ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ. ಆದರೆ ಇದರ ನಂತರ ನಡೆದುದು ಆಘಾತಕರ. ಫಲಿತಾಂಶ ಹೊರಬೀಳುತ್ತಿದ್ದಂತೆ, ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ (Pakistan Slogan) ಕೂಗಿ ಉದ್ಧಟತನ ಮೆರೆದಿದ್ದಾರೆ. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಘೋಷಣೆ ಕೂಗಿದ ಬೆಂಬಲಿಗರನ್ನು ಬಂಧಿಸಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಅಕ್ಷಮ್ಯ ಹಾಗೂ ಆತಂಕಕಾರಿ ಸಂಗತಿ.
ಈ ಬಗ್ಗೆ ವಿಪಕ್ಷದ ಮುಖಂಡರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದೊಂದು ಅಕ್ಷಮ್ಯ ಅಪರಾಧ. ಇದು ಪಾಕಿಸ್ತಾನ ಚುನಾವಣೆಯಾ? ಭಾರತದ ಚುನಾವಣೆಯಾ? ಇದು ಕಾಂಗ್ರೆಸ್‌ನ ಮಾನಸಿಕತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಗೆಲುವು ಸಾಧಿಸಿದ ಮೇಲೆ ಇಂಥ ವಿಧ್ವಂಸಕ ಕೃತ್ಯ ಎಸಗುವವರಿಗೆ ಬಲ ಸಿಕ್ಕಂತೆ ಆಗಿದೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದೇಶದ ಅನ್ನ ತಿಂದು, ಸೌಲಭ್ಯವನ್ನು ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುವುದು ಅಕ್ಷಮ್ಯ” ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. “ಇದು ದೇಶದ್ರೋಹ. ಸುಮೋಟೋ ಕೇಸ್ ದಾಖಲು ಮಾಡಬೇಕು. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು” ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ. ಸ್ವತಃ ಕಾಂಗ್ರೆಸ್‌ನವರು ಈ ಬಗ್ಗೆ ಏನೂ ಹೇಳಿದಂತಿಲ್ಲ. ಈ ಘಟನೆಯ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಏನೂ ಅನಿಸಿದಂತೆಯೇ ಇಲ್ಲ.
ಇದೊಂದು ಆಶ್ಚರ್ಯಕಾರಿ ಸಂಗತಿ. ರಾಜ್ಯ ಸಭೆಗೆ ಆಯ್ಕೆಯಾಗಿರುವ ನಾಸಿರ್ ಹುಸೇನ್ ಅವರು ಈ ಬಗ್ಗೆ ಏನು ಹೇಳುತ್ತಾರೆ? ಅವರಿಗೆ ತಮ್ಮ ಬೆಂಬಲಿಗರ ಈ ಘೋಷಣೆ ಒಪ್ಪಿತವೇ? ಒಪ್ಪಿದರೆ, ನಾಸಿರ್ ಹುಸೇನ್ ಅವರು ತಾವು ಹಾಗೂ ತಮ್ಮ ಬೆಂಬಲಿಗರು ಭಾರತಕ್ಕಿಂತ ಹೆಚ್ಚು ಪ್ರೀತಿಯನ್ನು ಪಾಕಿಸ್ತಾನದ ಮೇಲೆ ಹೊಂದಿದ್ದೇವೆ ಎಂದು ಒಪ್ಪಿಕೊಂಡಂತಾಗುತ್ತದೆ. ಹಾಗಿದ್ದರೆ ತಾವು ಇಲ್ಲೇಕೆ ಇದ್ದೇವೆ, ಪಾಕಿಸ್ತಾನಕ್ಕೆ ಯಾಕೆ ಹೋಗಿಲ್ಲ ಎಂಬುದನ್ನು ಅವರು ವಿವರಿಸಬೇಕಾಗುತ್ತದೆ. ತಾವು ಭಾರತದ ರಾಜ್ಯಸಭೆ ಸದಸ್ಯರಲ್ಲವೆಂದೂ, ಪಾಕಿಸ್ತಾನದ ರಾಜ್ಯಸಭೆ ಸದಸ್ಯರೆಂದೂ ಅವರು ಒಪ್ಪಿಕೊಳ್ಳಲಿ. ಆಗ ಅವರ ಘೋಷಣೆ ನ್ಯಾಯ ಎಂದು ಹೇಳಬಹುದು. ಇಂಥ ಘೋಷಣೆಯನ್ನು ಅವರು ಒಪ್ಪುವುದಿಲ್ಲ ಎಂದಾದರೆ ಈ ಘೋಷಣೆ ಕೂಗಿದವರ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ? ಇದನ್ನು ಘಂಟಾಘೋಷವಾಗಿ ಸಾರಬೇಕು ಹಾಗೂ ಕಾನೂನು ಕ್ರಮ ತೆಗೆದುಕೊಂಡದ್ದನ್ನು ಸಾಬೀತುಪಡಿಸಬೇಕು. ನಾಸಿರ್ ಹುಸೇನ್ ಮುಸ್ಲಿಮರು ಸರಿ, ಮುಸ್ಲಿಮರಾಗಿದ್ದರೆ ಪಾಕ್ ಪರ ಘೋಷಣೆ ಕೂಗಬೇಕೆ? ಭಾರತದಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನವುಂಡು, ಇಲ್ಲಿನ ನೀರು ಕುಡಿದು, ಇಲ್ಲಿನವರ ಮತ ಪಡೆದು, ಈ ದೇಶದ ಸಂವಿಧಾನ ನೀಡಿರುವ ಸ್ವಾತಂತ್ರ್ಯ ಹಾಗೂ ಅಧಿಕಾರದ ಸವಿಯನ್ನು ಸವಿಯುತ್ತಿರುವ ಇವರಿಗೆ ಅಷ್ಟು ಕೂಡ ಕೃತಜ್ಞತೆಯ ಭಾವ ಇಲ್ಲವೇ? ನಾಯಿ ಕೂಡ ಅನ್ನವುಣಿಸಿದವರಿಗೆ ಕೃತಜ್ಞವಾಗಿರುತ್ತದೆ; ಇವರು ಅದಕ್ಕಿಂತ ಕಡೆಯಾಗಿ ಹೋದರಲ್ಲ!
ನಾಸಿರ್ ಹುಸೇನ್ ಅವರ ಮಾತಿರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿಗಳು ಮತ್ತಿತರರು ಇದಕ್ಕೆ ಏನು ಹೇಳುತ್ತಾರೆ? ಅವರಿಗೆ ಈ ಘೋಷಣೆಗಳು ಒಪ್ಪಿಗೆಯೋ? ಈ ಬಗ್ಗೆ ಹಾರಿಕೆಯ ಮಾತುಗಳನ್ನು ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ. ಒಪ್ಪಿಗೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ಹೇಳಲಿ. ಪಾಕ್ ಪರ ಘೋಷಣೆ ಕೂಗುವ ಮೂಲಕ ನಾಸಿರ್ ಬೆಂಬಲಿಗರು ಏನು ಮಾಡಲು ಹೊರಟಿದ್ದಾರೆ ಎಂಬುದು ಕೂಡ ನಾಡಿನ ಜನತೆಗೆ ಸ್ಪಷ್ಟವಾಗಿ ಅರ್ಥವಾಗಲಿ. ಕರ್ನಾಟಕ ಇನ್ನೊಂದು ಪಾಕಿಸ್ತಾನ ಆಗಲಿ ಎಂಬುದು ಇವರ ಇಂಗಿತವೇ? ಪಾಕಿಸ್ತಾನದಿಂದ ಪ್ರಚೋದಿತರಾಗಿ ಇಲ್ಲಿ ಬರುವ ಭಯೋತ್ಪಾದಕರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳು ಇವರಿಗೆ ಒಪ್ಪಿಗೆಯೇ? ಅದನ್ನೂ ಸ್ಪಷ್ಟಪಡಿಸಿದಂತಾಗುತ್ತದೆ. ಆಮೇಲಿನ ಕ್ರಮಗಳನ್ನು ಕಾನೂನು ಜಾರಿ ಸಂಸ್ಥೆಗಳು ಹಾಗೂ ನ್ಯಾಯಾಂಗ ಯೋಚಿಸಬಹುದು. ಪಾಕ್ ಪ್ರೇರಿತ ಉಗ್ರರ ಜೊತೆ ಕೈಜೋಡಿಸುವವರಿಗೆ ಯಾವ ಕಠಿಣ ಶಿಕ್ಷೆ ಆಗುತ್ತದೋ ಅದು ಇವರಿಗೂ ಆಗಬೇಕಾದುದು ಅಗತ್ಯ, ಅನಿವಾರ್ಯ. ಈ ಘೋಷಣೆ ಕೂಗಿದವರು ಹಾಗೂ ಅದನ್ನು ಬೆಂಬಲಿಸಿದವರನ್ನು ಸಾರ್ವಜನಿಕವಾಗಿ ತಿರುಗಾಡಲು ಬಿಡುವುದು ತುಂಬಾ ಅಪಾಯಕಾರಿ. ಇವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಮಗ್ರ ರೈಲ್ವೇ ಅಭಿವೃದ್ಧಿಗೆ ಪ್ರಧಾನಿ ಸೋಪಾನ