ಮೂರು ದಿನಗಳ ಹಿಂದೆಯಷ್ಟೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕಾರಿನಲ್ಲಿ ಚಲಿಸುವಾಗ ಸೀಟ್ ಬೆಲ್ಟ್ ಧರಿಸದ್ದಕ್ಕೆ ಇಂಗ್ಲೆಂಡ್‌ನ ಲಂಕಾಷೈರ್ ಪೊಲೀಸರು 100 ಪೌಂಡ್(ಸುಮಾರು 10 ಸಾವಿರ ರೂ.) ದಂಡ ವಿಧಿಸಿದ್ದರು. ತಮ್ಮ ತಪ್ಪಿನ ಅರಿವಾದ ಬಳಿಕ ರಿಷಿ ಸುನಕ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಕ್ಷಮೆ ಕೋರಿದ್ದರು. ಮತ್ತೊಂದೆಡೆ, ನಿನ್ನೆಯಷ್ಟೇ, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ನಿವಾಸವನ್ನು ಸರ್ಚ್ ವಾರಂಟ್ ಇಲ್ಲದೇ ಎಫ್‌ಬಿಐ ಅಧಿಕಾರಿಗಳು 13 ಗಂಟೆ ಶೋಧ ನಡೆಸಿದ್ದಾರೆ. ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಜಗತ್ತಿನ ಈ ಪ್ರಭಾವಿ ನಾಯಕರನ್ನು ಅಲ್ಲಿಯ ಸ್ಥಳೀಯ ಪೊಲೀಸರು, ತನಿಖಾ ಸಂಸ್ಥೆಗಳು ಯಾವುದೇ ಹಿಂಜರಿಕೆ ಇಲ್ಲದೆ ಕಾನೂನು ಪ್ರಕಾರ ಕ್ರಮ ಕೈಗೊಂಡಿವೆ. ಆ ಮೂಲಕ ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಜಗತ್ತಿಗೆ ಸಾರಿವೆ. ಆದರೆ, ಇಂಥ ಯಾವುದೇ ಒಂದು ಉದಾಹರಣೆಯನ್ನು ನಾವು ಭಾರತದಲ್ಲಿ ನೋಡಲು ಸಾಧ್ಯವಿಲ್ಲ. ಅಧಿಕಾರದಲ್ಲಿರುವ ಪ್ರಭಾವಿ ನಾಯಕರನ್ನು ಬದಿಗಿರಿಸೋಣ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರದಲ್ಲಿ ಇಲ್ಲದ ನಾಯಕರಿಗೂ ದಂಡ ವಿಧಿಸಲು ನಮ್ಮಲ್ಲಿ ಸಾಧ್ಯವಿಲ್ಲ; ಇನ್ನು ವಿಚಾರಣೆ, ತನಿಖೆ, ಶೋಧಗಳು ದೂರದ ಮಾತು!
ನಮ್ಮ ದೇಶದಲ್ಲಿ ಮಾತ್ರ ಯಾಕೆ ಹೀಗೆ ಎಂಬ ಪ್ರಶ್ನೆ ಸಹಜ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆಯೇ ನಮ್ಮಲ್ಲಿ ಪೊಲೀಸ್ ವ್ಯವಸ್ಥೆ ಇದೆ, ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿವೆ. ಸಂವಿಧಾನ ಬದ್ಧ ಅಧಿಕಾರಗಳನ್ನೂ ಅವು ಹೊಂದಿವೆ. ಹಾಗಿದ್ದೂ, ಕೆಲವು ಸಂದರ್ಭದಲ್ಲಿ ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳನ್ನು ಮುಟ್ಟಲೂ ನಮ್ಮ ಕಾನೂನು ರಕ್ಷಕರಿಗೆ ಆಗುವುದಿಲ್ಲ. ಅಂಥ ರಕ್ಷಣಾತ್ಮಕ ಬೇಲಿಗಳನ್ನು ಇಲ್ಲಿನ ರಾಜಕಾರಣಿಗಳು, ನಾಯಕರು ಹಾಕಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲೋ, ಅಮೆರಿಕದಲ್ಲೋ ಅಲ್ಲಿನ ಪ್ರಧಾನಿ ಅಥವಾ ಅಧ್ಯಕ್ಷರನ್ನು ಸುಲಭವಾಗಿ ವಿಚಾರಣೆಗೊಳಪಡಿಸಿದಂತೆ ಭಾರತದಲ್ಲಿ ಸಾಧ್ಯವಿಲ್ಲ.
ಭಾರತದ ಮಟ್ಟಿಗೆ ಕಾನೂನು ಮುಂದೆ ಎಲ್ಲರೂ ಸಮಾನರು; ಎಲ್ಲರೂ ತಲೆ ಬಾಗಲೇಬೇಕು ಎಂಬಂಥ ಮಾತುಗಳು ಸಿನಿಮಾದಲ್ಲಿ ಕೇಳಲು, ಪುಸ್ತಕಗಳಲ್ಲಿ ಓದಲು ಚಂದ ಎಂಬಂಥ ಪರಿಸ್ಥಿತಿಯಿದೆ. ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ಲೋಕಾಯಕ್ತ, ಸಿವಿಸಿ, ಲೋಕಪಾಲ್‌ಗಳಂಥ ಸಂವಿಧಾನ ಬದ್ಧ ಸಂಸ್ಥೆಗಳಿವೆ. ಆದರೆ, ಭ್ರಷ್ಟಾಚಾರ ಆರೋಪದಲ್ಲಿ ಮುಖ್ಯಮಂತ್ರಿಯನ್ನೋ, ಪ್ರಧಾನಿಯನ್ನೋ ವಿಚಾರಣೆಗೆ ಒಳಪಡಿಸುವುದು ಸುಲಭವಾಗಿ ಸಾಧ್ಯವೇ ಇಲ್ಲ. ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಲೋಕಪಾಲ್ ಸಂಸ್ಥೆ ಅಸ್ತಿತ್ವದಲ್ಲಿದೆ. ಆದರೆ, ಇದುವರೆಗೆ ಯಾವುದೇ ಕೇಂದ್ರ ಸಚಿವರಾಗಲೀ, ಉನ್ನತ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿದ ಒಂದೇ ಒಂದು ಉದಾಹರಣೆ ಇಲ್ಲ.
ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕವೇ ಅಧಿಕಾರಕ್ಕೇರಿದ ಆಮ್ ಆದ್ಮಿ ಪಾರ್ಟಿ (ಆಪ್) ದಿಲ್ಲಿಯಲ್ಲಿ ತನ್ನದೇ ಆದ ಲೋಕಪಾಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ದಿಲ್ಲಿ ಮುಖ್ಯಮಂತ್ರಿಯನ್ನು ವಿಚಾರಣೆಗೊಳಪಡಿಸಬೇಕು ಎಂದಾದರೆ, ದಿಲ್ಲಿ ವಿಧಾನಸಭೆ ಮೂರನೇ ಎರಡರಷ್ಟು ಬಹುಮತದೊಂದಿಗೆ ಒಪ್ಪಿಗೆ ನೀಡಬೇಕಾಗುತ್ತದೆ! ಸರ್ಕಾರ ಅವರದ್ದೇ ಇದ್ದಾಗ, ಭಾರೀ ಬಹುಮತ ಇದ್ದಾಗ ಮುಖ್ಯಮಂತ್ರಿ ವಿಚಾರಣೆಗೆ ಒಪ್ಪಿಗೆ ಸಿಗುವುದಾದರೂ ಹೇಗೆ ಸಾಧ್ಯ? ದೇಶದಲ್ಲಿ ದಕ್ಷ ಲೋಕಾಯುಕ್ತ ಎಂಬ ಕೀರ್ತಿ ಕರ್ನಾಟಕದ ಲೋಕಾಯುಕ್ತಕ್ಕೆ ಇದೆ. ಆದರೆ, ಮುಖ್ಯಮಂತ್ರಿಯ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ, ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗತ್ತದೆ! ಈ ಉದಾಹರಣೆಗಳು ತಾತ್ಪರ್ಯ ಇಷ್ಟೇ; ಭಾರತದಲ್ಲಿ ಗಟ್ಟಿಯಾದ ಕಾನೂನುಗಳಿವೆ, ಸಂವಿಧಾನಬದ್ಧ ತನಿಖಾ ಸಂಸ್ಥೆಗಳಿವೆ. ಆದರೆ, ಅವೆಲ್ಲವೂ ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳ ವಿಚಾರಣೆಗೆ ಮುಂದಾದರೆ, ಬಹಳಷ್ಟು ಕಾನೂನು ಪ್ರಕ್ರಿಯೆಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ.
ಹಾಗಾದರೆ, ಇಂಗ್ಲೆಂಡ್ ಮತ್ತು ಅಮೆರಿಕದ ರೀತಿಯಲ್ಲಿ ನಮ್ಮಲ್ಲಿ ಕಾನೂನು ಪಾಲನೆ ಸಾಧ್ಯ ಇಲ್ಲವೇ? ಖಂಡಿತ ಸಾಧ್ಯವಿದೆ. ಅದು ಜನರಿಂದ ಮಾತ್ರವೇ ಸಾಧ್ಯ. ಜನ ಜಾಗೃತಗೊಳ್ಳಬೇಕು. ಈ ಹಿಂದೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಜನ್ ಲೋಕಪಾಲ್ ಜಾರಿಗಾಗಿ ದೊಡ್ಡ ಜನಾಂದೋಲನವೇ ನಡೆಯಿತು. ಅಂದಿನ ಹೋರಾಟದ ಉದ್ದೇಶಗಳು ಶೇ.100ರಷ್ಟು ಈಡೇರಿವೆ ಎಂದಲ್ಲ. ಕನಿಷ್ಠ ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಆಂದೋಲನವು ನೆರವಾಯಿತು ಎಂಬುದು ಸತ್ಯ. ಹಾಗಾಗಿ, ದೇಶದಲ್ಲಿ ಜಾರಿಯಾಗುವ ಎಲ್ಲ ಕಾನೂನುಗಳು ಎಲ್ಲರಿಗೂ ಅನ್ವಯವಾಗುವ ರೀತಿಯಲ್ಲಿರಬೇಕು. ಅಧಿಕಾರದಲ್ಲಿರುವವರಿಗೆ ಮತ್ತು ಅಧಿಕಾರರಹಿತ, ಜನಸಾಮಾನ್ಯರಿಗೆ ಮತ್ತೊಂದು ರೀತಿಯಲ್ಲಿರಬಾರದು. ಸಂವಿಧಾನಬದ್ಧ ರಚನೆಯಾದ ತನಿಖಾ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳನ್ನು ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಅವುಗಳಿಗೆ ಸಾಂವಿಧಾನಿಕ ಅಧಿಕಾರಗಳನ್ನು ಒದಗಿಸಬೇಕು. ಅವು ಅಧಿಕಾರದಲ್ಲಿರುವವರ ಕೈಗೊಂಬೆಗಳಾಗದಂತೆ ನೋಡಿಕೊಳ್ಳಬೇಕು. ಆಗ ನಾವು ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಜಾರಿಯನ್ನು ನಮ್ಮಲ್ಲೂ ಕಾಣಲು ಸಾಧ್ಯವಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಭಾರತದ ಜಿ 20 ನಾಯಕತ್ವಕ್ಕೆ ಕಳಂಕ ಹಚ್ಚಲು ಅಂತಾರಾಷ್ಟ್ರೀಯ ಸಂಚು?