Site icon Vistara News

Valmiki Corporation Scam: ಸಾಕ್ಷ್ಯ ನಾಶ ಆರೋಪ; ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್

Valmiki Corporation Scam

ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ (Valmiki Corporation Scam) ಮತ್ತೊಬ್ಬ ಸಚಿವರ ಹೆಸರು ಕೇಳಿಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ಸಾಕ್ಷ್ಯ ನಾಶ ಕುರಿತು ಚರ್ಚೆ ನಡೆದಿದೆ ಎಂದು ಪ್ರಕರಣದ 8ನೇ ಆರೋಪಿ, ಲೆಕ್ಕಾಧಿಕಾರಿ ಪರಶುರಾಮ್​ ಆರೋಪಿಸಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಅಲ್ಲಗಳೆದಿದ್ದು, ನನ್ನ ಕಚೇರಿಯಲ್ಲಿ ಯಾವುದೇ ಸಭೆ ನಡೆದಿಲ್ಲ, ಅಂದು ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಾಲ್ಮೀಕಿ ನಿಗಮ 187 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಪ್ರಕರಣದ ಎಂಟನೇ ಆರೋಪಿ ಪರಶುರಾಮ್‌, ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪ ಮಾಡಿದ್ದಾರೆ.

ಏನಿದು ಆರೋಪ?

ಸಚಿವ ಶರಣ ಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ಮೇ 24 ರಂದು ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೂ ಸಭೆ ನಡೆಸಿದ್ದಾರೆ. ಅಲ್ಲಿ ಸಾಕ್ಷ್ಯ ನಾಶ ಕುರಿತು ಚರ್ಚೆ ಆಗಿದೆ. ಸಭೆಯಲ್ಲಿ ಶರಣ ಪ್ರಕಾಶ್ ಪಾಟೀಲ್, ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಭಾಗವಹಿಸಿದ್ದರು. ಹೀಗಾಗಿ ಕೊಠಡಿಯ ಸಿಸಿಟಿವಿ ಫುಟೇಜ್‌ಗಳನ್ನು ತರಿಸಿಕೊಂಡು ಸಾಕ್ಷ್ಯಗಳನ್ನು ರಕ್ಷಣೆ ಮಾಡಲು ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕು ಹಾಗೂ ಜತೆಗೆ ತಾನು ದದ್ದಲ್ ಜತೆ ವಾಟ್ಸ್ಆ್ಯಪ್‌ ಚಾಟ್ ಮಾಡಿರುವುದನ್ನು ಸಹ ರಕ್ಷಣೆ ಮಾಡಬೇಕು ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಿ ಮನವಿ ಮಾಡಿದ್ದಾರೆ.

ಸಭೆ ನಡೆದ ದಿನ ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದ ಸಚಿವ

ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿಯಲ್ಲಿ ಬಂಧಿತ ಆರೋಪಿ ಪರಶುರಾಮ್ ಸಭೆ ನಡೆಸಿದ್ದಾರೆಂಬ ಎಂಬ ಆರೋಪ ಬಗ್ಗೆ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ, ಇದರ ಬಗ್ಗೆ ತನಿಖೆ ನಡೆಸಲಿ. ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇರಲಿಲ್ಲ. ವಿಕಾಸ ಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿ ಸರ್ಕಾರದ ಕಚೇರಿ. ಅಲ್ಲಿಗೆ ಸಾಕಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಬಂಧಿತ ಪರಶುರಾಮ್ ವೈದ್ಯಕೀಯ ಶಿಕ್ಷಣ ಸಚಿವರು ಅಂತ ಹೇಳಿಲ್ಲ. ಸಚಿವರ ಕಚೇರಿಯಲ್ಲಿ ಅಂತ ಹೇಳಿದ್ದಾರೆ. ಅಂದು ನಾನು ಕಚೇರಿಗೆ ಹೋಗಿಲ್ಲ. ನಮ್ಮ ಕಚೇರಿಯಲ್ಲಿ ಸಭೆ ಆಗಿರುವುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Valmiki Corporation Scam: ವಾಲ್ಮೀಕಿಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣ; ನಿಗಮ, ಮಂಡಳಿಗಳಿಗೆ ಪತ್ರ ಬರೆದ ಹಣಕಾಸು ಇಲಾಖೆ

ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಕಚೇರಿ ಸಿಬ್ಬಂದಿಯನ್ನು ಕೇಳಿದೆ. ಆ ರೀತಿ ಯಾವುದೇ ಸಭೆ ಆಗಿಲ್ಲ ಅಂತ ಹೇಳಿದ್ದಾರೆ. ಶಾಸಕರು ಬರುತ್ತಾರೆ, ಹೋಗುತ್ತಾರೆ ಅಂತ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೂ ನನಗೂ ಸಂಬಂಧ ಇಲ್ಲ. ಬೇಕಾದರೆ ಸಿಸಿಟಿವಿ ಫುಟೇಜ್ ಪರಿಶೀಲಿಸಲಿ, ನನ್ನ ಕಚೇರಿಯಲ್ಲಿ ಸಭೆ ಆಗಿದ್ದರೆ ತನಿಖೆ ನಡೆಯಲಿ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ. ನಾನು ಪ್ರಾಮಾಕವಾಗಿ ಕೆಲಸ ಮಾಡುವವನು ಎಂದು ಹೇಳಿದ್ದಾರೆ.

ತನಿಖೆಯಿಂದ ನಿಜಾಂಶ ಹೊರಬರಲಿದೆ ಎಂದ‌ ಶಾಸಕ ದದ್ದಲ್

ವಾಲ್ಮೀಕಿ ನಿಗಮ ಪ್ರಕರಣ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಹುತೇಕ ಎಲ್ಲ ಅರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯಾರದ್ದೇ ಹೆಸರು ಕೇಳಿಬಂದರೂ ತನಿಖೆ ನಡೆಸುತ್ತಾರೆ. ನಮ್ಮ ಪಾತ್ರ ಇದ್ದರೂ ಕರೆಯುತ್ತಾರೆ. ಸತ್ಯಾಂಶವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಈಗಾಗಲೇ ಸಿಬಿಐ ಎಫ್ಐ‌ಆರ್ ಮಾಡಿಕೊಂಡಿದೆ. ಎರಡು ಸಂಸ್ಥೆಗಳ ತನಿಖೆಯಿಂದ ನಿಜಾಂಶ ಹೊರಬರಲಿದೆ ಎಂದು ಶಾಸಕ ಬಸನಗೌಡ ದದ್ದಲ್‌ ಹೇಳಿದರು.

ಇದನ್ನೂ ಓದಿ | ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣದಲ್ಲಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೆಸರು; ಡಾ. ಜಿ.ಪರಮೇಶ್ವರ್‌ ಹೇಳಿದ್ದೇನು?

ಆರೋಪದಂತೆ ಸಭೆ ಆಗಿದ್ದು ನಿಜವೇ ಎಂಬ ಪ್ರಶ್ನಗೆ ಉತ್ತರಿಸಿ, ಆರೋಪಿ ಎಸ್ಐಟಿಗೆ ಏನು ಹೇಳಿಕೆ ಕೊಟ್ಟಿದ್ದಾರೆ, ಅದರಲ್ಲಿ ಸತ್ಯಾಂಶ ಇದ್ದರೆ ಕರೆಯುತ್ತಾರೆ. ನನ್ನನ್ನು ಈವರೆಗೂ ತನಿಖೆಗೆ ಕರೆದಿಲ್ಲ. ನಾನು ಪರಿಶಿಷ್ಟ ಪಂಗಡದಲ್ಲಿ ಹುಟ್ಟಿದ್ದವನು. ಇಂತಹ ದುಸ್ಸಾಹಸಗಳಿಗೆ ಕೈ ಹಾಕಲು ಸಾಧ್ಯವಿಲ್ಲ. ಎಲ್ಲವೂ ಇನ್ನೊಂದು ವಾರದೊಳಗೆ ಅಥವಾ ಐದಾರು ದಿನಗಳಲ್ಲಿ ಹೊರ ಬರಲಿದೆ. ನೀತಿ ಸಂಹಿತೆ ಜಾರಿ ಇದ್ದ ಕಾರಣ ನಾನು ಕಚೇರಿಗೆ ಹೋಗಿಲ್ಲ. ಸಭೆಗಳನ್ನು ಮಾಡಿಲ್ಲ ಎಂದು ತಿಳಿಸಿದರು.

Exit mobile version