Site icon Vistara News

ವಿಸ್ತಾರ TOP 10 NEWS | ಪ್ರವೀಣ್‌- ಫಾಜಿಲ್‌ ಹತ್ಯೆ ಹಿನ್ನೆಲೆ ನೈಟ್‌ ಕರ್ಫ್ಯೂ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

Vistara Top 10 news

ಬೆಂಗಳೂರು: ಸುಳ್ಯದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಂತರ ಪರಿಸ್ಥಿತಿ ತಹಬದಿಗೆ ಬರುವ ಮುನ್ನವೇ ಮುಸ್ಲಿಂ ಯುವಕ ಫಾಜಿಲ್‌ ಹತ್ಯೆ ನಡೆದಿದ್ದು, ದಕ್ಷಿಣ ಕನ್ನಡ ಪ್ರಕ್ಷುಬ್ಧದಲ್ಲಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿದೆ ಹಾಗೂ ದಿನದ ಇನ್ನಿತರೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು NIAಗೆ ವಹಿಸಿದ ರಾಜ್ಯ ಸರ್ಕಾರ: ಸಿಎಂ ಬೊಮ್ಮಾಯಿ ಘೋಷಣೆ
ಸುಳ್ಯದಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಜತೆ ಸಭೆ ನಡೆಸಿದ ನಂತರ ಈ ಕುರಿತು ಮಾತನಾಡಿದ ಬೊಮ್ಮಾಯಿ, ಪ್ರವೀಣ್ ಹತ್ಯೆ,ಸಂಘಟಿತ ಅಪರಾಧವಾಗಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ. ಪ್ರಕರಣ ಎರಡು ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ NIA ಗೆ ಲೆಟರ್ ಬರೆಯೋದಕ್ಕೆ ಹೇಳಿದ್ದೇನೆ, ಎನ್‌ಐಗೆ ವಹಿಸಲು ತೀರ್ಮಾನಿಸಿದ್ದೇವೆ ಎಂದರು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)
Night Curfew | ದ.ಕನ್ನಡ ಜಿಲ್ಲೆಯಲ್ಲಿ ಆ.1ವರೆಗೆ ನೈಟ್‌ ಕರ್ಫ್ಯೂ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

2. ಫಾಜಿಲ್‌ ಹತ್ಯೆಗೆ ಮಿಸ್ಟೇಕನ್‌ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ
ಸುಳ್ಯದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಬೆನ್ನಿಗೇ ಸುರತ್ಕಲ್‌ನಲ್ಲಿ ಗುರುವಾರ ನಡೆದ ಫಾಜಿಲ್‌ ಕೊಲೆ ಪ್ರಕರಣವು ಮಿಸ್ಟೇಕನ್‌ ಐಡೆಂಟಿಟಿಯ (Mistaken Identity) ಫಲಶ್ರುತಿಯೇ ಎಂಬ ಅನುಮಾನ ಶುರುವಾಗಿದೆ. ಅಸಲಿಗೆ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಫಾಜಿಲ್‌ ನಿಜವಾದ ಟಾರ್ಗೆಟ್‌ ಆಗಿರಲಿಲ್ಲ. ಹಂತಕರು ಎಸ್‌.ಕೆ. ಮೊಬೈಲ್ಸ್‌ ಅಂಗಡಿ ಮಾಲೀಕ ಎಸ್‌.ಕೆ. ಫಾರೂಕ್‌ನನ್ನು ಗುರಿಯಾಗಿಸಿ ದಾಳಿ ಮಾಡಿದ್ದರು. ಈ ಹಿಂದೆ ಎಸ್‌.ಕೆ. ಫಾರೂಕ್‌ ಕೆ.ಎಫ್‌.ಡಿ. ಸಂಘಟನೆಯಲ್ಲಿ ನಾಯಕನಾಗಿದ್ದ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)
ಫಾಜಿಲ್‌ ಕುಟುಂಬಕ್ಕೂ ₹25 ಲಕ್ಷ ನೀಡಲು ಯು.ಟಿ. ಖಾದರ್‌ ಆಗ್ರಹ: ಪ್ರಮೋದ್‌ ಮುತಾಲಿಕ್‌ಗೆ ನಿರ್ಬಂಧ

3. ವೇದವಾಕ್ಯ ಅಲ್ಲ ಅವನು ಹೇಳಿದ್ದು: ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಸಿಎಂ ಬೊಮ್ಮಾಯಿ
ಪದೇಪದೆ ನಡೆಯುತ್ತಿರುವ ಹತ್ಯೆಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶಭರಿತರಾಗಿದ್ದು, ಅವನು ಹೇಳಿದ್ದೇ ವೇದವಾಕ್ಯ ಅಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸುವಾಗ ಭಾವೋದ್ವೇಗಕ್ಕೊಳಗಾದ ಸಿದ್ದರಾಮಯ್ಯ ನಂತರ ತಮ್ಮ ಮಾತನ್ನು ಹಿಂಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ ವಿಫಲ ಮುಖ್ಯಮಂತ್ರಿ ಎಂದಿದ್ದಾರೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

4. Vistara Money+| ವಿಸ್ತಾರ ಮೀಡಿಯಾದಿಂದ ಹಣಕಾಸು ಕುರಿತ ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ
ರಾಜ್ಯದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಜನರಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸುವ ಉದ್ದೇಶದಿಂದ ʻವಿಸ್ತಾರ ಮನಿ ಪ್ಲಸ್‌ʼ ಎಂಬ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದೆ. ಇದರ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ವಿಸ್ತಾರ ನ್ಯೂಸ್‌ ಕಚೇರಿಯಲ್ಲಿ ನಡೆಯಿತು.
ವಿಸ್ತಾರ ಮೀಡಿಯಾದ ವೆಬ್‌ಸೈಟ್‌ vistaranews.com ಕಳೆದ ಜುಲೈ ೨೩ರಂದು ಲೋಕಾರ್ಪಣೆಗೊಂಡು ಜನಪ್ರಿಯತೆ ಪಡೆಯುತ್ತಿರುವಂತೆಯೇ, ಕೇವಲ ಆರೇ ದಿನಗಳಲ್ಲಿ ಕನ್ನಡ ನಾಡಿಗೆ ಎರಡನೇ ಕೊಡುಗೆಯಾಗಿ ವಿಸ್ತಾರ ಮನಿ ಪ್ಲಾಸ್‌ ಯೂ ಟ್ಯೂಬ್‌ ಚಾನೆಲ್‌ ಅನಾವರಣಗೊಂಡಿದೆ.
ಅರ್ಥಶಾಸ್ತ್ರಜ್ಞ, ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು ಯೂಟ್ಯೂಬ್‌ ಚಾನೆಲ್‌ಗೆ ಶುಕ್ರವಾರ ಚಾಲನೆ ನೀಡಿದರು. ಏಮ್‌ ಹೈ ಕನ್ಸಲ್ಟೆನ್ಸಿ ಸಂಸ್ಥೆಯ ಸಿಇಒ ಆಗಿರುವ ಎನ್‌. ರವಿಶಂಕರ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿರುವ ಎಚ್‌.ವಿ. ಧರ್ಮೇಶ್‌ ಹಾಗೂ ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌ ಅವರ ಮಾರ್ಗದರ್ಶನದಲ್ಲಿ ಈ ಚಾನೆಲ್‌ ಮೂಡಿಬರುತ್ತಿದೆ. ಎಕ್ಸಿಕ್ಯೂಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ನೇತೃತ್ವದಲ್ಲಿ ಈ ಚಾನೆಲ್‌ ರೂಪುಗೊಂಡಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

5. ಸಿದ್ದರಾಮೋತ್ಸವ | ಸಿದ್ದರಾಮಯ್ಯಗೆ ವರವೋ? ಶಾಪವೋ?
ಕಾಂಗ್ರೆಸ್ ಮಾಸ್‌ ಲೀಡರ್‌ ಹಾಗೂ ಹಿಂದುಳಿದ ವರ್ಗಗಳ ಶಕ್ತಿ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಆಗಸ್ಟ್ 3ರಂದು ಹಮ್ಮಿಕೊಳ್ಳಲಾದ “ಸಿದ್ದರಾಮೋತ್ಸವ” ಕಾರ್ಯಕ್ರಮವು ಪರೋಕ್ಷ ಶಕ್ತಿ ಪ್ರದರ್ಶನ ಎಂದೇ ಹೇಳಲಾಗುತ್ತಿದೆ. ಆದರೆ, ಇದು ನಿಜವಾಗಿಯೂ ಸಿದ್ದರಾಮಯ್ಯ ಅವರಿಗೆ ವರವಾಗಲಿದೆಯೋ? ಶಾಪವಾಗಲಿದೆಯೋ? ಎಂಬ ಚರ್ಚೆಗಳು ನಡೆಯುತ್ತಿವೆ. (ವಿಸ್ತಾರ ವಿಶೇಷ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. CWG-2022 | ಪಾಕ್‌ ಬಾಕ್ಸರ್ ಮಣಿಸಿದ ಶಿವ ಥಾಪ 16ನೇ ಸುತ್ತಿಗೆ ಪ್ರವೇಶ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಪಾಲ್ಗೊಂಡಿರುವ ಭಾರತದ ಬಾಕ್ಸರ್‌ ಶಿವ ಥಾಪಾ ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ೧೬ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ಸುಲೇಮಾನ್‌ ಬಲೂಚ್‌ ವಿರುದ್ಧ ೫-೦ ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಎಂಟ್ರಿ ಪಡೆದರು. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

7. ಮಾದರಿ ಕುಟುಂಬ | ಏಳೇಳು ಜನ್ಮಕ್ಕೂ ಒಂದೇ ಅಂದರು 8 ಸಹೋದರರು; ಒಂದೇ ವಿನ್ಯಾಸದ 7 ಮನೆ ಕಟ್ಟಿದರು!
ಇದು ಹುಟ್ಟಿದಾಗ ಅಣ್ಣ-ತಮ್ಮ, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿ ಎನ್ನುವ ನಾಣ್ಣುಡಿಗೆ ಅಪವಾದದಂತೆ ಬದುಕಿ ಮಾದರಿಯಾಗಿರುವ ಅವಿಭಕ್ತ ಕುಟುಂಬದ ಒಗ್ಗಟ್ಟಿನ (ಮಾದರಿ ಕುಟುಂಬ) ಕತೆ. ಹೌದು, ಒಬ್ಬಿಬ್ಬರು ಅಣ್ಣ-ತಮ್ಮಂದಿರಲ್ಲೇ ಒಡಕನ್ನು ಕಾಣುವ ಈ ಕಾಲದಲ್ಲೂ 8 ಮಂದಿ ಸಹೋದರರು ಏಕತೆಯ ಮಂತ್ರವನ್ನು ಜಪಿಸುತ್ತಿದ್ದಾರೆ. ಈಗ ಇವರು ಒಂದೇ ತೆರನಾದ 7 ಮನೆಯನ್ನು ಕಟ್ಟುವ ಮೂಲಕ ಸುದ್ದಿಯಲ್ಲಿದ್ದಾರೆ. (ವಿಸ್ತಾರ ವಿಶೇಷ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. ಕೋಟಿ ಹಣವಷ್ಟೇ ಅಲ್ಲ, ಅರ್ಪಿತಾ ಮುಖರ್ಜಿ ಮನೆಯಲ್ಲಿ ಸಿಕ್ಕಿವೆ ರಾಶಿ ರಾಶಿ ಲೈಂಗಿಕ ಆಟಿಕೆಗಳು !
ಪಶ್ಚಿಮ ಬಂಗಾಳ ಶಾಲಾ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಪಾರ್ಥ ಚಟರ್ಜಿ ಹೆಸರು ಮುನ್ನೆಲೆಗೆ ಬಂದಾಗಿನಿಂದಲೂ ಅವರ ಆಪ್ತೆ ಅರ್ಪಿತಾ ಮುಖರ್ಜಿ ಕೂಡ ಟ್ರೆಂಡಿಂಗ್‌ನಲ್ಲಿದ್ದಾಳೆ. ಅರ್ಪಿತಾ ಮುಖರ್ಜಿ ಮನೆಯಲ್ಲಿ ಕೋಟಿಕೋಟಿ ಹಣ ಪತ್ತೆಯಾಗಿದೆ. ಹಣ ಎಣಿಸುವ ಯಂತ್ರ ಹಿಡಿದು ಈಕೆಯ ಮನೆಯ ಮೇಲೆ ರೇಡ್‌ ಮಾಡುತ್ತಿರುವ ಇ ಡಿ, ಸಿಕ್ಕ ಹಣ ಹೊತ್ತೊಯ್ಯಲು ಟ್ರಕ್‌ಗಳನ್ನು ಬಳಸಿಕೊಳ್ಳುತ್ತಿದೆ. ಅರ್ಪಿತಾ ಮನೆಯಲ್ಲಿ ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ನಗದು, ಅಪಾರ ಚಿನ್ನಾಭರಣಗಳು ಪತ್ತೆಯಾಗಿದ್ದು ಜಗಜ್ಜಾಹೀರಾಗಿದೆ. ಆದರೆ ಈಗ ಇನ್ನೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಅರ್ಪಿತಾ ಮನೆಯಲ್ಲಿ ಬರೀ ಹಣವಷ್ಟೇ ಅಲ್ಲ, ಅಪಾರ ಪ್ರಮಾಣದ ಸೆಕ್ಸ್‌ ಟಾಯ್ಸ್‌ (ಲೈಂಗಿಕ ಆಟಿಕೆಗಳು-ಲೈಂಗಿಕ ಸುಖಕ್ಕಾಗಿ ಬಳಸುವ ವಸ್ತುಗಳು)ಗಳು ಕೂಡ ಪತ್ತೆಯಾಗಿವೆ ಎಂದು ಇಡಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

9. IT Retrun | 4 ಕೋಟಿಗೆ ಏರಿದ ಐಟಿ ರಿಟರ್ನ್‌ ಸಲ್ಲಿಕೆ, ಗಡುವು ಮುಂದೂಡಿಕೆ ಇಲ್ಲ ಎಂದ ಕೇಂದ್ರ
ಸಾಮಾಜಿಕ ಜಾಲತಾಣಗಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಜುಲೈ ೩೧ರ ಗಡುವನ್ನು ವಿಸ್ತರಿಸಲು ಒತ್ತಾಯಿಸಿ ಅಭಿಯಾನದ ಮೂಲಕ ಒತ್ತಡ ಹೇರಲಾಗುತ್ತಿದ್ದರೂ, ಮುಂದೂಡಿಕೆಯ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ೨೦೨೧ರ ಡಿಸೆಂಬರ್‌ ೩೧ರ ಮಟ್ಟವನ್ನು ಹೋಲಿಸಿದರೆ ಈಗ ೬೮% ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದಾರೆ. ರಿಟರ್ನ್‌ ಸಲ್ಲಿಸಿದವರ ಒಟ್ಟು ಸಂಖ್ಯೆ ಗುರುವಾರ ಸಂಜೆಯ ವೇಳೆಗೆ ೪ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಕೋವಿಡ್-‌೧೯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜುಲೈ ೩೧ರ ಗಡುವನ್ನು ಡಿಸೆಂಬರ್‌ ೩೧ರ ತನಕ ವಿಸ್ತರಿಸಲಾಗಿತ್ತು. ಐಟಿ ರಿಟರ್ನ್‌ ಸಲ್ಲಿಕೆ ಚುರುಕಾಗಿದ್ದು, ಗುರುವಾರ ಪ್ರತಿ ಗಂಟೆಗೆ ಸರಾಸರಿ ೩ ಲಕ್ಷ ರಿಟರ್ನ್‌ಗಳು ಸಲ್ಲಿಕೆಯಾಗಿವೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

10. Vikrant rona collection | ವಿಕ್ರಾಂತ್‌ ರೋಣ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿವರ
ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ (Vikrant Rona) ಅದ್ಧೂರಿಯಾಗಿ ಬಿಡುಗಡೆಯಾಗಿ ಜನಮನ್ನಣೆ ಪಡೆದುಕೊಂಡಿದೆ. ಗುರುವಾರ (ಜು.28)ಕ್ಕೆ ವಿಶ್ವಾದ್ಯಂತ ಬಿಡುಗಡೆಗೊಂಡಿದ್ದು, ಇದೀಗ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಹಿತಿ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ. ಮೊದಲ ದಿನ 35 ಕೋಟಿಗೂ ಅಧಿಕ ಕಲೆಕ್ಷನ್ ವಿಕ್ರಾಂತ್‌ ರೋಣ ಮಾಡಿದ್ದು, ಕರ್ನಾಟಕದಲ್ಲಿ ಮೊದಲ ದಿನ 16 ಕೋಟಿ ರೂ., ಟಾಲಿವುಡ್‌ನಲ್ಲಿ 4‌ ಕೋಟಿ 50 ಲಕ್ಷ ರೂ., ಬಾಲಿವುಡ್‌ನಲ್ಲಿ 4 ಕೋಟಿ ರೂ., ಮಾಲಿವುಡ್‌ನಲ್ಲಿ 1 ಕೋಟಿ ರೂ., ಕಾಲಿವುಡ್ ಅಂಗಳದಲ್ಲಿ 2.5 ಕೋಟಿ ರೂ., ಓವರ್ ಸೀಸ್‌ನಲ್ಲಿ 7 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರದ ಅಂತ್ಯದಲ್ಲಿ ದಾಖಲೆ ಸಂಗ್ರಹ ಬರುವ ಸಾಧ್ಯತೆಗಳಿವೆ. (ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ಮಾಡಿ)

Exit mobile version