾಕ್ಷಣ ಅವರು ಕಾಂಗ್ರೆಸ್ ಗೆ ಹೋಗುತ್ತಾರೆಂದು ಅರ್ಥವಲ್ಲ ಎಂದರು.
ಇದನ್ನೂ ಓದಿ:V Somanna : ಇನ್ನೂ 15 ವರ್ಷ ಚಲಾವಣೆಯಲ್ಲಿರುವೆ ಎಂದ ವಿ. ಸೋಮಣ್ಣ!
ನೀವು ಬಿಜೆಪಿ ತೊರೆಯುತ್ತೀರ ಎಂಬ ಪ್ರಶ್ನೆಗೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದರು ವಿ ಸೋಮಣ್ಣ.
ವಿ. ಸೋಮಣ್ಣ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಅವರು ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಕೂಡಾ ಅವರನ್ನು ಸ್ವಾಗತಿಸುವ ಮತ್ತು ಟಿಕೆಟ್ ನೀಡುವ ಮನೋಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ವಿ ಸೋಮಣ್ಣ ಅವರು ನಿಜಕ್ಕೂ ಬಿಜೆಪಿ ಬಿಡುತ್ತಾರಾ ಅಥವಾ ರಾಜ್ಯ ನಾಯಕರಿಗೆ ಕಿರಿಕಿರಿ ಮಾಡುವಷ್ಟಕ್ಕೇ ಸೀಮಿತರಾಗುತ್ತಾರಾ ಕಾದು ನೋಡಬೇಕು.