2022-23ರ ಆರ್ಥಿಕ ವರ್ಷಕ್ಕೆ ಇಪಿಎಫ್‌ಒ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. ಕೇಂದ್ರ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಇದನ್ನು ಶೇಕಡ 8.15ಕ್ಕೆ ಏರಿಸಿದೆ. ಮಂಗಳವಾರ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸೆಂಟ್ರಲ್ ಬೋರ್ಡ್ ಸಭೆಯಲ್ಲಿ ಇದನ್ನು ನಿಗದಿಪಡಿಸಲಾಗಿದ್ದು, ಇದನ್ನು ಹಣಕಾಸು ಸಚಿವಾಲಯ ಅನುಮೋದಿಸಬೇಕಿದೆ. ಕಳೆದ ವರ್ಷ ಇಪಿಎಫ್ ಬಡ್ಡಿದರ ಶೇಕಡಾ 8.1ರಲ್ಲಿತ್ತು. ಇದು ಕಳೆದ ನಾಲ್ಕು ದಶಕಗಳ ಅತ್ಯಂತ ಕಡಿಮೆ ಬಡ್ಡಿ ದರವಾಗಿತ್ತು. 1977-78ರಲ್ಲಿ ಶೇ.8ರಷ್ಟಿದ್ದ ಬಡ್ಡಿ ದರ ಬಳಿಕ ಇಷ್ಟೊಂದು ಇಳಿದಿದ್ದುದು ಇದೇ ಮೊದಲು. ಈ ವರ್ಷ ಅದು ಏರಿಕೆಯಾಗಿದೆ. ಆದರೆ ಏರಿಕೆ ಅತ್ಯಲ್ಪ ಪ್ರಮಾಣದಲ್ಲಿದ್ದು, ಕೇವಲ ಶೇ.0.05ರಷ್ಟು ಹೆಚ್ಚಿದೆ. ಆದರೂ ಇದು ಆಶಾದಾಯಕ.
ಕಳೆದ ಕೆಲ ವರ್ಷಗಳಿಂದ ಇಪಿಎಫ್ ಬಡ್ಡಿದರ ಇಳಿಕೆಯನ್ನೇ ಕಾಣುತ್ತ ನೌಕರರ ವಲಯದಲ್ಲಿ ನಿರಾಸೆಯನ್ನು ತಂದಿಟ್ಟಿತ್ತು. ಬಡ್ಡಿದರಗಳ ಹೆಚ್ಚಳಕ್ಕೆ ತೀವ್ರ ಬೇಡಿಕೆಯಿತ್ತು. ದೇಶದಲ್ಲಿ ಸುಮಾರು ಐದು ಕೋಟಿ ಇಪಿಎಫ್ ಚಂದಾದಾರರಿದ್ದಾರೆ. ಇವರನ್ನು ಅವಲಂಬಿಸಿರುವ ಕುಟುಂಬಗಳೂ ಇವೆ. ಮೇಲ್ನೋಟಕ್ಕೆ ಈ ಬಡ್ಡಿದರಗಳು ಸಣ್ಣದಾಗಿ ಕಾಣಿಸುತ್ತವೆ. ಆದರೆ ಇದು ನೌಕರರ ನಿವೃತ್ತಿ ನಿಧಿಯನ್ನು ಕೂಡಿಸುವುದಕ್ಕಾಗಿ ಇರುವ ಉಳಿತಾಯ ಎಂಬುದನ್ನು ಮರೆಯಬಾರದು.
ವೈಯಕ್ತಿಕ ಹಣಕಾಸು ತಜ್ಞರು ʼಉದ್ಯೋಗದ ಆರಂಭದಿಂದಲೇ ಉಳಿತಾಯ ಮಾಡಿದರೆ ಹೆಚ್ಚಿನ ನಿವೃತ್ತಿ ನಿಧಿ ಕೂಡಿಸಬಹುದುʼ ಎಂಬ ಸೂತ್ರವನ್ನು ನೀಡುತ್ತಾರೆ. ಇದು ಸರ್ಕಾರಿ ನೌಕರರಿಗೆ ಮಾತ್ರವಲ್ಲ, ಇತರರೂ ಪಿಪಿಎಫ್ ಅನ್ನು ಆರಂಭಿಸಿ ಉಳಿತಾಯ ಮಾಡಬಹುದು. ಹೀಗೆ ಪ್ರತಿ ತಿಂಗಳು, ಪ್ರತಿ ವರ್ಷ ಮಾಡುವ ಉಳಿತಾಯವೂ ಮುಂದೆ ಭವಿಷ್ಯದಲ್ಲಿ ನೌಕರರು ನಿವೃತ್ತರಾದ ಬಳಿಕ, ಅವರು ದುಡಿಯಲು ದೇಹದಲ್ಲಿ ಶಕ್ತಿಯಿಲ್ಲದೆ ಹೋದಾಗ ನಿಧಿಯಾಗಿ ದೊರೆಯುತ್ತದೆ. ಅಂದರೆ ಬಡ್ಡಿದರದಲ್ಲಿ ಒಂದೊಂದು ಪಾಯಿಂಟ್ ಹೆಚ್ಚಳವೂ ಅಷ್ಟು ಹೆಚ್ಚಿನ ಗುಣಮಟ್ಟದ ಭವಿಷ್ಯದ ಜೀವನಶೈಲಿಯ ಸಾಧ್ಯತೆಯನ್ನು ಒದಗಿಸಿಕೊಡುತ್ತದೆ. ಇಪಿಎಫ್ ಬಡ್ಡಿದರ ಕಡಿಮೆಯಾಗುವುದು ಎಂದರೆ ನಿವೃತ್ತಿಜೀವನದಲ್ಲಿ ಖರ್ಚು ಮಾಡಬಹುದಾದ ಶಕ್ತಿಯನ್ನು ಕುಂಠಿತವಾಗಿಸುವುದು ಎಂದರ್ಥ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಮಹಿಳೆಯರ ಬಾಕ್ಸಿಂಗ್ ವಿಕ್ರಮ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಪಾರ ನಿರೀಕ್ಷೆ
ಉದ್ಯೋಗಿಗಳ ಪಾಲಿಗೆ ಪಿಎಫ್ ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ. ಕುಟುಂಬದ ಸದಸ್ಯರಿಗೆ ಅದು ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದಿಂದ ಒಂದು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಿ ಅದನ್ನು ಪಿಎಫ್ ಖಾತೆಯಲ್ಲಿ ಠೇವಣಿ ಮಾಡುವಂತೆ, ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರ ಪರವಾಗಿಯೂ ಪಿಎಫ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಇದು ಒಂದು ದೊಡ್ಡ ಮೊತ್ತವಾಗಿ ನಿವೃತ್ತಿಯ ಸಂದರ್ಭದಲ್ಲಿ ಸಿಗುತ್ತದಾದ್ದರಿಂದ ನೌಕರಿಯಿಂದ ನಿವೃತ್ತಿ ಎಂಬುದು ನೌಕರನಿಗೂ ಕುಟುಂಬಕ್ಕೂ ಸಹನೀಯವಾಗುತ್ತದೆ.
ಪ್ರಾಮಾಣಿಕವಾಗಿ ಕೆಲಸ ಮಾಡುವ ಕೆಳ ಹಂತದ ಸರ್ಕಾರ ನೌಕರರಿಗೆ ಹಾಗೂ ಕೆಲವು ಖಾಸಗಿ ವಲಯದ ಉದ್ಯೋಗಿಗಳಿಗೆ ಈ ಪಿಎಫ್ ನಿಧಿ ಬಿಟ್ಟರೆ ಬೇರೆ ಉಳಿತಾಯವೂ ಇರಲಾರದು. ಶ್ರಮಿಕ ವರ್ಗಕ್ಕಂತೂ, ದುಡಿಮೆಯ ಶಕ್ತಿ ಕಳೆದುಕೊಂಡ ಬಳಿಕ ಇದೇ ಆಧಾರ. ಕೊರೊನಾ ಕಾಲದಲ್ಲಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡರು. ಅಂಥವರ ಪಾಲಿಗೆ ಉಳಿತಾಯದ ಹಣವೂ ಇಲ್ಲದೆ ಹೋದಾಗ ಬದುಕು ದುರ್ಭರವಾಯಿತು. ಉಳಿತಾಯದ ಹಣ ಇಡುಗಂಟಾಗಿ ಇದ್ದಾಗ, ತಾತ್ಕಾಲಿಕವಾದ ಉದ್ಯೋಗನಷ್ಟಗಳು ಅಷ್ಟೇನೂ ಆತಂಕಕಾರಿಯಾಗಿರುವುದಿಲ್ಲ. ಸ್ವಯಂನಿವೃತ್ತಿ ಪಡೆದರೂ ಪಿಎಫ್ ಒಂದು ಆಧಾರಸ್ತಂಭವಾಗುತ್ತದೆ. ಸಾಮಾನ್ಯವಾಗಿ ಹಣದುಬ್ಬರದ ಈ ಕಾಲದಲ್ಲಿ ಕಡಿಮೆ ಸಂಬಳದವರಿಗೆ ಪಿಎಫ್ ಹೊರತುಪಡಿಸಿ ಇತರ ಉಳಿತಾಯದ ಸಾಧ್ಯತೆಗಳೇ ಇರುವುದಿಲ್ಲ. ಇದೆಲ್ಲದರಿಂದಾಗಿ, ಆರ್ಥಿಕ ಏರುಪೇರು ಏನೇ ಇದ್ದರೂ ಪಿಎಫ್ ಬಡ್ಡಿಯ ಮೇಲೆ ಪ್ರಹಾರ ಆಗದಂತೆ ಸರಕಾರ ಮುತುವರ್ಜಿ ವಹಿಸಬೇಕು. ಇದನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆಯೂ ಚಿಂತಿಸಬೇಕು.