ನಾಡಗೀತೆಯ ವಿಷಯದಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಕುವೆಂಪು ವಿರಚಿತ ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ, ಐಚ್ಛಿಕ ಎಂಬ ಅರ್ಥ ಬರುವ ಸುತ್ತೋಲೆಯನ್ನು (Government Circular) ಸರ್ಕಾರ ಈ ಹಿಂದೆ ಹೊರಡಿಸಿತ್ತು. ಇದಕ್ಕೆ ರಾಜ್ಯಾದ್ಯಂತ ಪ್ರತಿರೋಧ ಎದುರಾದ ಕಾರಣ ಸರ್ಕಾರ (Karnataka Government) ಇದೀಗ ತಿದ್ದುಪಡಿಗೇ ತಿದ್ದುಪಡಿ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹೊಸ ಸುತ್ತೋಲೆ ಪ್ರಕಾರ, ಖಾಸಗಿ ಶಾಲೆಗಳಲ್ಲೂ ನಾಡಗೀತೆ ಹಾಡುವುದು ಕಡ್ಡಾಯ ಎಂದಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈಗ ಪ್ರಕಟಿಸಿರುವ ತಿದ್ದುಪಡಿಯಲ್ಲಿ ಹಿಂದಿನ ಅಂಶವನ್ನೇ ಉಳಿಸಿಕೊಳ್ಳಲಾಗಿದೆ, ಅಂದರೆ ಖಾಸಗಿ ಶಾಲೆಗಳನ್ನೂ ಸೇರಿಸಿ ಎಲ್ಲ ಶಾಲೆಗಳಿಗೆ ಅನ್ವಯಿಸಲಾಗಿದೆ(Vistara editorial).
ನಾಡಗೀತೆಗೆ ಸಂಬಂಧಿಸಿ ಹೈಕೋರ್ಟ್‌ಗೆ ನೀಡಬೇಕಾಗಿದ್ದ ದಾಖಲೆಯಲ್ಲಿ ಸರ್ಕಾರ ಈ ಎಡವಟ್ಟು ಮಾಡಿಕೊಂಡಿತ್ತು ಎನ್ನಲಾಗಿದೆ. ಅದೇನೇ ಇರಲಿ, ಇದರಿಂದ ಸರ್ಕಾರ ಪ್ರತಿಪಕ್ಷಗಳ ತೀವ್ರ ವಾಗ್ದಾಳಿ, ಗೇಲಿಗೆ ಒಳಗಾದದ್ದಂತೂ ನಿಜ. ಸರ್ಕಾರ ಪದೇಪದೆ ಭಾಷೆ- ಸಂಸ್ಕೃತಿಗೆ ಸಂಬಂಧಿಸಿದ ವಿಚಾರದಲ್ಲಿ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದೆ; ಇದು ಅಧಿಕಾರಿಗಳ ದರ್ಬಾರಿನ ಸರ್ಕಾರ ಎಂದು ಪ್ರತಿಪಕ್ಷ ವ್ಯಾಖ್ಯಾನಿಸಿತ್ತು. ಮೂಲ ತಿದ್ದುಪಡಿಯನ್ನು ಮಾಡಿದ್ದರ ಹಿಂದಿನ ಉದ್ದೇಶ ನಿಗೂಢವಾಗಿದೆ. ಆದರೆ, ಯಾಕೆ ಇಂಥ ಪ್ರಮಾದಗಳು ಆಗುತ್ತಿವೆ? ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಈ ವಿಷಯದಲ್ಲಿ ಉತ್ತರದಾಯಿತ್ವ ಇಲ್ಲದವರಂತೆ ಯಾಕೆ ವರ್ತಿಸುತ್ತಿದೆ? ಇದು ಪರಿಶೀಲನೆ ಹಾಗೂ ಗಂಭೀರ ಕ್ರಮಕ್ಕೆ ಅರ್ಹವಾಗಿದೆ. ನಾಡಗೀತೆಯನ್ನು ಹಾಡುವುದಕ್ಕೂ ಅದರದೇ ಆದ ಕ್ರಮ, ಸಮಯ, ಶೈಲಿಯನ್ನು ಸರ್ಕಾರ ಅಂತಿಮಗೊಳಿಸಿ ನಿಗದಿಪಡಿಸಿದೆ. ಎಲ್ಲ ಶಾಲೆಗಳಲ್ಲೂ ಅದನ್ನು ಹಾಡುವುದು ಕಡ್ಡಾಯವಾಗಿತ್ತು. ಈಗ ಅದನ್ನು ಖಾಸಗಿ ಶಾಲೆಗಳು ಕೈಬಿಡಬಹುದು ಎಂಬ ಯೋಚನೆ ಅಧಿಕಾರಿಗಳಿಗೆ ಯಾಕೆ ಬಂತೋ ಗೊತ್ತಿಲ್ಲ. ನಾಡಗೀತೆಯನ್ನು ಹಾಡುವ ಉದ್ದೇಶ ಈ ನಾಡಿನ, ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯ ಘನತೆಯ ಬಗ್ಗೆ ಮಕ್ಕಳಿಗೆ ಅರ್ಥ ಮಾಡಿಸುವುದು. ಖಾಸಗಿ ಶಾಲೆಗಳ ಮಕ್ಕಳೂ ಈ ನಾಡಿನಲ್ಲಿ ಹುಟ್ಟಿ ಬೆಳೆಯುತ್ತಿರುವವರು ಮತ್ತು ಕನ್ನಡ ಭಾಷೆಯ ಬಗ್ಗೆ ಬಾಧ್ಯತೆ ಹೊಂದಿರುವವರು. ಹೀಗಾಗಿ ಖಾಸಗಿ ಶಾಲೆಗಳೂ ಇದನು ಹಾಡುವುದು ಕಡ್ಡಾಯವಾಗಿರಬೇಕು.
ಇತ್ತೀಚೆಗೆ ಇಂಥ ಇನ್ನೊಂದು ಎಡವಟ್ಟು ಕೂಡ ನಡೆದಿದೆ. ಸರ್ಕಾರಿ ವಸತಿ ಶಾಲಾ-ಕಾಲೇಜುಗಳ ಪ್ರವೇಶ ದ್ವಾರದಲ್ಲಿದ್ದ ʼಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯವನ್ನು ಸದ್ದಿಲ್ಲದೆ ಬದಲಾಯಿಸಿ, ʼಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಮಾಡಲಾಗಿದೆ. ಇದರಿಂದ ಅಂಥ ಹಾನಿಯೇನಿಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಹಲವಾರು ವರ್ಷಗಳಿಂದ ಈ ಮೂಲವಾಕ್ಯಕ್ಕೆ ಪ್ರೇರಣೆ ಕುವೆಂಪು ಅವರ ʼಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯುʼ ಎಂಬ ಕವನ ಆಗಿತ್ತು. ಇದನ್ನು ಬಾಗಿಲಲ್ಲಿ ಹಾಕುವ ಮೂಲಕ ಹಿಂದಿನ ಸರ್ಕಾರ ರಾಷ್ಟ್ರಕವು ಕುವೆಂಪು ಅವರ ಕವಿತ್ವ, ಸೃಜನಶೀಲತೆ, ಭಾಷಿಕ ಕೊಡುಗೆಗೆ ಗೌರವ ಸಲ್ಲಿಸಿತ್ತು. ಇದೀಗ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಸೂಚನೆ ಮೇರೆಗೆ ಈ ಬದಲಾವಣೆ ಆಗುತ್ತಿದೆ ಎಂದು ಹೇಳಲಾಗಿದೆ. ಇದಕ್ಕೆ ಮುನ್ನ ಶಿಕ್ಷಕರ ಗ್ರೂಪ್‌ನಲ್ಲಿ ಚರ್ಚೆ ನಡೆದಿದೆ ಎಂದೂ ಹೇಳಲಾಗಿದೆ. ಆದರೆ ನಾಡು ಕಂಡ ಘನ ಸಾಹಿತಿ ಕುವೆಂಪು ಅವರಿಗೆ ಗೌರವ ನೀಡುವ ರೀತಿಯಂತೂ ಇದಲ್ಲ.
ಹೀಗೆ ಒಂದೇ ವಾರದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡುವಂಥ ಎರಡು ಪ್ರಕರಣಗಳನ್ನು ಸರ್ಕಾರ ಮಾಡಿಕೊಂಡಿದೆ. ಕುವೆಂಪು ಅವರನ್ನು ಅಗೌರವಿಸುವ ಉದ್ದೇಶದಿಂದಲೇ ಸರ್ಕಾರ ಹೀಗೆ ಮಾಡಿದೆ ಎನ್ನಲಾಗದಿದ್ದರೂ, ಸರ್ಕಾರದ ಕ್ರಿಯೆಗಳಿಂದ ಕುವೆಂಪು ಅವರಿಗೆ ಅಗೌರವ ಆಗಿದೆ ಎಂಬುದಂತೂ ನಿಜ. ಅವರ ಕವನದ ಸಾಲುಗಳನ್ನು ನಮಗೆ ಬೇಕಾದಂತೆ ತಿರುಚಿ ಫಲಕವನ್ನೇನೋ ಹಾಕಬಹುದು. ಆದರೆ ಅದು ಸಾಂಸ್ಕೃತಿಕವಾಗಿ ಉನ್ನತ ನಡೆ ಅಲ್ಲ. ಅದರ ಮೂಲಕ ನಾವು ನಮ್ಮ ಹಿರಿಯರಿಗೆ ಅಪಮಾನ ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು. ಇಂಥ ಘಟನೆಗಳು ಮರುಕಳಿಸದಿರಲಿ. ಈಗ ಆಗಿರುವ ಪ್ರಮಾದಕ್ಕೆ ತಕ್ಕ ಶಿಕ್ಷೆ ಆಗಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಂಡೀಗಢ ಮೇಯರ್ ಚುನಾವಣೆ ಕುರಿತ ಸುಪ್ರೀಂ ತೀರ್ಪು ಐತಿಹಾಸಿಕ