ಬೆಂಗಳೂರು: ಏಳು ಕೋಟಿ ಜನರು ಇರುವ ಕರ್ನಾಟಕದಲ್ಲಿ ಇಲ್ಲಿನ ಜನತೆಯನ್ನು ಆರ್ಥಿಕವಾಗಿ ಸಾಕ್ಷರರನ್ನಾಗಿ ಮಾಡಲು ಮೀಸಲಾದ ಒಂದು ವಾಹಿನಿ ಇಲ್ಲದಿರುವುದು ಖೇದಕರ. ಜಗತ್ತು ಬಿಟ್‌ಕಾಯಿನ್‌ನತ್ತ ಹೊರಳುತ್ತಿದ್ದರೂ ನಮಗಿನ್ನೂ ಸಾಂಪ್ರದಾಯಿಕ ಹಣದ ಬಳಕೆ, ಉಳಿಕೆಯ ಬಗ್ಗೆಯೇ ಗೊತ್ತಿಲ್ಲ. ಕರ್ನಾಟಕದಲ್ಲಾದರೂ ನಾವು ಹಣಕಾಸಿನ ಅಜ್ಞಾನ ನಿರ್ಮೂಲನೆ ಮಾಡಲು ವಿಸ್ತಾರ ನ್ಯೂಸ್ ಮನಿ ಪ್ಲಸ್ ಮೂಲಕ ಪ್ರಯತ್ನ ಮಾಡೋಣ ಎಂದು ಆರ್ಥಿಕ ತಜ್ಞ ಹಾಗೂ ಸಲಹೆಗಾರ ರಂಗಸ್ವಾಮಿ ಮೂಕನಹಳ್ಳಿ ಹೇಳಿದರು.
ವಿಸ್ತಾರ ನ್ಯೂಸ್ ವಾಹಿನಿಯ ಹಣಕಾಸು ಸಾಕ್ಷರತೆಗೆ ಸಂಬಂಧಿಸಿದ ʻವಿಸ್ತಾರ ಮನಿ ಪ್ಲಸ್ʼ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಅವರ ಮಾತಿನ ಸಾರ ಇಲ್ಲಿದೆ…
ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದ ಹಣ ಎಲ್ಲ ಹಂತದಲ್ಲೂ ಬೇಕು. ಮನೆಯಿಂದ ನಾವು ಹೊರಬಿದ್ದ ಕೂಡಲೇ ಹಣದ ಮೀಟರ್ ತಿರುಗಲು ಶುರುವಾಗುತ್ತದೆ. ಆದರೆ ನಾವು ಹಣದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಹಣ ಕೆಟ್ಟದು ಎಂಬ ವಿಚಾರವನ್ನು ಚಿಕ್ಕಂದಿನಲ್ಲಿಯೇ ನಮ್ಮ ತಲೆಗೆ ತುಂಬಿಸಿರುತ್ತಾರೆ. ಇದು ಮಿಥ್ಯೆ. ಮಧ್ಯಮ ವರ್ಗದ ಜನತೆ ಸದಾ ದುಡ್ಡಿಗಾಗಿ ಪರದಾಡುವುದು ಹಣಕಾಸಿನ ಸಾಕ್ಷರತೆಯ ಕೊರತೆಯಿಂದಲೇ. ನಮಗೇನು ಬೇಕು ಎಂಬ ನಿಖರತೆ ನಮಗಿರುವುದಿಲ್ಲ. ತರಕಾರಿ ತರಬೇಕು ಎಂದು ಮಾಲ್‌ಗೆ ಹೋದವರು ಅನಗತ್ಯವಾಗಿ ಎರಡು ಪ್ಯಾಂಟ್ ಖರೀದಿಸಿ ತರುತ್ತೇವೆ. ಆದ್ಯತೆಯ ಮೇಲೆ ಖರ್ಚು ಮಾಡುವ ವಿವೇಕ ಮೂಡಬೇಕು.
ಹಣದು ಕುರಿತು ಹಲವು ಮಿಥ್ಯೆಗಳಿವೆ. ಕರೆನ್ಸಿಗೆ ಮೌಲ್ಯವಿದೆ ಎಂಬುದು ಅಂಥ ಒಂದು ಮಿಥ್ಯೆ. ಕರೆನ್ಸಿಗೆ ಮೌಲ್ಯವಿಲ್ಲ. ಅದನ್ನು ಉಂಟುಮಾಡುವ ಸಂಪನ್ಮೂಲಕ್ಕೆ ಮೌಲ್ಯವಿರುತ್ತದೆ. ಹಣದುಬ್ಬರ ಎಂದರೆ ಸಂಪನ್ಮೂಲಗಳು ಅಷ್ಟೇ ಇದ್ದು, ಹಣದ ಹರಿವು ಹೆಚ್ಚಾದಾಗ ಉಂಟಾಗುವ ಸ್ಥಿತಿ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೆ ಮಾತ್ರ ಬೇಕಾದಂತೆ ಹಣ ಗಳಿಸಬಹುದು, ಉಳಿಸಬಹುದು ಎಂಬುದು ಮತ್ತೊಂದು ಮಿಥ್ಯೆ. ಇಂದು ಬಿಲಿಯನೇರ್‌ಗಳಾಗಿರುವ ಅನೇಕರು ಬಡ ಕುಟುಂಬದಿಂದ ಬಂದವರು. ಅವರಿಗೆ ಗಾಡ್‌ಫಾದರ್‌ಗಳಿಲ್ಲ. ಶ್ರೀಮಂತನಾಗುವ ಮೂಲ ಸೂತ್ರ ಬರೀ ಗಳಿಕೆಯಲ್ಲ. ಗಳಿಕೆ, ಉಳಿಕೆ, ಹೂಡಿಕೆ ಸೇರಿದಾಗ ಶ್ರೀಮಂತಿಕೆ ಉಂಟಾಗುತ್ತದೆ.
ಇದನ್ನೂ ಓದಿ: Vistara Money+ | ಜೀವನಮಟ್ಟ ಸುಧಾರಿಸುವ ಎಲ್ಲ ಪ್ರಯತ್ನವನ್ನೂ `ವಿಸ್ತಾರʼ ಮಾಡಲಿದೆ: ಹರಿಪ್ರಕಾಶ್
ಅತ್ಯಲ್ಪ ಕಾಲದಲ್ಲಿ ಹಣ ಡಬಲ್ ಮಾಡುವ ಆಮಿಷಕ್ಕೆ ಹಲವರು ಬಲಿಯಾಗುತ್ತಾರೆ. ಆದರೆ ಬಣ್ಣದ ಮಾತುಗಳಿಗೆ ಮರುಳಾಗಬಾರದು. ಹಣ ಅತಿವೇಗದಲ್ಲಿ ದುಪ್ಪಟ್ಟಾಗುವುದಿಲ್ಲ. ಅದಕ್ಕೆ ರೂಲ್ ನಂ. 72 ಪಾಲಿಸಬೇಕು. 72ನ್ನು ಇವತ್ತಿನ ಬಡ್ಡಿದರದಿಂದ ಭಾಗಿಸಿದಾಗ ಎಷ್ಟು ಸಿಗುತ್ತದೋ ಅಷ್ಟು ವರ್ಷ ಹಣ ದುಪ್ಪಟ್ಟಾಗಲು ಅಗತ್ಯ. ಬೇರೆ ಶಾರ್ಟ್‌ಕಟ್‌ಗಳು ಇಲ್ಲ. ಹೂಡಿಕೆಯಲ್ಲೂ ಎಚ್ಚರ ಅಗತ್ಯ. ಖ್ಯಾತ ಕ್ರಿಕೆಟಿಗರೊಬ್ಬರು ಹಣಕಾಸು ಸಂಸ್ಥೆಯೊಂದರ 30% ಬಡ್ಡಿಯ ಆಸೆಗೆ ಬಲಿಬಿದ್ದು ಕೋಟ್ಯಂತರ ರೂಪಾಯಿ ಕಳೆದುಕೊಂಡರು. ಅತಿ ಗಣ್ಯರೂ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಆರ್ಥಿಕ ಸಾಕ್ಷರತೆ ಕಡಿಮೆ ಎಂಬ ಸಿನಿಕತೆ ಬೇಡ. ಅಮೆರಿಕದಂಥ ದೇಶದಲ್ಲೂ ಹಣಕಾಸಿನ ಅರಿವೇ ಇಲ್ಲ.
ಹಣಕಾಸಿನ ಬೆಳವಣಿಗೆಗೆ ಕೌಶಲಗಳನ್ನು ಸಣ್ಣ ವಯಸ್ಸಿನಿಂದಲೇ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣಕಾಸಿನ ಬಗ್ಗೆ ಕಲಿಸಬೇಕು. ದಿನನಿತ್ಯ ನಾವು ಏನು ಮಾಡುತ್ತೇವೋ ಅದರ ಒಟ್ಟು ಮೊತ್ತವೇ ನಾವು. ಒಂದೇ ದಿನದಲ್ಲಿ ನಮ್ಮ ಅಭ್ಯಾಸಗಳನ್ನು ಬದಲಾಯಿಸಲಾರೆವು. ಆದರೆ ಒಳಿತಿನ ಕಡೆಗೆ ಇಡುವ ಒಂದು ಹೆಜ್ಜೆಯೂ ದೊಡ್ಡದೇ. ಮಕ್ಕಳಲ್ಲಿ ಹಣಕಾಸಿನ ಸ್ವಾವಲಂಬನೆ ಬೆಳೆಸಬೇಕು. ಮಕ್ಕಳು ದಡ್ಡರಾದರೆ ನೀವು ಎಷ್ಟು ಉಳಿಸಿದರೂ ಫಲವಿಲ್ಲ. ಅವರು ಹಣಕಾಸಿನ ವಿಚಾರದಲ್ಲಿ ಜಾಣರಾಗಿದ್ದರೆ ನೀವು ಅವರಿಗಾಗಿ ಉಳಿಸುವ ಅವಶ್ಯಕತೆಯೇ ಇಲ್ಲ. ಹಣದ ಜೊತೆಗೆ ಸಮಯ ಸೇರಿದಾಗಲೇ ಅದಕ್ಕೆ ಬೆಲೆ. ಹಣಕ್ಕೆ ಬಡ್ಡಿ ದೊರೆಯುವುದು ಅಥವಾ ತೆರಬೇಕಾಗುವುದು ಅದಕ್ಕೆ ಸಮಯ ಸೇರುವುದರಿಂದ ಎಂದು ರಂಗಸ್ವಾಮಿ ಅವರು ತಿಳಿಸಿದರು.
ಏಮ್ ಹೈ ಕನ್ಸಲ್ಟಿಂಗ್ ಸಂಸ್ಥೆಯ ಸಿಇಒ, ಸಂವಹನ ಸಲಹೆಗಾರ ಎನ್. ರವಿಶಂಕರ್, ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತು ವಿಸ್ತಾರ ಮೀಡಿಯಾ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್. ಜತೆಗಿದ್ದರು.
ಇದನ್ನೂ ಓದಿ: Vistara money+ | ಹಣಕಾಸು ಸಾಕ್ಷರತೆ ಇಂದಿನ ತುರ್ತು ಅಗತ್ಯ: ಎನ್. ರವಿಶಂಕರ್