Site icon Vistara News

Viral Video : ಮೆಟ್ರೊದಲ್ಲಿ ಪರ್ಸ್ ಕದಿಯಲು ಮುಂದಾದ ಕಳ್ಳನಿಗೆ ಬಿತ್ತು ಗೂಸಾ! ವಿಡಿಯೊ ನೋಡಿ

Viral Video

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ಬಸ್, ರೈಲು, ಮಾರುಕಟ್ಟೆ, ರಸ್ತೆಗಳಲ್ಲಿ ಜನರ ಬೆಲೆಬಾಳುವ ವಸ್ತುಗಳನ್ನು, ಪರ್ಸ್‌ಗಳನ್ನು ಹಾಡುಹಗಲಿನಲ್ಲಿಯೇ ಜನಸಂದಣಿ ಇರುವಂತಹ ಸ್ಥಳಗಳಲ್ಲಿಯೇ ದರೋಡೆ ಮಾಡುತ್ತಿದ್ದಾರೆ. ಇದೀಗ ದೆಹಲಿ ಮೆಟ್ರೋದಲ್ಲಿ ಪರ್ಸ್ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಪರ್ಸ್ ಕದಿಯಲು ಕಳ್ಳ ಮುಂದಾದಾಗ ವ್ಯಕ್ತಿಯೊಬ್ಬ ಕಳ್ಳನನ್ನು ಹಿಡಿದು ಥಳಿಸಿದ್ದಾನೆ. ಮೆಟ್ರೋ ಒಳಗೆ ಕಳ್ಳನನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಮಧ್ಯವಯಸ್ಕ ವ್ಯಕ್ತಿಯೊಬ್ಬ ಜನಜಂಗುಳಿ ಇರುವ ರೈಲಿನಲ್ಲಿ ಪರ್ಸ್ ಕದಿಯುತ್ತಿದ್ದ ಕಳ್ಳನನ್ನು ಒದೆಯುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆರೋಪಿಯು ಆ ವ್ಯಕ್ತಿಯ ಬಳಿ ಮತ್ತೆ ಈ ಕೆಲಸ ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಆ ವ್ಯಕ್ತಿಯು ಅವನ ವಿನಂತಿಯನ್ನು ಕೇಳದೆ ಜನಗಳ ಮುಂದೆ ಅವನಿಗೆ ಕಪಾಳಮೋಕ್ಷ ಮಾಡುತ್ತಿದ್ದಾನೆ. ನಂತರ ಆರೋಪಿಯು ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸುತ್ತಾ ವ್ಯಕ್ತಿಯ ಪಾದಗಳನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಆರೋಪಿಯು ಅವನ ಪಾದಗಳನ್ನು ಸ್ಪರ್ಶಿಸಲು ಬಂದಾಗ ಆ ವ್ಯಕ್ತಿ ಅವನ ಎದೆಗೆ ಒದೆಯುತ್ತಾನೆ ಮತ್ತು ನಂತರ ಪದೇ ಪದೇ ಕಪಾಳಮೋಕ್ಷ ಮಾಡುತ್ತಾನೆ.

ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಘಟನೆ ನೆಡೆದ ನಿಖರವಾದ ದಿನಾಂಕ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಈ ವಿಡಿಯೊ ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಈ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ, ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ನೇಮಿಸಲಾದ ಮೆಟ್ರೋ ಮಾರ್ಷಲ್‌ಗಳು ಎಲ್ಲಿದ್ದಾರೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

ಇಂತಹ ಕಳ್ಳತನದ ಪ್ರಕರಣಗಳು ದಿನಕ್ಕೊಂದು ಬೆಳಕಿಗೆ ಬರುತ್ತಿದೆ. ಅದರಲ್ಲೂ ಮೆಟ್ರೋ ಸಿಟಿಗಳಾದ ದೆಹಲಿ, ಬೆಂಗಳೂರಿನಂತಹ ಸ್ಥಳಗಳಲ್ಲಿ ಈ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಜನಸಂದಣಿ ಇರುವ ಸ್ಥಳದಲ್ಲಿ ಹಾಡುಹಗಲಿನಲ್ಲಿಯೇ ಕಳ್ಳನೊಬ್ಬ ವಯಸ್ಕ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಅನ್ನು ಕಳ್ಳತನ ಮಾಡಿ ಓಡಿ ಹೋಗುತ್ತಿರುವುದು ಕಂಡುಬಂದಿದೆ.

Exit mobile version