ಹೊಸದಿಲ್ಲಿ; ಐಟಿ ನಿಯಮಗಳಿಗೆ (IT Rules) ವಿರುದ್ಧವಾಗಿ ನಡೆದುಕೊಂಡು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ತುತ್ತಾಗಿರುವ ವಾಟ್ಸ್ಯಾಪ್ (WhatsApp), ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ (End to End encription) ಅನ್ನು ಭೇದಿಸಲಾಗುವುದಿಲ್ಲ ಎಂದಿದೆ. ಈ ವಿಚಾರದಲ್ಲಿ ಒತ್ತಡ ಬಂದರೆ ದೇಶವನ್ನೇ ತೊರೆಯುವುದಾಗಿ (WhatsApp Exit India) ಬೆದರಿಕೆ ಹಾಕಿದೆ. ಇದರೊಂದಿಗೆ, ಇದೇ ಕಂಪನಿಗೇ ಸೇರಿದ ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಕೂಡ ದೇಶವನ್ನು ತೊರೆಯಬಹುದೇ ಎಂಬ ಕುತೂಹಲ ಮೂಡಿದೆ.
ವಾಟ್ಸ್ಯಾಪ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳು ಪ್ರಪಂಚದಾದ್ಯಂತದ ಬಳಕೆದಾರರಲ್ಲಿ ತುಂಬಾ ಜನಪ್ರಿಯವಾಗಿವೆ. ಇದು ಜನರ ನಡುವಿನ ಸಂವಹನಕ್ಕೆ ಮಾತ್ರವಲ್ಲದೆ ಅನೇಕ ಅಧಿಕೃತ, ಕಚೇರಿ ಕೆಲಸಗಳಿಗೂ ಉತ್ತಮ ಮಾಧ್ಯಮವಾಗಿವೆ. ಆದರೆ ಮೆಟಾ ಒಡೆತನದ ವಾಟ್ಸ್ಯಾಪ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಅದು ಭಾರತವನ್ನು ತೊರೆಯಬಹುದು ಎಂಬ ವರದಿಗಳಿವೆ. ಇದರ ಹಿಂದಿನ ಕಾರಣ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಗೌಪ್ಯತೆ ವೈಶಿಷ್ಟ್ಯ. ಇದು ಭಾರತ ಸರ್ಕಾರದ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ವಿರುದ್ಧವಾಗಿದೆ.
WhatsApp ಪ್ರಕಾರ, ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ತೆಗೆದುಹಾಕಲು ಭಾರತ ಸರಕಾರದಿಂದ ಒತ್ತಡ ಬಂದರೆ, ಅದು ಭಾರತಕ್ಕೆ ವಿದಾಯ ಹೇಳುವುದು ಖಚಿತ. ಐಟಿ ನಿಯಮಗಳು 2021ರ ನಿಯಮ 4(2) ರ ಅಡಿಯಲ್ಲಿ ಭಾರತ ಸರ್ಕಾರ ಮತ್ತು WhatsApp ನಡುವೆ ಸಮರ ನಡೆಯುತ್ತಿದೆ. ಈ ನಿಯಮದ ಪ್ರಕಾರ, ಸರ್ಕಾರ ಕೇಳಿದಾಗ, ವಾಟ್ಸ್ಯಾಪ್ ವೇದಿಕೆಯು ನಿರ್ದಿಷ್ಟ ಸಂದೇಶದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ.
ಭಾರತದ ಐಟಿ ನಿಯಮಗಳು- 2021ಕ್ಕೆ ಮೆಟಾ ಸವಾಲು ಹಾಕಿದೆ. ಈ ಬಗ್ಗೆ ವಾಟ್ಸ್ಯಾಪ್, ನ್ಯಾಯಾಲಯದಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ತಿಳಿಸಿತ್ತು. ಆದರೆ, ಬಳಕೆದಾರರ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ, ಕಂಪನಿಯು ತನ್ನ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಅನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದಿದೆ. ವಾಟ್ಸ್ಯಾಪ್ ಹಾಗೂ ಮೂಲ ಕಂಪನಿ ಮೆಟಾ ಭಾರತವನ್ನು ತೊರೆದರೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕೂಡ ಇಲ್ಲಿಂದ ಹೊರಡಬಹುದು.
WhatsApp ಭಾರತದಲ್ಲಿ ಅತ್ಯಗತ್ಯ ಸೋಶಿಯಲ್ ಮೀಡಿಯಾ ಹಾಗೂ ಸಂದೇಶ ವೇದಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ, ಈ ವೇದಿಕೆಯನ್ನು ವಿಶ್ವಾದ್ಯಂತ 278 ಕೋಟಿ ಬಳಕೆದಾರರು ಬಳಸುತ್ತಾರೆ. ಹೆಚ್ಚಿನ ಭಾರತೀಯ ಬಳಕೆದಾರರು ಇದನ್ನು ಬಳಸುತ್ತಾರೆ. ಮೆಟಾಗೆ 53.58 ಕೋಟಿ ಭಾರತೀಯ ಬಳಕೆದಾರರು ಭಾರತದಲ್ಲಿದ್ದಾರೆ. ಹೀಗಾಗಿ ಮೆಟಾ ಕಂಪನಿಗೆ ಭಾರತದ ಮಾರುಕಟ್ಟೆಯೂ ಮಹತ್ವದ್ದಾಗಿದೆ.
WhatsApp ಅನ್ನು ಫೆಬ್ರವರಿ 2009ರಲ್ಲಿ ಪ್ರಾರಂಭಿಸಲಾಯಿತು. ಇದರ ಆರಂಭಿಕ ಆವೃತ್ತಿಯು ಕ್ರ್ಯಾಶಿಂಗ್ ಸಮಸ್ಯೆಗಳನ್ನು ಹೊಂದಿತ್ತು. ಐಫೋನ್‌ನಲ್ಲಿ WhatsApp 2.0 ಅನ್ನು ಆಗಸ್ಟ್ 2009ರಲ್ಲಿ ಬಿಡುಗಡೆ ಮಾಡಲಾಯಿತು. 250000 ಜನರು ಡೌನ್‌ಲೋಡ್ ಮಾಡಿದರು. ನಂತರ 2010ರಲ್ಲಿ Android ಬಳಕೆದಾರರಿಗೆ ಪರಿಚಯಿಸಲಾಯಿತು. ಅಂದಿನಿಂದ ವಾಟ್ಸ್ಯಾಪ್ ಜನಪ್ರಿಯತೆಯ ತುದಿ ಮುಟ್ಟಿದೆ. ಸದ್ಯ ಭಾರತ ಸರ್ಕಾರ ಮತ್ತು ವಾಟ್ಸ್ಯಾಪ್ ನಡುವಿನ ಸಮರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೇಲೆ ಕೂಡ ಪರಿಣಾಮ ಬೀರುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಇದನ್ನು ಓದಿ: WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್ ಸಿಗೋಲ್ಲ! ನಿಮ್ಮ ಫೋನ್ ಕೂಡ ಇದೆಯಾ ನೋಡಿಕೊಳ್ಳಿ