ಪುಣೆಯಲ್ಲಿ ಕಂಠಮಟ್ಟ ಮದ್ಯಪಾನ (Drink and drive) ಮಾಡಿ, ಅಪ್ಪ ಕೊಡಿಸಿದ ಐಷಾರಾಮಿ ಪೋರ್ಷೆ ಕಾರನ್ನು (Pune Porsche car accident) ಯದ್ವಾತದ್ವಾ ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತ ವಯಸ್ಕನ (Juvenile) ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಆಗಿವೆ. 17 ವರ್ಷದ ವೇದಾಂತ್ ಅಗರ್‌ವಾಲ್ ಐಷಾರಾಮಿ ಪೋರ್ಷೆ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಿಸಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಧ್ಯಪ್ರದೇಶದ ಎಂಜಿನಿಯರ್‌ಗಳಾದ (Engineers) 24 ವರ್ಷದ ಅನೀಶ್ ಅವಧಿ ಮತ್ತು ಅಶ್ವಿನಿ ಕೊಶ್ತಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಪಘಾತ ಆಗುತ್ತಿದ್ದಂತೆ ಸ್ಥಳೀಯರೆಲ್ಲ ಒಟ್ಟುಗೂಡಿ ಸೆರೆ ಹಿಡಿದು ಥಳಿಸಿ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದರು. ದುರಂತ ಎಂದರೆ ವೇದಾಂತ್ ಅಗರ್‌ವಾಲ್‌ನ ಬಂಧನವಾದ ಕೇವಲ 15 ಗಂಟೆಗಳಲ್ಲೇ ಬಾಲಾಪರಾಧಿ ನ್ಯಾಯ ಮಂಡಳಿ ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಪಘಾತಗಳ ಬಗ್ಗೆ 300 ಪದಗಳ ಪ್ರಬಂಧ ಬರೆಯಲು ಹೇಳಿತ್ತು. ಈ ಹಾಸ್ಯಾಸ್ಪದ ತೀರ್ಪಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯಾಂಗದ ಬಗ್ಗೆ ಬಂದ ಕಟು ಟೀಕೆಯ ನಂತರ ಪೊಲೀಸರು ಹಾಗೂ ನ್ಯಾಯಾಂಗವೂ ಎಚ್ಚೆತ್ತುಕೊಂಡಂತಿದೆ. ಪೊಲೀಸರು ಚುರುಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ನ್ಯಾಯಾಂಗವೂ ಈ ಜಾಮೀನನ್ನು ರದ್ದುಪಡಿಸಿದ್ದು, ಆರೋಪಿ ಬಾಲಕನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಿದೆ. ಈತನನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ಮಾಡಲಾಗುತ್ತದೆ ಎಂದಿದ್ದಾರೆ ಪೊಲೀಸರು. ಈ ಪ್ರಕರಣದಲ್ಲಿ ಲೈಸೆನ್ಸ್ ರಹಿತ ಅಪ್ರಾಪ್ತನಿಗೆ ಕಾರನ್ನು ಓಡಿಸಲು ಕೊಟ್ಟ ಅಪ್ಪನೂ ಅಪರಾಧಿ, ಆತ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಅಜ್ಜನೂ ಅಪರಾಧಿಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಅಪಘಾತವಾದಾಗ ಕಾರನ್ನು ತಾನು ಓಡಿಸುತ್ತಿದ್ದೆ ಎಂದು ಹೇಳಿಕೊಳ್ಳುವಂತೆ ಕಾರು ಚಾಲಕನನ್ನು ಬಲವಂತ ಮಾಡಿದ್ದು ಕೂಡ ಬೆಳಕಿಗೆ ಬಂದಿದ್ದು, ಅದೂ ಕೂಡ ಒಂದು ಅಪರಾಧ. ಅಪಘಾತಕ್ಕೂ ಮುನ್ನ ಅಪ್ರಾಪ್ತ ವಯಸ್ಕ ಮದ್ಯ ಸೇವಿಸಿದ ಎರಡು ಬಾರ್‌ಗಳ ಮಾಲೀಕರು ಮತ್ತು ನೌಕರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಬಾಲಾಪರಾಧಿಯ ರಕ್ತದ ಮಾದರಿಯನ್ನು ಬದಲಾಯಿಸಿ ಆರೋಪಿಯನ್ನು ಬಚಾವ್ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ. ದುಡ್ಡಿಗಾಗಿ ರಕ್ತದ ಮಾದರಿಯನ್ನು ಡಸ್ಟ್ ಬಿನ್‌ಗೆ ಎಸೆದ ಲ್ಯಾಬ್ ಗುಮಾಸ್ತನನ್ನೂ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಕೆಲ ಆರಂಭಿಕ ಜಡತೆಗಳ ನಂತರ, ಸಾಕಷ್ಟು ಚುರುಕಾಗಿ ಹಾಗೂ ಸಮಗ್ರವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ ಎನ್ನಬೇಕು. ಹೀಗೆ ಒಂದು ಅಪರಾಧದ ಎಲ್ಲ ಮಗ್ಗುಲುಗಳಲ್ಲಿಯೂ ತನಿಖೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ವಿವರವಾದ ಹಾಗೂ ಗಟ್ಟಿಯಾದ ಚಾರ್ಜ್‌ಶೀಟ್ ಸಲ್ಲಿಸಿದಾಗ ಮಾತ್ರ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲು ಸಾಧ್ಯ. ನ್ಯಾಯಾಂಗವೂ ಅಷ್ಟೆ, ಆರಂಭದಲ್ಲಿ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ; ದೇಶಾದ್ಯಂತ ಅಸಮಾಧಾನ ವ್ಯಕ್ತವಾದಾಗ ಅದಕ್ಕೂ ಈ ಪ್ರಕರಣದ ಗಂಭೀರತೆ ಅರ್ಥವಾದಂತಿದೆ. ಶ್ರೀಮಂತರ ಮಕ್ಕಳು ಉದ್ದೇಶರಹಿತ ಹಾಗೂ ನಿರಂಕುಶವಾಗಿ ಬೆಳೆದಾಗ ಇಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರ ಕೊಡಿಸದ ಪೋಷಕರೂ ಈ ಘೋರ ಅಪರಾಧದ ಹೊಣೆಯನ್ನು ಹೊರಬೇಕಾಗುತ್ತದೆ. ಇಂಥ ಅಪ್ರಾಪ್ತರನ್ನು ವಯಸ್ಕರೆಂದೇ ಪರಿಗಣಿಸಿ ಶಿಕ್ಷಿಸಬೇಕಾದ ಅಗತ್ಯವಿದೆ. ದಿಲ್ಲಿ ನಿರ್ಭಯಾ ರೇಪ್ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯೇ ಅತಿ ಬರ್ಬರವಾಗಿ ನಡೆದುಕೊಂಡಿದ್ದ ಎಂಬುದನ್ನು ನೆನಪಿಸಿಕೊಳ್ಳಬೇಕು.
ಪೊಲೀಸ್ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಚೋದಿಸಿದಾಗ, ಪ್ರಭಾವ ಬಳಸಿ ಅಥವಾ ಅಧಿಕಾರ ಬಳಸಿ ದಾರಿ ತಪ್ಪಿಸಲು ಪ್ರಯತ್ನಿಸದೆ ಇದ್ದರೆ, ಸರಿಯಾಗಿಯೇ ಕೆಲಸ ಮಾಡುತ್ತಾರೆ. ಅದಕ್ಜೆ ಪುಣೆ ಪ್ರಕರಣವೇ ಉದಾಹರಣೆ. ಇನ್ನು ವಿಚಾರಣೆಯ ಹಂತದಲ್ಲಿ ಆರೋಪಿಯ ಅಪರಾಧವನ್ನು ರುಜುವಾತುಪಡಿಸುವ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಮರ್ಪಕವಾಗಿ ಮಂಡಿಸಿ, ಪಾತಕಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ