ಕೆಲವು ತಿಂಗಳುಗಳ ಹಿಂದೆ, ಪಿಂಚಣಿ ನಿಯಮದಲ್ಲಿ ಸುಧಾರಣೆ ವಿರೋಧಿಸಿ ಫ್ರಾನ್ಸ್‌ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ತಿಂಗಳುಗಳ ನಂತರ ಫ್ರಾನ್ಸ್ ಮತ್ತೆ (France Riots) ಕುದಿಯುತ್ತಿದೆ. ಕಳೆದ ವಾರವಿಡೀ ಪ್ಯಾರಿಸ್ ಅಗ್ನಿಕುಂಡದ ನಡುವೆ ಇದ್ದಂತೆ ಧಗಧಗಿಸಿತು.
ಕಾರುಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. ಫ್ರೆಂಚ್ ಅಧಿಕಾರಿಗಳ ಮಿತಿಮೀರಿದ ದೌರ್ಜನ್ಯದ ವಿರುದ್ಧ ರ್ಯಾಲಿಗಳು ನಡೆದವು. ಬೀದಿಗಿಳಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು. ಶಾಲೆಗಳನ್ನೂ ಪ್ರತಿಭಟನಾಕಾರರು ಬಿಡಲಿಲ್ಲ, ಸುಟ್ಟುಹಾಕಿದರು. ಭಾನುವಾರ ರಾತ್ರಿ ಉರಿಯುತ್ತಿರುವ ಕಾರೊಂದನ್ನು ಪ್ರತಿಭಟನಾಕಾರರು ಪ್ಯಾರಿಸ್ ಉಪನಗರ ಎಲ್ಹೇ-ಲೆಸ್-ರೋಸಸ್‌ನ ಮೇಯರ್ ಮನೆಗೆ ನುಗ್ಗಿಸಿದರು. ಮೇಯರ್ ಪತ್ನಿ ಮತ್ತು ಅವರ ಮಕ್ಕಳಲ್ಲಿ ಒಬ್ಬರು ಗಾಯಗೊಂಡರು. ಆ ಹೊತ್ತಿನಲ್ಲಿ ಮೇಯರ್ ವಿನ್ಸೆಂಟ್ ಜೀನ್‌ಬ್ರುನ್ ಅವರು ಟೌನ್‌ಹಾಲ್‌ನಲ್ಲಿದ್ದುಕೊಂಡು ಹಿಂಸಾಚಾರ ನಿಯಂತ್ರಣದ ನಿಗಾ ಇಟ್ಟಿದ್ದರು.
ಅಲ್ಜೀರಿಯಾ ಮೂಲದ ನಹೆಲ್ ಎಂಬ ಬಾಲಕನನ್ನು ಫ್ರೆಂಚ್ ಪೊಲೀಸರು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಮೊದಲು ಗಲಭೆ ಸುರುವಾದುದು ಪ್ಯಾರಿಸ್‌ನ ಉಪನಗರದಲ್ಲಿ. ನಂತರ ಇದು ರಾಜಧಾನಿ ಪ್ಯಾರಿಸ್‌ನಾದ್ಯಂತ ವ್ಯಾಪಿಸಿತು. ಬಳಿಕ ರಾಷ್ಟ್ರವ್ಯಾಪಿ ಕಾಣಿಸಿಕೊಂಡಿತು. ಇದರ ನಡುವೆ ಪ್ರತಿಭಟನೆಗಳ ಹೆಸರಿನಲ್ಲಿ ಲೂಟಿಕೋರರೂ ಸೇರಿಕೊಂಡರು. ಅಂಗಡಿ ಮಳಿಗೆಗಳನ್ನು ಲೂಟಿ ಮಾಡಿದರು. ಇದುವರೆಗೂ ಪೊಲೀಸರು 3,000ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಸುಮಾರು 45,000 ಪೊಲೀಸ್ ಸಿಬ್ಬಂದಿಯನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ.
ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್ ಜರ್ಮನಿಗೆ ನಿಗದಿಯಾಗಿದ್ದ ತಮ್ಮ ಅಧಿಕೃತ ಭೇಟಿಯನ್ನು ರದ್ದುಗೊಳಿಸಿದರು. ʼʼಯವಕನ ಹತ್ಯೆ ಕ್ಷಮಾರ್ಹವಲ್ಲʼʼ ಎಂದು ಮ್ಯಾಕ್ರಾನ್ ಹೇಳಿದ್ದಾರೆ. ನಹೆಲ್‌ನನ್ನು ಗುಂಡಿಟ್ಟು ಕೊಂದ ಪೊಲೀಸ್ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಅವಶ್ಯ ಕ್ರಮ ಕೈಗೊಳ್ಳಲಾಗುತ್ತದೆ, ಆದರೆ ದೊಂಬಿ ಕ್ಷಮಾರ್ಹವಲ್ಲ ಎಂದೂ ಅಧ್ಯಕ್ಷರು ಹೇಳಿದ್ದಾರೆ.
ಪೊಲೀಸ್‌ನಿಂದ ಯುವಕನ ಹತ್ಯೆ
ಇದಕ್ಕೆ ಕಾರಣವಾದದ್ದು ಒಬ್ಬ ಹುಡುಗನ ಸಾವು. ಫ್ರೆಂಚ್ ಪೊಲೀಸ್ ಅಧಿಕಾರಿಯೊಬ್ಬ ಈತನನ್ನು ಬಂದೂಕಿನಿಂದ ಸುಟ್ಟುಹಾಕಿದ್ದ. ಇದು ನಡೆದದ್ದು ಜೂನ್ 27ರಂದು. ನಹೆಲ್ ಎಂಬ ಈ ಯುವಕ ಪ್ಯಾರಿಸ್‌ನ ಪಶ್ಚಿಮದ ಉಪನಗರವಾದ ನಾಂಟೆರ್ರೆ ನಿವಾಸಿ. ಈತ ಹಳದಿ ಬಣ್ಣದ ಮರ್ಸಿಡಿಸ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೊರಟಿದ್ದ. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸುವಂತೆ ಇಬ್ಬರು ಪೊಲೀಸರು ಸೂಚಿಸಿದ್ದಾರೆ. ಆತ ನಿಲ್ಲಿಸಲಿಲ್ಲ. ಪೊಲೀಸರು ಮತ್ತೆ ಆತನನ್ನು ಅಡ್ಡಹಾಕಿ, ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ನಿಲ್ಲಿಸದೆ ಕಾರನ್ನು ಮತ್ತೆ ವೇಗವಾಗಿ ಚಲಾಯಿಸಿದ್ದಾನೆ. ಆ ಕ್ಷಣದಲ್ಲಿ ಪೊಲೀಸರಲ್ಲೊಬ್ಬ ಚಾಲಕನಿಗೆ ಶೂಟ್ ಮಾಡಿದ್ದಾನೆ. ಕಾರು ಪೇವ್‌ಮೆಂಟ್ ಮೇಲೆ ಹತ್ತಿ ಮುಂಭಾಗ ಜಖಂಗೊಂಡು ನಿಂತಿದೆ. ಕಾರಿನಲ್ಲಿ ಇನ್ನೂ ಇಬ್ಬರು ಪ್ರಯಾಣಿಕರಿದ್ದರು. ಅವರಿಬ್ಬರೂ ಕಾರಿನಿಂದಿಳಿದು ಪರಾರಿಯಾಗಿದ್ದಾರೆ.
ನಹೆಲ್‌ಗೆ ಆಗಿದ್ದುದು 17 ವರ್ಷ. ಪೊಲೀಸರು ಹೇಳುವಂತೆ ಈತನ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸೂ ಈತನಿಗೆ ಆಗಿರಲಿಲ್ಲ. ಆತ ಈ ಹಿಂದೆ ಹಲವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ, ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ಪ್ರಕರಣಗಳು ಇವೆ. ಈತನ ಕೆಲವು ಪ್ರಕರಣಗಳು ಯುವ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಟ್ರಾಫಿಕ್ ನಿಯಮ ಉಲ್ಲಂಘಿಸುವುದೇ ಇವನ ಜಾಯಮಾನ ಆಗಿತ್ತು. ಡ್ರಗ್ ಸಾಗಿಸುವವರು ಸಹಜವಾಗಿಯೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಇಷ್ಟಪಡುತ್ತಾರೆ. ಪ್ಯಾರಿಸ್‌ನಾದ್ಯಂತ ಯುವಜನತೆಯ ನಡುವೆ ಡ್ರಗ್ ಸೇವನೆ ಹಾಗೂ ವ್ಯವಹಾರ ವ್ಯಾಪಕವಾಗಿದೆ. ಇದರಲ್ಲಿ ಅತ್ಯಧಿಕ ಅರಬ್ ಮೂಲದ, ಅಲ್ಜೀರಿಯಾ ಮೂಲದ ಯುವಜನತೆ ಭಾಗಿಯಾಗಿದ್ದಾರೆ. ಹೀಗಾಗಿ ಇವರಿಗೂ ಪೊಲೀಸರಿಗೂ ಹೊಯ್ ಕೈ ಸದಾ ಇದ್ದದ್ದೇ.
ಫ್ರೆಂಚ್- ಅಲ್ಜೀರಿಯನ್ ಕುಟುಂಬಕ್ಕೆ ಸೇರಿದ ನಹೆಲ್ ತನ್ನ ತಾಯಿಗೆ ಏಕೈಕ ಮಗ. ಈತ ಅರ್ಧದಲ್ಲಿ ಶಾಲೆ ಶಿಕ್ಷಣ ಬಿಟ್ಟಿದ್ದಾನೆ. ಆದರೆ ಹಾಗೆ ಶಿಕ್ಷಣ ಅರ್ಧದಲ್ಲಿ ಕೈಬಿಟ್ಟ ಯುವಜನರಿಗೆ ಕೌಶಲ್ಯವೃದ್ಧಿಗೆ ಮತ್ತು ಸಹಾಯಕ್ಕೆ ಫ್ರಾನ್ಸ್ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಒಂದರಲ್ಲಿ ಆತ ರಿಹ್ಯಾಬಿಲಿಟೇಷನ್‌ಗೆ ಸೇರಿಕೊಂಡು, ಎಲೆಕ್ಟ್ರಿಷಿಯನ್ ಕೋರ್ಸ್‌ಗೆ ಸೇರಿಕೊಂಡಿದ್ದ. ಚೆನ್ನಾಗಿ ರಗ್ಬಿ ಆಡುತ್ತಿದ್ದ. ಯಾವುದೇ ಕ್ರಿಮಿನಲ್ ದಾಖಲೆ ಇವನ ಮೇಲೆ ಇರಲಿಲ್ಲ. ಕ್ರಿಮಿನಲ್ ಹಿನ್ನೆಲೆಯ ಗೆಳೆಯರ ಗುಂಪಿನ ಸಹವಾಸ ಇದ್ದರೂ ಸ್ವತಃ ಈತನ ಮೇಲೆ ಆ ದಾಖಲೆ ಇರಲಿಲ್ಲ.
ಆದರೆ ಗಲಭೆ ಇಷ್ಟೊಂದು ವ್ಯಾಪಕವಾಗಿ ಹರಡಿದ್ದೇಕೆ?
ಯುವಕನ ಹತ್ಯೆಯ ಎರಡನೇ ದಿನದಿಂದ ಪ್ರತಿಭಟನೆಗಳು ಫ್ರಾನ್ಸ್‌ನಾದ್ಯಂತ ಹರಡಿದವು. ಇದರಲ್ಲಿ ಅರಬ್ ಹಿನ್ನೆಲೆಯ ಯುವಕ- ಯುವತಿಯರೇ ಹೆಚ್ಚಾಗಿದ್ದರು. ಬಿಳಿಯರೂ ಅಲ್ಪ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ಪ್ಯಾರಿಸ್‌ನಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವ ವರ್ಣಭೇದ ನೀತಿ, ಪೊಲೀಸರ ದರ್ಪ- ದೌರ್ಜನ್ಯಗಳು ಈ ಗಲಭೆ ತುರೀಯ ಸ್ಥಿತಿಗೆ ಮುಟ್ಟಲು ಕಾರಣವಾಗಿವೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ʼʼಕೇವಲ ಪೋಲೀಸರ ದಬ್ಬಾಳಿಕೆ ಮಾತ್ರವಲ್ಲ ಆರ್ಥಿಕ ಮತ್ತು ಜನಾಂಗೀಯ ಅಸಮಾನತೆಗಳ ಬಗ್ಗೆಯೂ ಕೋಪವನ್ನು ಈ ಗಲಭೆಗಳಲ್ಲಿ ಕಾಣಬಹುದು. ಅಂತಾರಾಷ್ಟ್ರೀಯ ಟೀಕೆಗಳು ಮತ್ತು ಸ್ಥಳೀಯ ಹೋರಾಟಗಳ ನಡುವೆಯೂ ಫ್ರೆಂಚ್ ಆಡಳಿತ ತನ್ನ ಪೊಲೀಸ್ ಮತ್ತು ಜೈಲು ವ್ಯವಸ್ಥೆಯನ್ನು ಮಾನವೀಯಗೊಳಿಸಿಲ್ಲ. ವಲಸಿಗರನ್ನು ಕಂಡರೆ ಈಗಲೂ ಇಲ್ಲಿ ಹೆಚ್ಚಿನ ಮಂದಿಯಲ್ಲಿ ಹೇವರಿಕೆ ಇದೆ. ಸರ್ಕಾರ- ಪೊಲೀಸ್- ನ್ಯಾಯಾಂಗ ಮಟ್ಟದಲ್ಲೂ ಇದು ಬೇರೂರಿದೆ ಎನ್ನುತ್ತಾರೆ ಫ್ರೆಂಚ್‌ನ ಸಮಾಜಶಾಸ್ತ್ರ ತಜ್ಞ, ಲೇಖಕ ಮ್ಯಾಥ್ಯೂ ರಿಗೌಸ್ಟ್.
ಇದನ್ನೂ ಓದಿ: France Riots: 17ವರ್ಷದ ಹುಡುಗನ ಸಾವು ಇಡೀ ಫ್ರಾನ್ಸ್ ದೇಶವನ್ನು ನಲುಗಿಸುತ್ತಿದೆ; ತಾರಕಕ್ಕೆ ಏರಿದ ಗಲಭೆ
ಪ್ಯಾರಿಸ್‌ನಲ್ಲಿ ಅರಬ್ ದೇಶಗಳಿಂದ ಬಂದ ವಲಸಿಗರು, ಕರಿಯರು ವಾಸಿಸುತ್ತಿರುವ ಹಲವು ಪ್ರದೇಶಗಳಿವೆ. ಅಲ್ಲಿ ಮೂಲವಸತಿ ಹಾಗೂ ಶಿಕ್ಷಣದ ಕೊರತೆ ಎದ್ದು ಕಾಣಿಸುತ್ತದೆ. ಫ್ರಾನ್ಸ್‌ನ ಉಳಿದ ಭಾಗಗಳೊಂದಿಗೆ ಹೋಲಿಸಿದರೆ ನಿರುದ್ಯೋಗ ಎದ್ದು ಕಾಣಿಸುವಂತಿದೆ. ಇಲ್ಲಿ ಶಾಲಾ ಶಿಕ್ಷಣದ ಯಶಸ್ಸು ಹೆಚ್ಚಿಲ್ಲ. ಹೀಗಾಗಿ ಯುವಕರು ಅಸಹನೆಗೆ ತುತ್ತಾಗುತ್ತಿದ್ದಾರೆ. ಸಹಜವಾಗಿ ಇದು ಪೊಲೀಸರಿಗೂ ವಲಸಿಗರಿಗೂ ನಡುವೆ ಘರ್ಷಣೆಗೆ ಕಾರಣವಾಗುತ್ತಿದೆ.
ಅಸಹನೆ ಎಷ್ಟು ಕಾರಣ?
ಅರಬ್ ಮೂಲದ ಹಾಗೂ ಮುಸ್ಲಿಂ ವಲಸಿಗರ ಬಗ್ಗೆ ಇಲ್ಲಿನ ಬಿಳಿಯರಲ್ಲಿ, ಪೊಲೀಸರಲ್ಲಿ ಭೇದ ನೀತಿ ಬೇರೂರಿದೆ. ಇದು ಒಂದೆರಡು ದಶಕಗಳಿಂದ ಹೆಪ್ಪುಗಟ್ಟುತ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ತೀವ್ರ ಬಲಪಂಥೀಯರೂ ಅಧಿಕಾರ ಹಿಡಿದಿದ್ದಾರೆ. 2015ರಲ್ಲಿ ಫ್ರಾನ್ಸ್‌ನ ಚಾರ್ಲಿ ಹೆಬ್ಡೊ ಎಂಬ ಪತ್ರಿಕೆ ಪ್ರವಾದಿ ಮಹಮ್ಮದರನ್ನು ಅವಹೇಳನ ಮಾಡುವ ವ್ಯಂಗ್ಯಚಿತ್ರ ಪ್ರಕಟಿಸಿದ್ದನ್ನೂ, ಮುಸ್ಲಿಂ ಉಗ್ರಗಾಮಿಗಳು ಇದರಿಂದ ರೊಚ್ಚಿಗೆದ್ದು ಆ ಪತ್ರಿಕೆಯ ಕಚೇರಿಗೆ ಸಶಸ್ತ್ರ ದಾಳಿ ನಡೆಸಿ ಎಸಗಿದ ಹತ್ಯಾಕಾಂಡದಲ್ಲಿ 17 ಮಂದಿ ಹತರಾದುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಫ್ರಾನ್ಸ್‌ನ ಹಲವು ಕಡೆ ʼಲೋನ್ ವೂಲ್ಫ್ʼ ದಾಳಿಗಳೂ ನಡೆದಿವೆ.
ಇದನ್ನೂ ಓದಿ: France Riots: ಫ್ರಾನ್ಸ್ ದಂಗೆಗೆ ವಿಡಿಯೋ ಗೇಮ್ಸ್ ಕಾರಣ! ಮಕ್ಕಳನ್ನು ಬೀದಿಗೆ ಬೀಡಬೇಡಿ ಅಂದ್ರು ಫ್ರೆಂಚ್ ಅಧ್ಯಕ್ಷರು