Site icon Vistara News

ವಿಸ್ತಾರ Explainer: ಹೋಮಿ ಭಾಭಾ, ಶಾಸ್ತ್ರಿಯವರನ್ನು ಅಮೆರಿಕ ಕೊಂದಿತೇ? ವೆಬ್‌ ಸರಣಿ ಎಬ್ಬಿಸಿದ ಕುತೂಹಲ

homi bhabha

ʻRocket boys’ ಎಂಬ ಹೆಸರಿನ ವೆಬ್‌ ಸರಣಿಯೊಂದು ಸೋನಿ ಲೈವ್‌ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಹೋಮಿ ಜಹಾಂಗೀರ್‌ ಭಾಭಾ, ವಿಕ್ರಮ್‌ ಸಾರಾಭಾಯಿ ಮುಂತಾದ ಭಾರತೀಯ ಅಣುವಿಜ್ಞಾನದ ಅಗ್ರಗಣ್ಯ ವಿಜ್ಞಾನಿಗಳ ಜೀವನದ ಕತೆಯನ್ನು ಇದು ಹೊಂದಿದೆ. ಇದು ಹೊಸ ಕುತೂಹಲವೊಂದನ್ನು ಈಗ ಹುಟ್ಟುಹಾಕಿದೆ. ಹೋಮಿ ಜಹಾಂಗೀರಾ ಭಾಭಾರನ್ನು ಅಮೆರಿಕದ ಗುಪ್ತಚರ ಸಂಸ್ಥೆ CIA ಕೊಂದುಹಾಕಿದೆ ಎಂಬುದೇ ಈ ಸಂಗತಿ.

ಈ ಸಂಚು ತತ್ವ (conspiracy theory) ಇಂದು ನಿನ್ನೆಯದೇನೂ ಅಲ್ಲ. 70ರ ದಶಕದಿಂದಲೇ ಈ ಕುರಿತು ಗುಸುಗುಸು ಇದೆ. ಸದ್ಯ ವೆಬ್‌ ಸರಣಿಯ ಹಿನ್ನೆಲೆಯಲ್ಲಿ ಇದು ಮತ್ತೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿಗೆ ಬಂದಿದೆ. ಇದರ ಜತೆಗೆ, ಅದೇ ಅವಧಿಯಲ್ಲಿ ಮರಣ ಹೊಂದಿದ ಆಗಿನ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರದೂ ಸಿಐಎ ಮಾಡಿದ ಹತ್ಯೆಯೇ ಎಂದು ಕೂಡ ಹೇಳಲಾಗಿದೆ. ಈ ಸಂಚು ತತ್ವಗಳನ್ನು ಬೆಂಬಲಿಸಲು ಸಾಕಷ್ಟು ತರ್ಕಗಳೂ ಸಿಗುತ್ತವೆ.

ವಿಚಿತ್ರ ಎಂದರೆ, ಇಬ್ಬರೂ ಒಂದೇ ಅವಧಿಯಲ್ಲಿ ಅನುಮಾನಾಸ್ಪದವಾಗಿ ತೀರಿಕೊಂಡರು. ಹೋಮಿ ಜಹಾಂಗೀರ್‌ ಭಾಭಾ ಅವರು 1966ರ ಜನವರಿ 24ರಂದು ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ವಿಮಾನ ಯುರೋಪಿನ ಪಶ್ಚಿಮ ಭಾಗದ ಮೌಂಟ್‌ ಬ್ಲಾಂಕ್‌ ಪರ್ವತ ಪ್ರಾಂತ್ಯದಲ್ಲಿ ಸ್ಫೋಟಗೊಂಡು ನುಚ್ಚುನೂರಾಯಿತು. ಭಾಬಾ ಅವರ ಅವಶೇಷಗಳೂ ಸಿಗಲಿಲ್ಲ. ಅವರ ಜತೆಗೆ ಪ್ರಯಾಣಿಸುತ್ತಿದ್ದ ನೂರು ಜನ ಪ್ರಯಾಣಿಕರೂ ಸತ್ತುಹೋದರು. ಜಿನೀವಾ ಏರ್‌ಪೋರ್ಟ್‌ನ ಜತೆಗೆ ಸಂವಹನದಲ್ಲಿ ಉಂಟಾದ ಗೊಂದಲದಿಂದ ಹೀಗಾಗಿದೆ ಎಂದು ಸಮಜಾಯಿಷಿ ನೀಡಲಾಯಿತು. ಆದರೆ ನಿಜ ಕಾರಣ ಪತ್ತೆಯಾಗಲಿಲ್ಲ.

ರಾಕೆಟ್‌ ಬಾಯ್ಸ್‌ ಪೋಸ್ಟರ್‌

ಇದೇ ತಿಂಗಳಲ್ಲೇ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರೂ ಅನುಮಾನಾಸ್ಪದವಾಗಿ ತೀರಿಕೊಂಡರು. 1966ರ ಜನವರಿ 11ರಂದು, ಭಾರತ- ಪಾಕಿಸ್ತಾನ ಯುದ್ಧ ಮುಗಿಸಿ, ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ರಷ್ಯಾದ ತಾಷ್ಕೆಂಟ್‌ಗೆ ತೆರಳಿದ್ದ ಶಾಸ್ತ್ರಿ ಅವರು ನಡುರಾತ್ರಿ ನಿದ್ರೆಯಲ್ಲೇ ಅಸುನೀಗಿದರು. ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಯಿತು. ಆದರೆ ಶಾಸ್ತ್ರಿಯವರಿಗೆ ಆಹಾರದಲ್ಲಿ ವಿಷ ನೀಡಲಾಗಿತ್ತು ಎಂದು ಅವರ ಪತ್ನಿ ಆರೋಪಿಸಿದರು. ಈ ಕುರಿತು ಇರುವ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಹಲವು ಪತ್ರಕರ್ತರು ಕೋರಿದರೂ ʻಅದರಿಂದ ವಿದೇಶಾಂಗ ಬಾಂಧವ್ಯಕ್ಕೆ ಧಕ್ಕೆಯಾಗಬಹುದುʼ ಎಂಬ ಕಾರಣ ನೀಡಿ ಸರ್ಕಾರ ಹಿಂಜರಿಯಿತು.

ಪ್ರಸ್ತುತ ಭಾರತದ ಅಣುವಿಜ್ಞಾನಿಗಳ ಬಗ್ಗೆ ಪ್ರಸಾರವಾಗುತ್ತಿರುವ ವೆಬ್‌ ಸರಣಿ ʼರಾಕೆಟ್‌ ಬಾಯ್ಸ್‌ʼನಲ್ಲಿ ಹೋಮಿ ಭಾಭಾ ಅವರ ಹತ್ಯೆಯ ಹಿಂದೆ ಸಿಐಎ ಕೈವಾಡ ಇದೆ ಎನ್ನುವಂತೆ ಸೂಚಿಸಲಾಗಿದೆ. ಅದರ ನಿರ್ದೇಶಕ ಅಭಯ್‌ ಪನ್ನು ಅವರು ಸರಣಿಯ ಈ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಸರಣಿಯಲ್ಲಿ ಹಲವಾರು ಕಾಲ್ಪನಿಕ ಪಾತ್ರಗಳನ್ನೂ ಘಟನೆಗಳನ್ನೂ ಜೋಡಿಸಲಾಗಿದೆ. ಆದರೆ ಮೂಲ ಸಂಗತಿಯನ್ನು ಮರೆಮಾಚಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಅವರು ನೀಡುತ್ತಿರುವ ಸಾಕ್ಷ್ಯ ಏನು?

ಸಿಐಎಯಲ್ಲಿ ದಶಕಗಳ ಕಾಲ ಕೆಲಸ ಮಾಡಿ, ಮುಖ್ಯ ಹುದ್ದೆಗೆ ಏರಿ, ನಿವೃತ್ತಿಯಾದ Robert Crowley ಎಂಬ ಮಾಜಿ ಅಧಿಕಾರಿ ನೀಡಿದ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಈತ 1947ರಿಂದ 1970ರವರೆಗೂ ಈತ ಸಿಐಎಯ ನಾನಾ ಗುಪ್ತಚರ ಕಾರ್ಯಾಚರಣೆಗಳ ಸೂತ್ರ ಹಿಡಿದಿದ್ದ. ನಂತರ ಸಿಐಎಯ ಎರಡನೇ ಪ್ರಮುಖ ಹುದ್ದೆಗೂ ಏರಿದ. ಈತನನ್ನು ಗ್ರೆಗರಿ ಡಗ್ಲಾಸ್‌ ಎಂಬ ಪತ್ರಕರ್ತ ಸಂದರ್ಶಿಸಿ, ಈ ಮಾತುಕತೆಗಳನ್ನು Conversations with the Crow ಎಂಬ ಪುಸ್ತಕವಾಗಿ ಹೊರತಂದ. ಅದರಲ್ಲಿ, ಶಾಸ್ತ್ರಿ ಹಾಗೂ ಭಾಭಾ ಅವರ ಕೊಲೆಯ ಹಿಂದೆ ಸಿಐಎ ಇದೆ ಎಂದು ಆತ ಒಪ್ಪಿಕೊಂಡಿದ್ದ. ಈ ಹೇಳಿಕೆಯನ್ನು ಅಮೆರಿಕ ಸರ್ಕಾರ ಒಪ್ಪಿಕೊಂಡಿಲ್ಲ, ನಿರಾಕರಿಸಿಯೂ ಇಲ್ಲ.

ಯಾಕೆ ಸಿಐಎ ಈ ಕೊಲೆಗಳನ್ನು ನಡೆಸಿತು?

60- 70ರ ದಶಕಗಳು ಶೀತಲ ಸಮರದ ಉಚ್ಛ್ರಾಯ ಕಾಲ. ಅಮೆರಿಕ ಹಾಗೂ ಸೋವಿಯತ್‌ ರಷ್ಯಾಗಳು ಎರಡು ಪ್ರಧಾನ ಶಕ್ತಿಗಳಾಗಿದ್ದು, ಜಾಗತಿಕ ಪಾರಮ್ಯಕ್ಕಾಗಿ ಸೆಣಸುತ್ತಿದ್ದವು. ಅಮೆರಿಕ, ರಷ್ಯಾ, ಚೀನಾಗಳು ಆಗ ಅಣ್ವಸ್ತ್ರ ಶಕ್ತಿಗಳಾಗಿದ್ದವು. ಭಾರತ ನಿಧಾನವಾಗಿ ಅಣ್ವಸ್ತ್ರ ಶಕ್ತಿಯತ್ತ ದಾಪುಗಾಲು ಹಾಕುತ್ತಿತ್ತು. ಇದಕ್ಕೆ ರಷ್ಯಾದ ಬೆಂಬಲವನ್ನೂ ಪಡೆದುಕೊಂಡಿತ್ತು. ತಾತ್ವಿಕವಾಗಿ ಭಾರತ ಅಲಿಪ್ತ ನೀತಿಯನ್ನು ಘೋಷಿಸಿಕೊಂಡಿದ್ದರೂ, ರಷ್ಯಾಕ್ಕೆ ಹೆಚ್ಚು ಹತ್ತಿರವಾಗಿತ್ತು. ಆದರೆ ಇದೇ ವೇಳೆ ಅಮೆರಿಕ ಪಾಕಿಸ್ತಾನಕ್ಕೆ ನಿಕಟವಾಗಿತ್ತು.

ಭಾರತ ಅಣ್ವಸ್ತ್ರ ಹೊಂದುವುದು, ಏಷ್ಯಾದಲ್ಲಿ ಇನ್ನೊಂದು ಅಣ್ವಸ್ತ್ರ ಶಕ್ತ ರಾಷ್ಟ್ರ ಹುಟ್ಟಿಕೊಳ್ಳುವುದು ಅಮೆರಿಕಕ್ಕೆ ಬೇಕಿರಲಿಲ್ಲ. ಹೀಗಾಗಿ ಅದು ಭಾರತದ ಅನೇಕ ಉನ್ನತ ಸರ್ಕಾರಿ ಸಂಸ್ಥೆಗಳಲ್ಲಿ ತನ್ನ ಗೂಢಚಾರಿಗಳನ್ನು ಇಟ್ಟು ಮಾಹಿತಿ ಸಂಗ್ರಹಿಸುತ್ತಿತ್ತು. ಅತ್ತ ಸಿಐಎಗೆ ಪಾಕಿಸ್ತಾನದ ಐಎಸ್‌ಐ ಕೂಡ ಸಹಕರಿಸುತ್ತಿತ್ತು.

ಭಾಭಾ ಅವರು ಉನ್ನತ ಹುದ್ದೆಯಲ್ಲಿದ್ದ ಭಾಭಾ ಆಟಮಿಕ್‌ ರಿಸರ್ಚ್‌ ಸೆಂಟರ್‌ ದೇಶದ ಪರಮಾಣು ಯೋಜನೆಯ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆ, ಯೋಜನೆಗಳನ್ನು ಹೊಂದಿತ್ತು. ಅಣ್ವಸ್ತ್ರ ಹೊಂದುವುದಕ್ಕಿಂತಲೂ, ದೇಶದ ಇಂಧನ ಕೊರತೆ ನೀಗಿ ಸ್ವಾವಲಂಬಿಯಾಗಲು ಅಣು ವಿದ್ಯುತ್‌ ಯೋಜನೆಗಳು ಬೇಕು ಎಂಬುದು ಅವರ ಯೋಚನೆಯಾಗಿತ್ತು. ಇದೇ ಸಂದರ್ಭದಲ್ಲಿ ಒಮ್ಮೆ ಅವರು ಆಲ್‌ ಇಂಡಿಯಾ ರೇಡಿಯೋದಲ್ಲಿ ಸಂದರ್ಶನ ನೀಡುತ್ತ ʼʼಭಾರತ ಮನಸ್ಸು ಮಾಡಿದರೆ ಇನ್ನು 18 ತಿಂಗಳುಗಳಲ್ಲಿ ಪರಮಾಣು ಬಾಂಬ್‌ ಸಿದ್ಧ ಮಾಡುವ ಸಾಮರ್ಥ್ಯ ಹೊಂದಿದೆʼʼ ಎಂದು ಹೇಳಿದರು.

ಇದನ್ನೂ ಓದಿ: Explainer: ಅಮೆರಿಕದ ರೇʼಗನ್‌ʼಗಳ ಕತೆ ಇದು!

ಕ್ರೌಲೆಯ ಪುಸ್ತಕದಲ್ಲಿ ಇರುವ ಉಲ್ಲೇಖ

ಸಿಐಎ ಬೆಚ್ಚಿ ಬಿದ್ದದ್ದೇ ಆಗ. ಭಾಭಾ ಅವರ ಯೋಜನೆಗಳಿಗೆ ಪೂರಕವಾಗಿ ಪ್ರಧಾನಿ ಶಾಸ್ತ್ರಿ ಅವರೂ ಸ್ಪಂದಿಸುತ್ತಿದ್ದರು. ʻಜೈ ಜವಾನ್‌, ಜೈ ಕಿಸಾನ್‌ʼ ಎಂಬುದು ಅವರ ಘೋಷವಾಗಿತ್ತು. ಕೆಲವೇ ವರ್ಷಗಳಲ್ಲಿ ಭಾರತ ಆಹಾರಧಾನ್ಯಗಳಲ್ಲಿ ಸ್ವಾವಲಂಬಿ ಆಗಬೇಕು, ಏಷ್ಯಾದಲ್ಲಿ ದೊಡ್ಡ ಸೈನಿಕ ಶಕ್ತಿ ಆಗಬೇಕು ಎಂಬುದು ಅವರ ಕನಸು ಆಗಿತ್ತು. ಇದನ್ನು ನನಸಾಗಿಸಲು ಏನೆಲ್ಲ ಬೇಕೋ ಅದನ್ನೆಲ್ಲ ಅವರು ಮಾಡುತ್ತಿದ್ದರು. ಭಾಭಾ ಆಟಮಿಕ್‌ ಸೆಂಟರ್‌ನ ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಯುತ್ತಿದ್ದವು.

ಇದನ್ನು ಸಹಿಸದ ಸಿಐಎ, ಶಾಸ್ತ್ರಿ ಮತ್ತು ಹೋಮಿ ಭಾಭಾ ಅವರನ್ನು ಮುಗಿಸಲು ಸಂಚು ರೂಪಿಸಿತು. ಅದರ ಪ್ರಕಾರವೇ 1966ರ ಜನವರಿ 11ರಂದು ಶಾಸ್ತ್ರಿ, 24ರಂದು ಭಾಭಾ ಅವರು ಪ್ರಾಣ ತೊರೆದರು. ಇದು ರಾಬರ್ಟ್‌ ಕ್ರೌಲೆ ನೀಡಿದ ಹೇಳಿಕೆಗಳಿಂದ ತಿಳಿದುಬರುವ ಅಂಶ.

ಈತನ ಕೃತಿಯಲ್ಲಿ ಇವನು ಭಾರತದ ಜನರ ಬಗ್ಗೆ, ಶಾಸ್ತ್ರಿ- ಭಾಭಾರ ಬಗ್ಗೆ ಸಾಕಷ್ಟು ವಿಷ ಕಾರಿಕೊಂಡಿದ್ದಾನೆ. ʻʻಭಾರತದ ಅಣು ಯೋಜನೆಯ ಮುಖ್ಯಸ್ಥನಾಗಿದ್ದ ಹೋಮಿ ಭಾಭಾ ತುಂಬಾ ತಲೆಹರಟೆ ಮಾಡುತ್ತಿದ್ದ. ಅಷ್ಟೇ ಅಪಾಯಕಾರಿಯೂ ಆಗಿದ್ದ. ತಾನು ಅಣು ಬಾಂಬ್‌ ತಯಾರಿಸಬಲ್ಲೆ ಎಂದು ಕೊಚ್ಚಿಕೊಳ್ಳುತ್ತಿದ್ದ. ಅವನು ಅದನ್ನು ನಿಜವಾಗಿಯೂ ಮಾಡಬಲ್ಲಷ್ಟು ಸಮರ್ಥನೇ ಆಗಿದ್ದ. ಆದರೆ ನಮಗೆ ಅದು ಇಷ್ಟವಿರಲಿಲ್ಲ. ಸಾಕಷ್ಟು ಬಾರಿ ಎಚ್ಚರಿಕೆ ಕೊಟ್ಟಿದ್ದೆವು. ಆದರೆ ಆತ ಕೇಳಲಿಲ್ಲ. ಒಂದು ವೇಳೆ ಈ ಬಾಂಬ್‌ನಿಂದ ಪಾಕಿಸ್ತಾನದ ಮೇಲೆ, ಅಥವಾ ನಮ್ಮ ಲಾಸ್‌ ಏಂಜಲೀಸ್‌ ಮೇಲೆ ದಾಳಿ ಮಾಡಿದರೆ ಏನಾಗಬಹುದಿತ್ತು? ಇದನ್ನು ನಾವು ತಡೆದೆವು. ವಿಯೆನ್ನಾಗೆ ಆತ ಹೋಗುತ್ತಾ ಇದ್ದ ವಿಮಾನದಲ್ಲಿ ಇದ್ದ ಬಾಂಬ್‌ ಸ್ಫೋಟಿಸಿತು. ಯಾವುದೇ ಸಾಕ್ಷಿ ಸಿಗಲಿಲ್ಲ.ʼʼ ಎಂದು ಹೇಳಿದ್ದಾನೆ ಕ್ರೌಲೆ.

ಕ್ರೌಲೆಯ ಪುಸ್ತಕದಲ್ಲಿ ಇರುವ ಉಲ್ಲೇಖ

ʻʻಭಾಭಾ ಜೀನಿಯಸ್‌ ಆಗಿದ್ದ. ಆತನಿಂದ ಆಗಬೇಕಾದ್ದನ್ನು ಶಾಸ್ತ್ರಿ ಮಾಡಿಸುತ್ತಿದ್ದ. ಹೀಗಾಗಿ ಇಬ್ಬರೂ ತೊಲಗುವುದು ನಮಗೆ ಅಗತ್ಯವಾಗಿತ್ತು. ಹಾಗೇ ಆಯಿತುʼʼ ಎಂದು ಗಳುಹಿದ್ದಾನೆ ಕ್ರೌಲೆ.

ಈ ಕ್ರೌಲೆಯ ಮಾತುಗಳಲ್ಲಿ ಭಾರತೀಯರ, ಚೀನೀಯರ, ಪಾಕಿಗಳು ಮತ್ತು ರಷ್ಯನ್ನರ ಬಗ್ಗೆ ತುಚ್ಛೀಕಾರದ ಮಾತುಗಳು ಹೇರಳವಾಗಿ ಸಿಗುತ್ತವೆ. ಅಮೆರಿಕದ ಕರಿಯರ ಬಗ್ಗೆಯೂ ಈ ಕೊಳಕಾಗಿ ಮಾತಾಡಿದ್ದಾನೆ. ಈತ ಮಾಡಿದ್ದಕ್ಕಿಂತಲೂ ಬಡಾಯಿಯೇ ಹೆಚ್ಚು, ಈತ ಸುಳ್ಳುಗಾರ ಎಂದು ಕೂಡ ಇವನ ಸಹೋದ್ಯೋಗಿಗಳು ಹೇಳಿದ್ದೂ ಉಂಟು.

ಅದೇನೇ ಇದ್ದರೂ ಶಾಸ್ತ್ರಿ ಹಾಗೂ ಭಾಭಾರನ್ನು ಸಿಐಎ ಕೊಂದಿರಲು ಸಾಧ್ಯವಿದೆ ಎನ್ನುವುದಕ್ಕೆ ಕಾರಣಗಳು ಇಲ್ಲಿವೆ:

ಇದನ್ನೂ ಓದಿ: ವಿಸ್ತಾರ Explainer | ಡಾಲರ್‌ ಎದುರು ರೂಪಾಯಿ 80ಕ್ಕೆ ಕುಸಿದಿದ್ದೇಕೆ? ಇದರ ಪರಿಣಾಮವೇನು?

Exit mobile version