ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಹೇಳಿಕೆಗಳ ಮೂಲಕ ಹಾನಿಯೆಸಗುವ ಮಣಿಶಂಕರ ಅಯ್ಯರ್ ಮುಂತಾದವರ ಪರಂಪರೆಯನ್ನು ಕಾಂಗ್ರೆಸ್ ಪಕ್ಷದ ಭಾರತೀಯ ಸಾಗರೋತ್ತರ ವಿಭಾಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮುಂದುವರಿಸುತ್ತಿರುವಂತಿದೆ. ದೇಶದ ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದಾರೆ. “ಭಾರತದಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಪಿತ್ರೋಡಾ ಹೇಳಿದ್ದಾರೆ.
ಸಹಜವಾಗಿಯೇ ಈ ಮಾತು ವಿವಾದ ಹುಟ್ಟುಹಾಕಿದೆ. ಇಂಥ ಅವಕಾಶವನ್ನು ಎಂದೂ ಕಳೆದುಕೊಳ್ಳದ ಪ್ರಧಾನಮಂತ್ರಿ ನರೇಂದ್ರ ಮೋದಿ, “ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ. ಚರ್ಮದ ಬಣ್ಣದ ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಪಿತ್ರೋಡಾ ಮೇಲೆ ಹರಿಹಾಯ್ದಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ಅಮೆರಿಕದಲ್ಲಿರುವ ‘ಶೆಹಜಾದಾ’ನ ಅಂಕಲ್ ಹಾಗೂ ಫಿಲಾಸಫಿ ಮಾರ್ಗದರ್ಶಕ (ಪಿತ್ರೋಡಾ) ಈ ‘ಶೆಹಜಾದಾ’ಗೆ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ ಸಲಹೆ ನೀಡುತ್ತಾರೆ” ಎಂದು ಕುಟುಕಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳಿವಳಿಕೆ ಬೆಳೆಸಿಕೊಳ್ಳಿ” ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.
ಪಿತ್ರೋಡಾ ಅವರು ತಮ್ಮ ಮಾತನ್ನು ವಿಶ್ಲೇಷಣೆ ಎಂದುಕೊಂಡಿರುವಂತಿದೆ. ಆದರೆ ವಿಶ್ಲೇಷಣೆಗೂ ಜನಾಂಗೀಯ ನಿಂದನೆಗೂ ಅವರು ವ್ಯತ್ಯಾಸ ಗುರುತಿಸಿಕೊಳ್ಳಬೇಕಿದೆ. ದಕ್ಷಿಣ ಭಾರತೀಯರು ತುಸು ಕಪ್ಪಗಿದ್ದಾರೆ ಸರಿ; ಅಷ್ಟಕ್ಕೇ ಅವರು ಆಫ್ರಿಕನ್ನರಿಗೆ ಸಮವೋ? ಭಾರತದಲ್ಲಿ ಅತಿ ಹೆಚ್ಚಿನ ತೆರಿಗೆ ಉತ್ಪತ್ತಿಯಾಗುವುದು, ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವವರು ದಕ್ಷಿಣ ಭಾರತೀಯರು. ಇಲ್ಲಿನ ಸಂಸ್ಕೃತಿ ಅಲ್ಲಿಗಿಂತ ವಿಭಿನ್ನ. ಪೂರ್ವಭಾಗದವರು ಚೀನೀಯರಂತೆ ಕಾಣುತ್ತಾರೆ ಎನ್ನುವ ಮೂಲಕ, ʼಅರುಣಾಚಲ ನಮ್ಮದುʼ ಎನ್ನುತ್ತಿರುವ ಚೀನಾಕ್ಕೆ ಪಿತ್ರೋಡಾ ಸಹಾಯ ಮಾಡುತ್ತಿರುವಂತಿದೆ. ಭೌಗೋಳಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳು ಪ್ರತಿ ದೇಶದಲ್ಲೂ ಇದ್ದೇ ಇರುತ್ತವೆ. ಭಾರತ ವಿಶಾಲ ದೇಶವಾದುದರಿಂದ ಇಲ್ಲಿ ಹೆಚ್ಚಿನ ವೈವಿಧ್ಯವಿದೆ. ಆ ಕಾರಣಕ್ಕೇ ಇದು ಸಾಂಸ್ಕೃತಿಕವಾಗಿ ಶ್ರೀಮಂತವೂ ಆಗಿದೆ. ಇದು ಭಾರತದ ಶಕ್ತಿಯೇ ಹೊರತು, ಇನ್ನೊಂದರ ನಕಲು ಅಲ್ಲ. ನಾವು ನಮ್ಮನ್ನು ಬೇರೆ ದೇಶಗಳಿಗೆ ಚರ್ಮದ ಬಣ್ಣದಿಂದ ಹೋಲಿಸಿಕೊಳ್ಳಬೇಕಿಲ್ಲ. ಬೇಕಿದ್ದರೆ ಭೂತಾನಿನ ಆನಂದದ ಸ್ವಭಾವದ ಸೂಚ್ಯಂಕಕ್ಕೆ, ಜಪಾನಿನ ಪರಿಶ್ರಮದ ಗುಣಕ್ಕೆ, ಕೆರಿಬಿಯನ್ನರ ದೈಹಿಕ ಬಲಕ್ಕೆ ಹೋಲಿಸಿಕೊಳ್ಳೋಣ.
ಈ ಹಿಂದೆ ಮಣಿಶಂಕರ ಅಯ್ಯರ್ ಮುಂತಾದವರು ಹೀಗೆ ʼಸೆಲ್ಫ್ ಗೋಲ್ʼ ಅಥವಾ ʼಆತ್ಮಹತ್ಯಾ ದಾಳಿʼ ಮಾಡಿಕೊಳ್ಳುತ್ತಿದ್ದರು. ಇಂಥವರು ಸ್ವತಃ ತಮ್ಮ ಪಕ್ಷಕ್ಕೇ ತಮ್ಮ ಹೇಳಿಕೆಗಳಿಂದ ಗಂಡಾಂತರ ತಂದೊಡ್ಡುತ್ತಿರುತ್ತಾರೆ. 2017ರಲ್ಲಿ ಮಣಿಶಂಕರ ಅಯ್ಯರ್ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಅವರು ಪಾಕಿಸ್ತಾನದಲ್ಲಿ ನಿಂತು “ಭಾರತದ ಮೂರನೇ ಎರಡು ಭಾಗ ಜನ ಪಾಕ್‌ನತ್ತ ಬರಲು ಸಿದ್ಧರಿದ್ದಾರೆ” ಎಂದಿದ್ದರು. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿ, ನಿಂದಿಸಲ್ಪಟ್ಟವರು ಭಾರಿ ಬಹುಮತದಿಂದ ಗೆದ್ದಿದ್ದರು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳದ ಜನನಾಯಕರು ಇಂಥ ಮಾತುಗಳನ್ನು ಬಳಸುತ್ತಾರೆ. ನಂತರ ನಾಲಿಗೆ ಕಚ್ಚಿಕೊಳ್ಳುತ್ತಾರೆ. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.
ಇದನ್ನೂ ಓದಿ: Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್ ಪಿತ್ರೋಡಾ ತಲೆದಂಡ; ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ!