ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳು ರೇಡಿಯೋದಲ್ಲಿ ನೀಡುತ್ತಿರುವ ʼಮನ್ ಕಿ ಬಾತ್ʼ ಮಾತಿನ ಕಾರ್ಯಕ್ರಮ ದೇಶದ ಜನಮೆಚ್ಚುಗೆ ಪಡೆದಿದೆ. ಯುವಜನತೆಗೆ ಸ್ಫೂರ್ತಿಯಾಗಿದೆ. ಇದರಲ್ಲಿ ಅವರು ಆಗಾಗ ಜನಸಾಮಾನ್ಯ ಸಾಧಕರ ಧನಾತ್ಮಕ ಕಾರ್ಯಗಳ ಬಗ್ಗೆ ಉಲ್ಲೇಖ ಮಾಡುವುದು ವಿಶೇಷ.
ಇನ್ನೊಂದು ವಿಶೇಷವೆಂದರೆ ಕರ್ನಾಟಕದ ಜನತೆಯ ಉದ್ಯಮಶೀಲ ಮನೋಭಾವವನ್ನು ಅವರು ಹೆಚ್ಚಿನ ಸಲ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಜನತೆಯ ಸ್ಪಂದನಶೀಲ ಸಂಸ್ಕೃತಿ, ಆವಿಷ್ಕಾರ ಮಾಡುವ ಮನಸ್ಥಿತಿಗಳನ್ನು ಪ್ರಶಂಸಿಸುವ ಅವಕಾಶಗಳನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ.
ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ರಾಜ್ಯದ ವಿವಿಧ ಕ್ಷೇತ್ರಗಳು, ವಿಶಿಷ್ಟ ಪದ್ಧತಿಗಳು, ಭಾಷೆ ಮತ್ತು ಉದ್ಯಮಶೀಲತೆಯ ಗುಣಮಟ್ಟವನ್ನು ಒತ್ತಿ ಹೇಳುವ ಹಲವಾರು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಹಾಗೆ ಉಲ್ಲೇಖಗೊಂಡ ಕೆಲವು ನಮ್ಮ ಉದ್ಯಮಗಳು, ಸ್ಟಾರ್ಟಪ್ಗಳು, ಹೊಸ ಆವಿಷ್ಕಾರಗಳು ಇಲ್ಲಿವೆ.
- ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಉದ್ಯಮಶೀಲ ಮಹಿಳೆಯರು ಬಾಳೆಕಾಯಿ ಹಿಟ್ಟನ್ನು ಬಳಸಿಕೊಂಡು ದೋಸೆ, ಗುಲಾಬ್ ಜಾಮೂನ್ ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸುವ ವಿಶಿಷ್ಟ ಉದ್ಯಮವನ್ನು ಪ್ರಾರಂಭಿಸಿದರು. ಹೆಚ್ಚಿನ ಜನತೆ ಈ ಉತ್ಪನ್ನದ ಬಗ್ಗೆ ತಿಳಿದುಕೊಂಡಂತೆ, ಬೇಡಿಕೆ ಹೆಚ್ಚಾಯಿತು. ಇದು ಅವರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.
- ಸಿರಿಧಾನ್ಯಗಳನ್ನು ಬೆಳೆಯುವ ಮತ್ತು ಸಂಸ್ಕರಿಸುವ ಪ್ರಯತ್ನಗಳ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿದ ಬೀದರ್ ಜಿಲ್ಲೆಯ ಹುಲ್ಸೂರು ರಾಗಿ ಉತ್ಪಾದಕ ಕಂಪನಿಯ ಮಹಿಳೆಯರನ್ನು ಮನ್ ಕಿ ಬಾತ್ನಲ್ಲಿ ಪ್ರಧಾನಿ ಸ್ಮರಿಸಿದ್ದರು.
- ಅಮೃತ ಸರೋವರ ಅಭಿಯಾನವನ್ನು ಕರ್ನಾಟಕದಲ್ಲಿ ಸಕ್ರಿಯವಾಗಿ ನಡೆಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬಿಲ್ಕೆರೂರು ಗ್ರಾಮದಲ್ಲಿ ಸುಂದರವಾದ ಅಮೃತ ಸರೋವರವನ್ನು ನಿರ್ಮಿಸಲಾಗಿದೆ. ಇದು ಪ್ರವಾಹದ ಸಮಸ್ಯೆಗಳನ್ನು ಪರಿಹರಿಸಿದೆ ಮಾತ್ರವಲ್ಲದೆ ನೀರಿನ ನಷ್ಟದಿಂದ ರೈತರನ್ನು ಉಳಿಸಿದೆ.
- ಅಮೃತ ಭಾರತಿ ಕನ್ನಡದಾರತಿ ಅಭಿಯಾನದ ಅಡಿಯಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು.
- ಆಳಂದದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಖಾಕ್ರಾ, ಬಿಸ್ಕತ್ತು ಮತ್ತು ಲಡ್ಡುಗಳಂತಹ ಜನಪ್ರಿಯ ಉತ್ಪನ್ನಗಳನ್ನು ಎಫ್ ಪಿಸಿ ತಯಾರಿಸುತ್ತದೆ.
- ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ವೀರಭದ್ರ ಸ್ವಾಮಿ ಪ್ರಾಚೀನ ಶಿವ ದೇವಾಲಯವನ್ನು ಪರಿವರ್ತಿಸಿದ್ದಕ್ಕಾಗಿ ಯುವ ಬ್ರಿಗೇಡ್ನ ಸ್ವಚ್ಛತಾ ಅಭಿಯಾನವನ್ನು ಶ್ಲಾಘಿಸಿದರು. ಸೋಮೇಶ್ವರ ಬೀಚ್ ಅನ್ನು ಸ್ವಚ್ಛಗೊಳಿಸಿದ ಮತ್ತು ಇತರರಿಗೆ ಸ್ಫೂರ್ತಿ ನೀಡಿದ ಅನುದೀಪ್ ಮತ್ತು ಮಿನುಶಾ ದಂಪತಿಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.
- ಬಾಬಾ ಸಾಹೇಬ್ ಮತ್ತು ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಬಸವೇಶ್ವರರ ಬೋಧನೆಗಳಾದ “ಕಾಯಕವೇ ಕೈಲಾಸ” ಅಂದರೆ ಸರಿಯಾದ ಶ್ರದ್ಧೆ ಮತ್ತು ಪರಿಶ್ರಮದಿಂದ ಕರ್ತವ್ಯಗಳನ್ನು ನಿರ್ವಹಿಸುವುದು ಶಿವನ ಸಾಮೀಪ್ಯದಲ್ಲಿ ಇರುವುದಕ್ಕೆ ಸಮಾನವಾಗಿದೆ ಎಂದು ಸ್ಮರಿಸಿದರು.
- ಇ-ತ್ಯಾಜ್ಯ ನಿರ್ವಹಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸಿದ ಪ್ರಧಾನಮಂತ್ರಿ, ಅಂತಹ ಒಂದು ಪ್ರಯತ್ನದಲ್ಲಿ ತೊಡಗಿರುವ ಬೆಂಗಳೂರಿನ ಇ-ಪರಿಸರ ಸಂಸ್ಥೆಯ ಬಗ್ಗೆ ಪ್ರಸ್ತಾಪಿಸಿದರು. ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳಿಂದ ಅಮೂಲ್ಯ ಲೋಹಗಳನ್ನು ಹೊರತೆಗೆಯಲು ಈ ಸಂಸ್ಥೆ ದೇಶೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
- ಗ್ರಾಮೀಣ ಭಾರತದ ಕಥೆಗಳನ್ನು ಜನಪ್ರಿಯಗೊಳಿಸುವ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು, ಅಮರ್ ವ್ಯಾಸ್ ಮತ್ತು ಅವರ ಸಹೋದ್ಯೋಗಿಗಳು ನಡೆಸುತ್ತಿರುವ ‘Gathastory.in ವೆಬ್ ಸೈಟ್ ಬಗ್ಗೆ ಪ್ರಸ್ತಾಪಿಸಿದರು. ಐಐಎಂ ಅಹ್ಮದಾಬಾದ್ನಿಂದ ಎಂಬಿಎ ಮುಗಿಸಿದ ಅಮರ್ ವ್ಯಾಸ್ ವಿದೇಶಕ್ಕೆ ಹೋಗಿ ಮರಳಿ ಬೆಂಗಳೂರಿನಲ್ಲಿ ವಾಸಿಸಿ ಕಥೆ ಹೇಳುವುದನ್ನು ಆಸಕ್ತಿದಾಯಕ ಚಟುವಟಿಕೆಯಾಗಿ ಮುಂದುವರಿಸಿದ್ದಾರೆ.
- ಪದ್ಮ ಪ್ರಶಸ್ತಿ ಪುರಸ್ಕೃತರ ಸ್ಫೂರ್ತಿದಾಯಕ ಕತೆಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿ, ಕರ್ನಾಟಕದ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿದರು. ದೇವದಾಸಿಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಕರ್ನಾಟಕದ ಸೀತವ್ವ ಜೋಡಟ್ಟಿ, ಕೃಷಿಯಲ್ಲಿ ಆವಿಷ್ಕಾರಗಳಿಗೆ ಹೆಸರುವಾಸಿಯಾದ ಅಮೈ ಮಹಾಲಿಂಗ ನಾಯಕ್, 107 ವರ್ಷದ ಸಾಲುಮರದ ತಿಮ್ಮಕ್ಕ- ಇವರ ಹೆಸರುಗಳನ್ನು ಉಲ್ಲೇಖಿಸಿದರು.
- ದುರ್ಗಮ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡುತ್ತಿದ್ದ ಸೂಲಗಿತ್ತಿ ನರಸಮ್ಮ, ಸಮಾಜ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟ ತುಮಕೂರು ಜಿಲ್ಲೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ (ಸಿದ್ಧಗಂಗಾ ಮಠ) ಅವರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.
- ಭಾರತವು ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಸ್ಥಳೀಯ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವಂತೆ ಮನವಿ ಮಾಡಿದ ಪ್ರಧಾನಿ, ರಾಮನಗರದ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ಬಗ್ಗೆ ಪ್ರಸ್ತಾಪಿಸಿದರು.
- ಕರ್ನಾಟಕದ ಹೆಣ್ಣುಮಕ್ಕಳ ಅನೇಕ ಸ್ಫೂರ್ತಿದಾಯಕ ಕಥೆಗಳನ್ನು ಮೋದಿ ಹಂಚಿಕೊಂಡರು. ಕರ್ನಾಟಕದ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಶೌಚಾಲಯಕ್ಕಾಗಿ ಸತ್ಯಾಗ್ರಹ ಮಾಡಿದರು. ಬೆಳಗಾವಿಯ ರೈತನ ಮಗಳು ಅಕ್ಷಯ ಬಸವಾನಿ ಕಾಮತ್ ಖೇಲೋ ಇಂಡಿಯಾದಲ್ಲಿ ವೇಟ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದನ್ನು ಹೇಳಿದರು.
- ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಮಳವಳ್ಳಿಯ ಕಾಮೇಗೌಡ ಅವರ ಸ್ಫೂರ್ತಿದಾಯಕ ಕಥೆಯನ್ನು ಹಂಚಿಕೊಂಡರು. ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವ ಗುಡ್ಡಗಾಡು ಪ್ರದೇಶದಲ್ಲಿ ಹೊಸ ಕೆರೆಗಳನ್ನು ನಿರ್ಮಿಸಿದ್ದನ್ನು ಉಲ್ಲೇಖಿಸಿದರು.
- ಲಕ್ಷ್ಮೇಶ್ವರದ ರಿದಾ ನದಾಫ್ ಅವರ ಬಗ್ಗೆಯೂ ಪ್ರಧಾನಿ ಗಮನ ಸೆಳೆದರು. ಅವರು ಸೇನಾಧಿಕಾರಿಯ ಮಗಳು ಎಂದು ಹೆಮ್ಮೆ ಪಡುವುದನ್ನು, ಕಲಬುರಗಿಯ ಇರ್ಫಾನಾ ಬೇಗಂ ಅವರ ಶಾಲೆಯು ತನ್ನ ಗ್ರಾಮದಿಂದ 5 ಕಿಲೋಮೀಟರ್ ದೂರದಲ್ಲಿದೆ ಎಂದು ಬರೆದಿರುವುದನ್ನು ಉಲ್ಲೇಖಿಸಿದರು.
- ಬೆಂಗಳೂರಿನ ಸಹಕಾರನಗರದ ಕಾಡನ್ನು ಪುನರುಜ್ಜೀವಗೊಳಿಸಲು ಸುರೇಶ್ ಕುಮಾರ್ ಕೈಗೊಂಡ ಉಪಕ್ರಮ; 25 ವರ್ಷಗಳಿಂದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಕೆ. ಉಮಾಶ್ರೀ ಅವರ ʼಕಲಾ ಚೇತನ’ ವೇದಿಕೆ; ವೀಳ್ಯದೆಲೆ ನಾರಿನಿಂದ ತಯಾರಿಸಿದ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್ ನಂತಹ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುವ ಸುರೇಶ್ ಮತ್ತು ಮೈಥಿಲಿ ದಂಪತಿ; ಇವರನ್ನು ಸ್ಮರಿಸಿಕೊಂಡರು.
ಇದನ್ನೂ ಓದಿ: Mann Ki Baat: ಮೋದಿ ಮನ್ ಕಿ ಬಾತ್ಗೆ ಕಿವಿಯಾಗಲಿದೆ ಜಗತ್ತು, 100ನೇ ಆವೃತ್ತಿ ಹಿನ್ನೆಲೆ ಬಿಜೆಪಿ ಬಿಗ್ ಪ್ಲಾನ್ ಏನು?