ಕೇರಳ: ಕರ್ನಾಟಕದಿಂದ ಕೇರಳವನ್ನು (Karnataka- Kerala) ಸಂಪರ್ಕಿಸುವ ಮೈಸೂರು- ಸುಲ್ತಾನ್ ಬತ್ತೇರಿ- ವೈನಾಡು ರಸ್ತೆ ಸಂಪರ್ಕವನ್ನು (Road Cut) ಕಡಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ತಂಡಗಳು ಭೂಕುಸಿತದಿಂದ ತತ್ತರಿಸಿರುವ (Wayanad landslide, Kerala Landslide) ವೈನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಬಂಡಿಪುರ ಚೆಕ್‌ಪೋಸ್ಟ್‌ನಲ್ಲಿ (Bandipura Checkpost) ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್ ಕಾರಿಡಾರ್ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಬಸ್ಸುಗಳು ಸಂಚಾರ ರದ್ದುಪಡಿಸಿವೆ.
ಗುಂಡ್ಲುಪೇಟೆ ಮಾರ್ಗವಾಗಿ ಸಾಗುವ ಬೆಂಗಳೂರು-ವೈನಾಡ್ ರಾಷ್ಟ್ರೀಯ ಹೆದ್ದಾರಿ 766 ರ ಮಾರ್ಗದಲ್ಲಿ ಸಂಚಾರ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿಸಲಾಗಿದ್ದು, ಪರ್ಯಾಯವಾಗಿ ಗುಂಡ್ಲುಪೇಟೆ-ಬಂಡೀಪುರ-ಗುಡಲೂರ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದ್ದು, ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಈ ಕುರಿತು ಸೂಕ್ತ ಬೆಂಬಲ ನೀಡಿದ್ದಾರೆ.
ಬಸ್ ಸಂಚಾರ ಸ್ಥಗಿತ
ಬೆಂಗಳೂರಿನಿಂದ ಕೇರಳಕ್ಕೆ ಸಂಚಾರ ಮಾಡುವ ಬಹುತೇಕ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕ ಸಾರಿಗೆ, ಕೇರಳ ಸಾರಿಗೆ ಇಲಾಖೆಗೆ ಸೇರಿದ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕಣ್ಣೂರು, ನಿಲಾಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿದಂತೆ ಕೆಲ ಭಾಗಗಳಿಗೆ ಮಾತ್ರ ಬೇರೆ ಬೇರೆ ಮಾರ್ಗಗಳ ಮೂಲಕ ಸಂಚಾರ ನಡೆಯುತ್ತಿದೆ.
ಕೇರಳದಿಂದಲೂ ಇಂದು ಬೆಂಗಳೂರಿಗೆ ಬಸ್‌ಗಳು ಬಂದಿಲ್ಲ. ಬೆಂಗಳೂರಿನಿಂದ ಕೇರಳಕ್ಕೆ ನಿತ್ಯ ಕೇರಳ ಸಾರಿಗೆ ಇಲಾಖೆಯ 15ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಆಗುತ್ತಿತ್ತು. ಇಂದು ಕೇವಲ ಮೂರು ಬಸ್‌ಗಳು ಮಾತ್ರ ಸಂಚರಿಸಿವೆ. ಪ್ರತಿ ನಿತ್ಯ ರಾತ್ರಿ 8 ಗಂಟೆ ಬಳಿಕ ರಾಜ್ಯ ಸಾರಿಗೆಯಿಂದ 10ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಇರುತ್ತಿದ್ದು, ಇಂದು ಒಂದು ಬಸ್ ಮಾತ್ರ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿದೆ.
ಸಂಜೆಯಿಂದ ಗುಂಡ್ಲುಪೇಟೆ- ಕೇರಳ ರಸ್ತೆ ಸಂಪರ್ಕ ಕೂಡ ಕಡಿತಗೊಂಡ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರಕ್ಕೆ ತಡೆಯಾಗಿದೆ. ಕೇರಳದ ಮುತ್ತುಂಗ ಚೆಕ್ಪೋಸ್ಟ್ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತವಾಗಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಳಗ್ಗೆಯಿಂದ ವಯನಾಡು ಭಾಗಕ್ಕೆ ಬೆಂಗಳೂರಿನಿಂದ 21ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡಬೇಕಿತ್ತು. ಆದರೆ ಮಳೆ ಹಾಗೂ ಗುಡ್ಡ ಕುಸಿತದ ಪರಿಣಾಮ 15ಕ್ಕೂ ಹೆಚ್ಚು ಬಸ್‌ಗಳು ಸ್ಥಗಿತಗೊಂಡಿವೆ. ಬಹುತೇಕ ಪ್ರಯಾಣಿಕರು ಸ್ವಯಂಪ್ರೇರಿತವಾಗಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಉಳಿದಂತೆ ಕೆಲ ಪ್ರಯಾಣಿಕರನ್ನು ಕ್ಲಬ್ ಮಾಡಿ ಮೂರ್ನಾಲ್ಕು ಬಸ್‌ಗಳಲ್ಲಿ ಬೇರೆ ಬೇರೆ ಮಾರ್ಗವಾಗಿ ಕಳಿಸಲು ಅನುವು ಮಾಡಿಕೊಡಲಾಗಿದೆ.
ಭೂಕುಸಿತದ ತ್ಯಾಜ್ಯ ವಿಲೇವಾರಿ
ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ, ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಸಹಾಯವಾಣಿ
ಸಂತ್ರಸ್ತರಿಗಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.