ಕಾದಂಬರಿಗಳಲ್ಲಿ ಮ್ಯಾಜಿಕ್ ರಿಯಲಿಸಂ ಅನ್ನು ಚಿತ್ರಿಸಿದ ಲೇಖಕ ಸಲ್ಮಾನ್ ರಶ್ದಿ ಅವರಿಗೆ ರಿಯಾಲಿಟಿಯೇ ಶತ್ರುವಾಗಿದೆ. ಏಷ್ಯಾದ ಬಹು ದೊಡ್ಡ ಕಾದಂಬರಿಕಾರರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಸಲ್ಮಾನ್ ರಶ್ದಿ, ಮ್ಯಾನ್ ಬೂಕರ್ ಪ್ರಶಸ್ತಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬಹು ಬೇಡಿಕೆಯ ಲೇಖಕ. ಆದರೆ ತಮ್ಮ ಮುಸ್ಲಿಂ ಸಮುದಾಯದ ಒಂದು ವರ್ಗದಿಂದಲೇ ಜೀವಬೆದರಿಕೆ ಎದುರಿಸಿ, ಇಂದು ಚೂರಿ ಇರಿತಕ್ಕೂ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿ ಇದ್ದಾರೆ.
ಮತೀಯವಾದದ ಆತಂಕ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದಕ್ಕೆ ಬೆದರಿಕೆಯಾಗಿರುವ ತೀವ್ರವಾದಗಳು, ಸಾಹಿತ್ಯ ಮತ್ತು ಸೃಜನಶೀಲತೆಯ ವಿವಾದ- ಎಲ್ಲದರ ಅಪ್ಪಟ ಉದಾಹರಣೆಯಾಗಿ ಕಾಣಿಸುವವರು ರಶ್ದಿ.
ರಶ್ದಿಗೆ ಈಗ ನಮ್ಮ ʼಆಜಾದಿ ಕಾ ಅಮೃತ ಮಹೋತ್ಸವʼದಷ್ಟೇ ವಯಸ್ಸು. ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಮುಕ್ತಿ ದೊರೆತ ವರ್ಷವೇ ಅವರ ಜನನ. ವ್ಯಂಗ್ಯ ಎಂದರೆ, ಸಟಾನಿಕ್ ವರ್ಸಸ್ ಬರೆದಾಗ ಇರಾನ್‌ನ ಧಾರ್ಮಿಕ ಮುಖಂಡ ಅಯತೊಲ್ಲಾ ಖೊಮೇನಿ ವಿಧಿಸಿದ ತಲೆದಂಡದಿಂದ ತಪ್ಪಿಸಿಕೊಳ್ಳಲು ಅವರಿಗೆ ಆಶ್ರಯವನ್ನು ಬ್ರಿಟನ್ನೇ ನೀಡಬೇಕಾಯಿತು.
ಸಟಾನಿಕ್ ವರ್ಸಸ್ ತಂದಿಟ್ಟ ದಿಗಿಲು
1981ರಲ್ಲಿ ರಶ್ದಿ ಬರೆದ ʼಮಿಡ್‌ನೈಟ್ಸ್ ಚಿಲ್ಡ್ರನ್ʼ ಕೃತಿ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಮ್ಯಾನ್ ಬೂಕರ್ ಪುರಸ್ಕಾರ ಅದಕ್ಕೆ ದೊರೆಯಿತು. ಇದರ ನಂತರ 1988ರಲ್ಲಿ ಅವರ ʼಸಟಾನಿಕ್ ವರ್ಸಸ್ʼ ಬಂತು. ಇದು ಕೂಡ ಜನಪ್ರಿಯವಾಯಿತು. ʼಸಟಾನಿಕ್ ವರ್ಸಸ್ʼ ಎಂದರೆ ʻಸೈತಾನನ ಮಾತುಗಳುʼ ಎಂದರ್ಥ. ಇದರಲ್ಲಿ ಪ್ರವಾದಿ ಮುಹಮ್ಮದ್, ಮಕ್ಕಾ ಮುಂತಾದವುಗಳಿಗೆ ಸಂಬಂಧಿಸಿದ ವಿವರಗಳು, ಘಟನೆಗಳು ಇವೆ. ಮುಸ್ಲಿಂ ಸಮುದಾಯದ ಕರ್ಮಠವಾದಿಗಳು ಇದು ಧರ್ಮದ್ರೋಹಿ, ಪ್ರವಾದಿ ಮುಹಮ್ಮದರ ಅವಹೇಳನ ಎಂದು ಭಾವಿಸಿದರು. ಇರಾನ್‌ನಲ್ಲಿ ಕೃತಿ ನಿಷೇಧಿಸಲಾಯಿತು. ಇರಾನ್‌ನ ಧಾರ್ಮಿಕ ಗುರು ಅಯತೊಲ್ಲಾ ಖೊಮೇನಿ ʼʼರಶ್ದಿಯ ತಲೆ ಕತ್ತರಿಸಿ ತನ್ನಿʼʼ ಎಂದು ಹೇಳಿ, ಅಂಥವರಿಗೆ 28 ಲಕ್ಷ ಡಾಲರ್ ಬಹುಮಾನ ಘೋಷಿಸಿದ. ರಶ್ದಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಸಾಯುವವರು ಹುತಾತ್ಮರಾಗುತ್ತಾರೆ, ಸ್ವರ್ಗ ಪಡೆಯುತ್ತಾರೆ ಎಂದ.
ಇರಾನ್ ಸೇರಿದಂತೆ ಜಗತ್ತಿನ ಹಲವಾರು ಕಡೆ ರಶ್ದಿಗೆ ಪ್ರತಿಭಟನೆಗಳು ಎದುರಾದವು. ಹಿಂಸಾತ್ಮಕ ಗಲಭೆಗಳೂ ನಡೆದವು. ಮುಂಬಯಿಯಲ್ಲಿ ಗಲಭೆ ಶುರುವಾಗಿ ಸುಮಾರು 12 ಜನ ಸತ್ತರು. ರಶ್ದಿ ತಲೆ ಮರೆಸಿಕೊಳ್ಳಬೇಕಾಯಿತು. ಇದು ಅವರ ಬದುಕನ್ನೇ ಬದಲಾಯಿಸಿತು. ಮುಂದಿನ 13 ವರ್ಷಗಳ ಕಾಲ ರಶ್ದಿ ತಮ್ಮ ನಿಜ ಹೆಸರನ್ನು ಮರೆಮಾಚಿ, ʼʼಜೋಸೆಫ್ ಆಂಟನ್ʼ ಎಂಬ ಹೆಸರಿನಿಂದ ಬದುಕಬೇಕಾಯಿತು. ರಶ್ದಿ ದ್ವೇಷ ತೀವ್ರವಾಗಿದ್ದ ಆರಂಭದ 6 ತಿಂಗಳಲ್ಲಿ 56 ಬಾರಿ ಅವರು ತಮ್ಮ ನಿವಾಸವನ್ನು ಬದಲಾಯಿಸಬೇಕಾಯಿತು. ಈ ಸಂದರ್ಭದಲ್ಲಿ ಅವರು ಬ್ರಿಟನ್‌ನಲ್ಲಿ ಅಡಗಿಕೊಂಡರು. ನಂತರವೂ ಹೆಚ್ಚಾಗಿ ಅವರು ಮುಸ್ಲಿಂ ಜನಸಂಖ್ಯೆ ಕಡಿಮೆ ಇರುವ ಯುರೋಪಿನ ದೇಶಗಳಲ್ಲಿ ವಾಸಿಸಿದರು.
ಇದನ್ನೂ ಓದಿ: ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದವನು ಯಾರು?
ಅನುವಾದಕರ ಕೊಲೆ
ಸೆಟಾನಿಕ್ ವರ್ಸಸ್‌ನಿಂದಾಗಿ ತೊಂದರೆ ಅನುಭವಿಸಿದವರು ರಶ್ದಿ ಮಾತ್ರವಲ್ಲ. ವಾಸ್ತವವಾಗಿ ಅದರ ಅನುವಾದಕರೇ ಬಲಿಯಾಗಬೇಕಾಯಿತು. ಕೃತಿಯನ್ನು ಜಪಾನಿ ಭಾಷೆಗೆ ಅನುವಾದಿಸಿದ ಹಿತೋಷಿ ಇಗರಾಷಿ ಎಂಬ ಅನುವಾದಕನನ್ನು 1999ರಲ್ಲಿ ಟೋಕಿಯೋದ ತ್ಸುಕುಬಾ ಯೂನಿವರ್ಸಿಟಿಯ ಕ್ಯಾಂಪಸ್ ಒಳಗೆ ಯಾರೋ ಇರಿದು, ಕುತ್ತಿಗೆ ಕತ್ತರಿಸಿ ಸಾಯಿಸಿದರು. ಇದಕ್ಕೆ ಒಂದು ವಾರ ಮುನ್ನ, ಕೃತಿಯನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ ಎಟೋರ್ ಕ್ಯಾಪ್ರಿಲೋ ಎಂಬ ಲೇಖಕನಿಗೆ ದುಷ್ಕರ್ಮಿಗಳು ಇರಿದರು. 1993ರಲ್ಲಿ ಈ ಕೃತಿಯ ನಾರ್ವೇಜಿಯನ್ ಪ್ರಕಾಶಕ ವಿಲಿಯಂ ನ್ಯಾಗಾರ್ಡ್ ಅವರನ್ನು ಓಸ್ಲೋದ ಅವರ ಮನೆಯ ಹೊರಗಡೆ ಯಾರೋ ಗುಂಡಿಕ್ಕಿ ಗಾಯಗೊಳಿಸಿದರು.
1998ರಲ್ಲಿ ಇರಾನ್‌ನ ನಾಯಕ ಮೊಹಮ್ಮದ್ ಖತಾಮಿ ಅವರು, ರಶ್ದಿ ಅವರ ಮೇಲಿನ ಯಾವುದೇ ಹಲ್ಲೆ ಅಥವಾ ಕೊಲೆ ಯತ್ನವನ್ನು ತಾವು ಬೆಂಬಲಿಸುವುದಿಲ್ಲ ಎಂದರು. ಆದರೆ ರಶ್ದಿಯನ್ನು ಕೊಲ್ಲುವ ಸಂಚುಗಳು ಇಂದಿಗೂ ಮುಂದುವರಿದೇ ಇವೆ ಎಂಬುದನ್ನು ಪ್ರಸ್ತುತ ಘಟನೆ ಸಾಬೀತುಪಡಿಸಿದೆ. 2005ರ ಬಳಿಕ ಅವರು ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್‌ನಲ್ಲಿ ವಾಸಿಸತೊಡಗಿದರು.
ಜೀವದ ಮೇಲೆ ಬೆದರಿಕೆ ಇದ್ದರೂ ಸಲ್ಮಾನ್ ರಶ್ದಿ ಅವರು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರರಾಗಿಯೇ ಮುಂದುವರಿದರು. 2015ರಲ್ಲಿ ಪ್ರವಾದಿ ಬಗ್ಗೆ ವ್ಯಂಗ್ಯಚಿತ್ರ ಪ್ರಕಟಿಸಿದ ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ನಡೆದ ಮೂಲಭೂತವಾದಿಗಳ ದಾಳಿಯನ್ನು ರಶ್ದಿ ಪ್ರತಿಭಟಿಸಿದರು. ಇದಾದ ಬಳಿಕ ಅವರ ತಲೆಯ ಮೇಲಿದ್ದ ಬಹುಮಾನದ ಮೊತ್ತವೂ ಹೆಚ್ಚಿತು.
ತಮ್ಮ ಅಜ್ಞಾತವಾಸದ ದಿನಗಳನ್ನೇ ಆಧರಿಸಿ, ತಮ್ಮ ಗುಪ್ತನಾಮ ʻಜೋಸೆಫ್ ಆಂಟನ್ʼ ಎಂಬ ಹೆಸರಿನ ಅನುಭವ ಕಥನವನ್ನು ರಶ್ದಿ ಬರೆದರು. ಇತ್ತೀಚೆಗೆ Quichotte ಎಂಬ ಕಾದಂಬರಿಯನ್ನೂ ಅವರು ಬರೆದರು. ಆದರೆ ಯಾವುದೂ ಸೃಜನಶೀಲತೆಯಲ್ಲಿ ಅವರ ʼಮಿಡನೈಟ್ಸ್ ಚಿಲ್ಡ್ರನ್ʼ ಕೃತಿಯ ಎತ್ತರಕ್ಕೆ ನಿಲ್ಲಲಾರದು.
ಇದನ್ನೂ ಓದಿ: ಹಲ್ಲೆಗೆ ಒಳಗಾದ ಬರಹಗಾರ ಸಲ್ಮಾನ್ ರಶ್ದಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ
ಭಾರತಕ್ಕೆ ಬರಲಿಲ್ಲ
9 ವರ್ಷಗಳ ಅಜ್ಞಾತವಾಸದ ಬಳಿಕ ಅವರು ನಿಧಾನವಾಗಿ ಅಂತಾರಾಷ್ಟ್ರೀಯ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಭಾರತದಲ್ಲಿ ನಡೆದ 2012ರ ಜೈಪುರ ಲಿಟ್‌ಫೆಸ್ಟ್‌ಗೆ ಅವರನ್ನು ಆಮಂತ್ರಿಸಲಾಗಿತ್ತು. ಆದರೆ ಅವರ ಮೇಲೆ ದಾಳಿ ನಡೆಯಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಅವರ ಆಗಮನವನ್ನು ತಡೆಹಿಡಿಯಲಾಗಿತ್ತು.
ರಶ್ದಿ ಒಟ್ಟಾರೆ ನಾಲ್ಕು ಬಾರಿ ಮದುವೆಯಾಗಿದ್ದಾರೆ. ನಾಲ್ಕನೇ ಮದುವೆ ಮಾಡೆಲ್ ಪದ್ಮಾ ಲಕ್ಷ್ಮಿ ಅವರ ಜತೆ ನಡೆಯಿತು. ಇವರ ಪ್ರೀತಿ- ಕಿತ್ತಾಟ- ದ್ವೇಷದ ಸಂಬಂಧ ಬ್ರಿಟನ್‌ನ ಟ್ಯಾಬ್ಲಾಯ್ಡ್‌ಗಳಲ್ಲಿ ಆಗಾಗ ಸುದ್ದಿಯಾಗುತ್ತಿತ್ತು. ನಂತರ ರಶ್ದಿಯವರಿಂದ ಬೇರೆಯಾದ ಪದ್ಮಾ ಲಕ್ಷ್ಮಿ ಅವರು ರಶ್ದಿಯೊಂದಿಗಿನ ದಾಂಪತ್ಯದ ಅನುಭವಗಳನ್ನು ‘Love, Loss, and What We Ate’ ಎಂಬ ಕೃತಿಯಾಗಿಸಿದರು.
ನ್ಯೂಯಾರ್ಕ್‌ನಲ್ಲಿ ತಾವು ಸುರಕ್ಷಿತವಾಗಿರಬಹುದು ಎಂದು ರಶ್ದಿ ಭಾವಿಸಿದ್ದಂತೆ ಕಾಣುತ್ತದೆ. ಆದರೆ ಮತೀಯ ಮೂಲಭೂತವಾದ ಅವರನ್ನು ಅಲ್ಲಿಯೂ ಬಿಡಲಿಲ್ಲ. 2001ರಲ್ಲಿ ಅವಳಿ ಗೋಪುರಗಳನ್ನು ಕೆಡವಲು ಉಗ್ರರು ನ್ಯೂಯಾರ್ಕ್ ನಗರವನ್ನು ಆರಿಸಿಕೊಂಡಿದ್ದರು. ಇದೀಗ ಇನ್ನೊಂದು ಮತಾಂಧ ದಾಳಿಗೂ ನ್ಯೂಯಾರ್ಕೇ ನೆಲೆಯಾಗಿದೆ. 9/11 ಭಯೋತ್ಪಾದಕರ ಸಂಘಟಿತ ಪ್ರಯತ್ನ ಆಗಿದ್ದರೆ, ಈ ಸಲದ ದಾಳಿ ಉಗ್ರ ಮಾನಸಿಕತೆಯಿಂದ ಹುಟ್ಟಿದ ಏಕಾಂಗಿ ದಾಳಿಯಾಗಿದೆ.