Site icon Vistara News

ವಿಸ್ತಾರ Explainer: ಕೇಶವಾನಂದ ಭಾರತೀ ಪ್ರಕರಣಕ್ಕೆ 50 ವರ್ಷ; ಇದು ಸಂವಿಧಾನದ ಮೂಲ ಸ್ವರೂಪ ಉಳಿಸಿದ ತೀರ್ಪು

keshavananda bharathi

ಸುಪ್ರೀಂ ಕೋರ್ಟ್‌ ಏ.24ರಂದು ಪ್ರತ್ಯೇಕವಾದ ಒಂದು ವೆಬ್‌ಪೇಜ್‌ ಸೃಷ್ಟಿಸಿದೆ. ʼಕೇಶವಾನಂದ ಭಾರತೀʼ ಪ್ರಕರಣದ ತೀರ್ಪು, ವಾದವಿವಾದಗಳನ್ನು ಈ ವೆಬ್‌ಸೈಟ್‌ನಲ್ಲಿ ಸಂಪೂರ್ಣವಾಗಿ ಕೊಡಲಾಗಿದೆ. ಈ ಪ್ರಕರಣಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೋರ್ಟ್‌ ಹೀಗೆ ಮಾಡಿದೆ. ಈ ತೀರ್ಪು ಇಷ್ಟೊಂದು ಮಹತ್ವದ್ದೇ?

ಹೌದು, 1973 ಏಪ್ರಿಲ್‌ 24 ಭಾರತದ ಪಾಲಿಗೆ, ಭಾರತದ ಸಂವಿಧಾನದ ಪಾಲಿಗೆ ಐತಿಹಾಸಿಕ ಮಹತ್ವದ ದಿನ. ಅಂದು ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠ ʼಕೇಶವಾನಂದ ಭಾರತೀ ಶ್ರೀ ವರ್ಸಸ್‌ ಕೇರಳ ಸರ್ಕಾರʼ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತು. ಒಂದು ವಾಕ್ಯದಲ್ಲಿ ಹೇಳಬಹುದಾದರೆ, ʼಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸಲಾಗದುʼ ಎಂಬುದೇ ಈ ತೀರ್ಪಿನ ಒಟ್ಟಾರೆ ತಿರುಳು. ಹೀಗಾಗಿ ಇದು “ಸಂವಿಧಾನದ ಮೂಲ ಸ್ವರೂಪವನ್ನು ಉಳಿಸಿದ ಪ್ರಕರಣ ಹಾಗೂ ತೀರ್ಪುʼ ಎಂದೇ ಕೊಂಡಾಡಲ್ಪಡುತ್ತದೆ.

ತೀರ್ಪಿನ ವಿಶೇಷತೆಗಳು

ಭಾರತದ ಇತಿಹಾಸದಲ್ಲಿ ಕೋರ್ಟ್‌ನ ಸಾಂವಿಧಾನಿಕ ಪೀಠವೊಂದು ಎಲ್ಲಾ 13 ನ್ಯಾಯಾಧೀಶರನ್ನು ಹೊಂದಿ ನಡೆದ ಪ್ರಕರಣ ಇದೇ ಮೊದಲು; ಇದೇ ಕೊನೆ. ದಾಖಲೆ 68 ದಿನಗಳ ಸುದೀರ್ಘ ನಿರಂತರ ವಿಚಾರಣೆ ನಡೆಸಿದ ಪ್ರಕರಣವೂ ಹೌದು. ಮುಖ್ಯ ನ್ಯಾಯಮೂರ್ತಿ ಎಸ್‌.ಎಂ.ಸಿಕ್ರಿ ಅವರ ನೇತೃತ್ವದ 13 ಜನರ ನ್ಯಾಯಪೀಠದಲ್ಲಿ ಕಕ್ಷಿದಾರ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಅವರ ಪರ 7:6ರ ತೀರ್ಪು ಬಂದಿತು. 1972ರ ಅಕ್ಟೋಬರ್‌ 31ರಿಂದ 1973ರ ಮಾರ್ಚ್ 23ರವರೆಗೆ ಇದರ ವಿಚಾರಣೆ ನಡೆಯಿತು.

ಪ್ರಕರಣ ಏನಿತ್ತು?

ಪ್ರಕರಣ ಆರಂಭವಾದುದು ಹೀಗೆ: 1972ರಲ್ಲಿ, ಕೇರಳ ಸರ್ಕಾರ ಎರಡು ಭೂಸುಧಾರಣಾ ಕಾನೂನುಗಳನ್ನು ರೂಪಿಸಿತು. ಅದರಲ್ಲಿ, ಎಡನೀರು ಮಠದ ಜಮೀನಿನ ನಿರ್ವಹಣೆಯನ್ನು ಮಠದಿಂದ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಕೇಶವಾನಂದ ಭಾರತೀ ಸ್ವಾಮೀಜಿ ಕೋರ್ಟಿಗೆ ಹೋದರು. ಇದರ ಜೊತೆಗೆ, ಇನ್ನೂ ಮೂರು ಸಂವಿಧಾನ ತಿದ್ದುಪಡಿಗಳನ್ನೂ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಅರ್ಜಿಯಲ್ಲಿ ಕೇಳಲಾಗಿದ್ದ ಮೂಲಭೂತ ಪ್ರಶ್ನೆ ಎಂದರೆ, ಸಂಸತ್ತು ಸಂವಿಧಾನವನ್ನು ತಿದ್ದುವ ಪರಮಾಧಿಕಾರವನ್ನು ಎಷ್ಟು ಹೊಂದಿದೆ, ಪ್ರಜೆಗಳ ಮೂಲಭೂತ ಹಕ್ಕುಗಳನ್ನೂ ಕಿತ್ತುಕೊಳ್ಳುವ ತಿದ್ದುಪಡಿಯನ್ನು ಸಂಸತ್ತು ಮಾಡಬಹುದೇ? ಯಾಕೆಂದರೆ, ಆಸ್ತಿ ಹೊಂದುವ ಹಕ್ಕು ಕೂಡ ಭಾರತೀಯ ಪ್ರಜೆ ಹೊಂದಿರುವ ಹಕ್ಕುಗಳಲ್ಲಿ ಒಂದು.

ನ್ಯಾಯವಾದಿಗಳು ಯಾರಿದ್ದರು?

ಭಾರತದ ಪ್ರಸಿದ್ಧ, ದೊಡ್ಡ ನ್ಯಾಯವಾದಿಗಳು ಕೇಶವಾನಂದ ಭಾರತೀ ಸ್ವಾಮೀಜಿಗಳ ಪರ ನಿಂತರು. ನಾನೀ ಪಾಲ್ಖೀವಾಲ, ಫಾಲಿ ನಾರಿಮನ್‌ ಮುಂತಾದವರು ಸಂವಿಧಾನಾತ್ಮಕ ಹಕ್ಕುಗಳನ್ನು ಸರಕಾರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವಂತಿಲ್ಲ ಎಂದು ಪೀಠದ ಮುಂದೆ ಬಲವಾಗಿ ವಾದಿಸಿದರು. ಸರ್ಕಾರ ಕೂಡ ತನ್ನ ಪರವಾಗಿ ಎಚ್‌.ಎಂ.ಸೀರ್ವಾಯ್‌ ಹಾಗೂ ನಿರೇನ್‌ ಡೇಯಂಥ ಘಟಾನುಘಟಿ ವಕೀಲರನ್ನು ನೇಮಿಸಿತ್ತು. ತೀರ್ಪು ಕೇಶವಾನಂದ ಭಾರತೀ ಪರವಾಗಿ ಬಂತು.

ಮೂಲ ಸ್ವರೂಪ ಎಂದರೇನು?

ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಹಕ್ಕನ್ನು ಸಂವಿಧಾನವೇ ಕೇಂದ್ರ ಸರಕಾರಕ್ಕೆ 368ನೇ ವಿಧಿಯಲ್ಲಿ ನೀಡಿದೆ. ಆದರೆ ಅದರ ಮೂಲಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂಬುದು ತೀರ್ಪಿನ ಸಾರಾಂಶ. ʼಮೂಲ ಸ್ವರೂಪಕ್ಕೆ ಧಕ್ಕೆ ತರಬಹುದಾದ ತಿದ್ದುಪಡಿಗಳನ್ನು ರದ್ದುಪಡಿಸುವʼ ತನ್ನ ಅಧಿಕಾರವನ್ನು ದೃಢಪಡಿಸಿತು. ʼಮೂಲ ಸ್ವರೂಪ’ ಎಂದರೇನು? ಮೂಲಭೂತ ಹಕ್ಕುಗಳು, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಪ್ರಜಾಪ್ರಭುತ್ವಗಳನ್ನು ಮೂಲ ಸ್ವರೂಪ ಎಂದು ಪೀಠ ಹೆಸರಿಸಿತು. ಅಲ್ಲಿಂದೀಚೆಗೆ ನೀಡಲಾದ ಅನೇಕ ತೀರ್ಪುಗಳಲ್ಲಿ ಈ ಮೂಲ ಸ್ವರೂಪವನ್ನು ವ್ಯಾಖ್ಯಾನಿಸಲಾಗುತ್ತಿದೆ.

ಇಂದಿರಾ ಗಾಂಧಿ ಸರ್ಕಾರಕ್ಕೆ ಮುಖಭಂಗ

1967ರಲ್ಲಿ ಪಂಜಾಬ್‌ನ ಗೋಲಕ್‌ನಾಥ್‌ ಹೆಸರಿನ ಇಬ್ಬರು ಸೋದರರು ತಮಗೆ ಆಸ್ತಿ ಹಕ್ಕಿನಲ್ಲಿ ಅನ್ಯಾಯವಾಗಿದೆ ಎಂದು ಕೋರ್ಟ್‌ ಮೆಟ್ಟಿಲೇರಿದರು. ಪ್ರಜೆಗಳು ಒಂದು ನಿರ್ದಿಷ್ಟ ಪ್ರಮಾಣದ ಆಸ್ತಿಗಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದುವಂತಿಲ್ಲ. ಸರಕಾರ ಬೇಕಿದ್ದರೆ ಅವರ ಭೂಮಿಯನ್ನು ಕಿತ್ತುಕೊಳ್ಳಬಹುದು ಎಂದು ಸರ್ಕಾರ ಕಾಯಿದೆ ರೂಪಿಸಿತ್ತು. ಗೋಲಕನಾಥ್‌ ಸಹೋದರರು, ನ್ಯಾಯಬದ್ಧ ಆಸ್ತಿ ಹೊಂದುವಿಕೆ, ದುಡಿಮೆ, ಗಳಿಕೆ, ನಮ್ಮ ಮೂಲಭೂತ ಹಕ್ಕು, ಇದನ್ನು ಸರಕಾರ ಕಸಿದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಸಹೋದರರ ವಾದವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು.

ಇದರಿಂದ ಕೆರಳಿದ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ, 1971ರಲ್ಲಿ ಸಂವಿಧಾನಕ್ಕೆ 24ನೇ ತಿದ್ದುಪಡಿ ತಂದು, ಪ್ರಜೆಗಳ ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗಿದೆ ಎಂದು ಸ್ಥಾಪಿಸಿದರು. 1972ರಲ್ಲಿ ಆಸ್ತಿ ಹಕ್ಕಿಗೆ ತಿದ್ದುಪಡಿ ತರುವ 25ನೇ ತಿದ್ದುಪಡಿಯನ್ನೂ ಮಾಡಿಸಿದರು. ಹೀಗೆ ಅನೇಕ ತಿದ್ದುಪಡಿಗಳನ್ನು ಇಂದಿರಾ ಸರ್ಕಾರ ಮಾಡುತ್ತಲೇ ಇತ್ತು. 25ನೇ ತಿದ್ದುಪಡಿ ಮೂಲಕ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. 26ನೇ ತಿದ್ದುಪಡಿ ಮೂಲಕ, ಭಾರತ ಒಕ್ಕೂಟದಲ್ಲಿ ವಿಲೀನಗೊಂಡ ರಾಜಮನೆತನಗಳಿಗೆ ರಾಯಧನ ನೀಡುತ್ತಿದ್ದ ಪದ್ಧತಿಯನ್ನು ನಿಲ್ಲಿಸಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ, ಭಾರತ ಒಕ್ಕೂಟದಲ್ಲಿ ವಿಲೀನಗೊಂಡ ರಾಜಮನೆತನಗಳಿಗೆ ರಾಯಧನ ನೀಡುತ್ತಿದ್ದ ಪದ್ಧತಿಯನ್ನು ನಿಲ್ಲಿಸಿದರು. ಇದನ್ನು ವಿರೋಧಿಸಿ ಕೋರ್ಟ್‌ಗೆ ಹೋದವರು ಕೋರ್ಟ್‌ನಲ್ಲಿ ಗೆಲುವು ಕಂಡಾಗ, ತೀರ್ಪುಗಳನ್ನೂ ಅನೂರ್ಜಿತಗೊಳಿಸುವಂತೆ ಸಂವಿಧಾನದ 25 ಮತ್ತು 26ನೇ ತಿದ್ದುಪಡಿಗಳನ್ನು ತಂದರು. ಗೋಲಕ್‌ನಾಥ ಪ್ರಕರಣವನ್ನು ಕೇಶವಾನಂದ ಭಾರತೀ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಸ್ತಾವಿಸಿದ್ದರು. ಜತೆಗೆ ಇಂದಿರಾ ಸರ್ಕಾರ ತಂದಿದ್ದ 24, 25, 26 ಹಾಗೂ 29ನೇ ತಿದ್ದುಪಡಿಗಳನ್ನೂ ಪ್ರಶ್ನಿಸಿದ್ದರು.

ಇದನ್ನೂ ಓದಿ: ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್​ಪಾಲ್​ ಸಿಂಗ್‌?

ಕೇಶವಾನಂದರ ಪರ ತೀರ್ಪು ಬಂದ ದಿನವೇ ಇಂದಿರಾ ಗಾಂಧಿ, ಪೀಠದಲ್ಲಿದ್ದ ಹಿರಿಯ ನ್ಯಾಯಾಧೀಶರನ್ನು ಕಡೆಗಣಿಸಿ, ಸರ್ಕಾರದ ಪರ ಅಭಿಪ್ರಾಯ ಮಂಡಿಸಿದ್ದ ಎ.ಎನ್‌.ರೇ ಎಂಬವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದರು. ಅವರು ಪ್ರಕರಣದ ತೀರ್ಪಿನ ಮರುಪರಿಶೀಲನೆಗೆ 13 ನ್ಯಾಯಾಧೀಶರ ಇನ್ನೊಂದು ಪೀಠ ನೇಮಿಸಿದರು. ಆದರೆ ಯಾರೂ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿರಲಿಲ್ಲ. ಇದರಿಂದ ಟೀಕೆಗೆ ತುತ್ತಾದ ರೇ ಎರಡೇ ದಿನದಲ್ಲಿ ಪೀಠವನ್ನು ವಿಸರ್ಜಿಸಿದರು.

ತೀರ್ಪು ಅನೂರ್ಜಿತಗೊಳಿಸಲು ಯತ್ನ

ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕವೂ ಇಂದಿರಾ ಗಾಂಧಿ ಅನೇಕ ತಿದ್ದುಪಡಿ, ತುರ್ತು ಪರಿಸ್ಥಿತಿ ಇತ್ಯಾದಿಗಳ ಮೂಲಕ ತಮ್ಮ ಅಧಿಕಾರವನ್ನು ಪ್ರಶ್ನಾತೀತಗೊಳಿಸಲು ಯತ್ನಿಸಿದರು. 39ನೇ ತಿದ್ದುಪಡಿ (ರಾಷ್ಟ್ರಪತಿ, ಪ್ರಧಾನಿಗಳ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ), 41ನೇ ತಿದ್ದುಪಡಿ (ರಾಷ್ಟ್ರಪತಿ, ಪ್ರಧಾನಿ ಮೇಲೆ ಕೇಸು ಹಾಕುವಂತಿಲ್ಲ) ತಂದರು. ಆದರೆ ಇವು ಕೇಶವಾನಂದ ಭಾರತೀ ಪ್ರಕರಣದ ತೀರ್ಪಿನಿಂದಾಗಿ, ಊರ್ಜಿತವಾಗಿ ಉಳಿಯಲಿಲ್ಲ.

ಯಾರು ಈ ಕೇಶವಾನಂದ ಭಾರತೀ?

ಶ್ರೀ ಕೇಶವಾನಂದ ಭಾರತೀ ಶ್ರೀಗಳು ಕರ್ನಾಟಕದವರೇ. ಆದರೆ ಈಗ ಕೇರಳಕ್ಕೆ ಸೇರಿರುವ, ಕಾಸರಗೋಡಿನ ಎಡನೀರು ಮಠದ ಪೀಠಾಧೀಶರಾಗಿದ್ದರು. 1940 ಡಿಸೆಂಬರ್‌ 9ರಂದು ಎಡನೀರು ಮಠಾಧೀಶರಾದ ಅವರು, 2020ರಲ್ಲಿ ಸೆಪ್ಟೆಂಬರ್‌ 6ರಂದು ದೇಹತ್ಯಾಗ ಮಾಡಿದರು. ಕರ್ನಾಟಕ ಸಂಗೀತ ಗಾಯಕ ಹಾಗೂ ಯಕ್ಷಗಾನ ಭಾಗವತರಾಗಿದ್ದ ಅವರು ಕಲೆಗಳ ಪೋಷಕರೂ ಆಗಿದ್ದರು. ಕಾಸರಗೋಡಿನಲ್ಲಿ ಕನ್ನಡ ಬಳಕೆಯನ್ನು ಎತ್ತಿ ಹಿಡಿಯುತ್ತಿದ್ದರು.

ಇದನ್ನೂ ಓದಿ: ವಿಸ್ತಾರ Explainer: ಸುಪ್ರೀಂ ಕೋರ್ಟ್‌ ಕಟಕಟೆಯಲ್ಲಿ ಸಲಿಂಗಪ್ರೇಮಿಗಳ ಕಂಕಣಭಾಗ್ಯ

Exit mobile version