Site icon Vistara News

Mamata Banerjee: ಮಮತಾ ಬ್ಯಾನರ್ಜಿಯವರನ್ನು ಹಿಂದಿನಿಂದ ತಳ್ಳಲಾಯಿತೇ? ವೈದ್ಯರು ಏನಂತಾರೆ?

Mamata Banerjee

ಕೋಲ್ಕತ್ತಾ: ʼಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal CM Mamata Banerjee) ಅವರನ್ನು ಬೀಳುವಂತೆ ಹಿಂದಿನಿಂದ ತಳ್ಳಲಾಗಿದೆʼ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ (TMC), ಹಾಗೇನೂ ಇಲ್ಲ ಎಂದು ತಿಳಿಸಿದೆ. ಸಿಎಂ ತಲೆತಿರುಗುವಿಕೆ ಅನುಭವಿಸಿದ ನಂತರ ಕುಸಿದು ಬಿದ್ದಿದ್ದಾರೆ ಎಂದು ಹೇಳಿದೆ.

ಟಿಎಂಸಿ ನಾಯಕಿ ಮಮತಾ ಗುರುವಾರ ತಮ್ಮ ಕೋಲ್ಕತ್ತಾದ ಮನೆಯಲ್ಲಿ ಬಿದ್ದಿದ್ದರು. ಹಣೆಗೆ ಪೀಠೋಪಕಣ ಬಡಿದು ಆಳವಾದ ಗಾಯವಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದರು.

ಮಮತಾ ಬ್ಯಾನರ್ಜಿ ಅವರನ್ನು ಯಾರೂ ಹಿಂದಿನಿಂದ ತಳ್ಳಿಲ್ಲ ಎಂದು ಟಿಎಂಸಿ ನಾಯಕ ಶಶಿ ಪಂಜ ಹೇಳಿದ್ದಾರೆ. “ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸ್ವಲ್ಪ ತಲೆತಿರುಗುವಿಕೆ ಇತ್ತು ಮತ್ತು ನಂತರ ಕುಸಿದರು. ಯಾರೂ ಅವರನ್ನು ಹಿಂದಿನಿಂದ ತಳ್ಳಲಿಲ್ಲ. ಬಿದ್ದಾಗ ಗಾಯವಾಯಿತು. ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ” ಎಂದು ಪಂಜಾ ಹೇಳಿದರು.

ಅಪಘಾತದ ಬಗ್ಗೆ ದಾರಿ ತಪ್ಪಿಸುವ ಟೀಕೆಗಳನ್ನು ಮಾಡದಂತೆ ಟಿಎಂಸಿ ನಾಯಕ ಜನಸಾಮಾನ್ಯರನ್ನು ಕೇಳಿಕೊಂಡಿದ್ದಾರೆ. ಸಿಎಂ ಕುಸಿದು ಬಿದ್ದುದಕ್ಕೆ ಕಾರಣ ಅಧಿಕ ರಕ್ತದೊತ್ತಡ ಅಥವಾ ಸಕ್ಕರೆ ಕಾಯಿಲೆ ಇರಬಹುದು ಎಂದು ಅವರು ಹೇಳಿದ್ದಾರೆ. “ದೀದಿ ಕೂಡ ಒಬ್ಬರು ಮನುಷ್ಯರು. ಅವರು ತುಂಬಾ ಬ್ಯುಸಿಯಾದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಅವಳು ಆರೋಗ್ಯವಾಗಿರಲು ಬಯಸುತ್ತಾರೆ. ಘಟನೆಯನ್ನು ಯಾರೂ ತಪ್ಪು ರೀತಿಯಲ್ಲಿ ವ್ಯಾಖ್ಯಾನಿಸಬಾರದು” ಎಂದು ಅವರು ಹೇಳಿದ್ದಾರೆ.

ಮಮತಾ ಅವರನ್ನು ಹಿಂದಿನಿಂದ ತಳ್ಳಲಾಗಿದೆ ಎಂಬ ವದಂತಿಗಳನ್ನು ವೈದ್ಯರು ನಿರಾಕರಿಸಿದ್ದಾರೆ. “ಬಹುಶಃ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬೀಳಲು ಕಾರಣವಾದ ಸಂವೇದನೆಯು ದೇಹದಲ್ಲಿ, ಹಿಂದಿನಿಂದ ತಳ್ಳಿದ ಸಂವೇದನೆಯಂತೆ ಇರುತ್ತದೆ. ವ್ಯಕ್ತಿಗೆ ತಲೆ ತಿರುಗಿದಾಗ ಇದು ಸಂಭವಿಸುತ್ತದೆ” ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಮಣಿಮೊಯ್ ಬಂಡೋಪಾಧ್ಯಾಯ ಹೇಳಿದ್ದಾರೆ.

ಗುರುವಾರ ವೈದ್ಯರು ಹೀಗೆ ಹೇಳಿದ್ದರು: “ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ರಾತ್ರಿ 7.30ರ ಸುಮಾರಿಗೆ ನಮ್ಮ ಆಸ್ಪತ್ರೆಗೆ ಬಂದಿದ್ದಾರೆ. ಮನೆಯಲ್ಲಿ ಹಿಂದಿನಿಂದ ತಳ್ಳುವಿಕೆಯಂಥ ಅನುಭವದಿಂದ ಬಿದ್ದು ಗಾಯವಾಗಿದೆ. ಅವರಿಗೆ ಸೆರೆಬ್ರಲ್ ಕನ್ಕ್ಯುಶನ್ ಇತ್ತು. ಅವರ ಹಣೆಯ ಮೇಲಿನ ಗಾಯದಿಂದ ವಿಪರೀತ ರಕ್ತಸ್ರಾವವಾಗುತ್ತಿತ್ತು” ಎಂದು ತಿಳಿಸಿದ್ದರು.

ಮಮತಾ ಬ್ಯಾನರ್ಜಿ ಅವರು ಕಳೆದ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಅಪಘಾತದಿಂದ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಬ್ಯಾಂಡೇಜ್‌ ಧರಿಸಿದ ಕಾಲಿನೊಂದಿಗೇ ಇಡೀ ಚುನಾವಣಾ ಪ್ರಚಾರವನ್ನು ಓಡಾಡುತ್ತ ನಿಭಾಯಿಸಿದ್ದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: Mamata Banerjee: ಮಮತಾ ಬ್ಯಾನರ್ಜಿ ಹಣೆಗೆ ಗಾಯ; ಭದ್ರತೆ ಬಗ್ಗೆ ಬಿಜೆಪಿ ಕಳವಳ

Exit mobile version