Site icon Vistara News

Wayanad Landslide: ವೈನಾಡ್‌ ಭೂಕುಸಿತದಲ್ಲಿ 13 ಕನ್ನಡಿಗರು ನಾಪತ್ತೆ; ನಾಲ್ವರ ಶವ ಪತ್ತೆ, ಇನ್ನುಳಿದವರಿಗಾಗಿ ಶೋಧ

wayanad lanslide

ಚಾಮರಾಜನಗರ: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತ (wayanad landslide, kerala landslide) ಪ್ರಕರಣದಲ್ಲಿ ಕರ್ನಾಟಕದ (Karnataka) ಹತ್ತಾರು ಮಂದಿ ಕಣ್ಮರೆ (missing) ಆಗಿದ್ದಾರೆ. ಒಟ್ಟು 13 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಅಂದಾಜು ಲೆಕ್ಕ ಇದುವರೆಗೆ ಸಿಕ್ಕಿದೆ. ಇವರಲ್ಲಿ ನಾಲ್ಕು ಮಂದಿಯ ಶವ ಸಿಕ್ಕಿದ್ದು, ಇನ್ನುಳಿದವರಿಗಾಗಿ ತೀವ್ರ ಶೋಧ (Rescue operation) ನಡೆಯುತ್ತಿದೆ.

ವೈನಾಡಿನಲ್ಲಿ ಕರ್ನಾಟಕ‌ ಮೂಲದ ನಾಪತ್ತೆಯಾದವರಿಗಾಗಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆದಿದೆ. ಈವರೆಗೆ ಗೊತ್ತಾಗಿರುವ, ನಾಪತ್ತೆಯಾಗಿರುವ ರಾಜ್ಯದ 10 ಮಂದಿಯ ಹೆಸರುಗಳು ಹೀಗಿವೆ:

ಗುರುಮಲ್ಲನ್(10)
ಸಾವಿತ್ರಿ (54)
ಸಬಿತಾ (43)
ಶಿವಣ್ಣನ್ (50)
ಅಪ್ಪಣ್ಣನ್(39)
ಅಶ್ವಿನ್ (13)
ಜೀತು (11)
ದಿವ್ಯಾ (35)
ರತ್ನಾ(48)

ಈವರೆಗೆ ರಾಜೇಂದ್ರ (50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ (62), ರಾಣಿ (50) ಎಂಬವರ ಶವರಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ.

ಚಾಮರಾಜನಗರ ಮೂಲದ ಇಬ್ಬರ ಸಾವು ಧೃಡ

ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟ ಸಿದ್ದಿ(62) ಹಾಗು ರಾಣಿ ಎಂಬವರ ತಾಯಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೋಕು ಇರಸವಾಡಿ ಮೂಲದ ರಾಜನ್ ಹಾಗು ರಜನಿ ನಾಪತ್ತೆಯಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದ ರಾಜನ್ ಹಾಗು ರಜನಿ(55) ವಾಸವಿದ್ದರು. ರಾಜನ್, ರಜನಿಗಾಗಿ ಶೋಧಕಾರ್ಯ ನಡೆದಿದೆ.

ಚಾಮರಾಜನಗರ ಜಿಲ್ಲೆಯ ರಾಜೇಂದ್ರ(50), ರತ್ನಮ್ಮ(45), ಪುಟ್ಟಸಿದ್ದಶೆಟ್ಟಿ(62), ರಾಣಿ(50) ಇವರ ಶವಗಳು ದೊರೆತಿವೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ರಾಜೇಂದ್ರ, ರತ್ನಮ್ಮ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದವರು. ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ವೈನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು, ತಹಸೀಲ್ದಾರ್ ನೇತೃತ್ವದ ತಂಡ ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.

ಮಂಡ್ಯದ ಕುಟುಂಬಕ್ಕೆ ಸಂಕಷ್ಟ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ, ಝಾನ್ಸಿ ಪುತ್ರ ನಿಹಾಲ್, ಅತ್ತೆ ಲೀಲಾವತಿ ನಾಪತ್ತೆಯಾಗಿದ್ದಾರೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವವರಿಗೆ ಝಾನ್ಸಿರಾಣಿಯನ್ನು ಕುಟುಂಬ ಮದುವೆ ಮಾಡಿಕೊಟ್ಟಿತ್ತು. ಕೇರಳದ ಮುಂಡಕೈಯಲ್ಲಿ ಅನಿಲ್, ಪತ್ನಿ ಝಾನ್ಸಿ, ಪುತ್ರ ನಿಹಾಲ್ ಹಾಗೂ ತಂದೆ-ತಾಯಿ ನೆಲೆಸಿದ್ದರು. ಮುಂಡಕೈ ಗುಡ್ಡ ಕುಸಿತದಲ್ಲಿ ಅನಿಲ್ ತಾಯಿ ಲೀಲಾವತಿ(55), ಪುತ್ರ ನಿಹಾಲ್(2.5). ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಅನಿಲ್ ಹಾಗೂ ಅವರ ಪತ್ನಿ ಝಾನ್ಸಿ, ತಂದೆ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರಿಗೆ ಕೇರಳದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕುಟುಂಬಸ್ಥರನ್ನು ಕಾಣಲು ಝಾನ್ಸಿರಾಣಿ ಕುಟುಂಬಸ್ಥರು ಕೇರಳಕ್ಕೆ ತೆರಳಿದ್ದಾರೆ.

ಹನಿಮೂನ್‌ಗೆ ಬಂದವರು ಹೆಣವಾದರು

ಬೆಂಗಳೂರಿನಿಂದ ಹನಿಮೂನ್‌ಗೆ ಬಂದಿದ್ದ 4 ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಒರಿಸ್ಸಾ ಮೂಲದ ಎರಡು ನವ ಜೋಡಿಗಳು ಬಂದು ತಂಗಿದ್ದ ರೆಸಾರ್ಟ್‌ ಇವರು ಮಲಗಿದ್ದಲ್ಲೇ ಕೊಚ್ಚಿ ಹೋಗಿದೆ. ರೆಸಾರ್ಟ್‌ನಿಂದ 300 ಮೀಟರ್ ದೂರದಲ್ಲಿ ಕಾರಿನಲ್ಲಿ ಮಲಗಿದ್ದ ಹಾವೇರಿ ಮೂಲದ ಡ್ರೈವರ್ ಮಂಜುನಾಥ್ ಪಾರಾಗಿದ್ದಾರೆ. ಇವರು ದುರಂತದಲ್ಲಿ ಬದುಕುಳಿದಿದ್ದೇ ಅಚ್ಚರಿ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಮಲಗಿದ್ದಕ್ಕೆ ಪ್ರಾಣ ಉಳಿಯಿತು. ರೆಸಾರ್ಟ್‌ನಲ್ಲಿ ಮಲಗಿದ್ರೆ ನಾನು ಬದುಕುತ್ತಿರಲಿಲ್ಲ. ಎತ್ತರದ ಪ್ರದೇಶದಲ್ಲಿ ಕಾರ್ ನಿಲ್ಲಿಸಿದ್ದರಿಂದ ಬಚಾವ್ ಆಗಿದ್ದೇನೆ. ನನ್ನ ಕಾರು ಕೂಡ ಅಲ್ಲೇ ಇದೆ ಎಂದು ಕೇರಳದ ವಯನಾಡಿನಲ್ಲಿ ಕ್ಯಾಬ್ ಡ್ರೈವರ್ ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಸಹಾಯವಾಣಿ

ಸಂತ್ರಸ್ತರಿಗಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Exit mobile version