Site icon Vistara News

ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ

tricolor

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಆರೋಹಣ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ. ʼಹರ್‌ ಘರ್‌ ತಿರಂಗಾʼ ಎಂದು ಈ ಅಭಿಯಾನವನ್ನು ಕರೆಯಲಾಗಿದೆ. ಪ್ರತಿ ದೇಶದ ಪ್ರತಿ ಪ್ರಜೆಯಲ್ಲೂ ದೇಶಭಕ್ತಿಯ ಭಾವನೆಗಳನ್ನು ಉದ್ದೀಪಿಸುವುದು ಈ ಅಭಿಯಾನದ ಆಶಯ. ಆ.13ರಿಂದ ಆ.15ರ ನಡುವೆ ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ತಿರಂಗಾ ಹಾರಾಡುವಂತೆ ಮಾಡುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಸುಮಾರು 1.6 ಲಕ್ಷ ಅಂಚೆ ಕಚೇರಿಗಳಲ್ಲಿ ತ್ರಿವರ್ಣಧ್ವಜ ಮಾರಾಟ ಮಾಡಲಾಗುತ್ತಿದೆ.

ಧ್ವಜಕ್ಕೊಂದು ಸಂಹಿತೆ

ಪ್ರತಿ ದೇಶಕ್ಕೂ ಒಂದು ರಾಷ್ಟ್ರಧ್ವಜ ಇದ್ದೇ ಇರುತ್ತದೆ. ಅದನ್ನು ಹೇಗೆ ನಡೆಸಿಕೊಳ್ಳಬೇಕು, ಗೌರವಿಸುವ ಬಗೆ ಹೇಗೆ ಎಂಬ ಕುರಿತೂ ವಿವರವಾದ ಒಂದು ಧ್ವಜಸಂಹಿತೆ ಇದ್ದೇ ಇರುತ್ತದೆ. ಹಾಗೆಯೇ ನಮ್ಮ ರಾಷ್ಟ್ರಧ್ವಜಕ್ಕೂ ಇದೆ. ʻಭಾರತೀಯ ಧ್ವಜ ಸಂಹಿತೆ- 2002′ ಎಂಬ ಹೆಸರಿನಲ್ಲಿದೆ.

ಈ ಸಂಹಿತೆಯಲ್ಲಿ ಇತ್ತೀಚೆಗೆ ಎರಡು ತಿದ್ದುಪಡಿಗಳನ್ನು ಮಾಡಲಾಗಿದೆ. 2021ರ ಡಿಸೆಂಬರ್‌ 30ರಂದು ಮಾಡಲಾದ ತಿದ್ದುಪಡಿಯಂತೆ, ಇನ್ನು ಮುಂದೆ ಪಾಲಿಯೆಸ್ಟರ್‌ ಬಟ್ಟೆಯಿಂದ ಮಾಡಲಾಗದ ಅಥವಾ ಯಂತ್ರದಿಂದ ತಯಾರಿಸಿದ ಧ್ವಜಗಳನ್ನೂ ಹಾರಾಡಿಸಬಹುದು. ಇದುವರೆಗೂ ಕೈಯಿಂದ ಹೊಲಿದ, ಹತ್ತಿಬಟ್ಟೆಯ ಧ್ವಜಗಳಿಗೆ ಮಾತ್ರ ಅವಕಾಶವಿತ್ತು. ಈಗ ಯಂತ್ರದಿಂದ ತಯಾರಿಸಿದ, ಕೈಯಿಂದ ತಯಾರಿಸಿದ, ಹತ್ತಿ/ಪಾಲಿಯೆಸ್ಟರ್/ರೇಷ್ಮೆ/ಖಾದಿ/ಉಣ್ಣೆ ಧ್ವಜಗಳನ್ನು ಹಾರಿಸಬಹುದು. ಆಗಸ್ಟ್‌ 15ಕ್ಕೂ ಮುನ್ನ ದೇಶದ ಸಾಧ್ಯವಾದಷ್ಟು ಮನೆಗಳನ್ನು ತಲುಪುವುದು, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು.

ಎರಡನೇ ತಿದ್ದುಪಡಿಯ ಪ್ರಕಾರ, ರಾಷ್ಟ್ರಧ್ವಜವನ್ನು ರಾತ್ರಿಯ ವೇಳೆಯಲ್ಲೂ ಹಾರಾಡಿಸಬಹುದು. ಈ ಮೊದಲು ಹಗಲಿನಲ್ಲಿ ಮಾತ್ರವೇ ಹಾರಾಡಿಸಬಹುದಾಗಿತ್ತು.

ಸಂಹಿತೆಯ ಇತರ ನಿಯಮಗಳು

ರಾಷ್ಟ್ರಧ್ವಜ ಆಯತಾಕಾರವಾಗಿರಬೇಕು. ಧ್ವಜ ಯಾವುದೇ ಗಾತ್ರದ್ದಾಗಿರಬಹುದು, ಆದರೆ ಉದ್ದ ಮತ್ತು ಅಗಲಗಳು 3:2 ಅನುಪಾತದಲ್ಲಿ ಇರಬೇಕು.

ರಾಷ್ಟ್ರಧ್ವಜವನ್ನು ಎತ್ತರದಲ್ಲಿ ಹಾರಾಡಿಸಬೇಕು, ಗೌರವಯುತವಾಗಿ ನೋಡಿಕೊಳ್ಳಬೇಕು. ಹರಿದ, ಕೊಳೆಯಾದ ಧ್ವಜವನ್ನು ಹಾರಾಡಿಸಬಾರದು. ಒಂದೇ ಧ್ವಜಸ್ತಂಭದಲ್ಲಿ ಬೇರೆ ಧ್ವಜಗಳ ಜತೆಗೆ ಹಾರಿಸುವಂತಿಲ್ಲ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಸೇರಿದಂತೆ ಧ್ವಜಸಂಹಿತೆಯ 9ನೇ ಸೆಕ್ಷನ್ 3ನೇ ಭಾಗದಲ್ಲಿ ಹೆಸರಿಸಲಾಗಿರುವ ಗಣ್ಯರು ಹೊರತುಪಡಿಸಿ ಇನ್ಯಾರದೇ ವಾಹನದ ಮೇಲೆ ಹಾರಾಡಿಸುವಂತಿಲ್ಲ.

ರಾಷ್ಟ್ರಧ್ವಜದ ಸಮಾನವಾಗಿ ಅಥವಾ ಅದಕ್ಕಿಂತ ಎತ್ತರದಲ್ಲಿ ಯಾವುದೇ ಈತರ ಧ್ವಜವನ್ನು ಹಾರಾಡಿಸುವಂತಿಲ್ಲ.

ಎಲ್ಲರೂ ರಾಷ್ಟ್ರಧ್ವಜ ಹಾರಿಸಬಹುದೇ?

ಭಾರತೀಯ ಪ್ರಜೆಯಾಗಿರುವ ಯಾವುದೇ ನಾಗರಿಕ, ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಬರದಂತೆ ಧ್ವಜವನ್ನು ಹಾರಾಡಿಸುವ ಹಕ್ಕನ್ನು ಹೊಂದಿದ್ದಾನೆ/ಳೆ. ಈ ಕುರಿತು ಸ್ವಾರಸ್ಯಕರವಾದ ಒಂದು ಕಾನೂನು ಹೋರಾಟ ಉದ್ಯಮಿ, ಮಾಜಿ ಕಾಂಗ್ರೆಸ್‌ ಸಂಸದ ನವೀನ್‌ಕುಮಾರ್‌ ಜಿಂದಾಲ್‌ ಮತ್ತು ಭಾರತ ಸರ್ಕಾರದ ನಡುವೆ ನಡೆದಿತ್ತು. 1995ರಲ್ಲಿ, ನವೀನ್‌ ಜಿಂದಾಲ್‌ ತಮ್ಮ ಫ್ಯಾಕ್ಟರಿಯ ಮೇಲೆ ರಾಷ್ಟ್ರಧ್ವಜ ನಿಲ್ಲಿಸಲು ಮುಂದಾದರು. ಆದರೆ ಹಾಗೆ ಮಾಡುವಂತಿಲ್ಲ ಎಂದು ಅಧಿಕಾರಿಗಳು ಅವರನ್ನು ತಡೆದರು. ಇದನ್ನು ವಿರೋಧಿಸಿ ಜಿಂದಾಲ್‌ ಅವರು ಕೋರ್ಟಿಗೆ ಹೋದರು.

ಜಿಂದಾಲ್‌ ಅವರ ವಾದವನ್ನು ಹೈಕೋರ್ಟ್‌ ಎತ್ತಿಹಿಡಿಯಿತು. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಹೋಯಿತು. ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ವಾದವನ್ನು ತಳ್ಳಿಹಾಕಲಾಯಿತು. ರಾಷ್ಟ್ರಧ್ವಜವನ್ನು ಹಾರಾಡಿಸುವುದು ಪ್ರಜೆಗೆ ದೇಶದ ಮೇಲಿರುವ ಪ್ರೀತಿ ಅಭಿಮಾನದ ದ್ಯೋತಕ. ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಿದ್ದಾರೆ. ಹಾಗೆಯೇ ಎಲ್ಲರಿಗೂ ರಾಷ್ಟ್ರಧ್ವಜ ಹಾರಿಸುವ ಹಕ್ಕೂ ಇದೆ. ರಾಷ್ಟ್ರಲಾಂಛನ, ಧ್ವಜಕ್ಕೆ ಅವಮಾನ- ಅಗೌರವವಾಗದಂತೆ ಅದನ್ನು ಹಾರಿಸುವ ಹಕ್ಕು ಇದೆ ಎಂದು ಕೋರ್ಟ್‌ ಹೇಳಿತು. ಸಂವಿಧಾನದ 19(1)(a) ಆರ್ಟಿಕಲ್‌ ಅಡಿಯಲ್ಲಿ ಈ ಹಕ್ಕು ಇದೆ ಎಂದು ಸಾರಿತು.

ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ | ಪ್ರತಿದಿನ 1.5 ಲಕ್ಷ ಧ್ವಜ ತಯಾರಿಸುವ ʻಬಾವುಟದ ಮಾಮʼ

ಇದೇ ಸಂದರ್ಭದಲ್ಲಿ ಧ್ವಜಸಂಹಿತೆಯು ಒಂದು ಕಾಯಿದೆಯಲ್ಲ, ಅದೊಂದು ಮಾರ್ಗದರ್ಶಿ ಎಂದು ಸಾರಿತು. ಉಳಿದಂತೆ, ಯಾವುದೇ ರಾಷ್ಟ್ರಲಾಂಛನಕ್ಕೆ ಅಗೌರವ ಮಾಡದಿರುವ ನಿಯಮವು ಧ್ವಜಕ್ಕೂ ಅನ್ವಯವಾಗುತ್ತದೆ.

ತ್ರಿವರ್ಣಧ್ವಜ ಬೆಳೆದುಬಂದ ಬಗೆ

ಮೊತ್ತಮೊದಲ ಭಾರತೀಯ ರಾಷ್ಟ್ರಧ್ವಜವನ್ನು ಸಿಸ್ಟರ್‌ ನಿವೇದಿತಾ ಅವರು ರೂಪಿಸಿದರೆಂದು ಹೇಳಲಾಗುತ್ತದೆ. ಇವರು ಐರಿಶ್‌ ಮೂಲದ, ಸ್ವಾಮಿ ವಿವೇಕಾನಂದರ ಶಿಷ್ಯೆ. 1906ರ ಆಗಸ್ಟ್‌ 7ರಂದು ಕೋಲ್ಕೊತ್ತಾದ ಪಾರ್ಸೀ ಬಗಾನ್‌ ಚೌಕದಲ್ಲಿ ಮೊದಲು ಹಾರಿಸಲಾದ ಧ್ವಜವನ್ನು ಸ್ವಾತಂತ್ರ್ಯ ಹೋರಾಟಗಾರ ಸಚೀಂದ್ರ ಪ್ರಸಾದ್‌ ಬೋಸ್‌ ಮತ್ತು ಹೇಮಚಂದ್ರ ಕನುಗೊ ತಯಾರಿಸಿದ್ದರು. ಯಿತು ಎನ್ನುತ್ತಾರೆ. ಇದರಲ್ಲಿ ಮೇಲಿನಿಂದ ಕೆಳಕ್ಕೆ ಹಸಿರು, ಹಳದಿ ಮತ್ತು ಕೆಂಪು ಪಟ್ಟಿಗಳಿದ್ದು, ಮಧ್ಯದ ಹಳದಿ ಪಟ್ಟಿಯಲ್ಲಿ ʼವಂದೇ ಮಾತರಂʼ ಬರೆದಿತ್ತು. ಮೇಲಿನ ಹಸಿರು ಪಟ್ಟಿಯಲ್ಲಿ ಎಂಟು ತಾವರೆ ಹೂಗಳು, ಕೆಳಗಿನ ಕೆಂಪು ಪಟ್ಟಿಯಲ್ಲಿ ಸೂರ್ಯ ಚಂದ್ರರು ಇದ್ದರು.

1907ರಲ್ಲಿ ಮೇಡಂ ಕಾಮಾ ಮತ್ತಿತರ ಕ್ರಾಂತಿಕಾರಿಗಳು ಜರ್ಮನಿಯಲ್ಲಿ ಒಂದು ಧ್ವಜವನ್ನು ಪ್ರದರ್ಶಿಸಿದರು. ಇದು ವಿದೇಶಿ ನೆಲದಲ್ಲಿ ಪ್ರದರ್ಶಿಸಿದ ಮೊದಲ ಭಾರತೀಯ ಧ್ವಜ. 1917ರಲ್ಲಿ ಆನಿಬೆಸೆಂಟ್‌ ಮತ್ತು ಲೋಕಮಾನ್ಯ ತಿಲಕರು ಹೋಂರೂಲ್‌ ಚಳವಳಿಗಾಗಿ ಒಂದು ಧ್ವಜವನ್ನು ಅಳವಡಿಸಿಕೊಂಡರು. ಇದರಲ್ಲಿ ಮೇಲಿನಿಂದ ಕೆಳಕ್ಕೆ ಐದು ಕೆಂಪು ಹಾಗೂ ನಾಲ್ಕು ಹಸಿರು ಅಡ್ಡಪಟ್ಟಿಗಳು, ಮೇಲಿನ ಎಡತುದಿಯಲ್ಲಿ ಯೂನಿಯನ್‌ ಜ್ಯಾಕ್‌ ಧ್ವಜ, ಬಲತುದಿಯಲ್ಲಿ ಸೂರ್ಯಚಂದ್ರ, ಕೆಳಗೆ ಸಪ್ತರ್ಷಿ ಪ್ರತೀಕವಾಗಿ ಏಳು ನಕ್ಷತ್ರಗಳಿದ್ದವು.

ಪಿಂಗಳಿ ವೆಂಕಯ್ಯ

ನಾವು ಇಂದು ವಂದಿಸುವ ಧ್ವಜದ ವಿನ್ಯಾಸವನ್ನು ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ. ಇವರು 1899-1902ರ ಅವಧಿಯಲ್ಲಿ ದಕ್ಷಿಣ ಆಫ್ರಿಕದಲ್ಲಿ ಮಹಾತ್ಮ ಗಾಂಧಿ ಅವರನ್ನು ಭೇಟಿಯಾದರು. ಆಗ ಅವರು ಬ್ರಿಟಿಷ್‌ ಇಂಡಿಯನ್‌ ಆರ್ಮಿಯಲ್ಲಿದ್ದರು. 1916ರಲ್ಲಿ ಇವರು ಭಾರತೀಯ ಧ್ವಜಕ್ಕೆ ವಿನ್ಯಾಸಗಳಿಗೆ ಸಂಬಂಧಿಸಿ ಒಂದು ಪುಸ್ತಕವನ್ನೂ ಬರೆದರು. 1921ರಲ್ಲಿ ಬೆಜವಾಡದಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಮತ್ತೆ ಗಾಂಧಿಯವರನ್ನು ಭೇಟಿಯಾದ ವೆಂಕಯ್ಯ, ಒಂದು ಧ್ವಜದ ವಿನ್ಯಾಸವನ್ನು ಅವರ ಮುಂದಿಟ್ಟರು. ಹಿಂದು ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವಂತೆ ಅದರಲ್ಲಿ ಎರಡು ಕೆಂಪು ಮತ್ತು ಹಸಿರು ಪಟ್ಟಿಗಳಿದ್ದವು. ದೇಶದ ಪ್ರಗತಿಪಥವನ್ನು ಸೂಚಿಸಲು ಚರಕದ ಚಕ್ರ, ದೇಶದಲ್ಲಿರುವ ಇತರ ಸಮುದಾಯಗಳು ಮತ್ತು ಶಾಂತಿಯನ್ನು ಪ್ರತಿನಿಧಿಸುವ ಬಿಳಿಯ ಬಣ್ಣವನ್ನು ಧ್ವಜದಲ್ಲಿ ಅಳವಡಿಸುವಂತೆ ಗಾಂಧಿಯವರು ಸೂಚಿಸಿದರು.

ನಂತರ ಒಂದೊಂದಾಗಿ ಈ ವಿನ್ಯಾಸದಲ್ಲಿ ಹಲವು ಮಾರ್ಪಾಡುಗಳಾದವು. 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ತ್ರಿವರ್ಣಧ್ವಜವನ್ನು ಅಂಗೀಕರಿಸಲಾಯಿತು. ಕೆಂಪಿನ ಬದಲು ಕೇಸರಿಯನ್ನು ಅಳವಡಿಸಲಾಯಿತು. ಬಣ್ಣಗಳ ಪ್ರಾತಿನಿಧ್ಯದಲ್ಲಿ ವ್ಯತ್ಯಾಸವಾಯಿತು. ಚರಕದ ಚಕ್ರದ ಜಾಗದಲ್ಲಿ ಸಾರಾನಾಥ ಸ್ತಂಭದಲ್ಲಿರುವ ಅಶೋಕಚಕ್ರವನ್ನು ಅಳವಡಿಸಲಾಯಿತು.

ಧ್ವಜ ಪ್ರತಿನಿಧಿಸುವುದೇನು?

ತ್ರಿವರ್ಣಧ್ವಜ ಬಣ್ಣಗಳು, ಚಕ್ರ ಇತ್ಯಾದಿ ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಬಾಲ್ಯದಿಂದಲೂ ನಾವು ಆಲಿಸುತ್ತ ಬಂದಿದ್ದೇವೆ. ಆದರೆ ಇದರ ಬಗ್ಗೆ ಸ್ಪಷ್ಟ ಕಲ್ಪನೆಗಳು ಕಡಿಮೆ. ಇವುಗಳ ಸಾಂಕೇತಿಕತೆಯ ವಿವರ ಇಲ್ಲಿದೆ.

ಧ್ವಜದ ಹೆಸರು ತಿರಂಗಾ- ಆದರೂ ಇದರಲ್ಲಿ ನಾಲ್ಕು ಬಣ್ಣಗಳಿವೆ. ಕೇಸರಿ, ಬಿಳಿ, ಹಸಿರು ಮತ್ತು ಅಶೋಕಚಕ್ರದಲ್ಲಿ ನೀಲಿ. ಧೈರ್ಯ, ಹೋರಾಟ, ತ್ಯಾಗದ ಪ್ರತೀಕವಾಗಿ ಕೇಸರಿ. ಶುದ್ಧತೆ, ಶಾಂತಿಯ ಪ್ರತೀಕವಾಗಿ ಬಿಳಿ. ಕೃಷಿ, ಬೆಳವಣಿಗೆ, ಭರವಸೆಯ ಸಂಕೇತವಾಗಿ ಹಸಿರು. ದೇಶದ ಪ್ರಗತಿಯ ಸೂಚಕವಾಗಿ ಅಶೋಕಚಕ್ರ ಹಾಗೂ ಅದರ ನೀಲಿ.

ಇದನ್ನೂ ಓದಿ: Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ

Exit mobile version