Site icon Vistara News

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

EVM

Vistara Editorial: Unnecessary confusion about EVMs

“ಇವಿಎಂಗಳನ್ನು ತಿರುಚದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 180 ಸೀಟುಗಳು ಕೂಡ ಬರುವುದಿಲ್ಲ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. “ಯಾವ ಆಧಾರದ ಬಿಜೆಪಿ ನಾಯಕರು 400 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಾರೆ? ಅವರೇನು ಜ್ಯೋತಿಷಿಗಳೇ? ಇದಕ್ಕೂ ಮೊದಲು ಬಿಜೆಪಿಯೇನು 400 ಕ್ಷೇತ್ರ ಗೆದ್ದಿಲ್ಲ. ಈಗ ಹೇಗೆ ಇಷ್ಟೊಂದು ವಿಶ್ವಾಸ ಬರುತ್ತದೆ? ದೇಶದಲ್ಲಿ ಮತಯಂತ್ರಗಳನ್ನು ತಿರುಚದೆ ಚುನಾವಣೆ ನಡೆದರೆ ಬಿಜೆಪಿಗೆ 180 ಸೀಟುಗಳು ಕೂಡ ಬರಲ್ಲ” ಎಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ತಿಂಗಳಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಇವಿಎಂಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. “ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಲೋಕಸಭೆ ಇರಲಿ, ಯಾವುದೇ ರಾಜ್ಯಗಳ ವಿಧಾನಸಭೆ ಚುನಾವಣೆ ಇರಲಿ, ಪ್ರತಿ ಬಾರಿ ಚುನಾವಣೆ ಘೋಷಣೆಯಾದಾಗಲೂ ವಿದ್ಯುನ್ಮಾನ ಮತಯಂತ್ರಗಳನ್ನು (EVM) ತಿರುಚಲಾಗುತ್ತದೆ ಎಂಬುದಾಗಿ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಆರೋಪಿಸುತ್ತವೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ.

ಇತ್ತೀಚೆಗೆ, ಇವಿಎಂ ಮೆಷೀನ್​ನಲ್ಲಿ ಹಾಕಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್​ಗಳ (VVPAT) ಮೂಲಕ ಪರಿಶೀಲನೆ ನಡೆಸುವಂತಹ ವ್ಯವಸ್ಥೆ ಆಗಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಹಿಂದಿನ ಬ್ಯಾಲಟ್ ವೋಟಿಂಗ್ ವಿಧಾನದ ಲೋಪವನ್ನು ಎತ್ತಿ ತೋರಿಸಿದೆ. “ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದ್ದಾರೆ. ಯುರೋಪ್‌ನಲ್ಲಿ ಇರುವ ವ್ಯವಸ್ಥೆ ಭಾರತಕ್ಕೆ ಸರಿಹೊಂದಬೇಕಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಭಾರತದ ಜನಸಂಖ್ಯೆಗೂ, ಬ್ಯಾಲೆಟ್ ಪೇಪರ್ ಜಾರಿಯಲ್ಲಿರುವ ದೇಶಗಳ ಜನಸಂಖ್ಯೆಗೂ ಅಜಗಜಾಂತರ. ಇಲ್ಲಿ ಮತ್ತೆ ಮತಪತ್ರದ ವ್ಯವಸ್ಥೆ ಜಾರಿಗೆ ತಂದರೆ ನಾವು ಶಿಲಾಯುಗಕ್ಕೆ ಮರಳಿದಂತೆಯೇ ಸರಿ. ಮತಗಳನ್ನು ಎಣಿಸಲು ವಾರಗಳೇ ಬೇಕಾಗಬಹುದು. ಪ್ರಸ್ತುತ ವ್ಯವಸ್ಥೆಯಲ್ಲಿ ಅರ್ಧ ದಿನದಲ್ಲಿ ಇಡೀ ದೇಶದ ಫಲಿತಾಂಶ ತಿಳಿಯುತ್ತದೆ. ಮತಪತ್ರಗಳನ್ನು ಮುದ್ರಿಸುವ, ಸಂಗ್ರಹಿಸುವ, ಅವುಗಳನ್ನು ಸಾಗಿಸುವ, ರಕ್ಷಿಸುವ ಕೆಲಸ ಬಹಳ ಜಟಿಲ ಹಾಗೂ ತ್ರಾಸದಾಯಕ. ನ್ಯಾಯಾಲಯ ಹೇಳಿದಂತೆ, ಮತಪೆಟ್ಟಿಗೆಗಳ ಯುಗದಲ್ಲಿ ಮತಗಟ್ಟೆಗಳ ಲೂಟಿ ಹಾಗೂ ಅಕ್ರಮವೂ ವ್ಯಾಪಕವಾಗಿತ್ತು. ಇವಿಎಂಗಳಿಂದಾಗಿ ಅದೆಲ್ಲಕ್ಕೂ ತಡೆ ಬಿದ್ದಿದೆ. ಲಕ್ಷಾಂತರ ಮಂದಿಯ ಸಮಯ, ಶ್ರಮ, ಹಣಕಾಸು ಎಲ್ಲವನ್ನೂ ಇವು ಉಳಿಸಿವೆ.

ಇವಿಎಂಗಳನ್ನು ತಿದ್ದುವ, ತಿರುಚುವ ಕೆಲಸ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬುದನ್ನು ತಜ್ಞರು ಸಾಕಷ್ಟು ಸಲ ಹೇಳಿದ್ದಾರೆ. ಸ್ವತಃ ಚುನಾವಣಾ ಆಯೋಗವೇ, ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸುವಂತೆ ಮುಕ್ತ ಸವಾಲು ಎಸೆದಿತ್ತು. ಆದರೆ ಆರೋಪ ಮಾಡುತ್ತಿರುವ ಯಾರೂ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಲಿಲ್ಲ. ಅಂದರೆ ಈ ಆರೋಪ ಮಾಡುತ್ತಿರುವವರಿಗೇ ತಮ್ಮ ಮಾತುಗಳ ಮೇಲೆ ನಂಬಿಕೆಯಿಲ್ಲ. ಚುನಾವಣೆ ಹತ್ತಿರ ಬಂದಾಗ, ಸೋಲುವ ಲಕ್ಷಣಗಳು ಕಂಡುಬಂದಾಗ, ಸೋತಾಗಲೆಲ್ಲ ಇವಿಎಂಗಳನ್ನು ದೂರುವುದು ಹೇಡಿತನದ ಲಕ್ಷಣ. ಅದು ಪ್ರಧಾನಿ ಮೋದಿಯವರೇ ಹೇಳಿದಂತೆ ” ಕುಣಿಯಲಾರದವರು ನೆಲ ಡೊಂಕು” ಅಂದಂತೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Exit mobile version