Site icon Vistara News

ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ವಿಶ್ವಾದ್ಯಂತ ತೆರೆಗೆ

the kerala story1

ʼದಿ ಕೇರಳ ಸ್ಟೋರಿʼ (The Kerala story)‌ ಎಂಬ ಸಿನಿಮಾದ ಟ್ರೇಲರ್‌ ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿದೆ. ಆಗಲೇ ಪರ ವಿರೋಧ ಸೆಣಸಾಟ ಶುರುವಾಗಿದೆ. ಇದು ಇನ್ನೊಂದು ʼದಿ ಕಾಶ್ಮೀರ್‌ ಫೈಲ್ಸ್‌ʼ (The Kashmir Files) ಆಗಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಬಿಜೆಪಿ, ಹಿಂದೂ ಸಂಘಟನೆಗಳ ಪ್ರಮುಖರು ಈ ಸಿನಿಮಾವನ್ನು ಸ್ವಾಗತಿಸಿದ್ದಾರೆ. ʼʼಇದು ಕೇರಳದ ವಸ್ತುಸ್ಥಿತಿ ಬಿಂಬಿಸುವ ಚಿತ್ರʼʼ ಎಂದು ಅವರು ಹೇಳುತ್ತಿದ್ದಾರೆ. ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಕಿಡಿ ಕಾರಿವೆ. ʼʼಇದು ಕೇರಳವನ್ನೂ, ಮುಸ್ಲಿಂ ಸಮುದಾಯವನ್ನೂ ಕೆಟ್ಟದಾಗಿ ಚಿತ್ರಿಸುತ್ತಿದೆʼʼ ಎಂದು ಟೀಕಿಸಿದ್ದಾರೆ. ಹಾಗಿದ್ದರೆ ಸತ್ಯ ಏನು? ಏನಿದು ಕೇರಳ ಸ್ಟೋರಿ?

ತಮಿಳುನಾಡಿನ ಪತ್ರಕರ್ತರೊಬ್ಬರು ಈ ಟ್ರೇಲರ್‌ ಬಗ್ಗೆ ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದು, ಅವರ ಆದೇಶದಂತೆ ತಿರುವನಂತಪುರಂ ಪೊಲೀಸರು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ದಿ ಕೇರಳ ಸ್ಟೋರಿ?

ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಎಂದು ಚಿತ್ರ ತಯಾರಕರು ಹೇಳಿಕೊಂಡಿರುವ ʼದಿ ಕೇರಳ ಸ್ಟೋರಿʼ ಎಂಬ ಸಿನಿಮಾ ಮೇ 5ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ ಏಪ್ರಿಲ್ 26ರಂದು ಬಿಡುಗಡೆ ಮಾಡಲಾಯಿತು. 2.45 ನಿಮಿಷದ ಈ ಟ್ರೇಲರ್‌ ಈಗ ಕಿಡಿ ಹಚ್ಚಿದೆ.

ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ ಎಂಬ ಸುಳಿವನ್ನು ಟ್ರೇಲರ್‌ ಬಿಟ್ಟುಕೊಟ್ಟಿದೆ. ಕೇರಳದ ಹಿಂದೂ ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.

“ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್. ನಾನು ನರ್ಸ್ ಆಗಿ ಜನರಿಗೆ ಸಹಾಯ ಮಾಡಲು ಬಯಸಿದ್ದೆ. ಈಗ ನಾನು ಫಾತಿಮಾ ಆಗಿದ್ದೇನೆ. ಆಫ್ಘಾನಿಸ್ತಾನದ ಜೈಲಿನಲ್ಲಿರುವ ಐಎಸ್ ಭಯೋತ್ಪಾದಕಿ. ನಾನು ಒಬ್ಬಂಟಿಯಲ್ಲ. ನನ್ನಂತೆ ಇನ್ನೂ 32,000 ಹುಡುಗಿಯರು ಮತಾಂತರಗೊಂಡಿದ್ದಾರೆ. ಸಿರಿಯಾ ಮತ್ತು ಯೆಮೆನ್‌ನಲ್ಲಿ ಸೆರೆಮನೆಯಲ್ಲಿದ್ದಾರೆ. ಮುಸ್ಲಿಮೇತರ ಹೆಣ್ಣುಮಕ್ಕಳನ್ನು ಮರುಳುಗೊಳಿಸಿ ಭಯೋತ್ಪಾದಕಿಯರನ್ನಾಗಿ ಮಾಡುವ ಅಪಾಯಕಾರಿ ಪ್ರಕ್ರಿಯೆ ಕೇರಳದಲ್ಲಿ ನಡೆಯುತ್ತಿದೆ. ಇದನ್ನು ಯಾರೂ ತಡೆಯುತ್ತಿಲ್ಲʼʼ ಎಂದು ಟ್ರೇಲರ್‌ನ ಶಾಲಿನಿ ಅಲಿಯಾಸ್‌ ಫಾತಿಮಾ ಪಾತ್ರ ಹೇಳಿಕೊಂಡಿದೆ. ಈ ಪಾತ್ರವನ್ನು ನಟಿ ಆದಾ ಶರ್ಮಾ ಮಾಡಿದ್ದಾರೆ.

ಈ ಸಿನಿಮಾ ನಿರ್ದೇಶಕರು ಯಾರು?

ಸುದೀಪ್ತೊ ಸೇನ್

ʼದಿ ಕೇರಳ ಸ್ಟೋರಿʼಯ ನಿರ್ದೇಶಕ ಸುದೀಪ್ತೋ ಸೇನ್. ಆಸ್ಮಾ (2018), ಲಕ್ನೋ ಟೈಮ್ಸ್ (2015) ಮತ್ತು ದಿ ಲಾಸ್ಟ್ ಮಾಂಕ್ (2006) ಅವರ ಕೆಲವು ಸಿನಿಮಾಗಳು. ಇದಕ್ಕೂ ಮುನ್ನ ಅವರು ಏಪ್ರಿಲ್ 2018ರಲ್ಲಿ ಮಾಡಿದ ʼಇನ್ ದಿ ನೇಮ್ ಆಫ್ ಲವ್ʼ ಎಂಬ ಡಾಕ್ಯುಮೆಂಟರಿಯಲ್ಲೂ ಕೇರಳದಲ್ಲಿ ಮಹಿಳೆಯರ ಅಕ್ರಮ ಧಾರ್ಮಿಕ ಮತಾಂತರ ನಡೆಸಲಾಗುತ್ತಿದೆ ಎಂದು ಹೇಳಲಾಗಿತ್ತು. ಒಂದು ಗಂಟೆ ಅವಧಿಯ ಈ ಸಾಕ್ಷ್ಯಚಿತ್ರ ವಿವಾದಕ್ಕೀಡಾಗಿತ್ತು. ಸಾವಿರಾರು ಹೆಣ್ಣುಮಕ್ಕಳನ್ನು ಮತಾಂತರಗೊಳಿಸಿ ವಿದೇಶಕ್ಕೆ ಸಾಗಿಸಿದ ರೀತಿಯನ್ನು ಬಯಲಿಗೆಳೆಯುವುದು ತನ್ನ ದೇಶಭಕ್ತಿಯ ಕರ್ತವ್ಯ ಎಂದು ಸೇನ್ ಹೇಳಿದ್ದಾರೆ. ಸುದೀಪ್ತೋ ಸೇನ್ ಸ್ವಘೋಷಿತ ಕಮ್ಯುನಿಸಂ ವಿರೋಧಿ.

ನಿರ್ಮಾಪಕರು ಯಾರು?

ವಿಪುಲ್‌ ಶಾ

ಕೇರಳ ಸ್ಟೋರಿಯನ್ನು ನಿರ್ಮಿಸಿದವರು ವಿಪುಲ್ ಅಮೃತಲಾಲ್ ಶಾ ಅವರ ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್‌. ಇವರು ಕೆಲವು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ಹೆಚ್ಚಾಗಿ ಪೊಲೀಸ್, ಭಾರತೀಯ ಸೇನೆ, ರಾ ಏಜೆಂಟ್‌ಗಳು ಮತ್ತು ಭಯೋತ್ಪಾದಕರ ಸುತ್ತ ಕೇಂದ್ರೀಕೃತವಾಗಿರುವ ಕಥೆಗಳನ್ನು ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ʼಹಾಲಿಡೇʼ, ಜಾನ್ ಅಬ್ರಹಾಂ ಮತ್ತು ಸೋನಾಕ್ಷಿ ಸಿನ್ಹಾ ನಟನೆಯ ʼಫೋರ್ಸ್ 2ʼ ವಿದ್ಯುತ್ ಜಮ್ವಾಲ್ ನಾಯಕತ್ವದ ʼಕಮಾಂಡೋʼ ಫ್ರಾಂಚೈಸ್ ಅವುಗಳಲ್ಲಿ ಕೆಲವು. 2012ರಲ್ಲಿ ಇವರು ತಯಾರಿಸಿದ ʼದಿ ಡರ್ಟಿ ಪಿಕ್ಚರ್‌ʼಗೆ ನೀಡಲಾದ ಸೆನ್ಸಾರ್‌ ಪ್ರಮಾಣಪತ್ರದ ಬಗ್ಗೆ ಇವರು ತಗಾದೆ ಎತ್ತಿದ್ದರು.

ನಿರ್ಮಾಪಕರು ಹೇಳುವುದೇನು?

“ದಿ ಕೇರಳ ಸ್ಟೋರಿಯು, ಮತಾಂತರಗೊಂಡು ಸಿರಿಯಾಕ್ಕೆ ಹೋದ ಹುಡುಗಿಯ ನೈಜ ಕಥೆಯನ್ನು ಆಧರಿಸಿದೆ. ಅರ್ಧದಾರಿಯಲ್ಲಿಯೇ ತಾನು ಮಾಡಿದ್ದು ತಪ್ಪು ಎಂದು ತಿಳಿದು ಆಕೆ ಪರಾರಿಯಾದಳು. ಇಂದು ಆಕೆ ಆಫ್ಘಾನಿಸ್ತಾನದ ಜೈಲಿನಲ್ಲಿದ್ದಾಳೆ. ಆಫ್ಘಾನಿಸ್ತಾನದ ಜೈಲುಗಳಲ್ಲಿ ಹೀಗೆ ಭಾರತದ ಅನೇಕ ಹುಡುಗಿಯರಿದ್ದಾರೆ. ಕನಿಷ್ಠ ನಾಲ್ವರ ಬಗ್ಗೆ ದಾಖಲೆ ಇದೆ. ಹೀಗೆ ನಾವು ಇದರ ಬಗ್ಗೆ ತಿಳಿದುಕೊಂಡು, ನಮ್ಮದೇ ಆದ ಸಂಶೋಧನೆ ಮಾಡಿ, ಅದರ ಆಧಾರದಲ್ಲಿ ಚಿತ್ರ ಮಾಡಿದ್ದೇವೆ. ಈ ಚಲನಚಿತ್ರ ಅಂಥ ಮರುಳಾಗಿಸುವ ಮತಾಂತರಕ್ಕೆ ಬಲಿಯಾದ ಮೂವರು ಹುಡುಗಿಯರ ಕಥೆ. ನಾವು ಹೆಚ್ಚು ರಿಸರ್ಚ್‌ ಮಾಡಿದಂತೆ ಇಂಥವರ ಸಂಖ್ಯೆ ತುಂಬಾ ದೊಡ್ಡದಾಗಿದೆ ಎಂದು ಗೊತ್ತಾಯಿತು. ಇಂಥ ಕನಿಷ್ಠ 100ಕ್ಕೂ ಹೆಚ್ಚು ಹುಡುಗಿಯರನ್ನು ಭೇಟಿಯಾದೆವು. ಇದು ದೊಡ್ಡ ಸಮಸ್ಯೆ. ನಾವು ಪೂರ್ಣ ಪ್ರಾಮಾಣಿಕತೆ ಮತ್ತು ಸಂಪೂರ್ಣ ಸತ್ಯದೊಂದಿಗೆ ಈ ಕಥೆಯನ್ನು ಹೇಳಿದ್ದೇವೆʼʼ ಎಂದು ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಹೇಳಿದ್ದಾರೆ.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬರಲು ಬಿಡಬೇಡಿ: ಕಾಂಗ್ರೆಸ್‌ ಹುಯಿಲು

ಕೇರಳ ಸ್ಟೋರಿಗೆ ಬಿಜೆಪಿ ಬೆಂಬಲ

ʼದಿ ಕೇರಳ ಸ್ಟೋರಿʼಯ ಬಗ್ಗೆ ಬಿಜೆಪಿಗಂತೂ ಸಿಕ್ಕಾಪಟ್ಟೆ ಖುಷಿಯಾಗಿದೆ. ಟೀಸರ್ ರಿಲೀಸ್ ಆದ ನಂತರ ಬಿಜೆಪಿಯ ಪ್ರಮುಖರು ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿ, “ಕೇರಳ ಸ್ಟೋರಿ ಚಿತ್ರದ ಟೀಸರ್‌ಗೆ ಎದುರಾಗಿರುವ ವಿರೋಧವೇ ಕೇರಳದ ಪ್ರಬಲ ಶಕ್ತಿಗಳು ಸತ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಿಸಿವೆ. ಈ ಸಂಖ್ಯೆಯ ಸತ್ಯಾಸತ್ಯತೆ ಪರಿಶೀಲಿಸಲು ಕೇರಳ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಸತ್ಯ ಹೊರಬರುವುದು ಯಾರಿಗೋ ಇಷ್ಟವಿಲ್ಲ, ಅವರು ಯಾರು?” ಎಂದು ಪ್ರಶ್ನಿಸಿದ್ದಾರೆ.

“ಇಸ್ಲಾಮಿಕ್ ಮೂಲಭೂತವಾದ, ಲವ್ ಜಿಹಾದ್ ಮತ್ತು ಐಸಿಸ್ ಸೇರ್ಪಡೆಯನ್ನು ತಡೆಯಲು ವಿಫಲವಾಗಿರುವ ಕೇರಳ ಸರ್ಕಾರ “ದಿ ಕೇರಳ ಸ್ಟೋರಿ” ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ” ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್‌ ಟೀಕಿಸಿದ್ದಾರೆ.‌

ಚಿತ್ರದ ನಿಷೇಧಕ್ಕೆ ಒತ್ತಾಯ

ಚಿತ್ರವನ್ನು ನಿಷೇಧಿಸುವಂತೆ ಕಾಂಗ್ರೆಸ್, ಎಡಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ. ʼʼಈ ಟ್ರೇಲರ್‌ ಕೇರಳ ರಾಜ್ಯವನ್ನು ಹಾಗೂ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸಿದೆ. ಇಲ್ಲಿನ ಮುಸ್ಲಿಂ ಸಮುದಾಯದ ಪುರುಷರನ್ನು, ಐಸಿಸ್‌ಗೆ ಹಿಂದೂ ಯುವತಿಯರನ್ನು ರಿಕ್ರೂಟ್‌ ಮಾಡುವವರಂತೆ ಕಾಣಿಸಲಾಗಿದೆ. ಕೇರಳದಲ್ಲಿ ಈ ಪ್ರಮಾಣದ ಮತಾಂತರ, ಐಸಿಸ್‌ ಸೇರ್ಪಡೆ ನಡೆಯುತ್ತಿರುವುದಕ್ಕೆ ಪೊಲೀಸರ ಬಳಿಯಾಗಲೀ, ಕೇಂದ್ರ ಬೇಹುಗಾರಿಕೆ ಇಲಾಖೆ ಬಳಿಯಾಗಲೀ ಯಾವುದೇ ದಾಖಲೆಗಳಿಲ್ಲ. ಇದು ಮುಸ್ಲಿಂ ಸಮುದಾಯವನ್ನು ವಿಲನ್‌ ಆಗಿ ಚಿತ್ರಿಸುವ ಸಂಘ ಪರಿವಾರದ ಅಜೆಂಡಾ. ಆದ್ದರಿಂದ ಈ ಚಿತ್ರವನ್ನು ನಿಷೇಧಿಸಬೇಕುʼʼ ಎಂದು ಕಾಂಗ್ರೆಸ್‌, ಮುಸ್ಲಿಂ ಲೀಗ್‌, ಸಿಪಿಐ, ಸಿಪಿಎಂನ ಹಲವು ಮುಖಂಡರು ಮುಖ್ಯಮಂತ್ರಿಗೆ ಮೊರೆಯಿಟ್ಟಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ಉಚಿತ, ಉಚಿತ, ಉಚಿತ; ಖಜಾನೆಗೆ ತೂತು ಖಚಿತ!

32,000 ಯುವತಿಯರು ಮತಾಂತರಗೊಂಡಿರುವುದು ನಿಜವೆ?

2021ರಲ್ಲಿ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಕೇರಳ ಅಸೆಂಬ್ಲಿಗೆ ನೀಡಿದ ಅಂಕಿಅಂಶಗಳ ಆಧಾರದ ಮೇಲೆಯೇ ಈ ಸಂಖ್ಯೆಯನ್ನು (32,000) ಉಲ್ಲೇಖಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ವಿಪುಲ್‌ ಹೇಳಿದ್ದಾರೆ. ಆದರೆ ಸೆಪ್ಟೆಂಬರ್ 2012ರಲ್ಲಿ ಪ್ರಕಟವಾದ ʼಇಂಡಿಯಾ ಟುಡೆʼ ವರದಿಯ ಪ್ರಕಾರ, 2006ರಿಂದ 2012ರವರೆಗೆ ರಾಜ್ಯದಲ್ಲಿ 2,667 ಯುವತಿಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಚಾಂಡಿ ಹೇಳಿದ್ದರು.

ಕೇರಳದಲ್ಲಿ ಲವ್ ಜಿಹಾದ್ ನಿಜವೆ?

ಕೇರಳದಲ್ಲಿ ʼಲವ್‌ ಜಿಹಾದ್‌ʼ (love jihad) ನಡೆಯುತ್ತಿದೆ ಎಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕಳೆದ ಒಂದು ದಶಕದಿಂದಲೂ ಆರೋಪಿಸುತ್ತ ಬಂದಿವೆ. ಹರಿಯಾಣ, ಮಧ್ಯಪ್ರದೇಶ ಹಾಗೂ ಕರ್ನಾಟಕ ಸರ್ಕಾರಗಳು ʼಲವ್‌ ಜಿಹಾದ್‌ʼ ವಿರುದ್‌ ಕಾನೂನು ತರುವುದಾಗಿ ಹೇಳುತ್ತ ಬಂದಿವೆ. ಆದರೆ, 2020ರ ಫೆಬ್ರವರಿಯಲ್ಲಿ, ಬಿಜೆಪಿ ನಾಯಕ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ತಿಳಿಸಿದ ಪ್ರಕಾರ, ʼʼಲವ್ ಜಿಹಾದ್ ಪದವನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಲವ್ ಜಿಹಾದ್‌ನ ಎಂಬಂತಹ ಯಾವುದೇ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿ ವರದಿ ಮಾಡಿಲ್ಲ.ʼʼ

ಆದರೆ ಕೇರಳದ ಕೆಲವು ಯುವತಿಯರು ಐಸಿಸ್‌ ಸೇರಿರುವುದಂತೂ ನಿಜ. ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ಮೆರಿನ್ ಜೇಕಬ್ ಅಲಿಯಾಸ್ ಮರಿಯಮ್, ನಿಮಿಷಾ ಅಲಿಯಾಸ್ ಫಾತಿಮಾ, ಇಸಾ ರಫೆಲಾ- ಈ ನಾಲ್ವರು ಕೇರಳದ ಯುವತಿಯರು ಸದ್ಯ ಆಫ್ಘನ್‌ ಜೈಲಿನಲ್ಲಿದ್ದಾರೆ. ಇವರಲ್ಲಿ ಕೆಲವರು ಕ್ರಿಶ್ಚಿಯನ್ ಮತ್ತು ಒಬ್ಬಾಕೆ ಹಿಂದೂ ಮೂಲದವಳು. ಕೇರಳದಲ್ಲಿ ಮೂಲಭೂತವಾದದ ಬೋಧನೆ ಪಡೆದಿದ್ದರು. 2016ರಲ್ಲಿ ತಮ್ಮ ಗಂಡಂದಿರೊಂದಿಗೆ ಆಫ್ಘಾನಿಸ್ತಾನಕ್ಕೆ ಓಡಿಹೋಗಿ ಐಸಿಸ್ ಸೇರ್ಪಡೆಯಾಗಿದ್ದರು. ಈ ನಾಲ್ವರ ಗಂಡಂದಿರೂ ಐಎಸ್ಎಸ್‌ ವಿರುದ್ಧದ ಆಫ್ಘಾನ್- ಯುಎಸ್ ಸೇನಾದಾಳಿಗಳಲ್ಲಿ ಸಾವನ್ನಪ್ಪಿದ್ದರು. ನಂತರು ಇವರು ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಮರಳಲು ಬಯಸಿದ್ದರು; ಆದರೆ ಭಾರತ ಸರ್ಕಾರ ಇವರನ್ನು ಕರೆಸಿಕೊಳ್ಳಲು ಮುಂದಾಗಿಲ್ಲ. 2021ರಲ್ಲಿ ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇವರು ಕಾಬೂಲ್‌ನ ಜೈಲಿನಲ್ಲಿದ್ದಾರೆ ಎಂದು ಊಹಿಸಲಾಗಿದೆ.

ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC-ಸೆನ್ಸಾರ್​ ಮಂಡಳಿ-Censor Board) ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ (A certificate To The Kerala Story)​ ಕೊಟ್ಟಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರ ಸಂದರ್ಶನದ ದೃಶ್ಯವೂ ಸೇರಿ 10 ದೃಶ್ಯಗಳನ್ನು ತೆಗೆದುಹಾಕಲಾಗಿದೆ.

‘ಎಲ್ಲ ಹಿಂದು ದೇವತೆಗಳನ್ನು ಅನುಚಿತವಾಗಿ ಉಲ್ಲೇಖಿಸಿ ಬರೆದ ಸಂಭಾಷಣೆಗಳನ್ನೂ ಸೆನ್ಸಾರ್ ಮಂಡಳಿ ತೆಗೆದಿದೆ. ಅಷ್ಟೇ ಅಲ್ಲ, ಭಾರತದಲ್ಲಿರುವ ಎಲ್ಲ ಕಮ್ಯೂನಿಸ್ಟ್​ಗಳೂ ದೊಡ್ಡ ಕಪಟಿಗಳು ಎಂದು ಹೇಳಿರುವ ಒಂದು ಡೈಲಾಗ್​​ನಲ್ಲಿರುವ ಭಾರತೀಯರು (Indians) ಎಂಬ ಶಬ್ದವನ್ನು ಡಿಲೀಟ್ ಮಾಡಲಾಗಿದೆ. ವಿವಾದ ಸೃಷ್ಟಿಸುವ ಹಲವು ಸಂಭಾಷಣೆ ಮತ್ತು ದೃಶ್ಯಗಳು ಸಿನಿಮಾದಿಂದ ಕತ್ತರಿಸಲ್ಪಟ್ಟಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಸಿನಿಮಾದಲ್ಲಿ ಒಂದು ಟಿವಿ ಸಂದರ್ಶನದ ದೃಶ್ಯವಿತ್ತು. ಅದು ಮಾಧ್ಯಮವರು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಸಂದರ್ಶಿಸುವ ಚಿತ್ರಣ. ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರಿಸುವ ಆ ಮಾಜಿ ಸಿಎಂ ‘ಕೇರಳದಲ್ಲಿ ಯುವಜನರನ್ನು ದೊಡ್ಡಮಟ್ಟದಲ್ಲಿ ಇಸ್ಲಾಮ್​​ಗೆ ಮತಾಂತರಗೊಳಿಸಲಾಗುತ್ತಿದೆ. ಹೀಗಾಗಿ ಈ ರಾಜ್ಯ ಇನ್ನೆರಡು ದಶಕದಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗುತ್ತದೆ’ ಎಂದು ಹೇಳುತ್ತಾರೆ. ಆದರೆ ಈ ದೃಶ್ಯವನ್ನು ಸೆನ್ಸಾರ್​ ಮಂಡಳಿ ತೆಗೆಸಿದೆ. ಸಿನಿಮಾದಲ್ಲಿ ಈ ಟಿವಿ ಸಂದರ್ಶನದ ಚಿತ್ರಣ ಪ್ರಸಾರವಾಗಲೇಬಾರದು ಎಂದು ಆದೇಶಿಸಿದೆ.

ಇದನ್ನೂ ಓದಿ: ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?

Exit mobile version