Site icon Vistara News

Watch Video: ಹರಿದ್ವಾರದಲ್ಲಿ ಭಕ್ತರನ್ನು ಅಮಾನುಷವಾಗಿ ಥಳಿಸಿದ ಅರ್ಚಕರು!

Viral News

ಹೆಚ್ಚಾಗಿ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ನೂಕು ನುಗ್ಗಲು ಇರುತ್ತದೆ. ಆ ನಡುವೆ ಭಕ್ತರು, ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಸಿಬ್ಬಂದಿಗಳ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ, ಗಲಾಟೆಗಳು ನಡೆಯುತ್ತಿರುತ್ತದೆ (Viral News). ಇದು ಸರ್ವೇ ಸಾಮಾನ್ಯ. ಆದರೆ ಉತ್ತರಾಖಂಡದ ಹರಿದ್ವಾರದಲ್ಲಿರುವ ಮಂದಿರವೊಂದರಲ್ಲಿ ಅರ್ಚಕರು, ಸಿಬ್ಬಂದಿ ಮತ್ತು ಭಕ್ತರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿರುವುದಾಗಿ ತಿಳಿದು ಬಂದಿದೆ.

ಉತ್ತರಾಖಂಡದ ಹರಿದ್ವಾರದಲ್ಲಿರುವ ಸಿದ್ಧಪೀಠ ಶ್ರೀ ದಕ್ಷಿಣ ಕಾಳಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಭಕ್ತರನ್ನು ದೊಣ್ಣೆಯಿಂದ ಥಳಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಸಹರಾನ್ ಪುರದಿಂದ ಆಗಮಿಸಿದ ಭಕ್ತರು ಪಾರ್ಕಿಂಗ್ ರಸೀದಿ ವಿಚಾರಕ್ಕೆ ಜಗಳ ತೆಗೆದು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಆಗ ತಿರುಗಿ ಬಿದ್ದ ಅರ್ಚಕರು ಹಾಗೂ ಸಿಬ್ಬಂದಿಗಳು ದೊಣ್ಣೆಯಿಂದ ಭಕ್ತರನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗಾಯಗೊಂಡ ಭಕ್ತರು ಅರ್ಚಕರು ಮತ್ತು ಸಿಬ್ಬಂದಿಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದ ಚಾಂಡಿ ಘಾಟ್ ಚೌಕಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎನ್ನಲಾಗಿದೆ.

ಪೊಲೀಸರು ತಿಳಿಸಿದ ಪ್ರಕಾರ, ಸಹರಾನ್ ಪುರದ ಕೆಲವು ಭಕ್ತರು ಏಪ್ರಿಲ್ 14ರಂದು ಸಿದ್ಧಪೀಠ ಶ್ರೀ ದಕ್ಷಿಣ ಕಾಳಿ ಮಂದಿರಕ್ಕೆ ಬಂದಿದ್ದರು. ಅವರು ಕಾರನ್ನು ದೇವಾಲಯದ ಆವರಣಕ್ಕೆ ತೆಗೆದುಕೊಂಡು ಹೋದಾಗ ಸಿಬ್ಬಂದಿ ರಸೀದಿ ಹರಿಯಲು ಹೇಳಿದರು. ಈ ಬಗ್ಗೆ ಅವರ ನಡುವೆ ವಾಗ್ದಾದ ನಡೆದು ಘಟನೆ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗಿದೆ. ಘಟನೆಯ ನಂತರ ಭಕ್ತರು ಮತ್ತು ಅವರ ಬೆಂಬಲಿಗರು ದೇವಸ್ಥಾನದಿಂದ ಹೊರನಡೆದರು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: Ayodhya Ramanavami: ರಾಮನವಮಿ ವೇಳೆ ಅಯೋಧ್ಯೆ ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಪೊಲೀಸ್ ಅಧಿಕಾರಿ ನಿತೇಶ್ ಶರ್ಮಾ ಅವರು ದಕ್ಷಿಣಾ ಪೀಠಾಧೀಶ್ವರ ಸ್ವಾಮಿ ಕೈಲಾಶನಂದ ಗಿರಿ ಅವರಿಂದ ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಹಾಗಾಗಿ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version