ನವದೆಹಲಿ: ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನಗಳ (MIRV) ಅಗ್ನಿ -5 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಉಡಾವಣೆ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಲವಾರು ವರ್ಷಗಳಿಂದ ಸಂಶೋಧನೆ ನಡೆಸಿ ಅಭಿವೃದ್ಧಿ ಮಾಡಿದ ಎಂಐಆರ್ಐವಿ ಭಾರತದ ಸೇನೆ ಸೇರಲಿದೆ. ಈ ಪರೀಕ್ಷೆಗೆ ಮಿಷನ್ ದಿವ್ಯಾಸ್ತ್ರ (Mission Divyastra) ಎಂದು ಹೆಸರಿಡಲಾಗಿದೆ. ಇದರೊಂದಿಗೆ ತಂತ್ರಜ್ಞಾನವನ್ನು ಹೊಂದಿರುವ ರಾಷ್ಟ್ರಗಳ ಗಣ್ಯ ಪಟ್ಟಿಗೆ ಸೇರ್ಪಡೆಗೊಂಡಿದೆ. ಭಾರತೀಯ ರಕ್ಷಣಾ ಕ್ಷೇತ್ರದ ಪಾಲಿಗೆ ಇದು ಐತಿಹಾಸಿಕ ಮೈಲಿಗಲ್ಲಾಗಿದೆ. ಯಾಕೆಂದರೆ ಭಾರತವೀಗ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ಸಾಲಿಗೆ ಸೇರ್ಪಡೆಗೊಂಡಿದೆ.
ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (MIRV) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ -5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಗೆ ‘ಮಿಷನ್ ದಿವ್ಯಾಸ್ತ್ರ ಎಂದು ಹೆಸರಿಡಲಾಗಿತ್ತು. ಈ ಸಾಧನೆಗಾಗಿ ಡಿಆರ್ಡಿಒ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ವಿಶೇಷ ಎಂದರೆ ಡಿಆರ್ಡಿಒದ ಮಹಿಳಾ ವಿಜ್ಞಾನಿಯೊಬ್ಬರು ಈ ಮಿಷನ್ನ ನೇತೃತ್ವ ವಹಿಸಿದ್ದರು. ಹಲವಾರು ಮಹಿಳಾ ವಿಜ್ಞಾನಿಗಳು ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
MIRV ತಂತ್ರಜ್ಞಾನ ಎಂದರೇನು?
ಡಿಆರ್ಡಿಒ ವಿಜ್ಞಾನಿಗಳು ಅನೇಕ ವರ್ಷಗಳಿಂದ ಮಲ್ಟಿಪಲ್ ಇಂಡಿಪೆಂಡೆಂಟ್ ಟಾರ್ಗೆಟಬಲ್ ರೀ-ಎಂಟ್ರಿ ವೆಹಿಕಲ್ಸ್ (MIRV ) ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ಅಗ್ನಿ -5ನಂಥ ಒಂದೇ ಕ್ಷಿಪಣಿಗೆ ಅನೇಕ ಸಿಡಿತಲೆಗಳನ್ನು ಸಾಗಿಸಲು ಮತ್ತು ಸ್ವತಂತ್ರವಾಗಿ ಅನೇಕ ಗುರಿಗಳೆಡೆಗೆ ಸಾಗಲು ಅನುವು ಮಾಡಿಕೊಡುತ್ತದೆ. ಡಿಆರ್ಡಿಒ ಅಭಿವೃದ್ಧಿಪಡಿಸಿದ ವ್ಯವಸ್ಥೆಯು ದೇಶೀಯ ಏವಿಯಾನಿಕ್ಸ್ ವ್ಯವಸ್ಥೆಗಳು ಮತ್ತು ಹೆಚ್ಚಿನ ನಿಖರತೆಯ ಸಂವೇದಕ ಪ್ಯಾಕೇಜ್ಗಳಿಂದ ತುಂಬಿದೆ. ಈ ಮೂಲಕ ಕ್ಷಿಪಣಿಯು ಅಪೇಕ್ಷಿತ ನಿಖರತೆಯೊಳಗೆ ಗುರಿ ತಲುಪುವುದನ್ನು ಖಾತರಿಪಡಿಸುತ್ತದೆ.
ಅಗ್ನಿ-5 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM) ಆಗಿದ್ದು, ಇದು ಮೊದಲು ಬಾಹ್ಯಾಕಾಶಕ್ಕೆ ಹೋಗಿ ಬಳಿಕ ಭೂಮಿಯ ವಾತಾವರಣಕ್ಕೆ ಮರಳುತ್ತದೆ. ಎಂಐಆರ್ವಿ ತಂತ್ರಜ್ಞಾನದೊಂದಿಗೆ ವಿವಿಧ ಸ್ಥಳಗಳಲ್ಲಿರುವ ಅನೇಕ ಗುರಿಗಳನ್ನು ಒಂದೇ ಕ್ಷಿಪಣಿಯಿಂದ ಹಲವಾರು ಸಿಡಿತಲೆಗಳ ಮೂಲಕ ನಾಶ ಮಾಡಬಹುದು. ಈ ಸಿಡಿತಲೆಗಳು ಪರಮಾಣು ಅಥವಾ ಪರಮಾಣು ಅಲ್ಲದಿರುವ ಅಸ್ತ್ರಗಳಾಗಿರುತ್ತವೆ. ಒಟ್ಟಿನಲ್ಲಿ ಈ ತಂತ್ರಜ್ಞಾನವು ಕ್ಷಿಪಣಿಗೆ ಹಲವಾರು ಬಾಂಬ್ ಗಳನ್ನು ಏಕಕಾಲಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ. ಈ ಬಾಂಬ್ಗಳನ್ನು ನೂರಾರು ಕಿಲೋಮೀಟರ್ ದೂರದಲ್ಲಿರುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಬಹುದು . ಕೆಲವು ಎಂಐಆರ್ವಿ ಕ್ಷಿಪಣಿಗಳು 1,500 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಸಹ ಹೊಡೆದುರುಳಿಸುತ್ತವೆ.
ಯುದ್ಧದ ವೇಳೆ ಅನುಕೂಲ
ಕ್ಷಿಪಣಿಯ ಸಾಮರ್ಥ್ಯವು ಯುದ್ಧದ ಸಮಯದಲ್ಲಿ ಏಕಕಾಲಕ್ಕೆ ಹಲವಾರು ಗುರಿಗಳನ್ನು ಭೇದಿಸಲು ನೆರವು ನೀಡುತ್ತದೆ. ಅಗ್ನಿ-5 ಕ್ಷಿಪಣಿಯನ್ನು ಈ ಹಿಂದೆ ಪರೀಕ್ಷಿಸಲಾಗಿತ್ತು, ಆದರೆ ಒಂದೇ ಸಿಡಿತಲೆಯೊಂದಿಗೆ ಪರೀಕ್ಷೆ ಮಾಡಲಾಗಿತ್ತು. ಕ್ಷಿಪಣಿಯು ಬಾಹ್ಯಾಕಾಶಕ್ಕೆ ಹೋಗಿ ವಾತಾವರಣವನ್ನು ಮತ್ತೆ ಪ್ರವೇಶಿಸಿದಾಗ ಚಲನ ಶಕ್ತಿಯ ಸಹಾಯದಿಂದ ಶಬ್ದದ ಕನಿಷ್ಠ ಐದು ಪಟ್ಟು ವೇಗದೊಂದಿಗೆ ಗುರಿಯನ್ನು ತಲುಪುತ್ತಿತ್ತು. ಇದರ ಮೂಲಕ ತಂತ್ರಜ್ಞಾನದೊಂದಿಗೆ ಎದುರಾಳಿಗಳು ಬಳಸುವ ಕ್ಷಿಪಣಿ ವಿರೋಧಿ ರಕ್ಷಣಾ (AMD) ವ್ಯವಸ್ಥೆಗಳ ಪರಿಣಾಮವನ್ನು ತಗ್ಗಿಸಲು ಸಾಧ್ಯವಾಗುತ್ತದೆ.
ಅಗ್ನಿ -5 ಕ್ಷಿಪಣಿ ಕನಿಷ್ಠ 5,000 ಕಿ.ಮೀ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದೆ. ಅದು ನಗರಗಳನ್ನು ಗುರಿಯಾಗಿಸಬಲ್ಲದು. ಎಂಐಆರ್ವಿ ತಂತ್ರಜ್ಞಾನವು ಆ ವ್ಯಾಪ್ತಿಯೊಳಗಿನ ಅನೇಕ ನಗರಗಗಳ ಮೇಲೆ ದಾಳಿ ಮಾಡಲು ನೆರವಾಗುತ್ತದೆ. ಆದರೆ, ಕ್ಷಿಪಣಿಯ ವ್ಯಾಪ್ತಿಯ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ.
ವಾಯುಪಡೆಗೆ ಎಚ್ಚರಿಕೆ
ಪರೀಕ್ಷೆಗೆ ಮುಂಚಿತವಾಗಿ ಕಳೆದ ವಾರ ನೋಟಾಮ್ ಎಚ್ಚರಿಕೆಯನ್ನು (NOTAM Alert) ನೀಡಲಾಗಿತ್ತು. ನೋಟಾಮ್ ಎಂದರೆ ವಾಯುಪಡೆಯವರಿಗೆ ನೋಟಿಸ್ ನೀಡುವುದು. ನಿರ್ದಿಷ್ಟ ಪ್ರದೇಶದಲ್ಲಿ ಯುದ್ಧ ವಿಮಾನಗಳ ಹಾರಾಟಗಳಿಗೆ ನಿಷೇಧ ವಲಯವೆಂದು ಹೇಳುವ ಎಚ್ಚರಿಕೆ. ಮಾರ್ಚ್ 11 ಮತ್ತು 16 ರ ನಡುವೆ ಯಾವುದೇ ಸಮಯದಲ್ಲಿ ನಡೆಯಬಹುದಾದ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿ ಪ್ರದೇಶಕ್ಕೆ ಈ ಎಚ್ಚರಿಕೆ ನೀಡಲಾಗಿತ್ತು. ನೋಟಾಮ್ ಎಚ್ಚರಿಕೆಯಲ್ಲಿ ನಿಗದಿಪಡಿಸಲಾದ ನಿಷೇಧ ವಲಯವು ಬಂಗಾಳ ಕೊಲ್ಲಿಯ ದಕ್ಷಿಣಕ್ಕೆ 3,500 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ.
1960ರಲ್ಲಿ ಮೊದಲ ಬಾರಿಗೆ ಬಂದ ತಾಂತ್ರಿಕತೆ
ಈ ತಂತ್ರಜ್ಞಾನವನ್ನು 1960 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಮೆರಿಕ, ಬ್ರಿಟನ್ , ರಷ್ಯಾ, ಫ್ರಾನ್ಸ್ ಮತ್ತು ಚೀನಾ ಇದನ್ನು ಹೊಂದಿದೆ. ಉದಾಹರಣೆಗೆ, ರಷ್ಯಾದ ಎಂಐಆರ್ವಿ ಕ್ಷಿಪಣಿಯು 16 ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್ ಕೂಡ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ ಎಂಬ ವರದಿಗಳಿವೆ.
ಇದನ್ನೂ ಓದಿ : Citizenship Amendment Act : ಸಿಎಎ ಕಾಯ್ದೆ ಜಾರಿಯಾದ ಕ್ಷಣದಲ್ಲೇ ವೆಬ್ಸೈಟ್ ಕ್ರ್ಯಾಶ್
ಈ ತಂತ್ರಜ್ಞಾನಕ್ಕೆ ದೊಡ್ಡ ಕ್ಷಿಪಣಿಗಳು, ಸಣ್ಣ ಸಿಡಿತಲೆಗಳು, ನಿಖರವಾದ ಮಾರ್ಗದರ್ಶನ ಮತ್ತು ಹಾರಾಟದ ಸಮಯದಲ್ಲಿ ಸಿಡಿತಲೆಗಳನ್ನು ಅನುಕ್ರಮವಾಗಿ ಬಿಡುಗಡೆ ಮಾಡುವ ಸಂಕೀರ್ಣ ಕಾರ್ಯವಿಧಾನದ ಅಗತ್ಯವಿರುತ್ತದೆ.
ಎಂಐಆರ್ವಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಮೊದಲ ದೇಶ ಅಮೆರಿಕ. 1970 ರಲ್ಲಿ ಎಂಐಆರ್ವಿ ಹೊಂದಿರುವ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಮತ್ತು 1971 ರಲ್ಲಿ ಎಂಐಆರ್ವಿ ಹೊಂದಿರುವ ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್ಎಸ್ಬಿಎಂ) ಆ ರಾಷ್ಟ್ರ ನಿಯೋಜಿಸಿತ್ತು. ಸೋವಿಯತ್ ಒಕ್ಕೂಟವು ತ್ವರಿತವಾಗಿ ಇದನ್ನು ಅನುಸರಿಸಿತ್ತು. 1970 ರ ದಶಕದ ಅಂತ್ಯದ ವೇಳೆಗೆ ತಮ್ಮ ಎಂಐಆರ್ವಿ -ಶಕ್ತಗೊಂಡ ಐಸಿಬಿಎಂ ಮತ್ತು ಎಸ್ಎಲ್ಬಿಎಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು.
ಪಾಕಿಸ್ತಾನದ ಪ್ರಯತ್ನ
ಪಾಕಿಸ್ತಾನವು ಎಂಐಆರ್ವಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿದೆ. ಅಬಾಬೀಲ್ ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾ ಉಡಾವಣೆಯ ಮೂಲಕ ಅದನ್ನು ಸಾಧಿಸಲು ಯತ್ನಿಸುತ್ತಿದೆ.