ಹಣಕಾಸಿನ ಸಾಕ್ಷರತೆ ನಮ್ಮಲ್ಲಿ ಶೂನ್ಯದ ಸಮೀಪ ಇದೆ. ಶಾಲೆಗಳಲ್ಲೂ ಹಣಕಾಸು ಸಾಕ್ಷರತೆ ಬಗ್ಗೆ ಹೇಳಿ ಕೊಡುತ್ತಿಲ್ಲ. ಹಣ ಬೆಳೆಸುವುದು ದೂರವೇ ಉಳಿಯಿತು, ಗಳಿಸುವುದನ್ನೂ ಸರಿಯಾಗಿ ಮಕ್ಕಳಿಗೆ ಹೇಳಿಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸಲು ವಿಸ್ತಾರ ನ್ಯೂಸ್ ಮನಿ ಪ್ಲಸ್ ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವುದು ಆಶಾದಾಯಕ ಎಂದು ಏಮ್ ಹೈ ಕನ್ಸಲ್ಟಿಂಗ್‌ನ ಸಿಇಒ, ಸಂವಹನ ತಜ್ಞ ಎನ್. ರವಿಶಂಕರ್ ಹೇಳಿದರು.
ವಿಸ್ತಾರ ನ್ಯೂಸ್‌ನ ʻವಿಸ್ತಾರ ಮನಿ ಪ್ಲಸ್ʼ ಹಣಕಾಸು ಸಾಕ್ಷರತಾ ಯೂಟ್ಯೂಬ್ ಚಾನೆಲ್ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರವಿಶಂಕರ್ ಅವರ ಮಾತಿನ ಸಾರ ಹೀಗಿದೆ…
ಇಂಟಲಿಜೆಂಟ್ ಇನ್‌ವೆಸ್ಟರ್ ಅಥವಾ ಬುದ್ಧಿವಂತ ಹೂಡಿಕೆದಾರ ಎಂಬುದೊಂದು ವಿರೋಧಾಭಾಸ. ಹೂಡಿಕೆದಾರ ಯಾವಾಗಲೂ ಬುದ್ಧಿವಂತ ಆಗಿರುವುದು ಕಷ್ಟ. ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿ ಲಾಭ ಮಾಡಿದವರೂ ತಾವು ಬುದ್ಧಿವಂತ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಇಂದಿನ ಹೂಡಿಕೆ ಸ್ಥಿತಿಗತಿ ಹಾಗಿದೆ. ಹೀಗಾಗಿ ದೊಡ್ಡ ತಜ್ಞರೂ ಸೇರಿದಂತೆ ಯಾರೂ ಇನ್ನೊಬ್ಬರಿಗೆ ಹಣಕಾಸು ಸದ್ವಿನಿಯೋಗ ಹೇಳಿಕೊಡಲು ಸಾಧ್ಯವಿಲ್ಲ. ಯಾಕೆಂದರೆ ಗಳಿಸುವುದು, ಗಳಿಸಿದ್ದನ್ನು ಉಳಿಸುವುದು, ಉಳಿಸಿದ್ದನ್ನ ರಕ್ಷಿಸುವುದು- ಹಿಂದೆಂದಿಗಿಂತಲೂ ಇಂದು ಹೆಚ್ಚು ಕ್ಲಿಷ್ಟ, ಸಂಕೀರ್ಣವಾಗಿದೆ.
ಕುಟುಂಬದ ನಾಲ್ಕು ಮಂದಿಯಲ್ಲಿ ಒಬ್ಬ ಆರ್ಥಿಕ ಸಾಕ್ಷರತೆ (25%) ಹೊಂದಿದ್ದರೂ ಸಮಾಜ ಉದ್ಧಾರವಾಗುತ್ತದೆ. ಹಣಕ್ಕೆ ಇರುವುದು ನಾಲ್ಕೇ ಮಾರ್ಗ- ಗಳಿಸುವುದು, ಉಳಿಸುವುದು, ಬೆಳೆಸುವುದು ಹಾಗೂ ಖರ್ಚು ಮಾಡುವುದು. ಖರ್ಚು ಮಾಡುವುದರಿಂದ ಸುಖ ಸಿಗುತ್ತದೆ. ಆದರೆ ಇತರ ಮೂರು ಮಾರ್ಗಗಳು ಮಾನಸಿಕ ಪರಿಶ್ರಮ, ಒತ್ತಡವನ್ನು ಉಂಟುಮಾಡುತ್ತವೆ. ಹೀಗಾಗಿ ಅವುಗಳಿಗೆ ನಾವು ಸಾಕಷ್ಟು ಸಮಯ ವಿನಿಯೋಗಿಸುವುದಿಲ್ಲ. ಆ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುವುದಿಲ್ಲ. ಹಣವನ್ನು ಸರಿಯಾಗಿ ದುಡಿಸಿಕೊಳ್ಳದೇ ಇದ್ದರೆ ಜೀವನ ಸುಖಮಯವಾಗುವುದಿಲ್ಲ. ನಮ್ಮ ಸ್ಥಿತಿಗತಿ ನೋಡಿಕೊಂಡು ವಿಮರ್ಶಿಸಿ ನಾವೇ ನಮ್ಮ ಹಣವನ್ನು ಹೇಗೆ ಬೆಳೆಸಬೇಕು ಎಂಬ ತೀರ್ಮಾನ ಮಾಡಬೇಕು.
ದುಡ್ಡು ಕೆಟ್ಟದ್ದು ಎಂಬ ಮಾತು ಸರಿಯಲ್ಲ. ಹಣದ ಬಗ್ಗೆ ಇರುವ ನೆಗೆಟಿವ್ ವಿಚಾರಗಳು, ಗೊಂದಲ, ಗಳಿಸಿದ ಹಣದ ಬಗ್ಗೆ ಪಾಪಪ್ರಜ್ಞೆ ನಿವಾರಣೆ ಆಗಬೇಕು. ಹಣಕಾಸು ಜ್ಞಾನವನ್ನು ಬಲ್ಲವರಿಂದ, ಸ್ವವಿವೇಕದಿಂದ, ಆಯಾ ಕ್ಷೇತ್ರದ ತಜ್ಞರಿಂದ ಪಡೆದು ಅಳವಡಿಸಿಕೊಳ್ಳಬೇಕು. ಇನ್ನು ಹಣಕಾಸಿನ ಹೂಡಿಕೆ ಮಾಹಿತಿಗಳೂ ಸಂಕೀರ್ಣಭಾಷೆಯಲ್ಲಿ ಇರುತ್ತವೆ. ಇದನ್ನು ಸರಳವಾಗಿ ಜನತೆಗೆ ತಲುಪಿಸುವ ಕೆಲಸ ವಿಸ್ತಾರ ನ್ಯೂಸ್ ಮನಿ ಪ್ಲಸ್ ಮಾಡಲಿ.
ನಮ್ಮ ಜೀವನಕ್ರಮಕ್ಕೆ ತಕ್ಕಂತೆ ಹಣವನ್ನು ದುಡಿಸಿಕೊಳ್ಳಲು ಬೇರೆಯದೇ ಸೂಕ್ಷ್ಮಗ್ರಾಹಿ ಮನಸ್ಥಿತಿ ಬೇಕು. ಮಾಹಿತಿ ಎಲ್ಲಿಂದಲಾದರೂ ತೆಗೆದುಕೊಳ್ಳಬಹುದು, ಆದರೆ ಅದನ್ನು ನಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಮುಖ್ಯ. ಹಣದ ಸದ್ವಿನಿಯೋಗ ಹಾಗೂ ಹೂಡಿಕೆಗೆ ನಮಗೆ ಅಡ್ಡಿಯಾಗುವುದು ಎರಡೇ- ಒಂದು ಬಯಕೆ, ಇನ್ನೊಂದು ಭಯ. ಎರಡೂ ನಮ್ಮನ್ನು ಕುರುಡಾಗಿಸುತ್ತವೆ. ಬಯಕೆಯೇ ದುರಾಸೆಯಾಗುತ್ತದೆ. ನಮ್ಮ ಭಯ ಮತ್ತು ಬಯಕೆಗಳನ್ನು ನಿಯಂತ್ರಿಸಿಕೊಳ್ಳದೇ ಇದ್ದರೆ ದುಡ್ಡನ್ನು ದುಡಿಸಿಕೊಳ್ಳುವುದು ಕಷ್ಟ. ಸೈಬರ್ ಕ್ರೈಂ ವಂಚನೆಯ ಬಗ್ಗೆ ವರದಿ ಮಾಡುತ್ತಿದ್ದ ಮಾಧ್ಯಮದ ವ್ಯಕ್ತಿ ಕೂಡ ಯಾವುದೋ ದೂರವಾಣಿ ಕರೆಗೆ ಮರುಳಾಗಿ ಲಿಂಕ್ ಕ್ಲಿಕ್ ಮಾಡಿಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡದ್ದುಂಟು.
ಇದನ್ನೂ ಓದಿ: Vistara Money+ | ಜೀವನಮಟ್ಟ ಸುಧಾರಿಸುವ ಎಲ್ಲ ಪ್ರಯತ್ನವನ್ನೂ `ವಿಸ್ತಾರʼ ಮಾಡಲಿದೆ: ಹರಿಪ್ರಕಾಶ್
ಹಣವನ್ನು ಸರಿಯಾಗಿ ನಿಭಾಯಿಸದೆ ದೊಡ್ಡದೊಡ್ಡವರೇ ಯಾಮಾರಿದ ಹಲವು ಉದಾಹರಣೆಗಳಿವೆ. 40 ವರ್ಷದ ಹಿಂದೆ ನನ್ನ ಸಂಬಂಧಿಯೊಬ್ಬರು ಆರ್ಥಿಕತೆ ಬಗ್ಗೆ ಪುಸ್ತಕ ಬರೆದರು. ಅದಕ್ಕೆ 500 ರೂಪಾಯಿ ಸಂಭಾವನೆ ಬಂತು. ಅದನ್ನು ಏನು ಮಾಡಬೇಕು ಎಂಬ ಪ್ರಶ್ನೆ ಬಂದಾಗ ಎರಡು ಆಯ್ಕೆಗಳು ಎದುರಾದವು- ಒಂದು ಶಿವಮೊಗ್ಗದಲ್ಲಿ 100X100 ಸೈಟ್ ತೆಗೆದುಕೊಳ್ಳುವುದು. ಎರಡು- ಮನೆಗೆ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳುವುದು. ಅವರು ತಾಯಿಯ ಮಾತು ಕೇಳಿ ಗ್ಯಾಸ್ ಕನೆಕ್ಷನ್ ಆಯ್ದುಕೊಂಡರು. ಹಣಕಾಸಿನ ವಿಚಾರದಲ್ಲಿ ಸರಿಯಾದ ಸಲಹೆ ಪಡೆಯದಿದ್ದರೆ ಭವಿಷ್ಯದಲ್ಲಿ ಭಾರಿ ನಷ್ಟವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ.
ಮತ್ತೊಬ್ಬರು ಇಪ್ಪತ್ತು ವರ್ಷಗಳ ಹಿಂದೆ, ಆವತ್ತಿನ ಮಟ್ಟಿಗೆ ತುಂಬಾ ದೊಡ್ಡ ಮೊತ್ತವನ್ನು ಎಫ್‌ಡಿ ಇಟ್ಟು ಬದುಕಬಹುದು ಎಂದುಕೊಂಡರು. ಆಗ ಆಗ ಎನ್‌ಎಸ್‌ಸಿಗೆ 13.5 ಶೇಕಡಾ ಬಡ್ಡಿದರವಿತ್ತು. ಆದರೆ ಮುಂದಿನ ಐದೇ ವರ್ಷಗಳಲ್ಲಿ ಅವರು ದುಃಸ್ಥಿತಿಗೆ ಬಂದರು. ಹಣದುಬ್ಬರ ಹಾಗೂ ಕುಸಿದ ಬಡ್ಡಿದರಗಳಿಂದಾಗಿ ಉಳಿಸಿದ ದುಡ್ಡು ಕಾಲುಭಾಗಕ್ಕೆ ಕುಸಿಯಿತು. ವರ್ತಮಾನದ ಸ್ಥಿತಿಗತಿ ಮನದಲ್ಲಿಟ್ಟುಕೊಂಡು ಹಣಕಾಸಿನ ನಿರ್ಧಾರ ಮಾಡಿದರೆ ಏನಾಗಬಹದು ಎಂಬುದಕ್ಕೆ ಇದು ನಿದರ್ಶನ. ಭವಿಷ್ಯದ ಇಣುಕುನೋಟ ನಮಗಿರಬೇಕು. ಬರಿಯ ಇವತ್ತಿನ ಹಣದುಬ್ಬರ, ಬಡ್ಡಿದರ ನೋಡಿದರೆ ಏನೇನೂ ಸಾಲದು.
ಇದನ್ನೂ ಓದಿ: Explainer: ಉಳಿತಾಯ ಯಥಾಸ್ಥಿತಿ, ಖರ್ಚು ಏರಿಕೆಗಿಲ್ಲ ಬ್ರೇಕ್: ಹಣಕಾಸು ನೀತಿ ಹೇಳಿದ್ದೇನು?
ಒಳ್ಳೆಯ ಸುದ್ದಿಯೆಂದರೆ ನಾವು ಜೀವಮಾನದಲ್ಲಿ ಖರ್ಚು ಮಾಡಲು ಸಾಧ್ಯವಾಗದೆ ಇರುವಷ್ಟು ಹಣ ಸಂಪಾದಿಸುತ್ತೇವೆ. ಕೆಟ್ಟ ಸುದ್ದಿಯೂ ಅದೇ- ಏಕೆಂದರೆ ಬ್ಯಾಂಕಿನಲ್ಲಿ ಉಳಿಸಿಟ್ಟ ಹಣ ನಾವು ಸಾಯುವಾಗ ನಮಗಾಗುವ ನಷ್ಟ. ನಾವು ಅದಕ್ಕಾಗಿ ಪಟ್ಟ ಪರಿಶ್ರಮ ವ್ಯರ್ಥ. ಹೀಗೆ ಜನಕ್ಕೆ ಸರಿಯಾಗಿ ಖರ್ಚು ಮಾಡುವುದೂ ಗೊತ್ತಿಲ್ಲ. ಗಳಿಸುವ ಜತೆಗೆ ಅದನ್ನು ಸರಿಯಾಗಿ ವಿವೇಚನೆಯಿಂದ ಖರ್ಚು ಮಾಡುವುದು ಕೂಡ ಗೊತ್ತಿರಬೇಕು. ಈ ಎಲ್ಲವುಗಳ ಬಗ್ಗೆ ಸರಿಯಾದ ಜ್ಞಾನವನ್ನು ವಿಸ್ತಾರ ಮನಿ ಪ್ಲಸ್ ನೀಡಲಿ ಎಂದು ರವಿಶಂಕರ್ ಆಶಿಸಿದರು.
ಆರ್ಥಿಕ ತಜ್ಞ, ಸಲಹೆಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ಮನಿ ಪ್ಲಸ್ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದರು. ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ಮೀಡಿಯಾ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್. ಜತೆಗಿದ್ದರು.