ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಪುನಾರಂಭಿಸಿ, ಅದರ ಪುನಶ್ಚೇತನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಮೊಗ್ಗದ ಸಂಸದರು, ಕಾರ್ಖಾನೆಯ ಮಾಜಿ ಸಿಬ್ಬಂದಿಗಳು ಸೇರಿದಂತೆ ಅನೇಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾರ್ಖಾನೆಯಲ್ಲಿ ಬಂಡವಾಳ ತೊಡಗಿಸಿ, ಸ್ಥಗಿತಗೊಂಡಿರುವ ಎಲ್ಲಾ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಬೇಕು. ನಷ್ಟದಲ್ಲಿದ್ದ ಕಾರ್ಖಾನೆಯನ್ನು ಮುಚ್ಚಿರುವುದರಿಂದ ಇದರ ಮೇಲೆ ಅವಲಂಬಿತವಾಗಿದ್ದ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ವಿಐಎಸ್‌ಎಲ್ ಮರು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ.
1918ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಆರಂಭವಾಯಿತು. 1923ರಿಂದ ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಆರಂಭಿಸಿದ್ದ ವಿಐಎಸ್ಎಲ್ ಲಕ್ಷಾಂತರ ಜನರಿಗೆ ಪ್ರತ್ಯಕ್ಷ, ಪರೋಕ್ಷ ಉದ್ಯೋಗ ನೀಡಿತ್ತು. ವಿಐಎಸ್ಎಲ್ ದೇಶದ ಕೈಗಾರಿಕಾ ವಲಯಕ್ಕೆ ಅಪಾರವಾದ ಕೊಡುಗೆ ನೀಡಿದೆ. ಭದ್ರಾವತಿಯ ಈ ಕಾರ್ಖಾನೆ ಒಂದು ಕಾಲದಲ್ಲಿ ಕರ್ನಾಟಕದ ಹೆಮ್ಮೆಯಾಗಿತ್ತು. ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆ 1989ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಉಕ್ಕು ಪ್ರಾಧಿಕಾರದ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಆದರೆ ಕಾಲಕ್ರಮೇಣ ಅದು ನಾನಾ ಕಾರಣಗಳಿಂದ ಸೊರಗಿತ್ತು. ಕಳೆದೊಂದು ದಶಕದಿಂದ ನಷ್ಟದಲ್ಲಿದ್ದ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ 2016ರಲ್ಲಿ ಒಪ್ಪಿಗೆ ನೀಡಿತ್ತು. ವಿಐಎಸ್ಎಲ್ ಮುಚ್ಚುವುದಿಲ್ಲ, ಖಾಸಗಿಗೂ ನೀಡೊಲ್ಲ ಎಂದಿದ್ದ ಕೇಂದ್ರ ಸರ್ಕಾರ, ಸೈಲ್ ಮೂಲಕ 16,000 ಕೋಟಿ ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿಗೆ ಯೋಜಿಸಿತ್ತು. ಆದರೆ ಬಿಡ್‌ದಾರರು ಆಸಕ್ತಿ ವಹಿಸದ ಕಾರಣ ಕೇಂದ್ರ ಸರ್ಕಾರ ಆ ಯೋಜನೆಯನ್ನೂ ಕೈಬಿಟ್ಟಿತ್ತು.
ನಷ್ಟದ ಕಾರಣದಿಂದ 2019ರಂದು ಕಾರ್ಖಾನೆಯನ್ನು ಮುಚ್ಚಲಾಗಿದೆ. ಕಾರ್ಖಾನೆ ಸ್ಥಗಿತಗೊಂಡ ಕಾರಣ 280 ಕಾಯಂ ಸಿಬ್ಬಂದಿ, 1340 ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದ ಕಾರ್ಖಾನೆ ಮೇಲೆ ಅವಲಂಬನೆಯಾಗಿದ್ದ 10 ಸಾವಿರ ಕುಟುಂಬಗಳು ಅತಂತ್ರವಾಗುವಂತಾಯಿತು. ಕಾರ್ಖಾನೆ ಇಂದಿಗೂ ಸುಸ್ಥಿತಿಯಲ್ಲಿದೆ. ಇಲ್ಲಿನ ಉದ್ಯೋಗಿಗಳು ನಿಪುಣರು. ಯಾವ ಅದಿರಿಗೂ ಕೊರತೆ ಇಲ್ಲ. ಆಡಳಿತಗಾರರ ಹಾಗೂ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಈ ಕಾರ್ಖಾನೆಯನ್ನು ಮುಚ್ಚಿದೆ. ಎಲ್ಲ ಬಗೆಯ ಮೂಲವ್ಯವಸ್ಥೆಗಳೂ ಇರುವ, ಉತ್ಪಾದನೆಯ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಲ್ಲ, ನೈಪುಣ್ಯ ಹಾಗೂ ಆಧುನೀಕರಣಗಳನ್ನು ಕೂಡಿಸಿದರೆ ಯಾವುದೇ ಬೃಹತ್ ಖಾಸಗಿ ಕಾರ್ಖಾನೆಯನ್ನೂ ಮೀರಿಸಿ ದುಡಿಯಬಲ್ಲ ಈ ಸಂಸ್ಥೆಗೆ ಪುನಶ್ಚೇತನ ಖಂಡಿತವಾಗಿಯೂ ಅಗತ್ಯವಿದೆ.
ಇದನ್ನೂ ಓದಿ : VISL Badravathi: ವಿಐಎಸ್‌ಎಲ್ ಮರು ಆರಂಭಿಸಿ; ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಬಿ.ವೈ. ರಾಘವೇಂದ್ರ ಮನವಿ
ಕಾಲಕ್ರಮೇಣ ಸರ್ಕಾರಿ ಸ್ವಾಮ್ಯದ ಬೃಹತ್ ಸಂಸ್ಥೆಗಳಲ್ಲಿ ಅದಕ್ಷತೆ ಹಾಗೂ ಭ್ರಷ್ಟಾಚಾರ ವ್ಯಾಪಿಸುತ್ತದೆ. ಅಧಿಕಾರಶಾಹಿ ಹಾಗೂ ಸುತ್ತಲಿನ ರಾಜಕಾರಣಿಗಳು ಕರ್ತವ್ಯವನ್ನು ಮರೆತು ಮೇಯಲು ಆರಂಭಿಸುತ್ತಾರೆ. ಇದರಿಂದಲೇ ನಷ್ಟಗಳು ಶುರುವಾಗುವುದು. ಬಿಎಸ್‌ಎನ್‌ಎಲ್‌ಗೂ ಆಗಿರುವುದು ಇದೇ. ಆದರೆ ಎಚ್‌ಎಎಲ್‌ನಂಥ ಸಂಸ್ಥೆಗಳು ಇಂದಿಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆಯಲ್ಲದೆ, ದೇಶಕ್ಕೇ ಹೆಮ್ಮೆ ತರುವಂಥ ಸಾಧನೆಗಳನ್ನು ಮಾಡಿವೆ. ಬಿಗಿಯಾದ ಆಡಳಿತ, ಉತ್ತರದಾಯಿತ್ವ, ತಂತ್ರಜ್ಞಾನ ನಾವೀನ್ಯತೆ, ಆಧುನೀಕರಣ, ಹೊಸ ಚಿಂತನೆಗಳು ಹಾಗೂ ಅನ್ವೇಷಣೆಗಳು ಇದಕ್ಕೆ ಕಾರಣ. ವಿಐಎಸ್‌ಎಲ್‌ನಲ್ಲೂ ಕರ್ತವ್ಯನಿಷ್ಠರನ್ನು ತಂದು ಕೂರಿಸಿದರೆ ಕಾರ್ಖಾನೆಯನ್ನು ಮರು ಜೀವಗೊಳಿಸುವುದು ಅಸಾಧ್ಯವೇನಲ್ಲ. ನರೇಂದ್ರ ಮೋದಿ ಅವರ ಸರ್ಕಾರ ಆತ್ಮನಿರ್ಭರ ಭಾರತವನ್ನು ಪ್ರತಿಪಾದಿಸುತ್ತಿದೆ. ದೇಸಿ ಉತ್ಪಾದನೆ ಘಟಕಗಳನ್ನು ಉತ್ತೇಜಿಸುತ್ತಿದೆ. ಇದರ ಅಡಿಯಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನೂ ತಂದು ಪುನಶ್ಚೇತನಗೊಳಿಸಬೇಕು. ರಾಜ್ಯದ ಹೆಮ್ಮೆಯಾಗಿರುವ ಇದಕ್ಕೆ ಮರುಜೀವ ನೀಡಲು ರಾಜ್ಯ ಸರ್ಕಾರ ಕೂಡ ಒತ್ತಾಯಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಭದ್ರಾವತಿ ಉಕ್ಕಿನ ಕಾರ್ಖಾನೆ ಹೊಸ ವೈಭವದೊಂದಿಗೆ ಮರು ಆರಂಭವಾಗುವಂತೆ ಮಾಡಲಿ.