ದುಬೈ : ಸೋಶಿಯಲ್ ಮೀಡಿಯಾಗಳನ್ನು ನಾವು ಹೆಚ್ಚಾಗಿ ಮನೋರಂಜನೆಗಾಗಿ, ಪ್ರತಿದಿನ ನಡೆಯುವ ಸುದ್ದಿಗಳನ್ನು ತಿಳಿದುಕೊಳ್ಳಲು ಬಳಸುತ್ತೇವೆ. ಪ್ರಪಂಚದ ಹಲವೆಡೆ ನಡೆಯುವಂತಹ ಘಟನೆಗಳನ್ನು ನಾವು ಸೋಶಿಯಲ್ ಮೀಡಿಯಾಗಳ ಸಹಾಯದಿಂದ ಮನೆಯಲ್ಲೇ ಕುಳಿತು ತಿಳಿಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳನ್ನು ಪತಿ ಪತ್ನಿಯರು ಡಿವೋರ್ಸ್ ನೀಡಲು ಬಳಸುತ್ತಿದ್ದಾರೆ ಎಂದು ಕೇಳಿದರೆ ಎಲ್ಲರಿಗೂ ಆಶ್ವರ್ಯವಾಗುವುದಂತು ಖಂಡಿತ. ಅಂತಹದೊಂದು ಘಟನೆ ಇದೀಗ ದುಬೈನಲ್ಲಿ ನಡೆದಿದೆ. ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ತಮ್ಮ ಪತಿಗೆ ಇನ್‍ಸ್ಟಾಗ್ರಾಂನಲ್ಲಿ ಡಿವೋರ್ಸ್ ನೀಡಿದ್ದು, ಇದು ಸಖತ್ ವೈರಲ್ (Viral Video) ಆಗಿದೆ.
ದುಬೈ ಆಡಳಿತಗಾರನ ಮಗಳಾದ ದುಬೈ ರಾಜಕುಮಾರಿ ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಶೇಖ್ ಮಾನಾ ಅವರನ್ನು ವಿವಾಹವಾದರು. ಇದೀಗ ರಾಜಕುಮಾರಿ ಶೇಖಾ ಮಹ್ರಾ ಇನ್‍ಸ್ಟಾಗ್ರಾಂನಲ್ಲಿ ಆಘಾತಕಾರಿ ಪೋಸ್ಟ್ ಹಾಕಿದ್ದು, ಅದರಲ್ಲಿ ತಮ್ಮ ಪತಿಗೆ ಡಿವೋರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಶೇಖಾ ಮಹ್ರಾ ಮತ್ತು ಅವರ ಪತಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಪತಿಯಿಂದ ಡಿವೋರ್ಸ್ ಕೇಳಿದ್ದು, ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, ತಮ್ಮ ಪತಿ ಬೇರೆ ಸಂಗಾತಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಪತಿಗೆ ಡಿವೋರ್ಸ್ ನೀಡುತ್ತಿರುವುದಾಗಿ ತಿಳಿಸಿ “ನಾನು ನಿಮಗೆ ವಿಚ್ಛೇದನ ನೀಡುತ್ತೇನೆ” ಎಂದು ಮೂರು ಬಾರಿ ಬರೆದು ಮಂಗಳವಾರ ಪೋಸ್ಟ್ ಮಾಡಿದ್ದಾರೆ. ಹಾಗೇ ಅವರು ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ.
ಶೇಖಾ ಮಹ್ರಾ ಕಳೆದ ವರ್ಷ ಮೇ ತಿಂಗಳಲ್ಲಿ ಎಮಿರೇಟ್ಸ್ ಉದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರನ್ನು ವಿವಾಹವಾದರು. ಒಂದು ವರ್ಷದ ನಂತರ, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 20ರ ಹರೆಯದ ಶೇಖ್ ಮಾನಾ ಅನೇಕ ಬ್ಯುಸಿನೆಸ್‍ಗಳನ್ನು ಹೊಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ದುಬೈ ರಾಜಕುಮಾರಿ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಿಂದ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ತಮ್ಮ ಮಗಳನ್ನು ಜಗತ್ತಿಗೆ ಕರೆತಂದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದರು.
ಹಾಗೇ ತನ್ನ ಪತಿ ಹಾಗೂ ಮಗಳ ಜೊತೆಗಿನ ಪೋಟೊವನ್ನು ಪೋಸ್ಟ್ ಮಾಡಿದ್ದರು. ಈ ಹಿಂದೆ ಅವರು ಗರ್ಭಿಣಿಯಾಗಿದ್ದಾಗ “ನಾವು ಮೂವರು” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಜೂನ್‍ನಲ್ಲಿ ಅವರು ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪತಿಯಿಲ್ಲದೆ ತಮ್ಮ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ “ನಾವಿಬ್ಬರೇ” ಎಂದು ಶೇಖಾ ಮಹ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್ ನಟಿ
ಶೇಖಾ ಮಹ್ರಾ ಅವರ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಯುಎಇಯ ಉಪಾಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿದ್ದಾರೆ. ಇವರಿಗೆ 26 ಮಂದಿ ಮಕ್ಕಳಿದ್ದು, ಅವರಲ್ಲಿ ಶೇಖಾ ಮಹ್ರಾ ಕೂಡ ಒಬ್ಬರು. ಆಕೆಯ ತಾಯಿ ಜೊಯಿ ಗ್ರಿಗೊರಾಕೋಸ್ ಗ್ರೀಸ್ ಮೂಲದವರಾಗಿದ್ದಾರೆ. ಆದರೆ ಶೇಖಾ ಮಹ್ರಾ ತಂದೆ, ಆಕೆಯ ತಾಯಿಗೆ ವಿಚ್ಛೇದನ ನೀಡಿದ್ದರು..