ಹೊಸದಿಲ್ಲಿ: ಡಿಜಿಟಲ್ ಪಾವತಿ (Digital Payments) ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank ) ಮೇಲೆ ಆರ್‌ಬಿಐ (RBI) ನಿರ್ಬಂಧಗಳು ಹಾಗೂ ಇಡಿ ತನಿಖೆಯ ನಡುವೆ, ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ (Paytm CEO Vijay Shekhar Sharma) ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಜಯ್ ಶೇಖರ್ ಶರ್ಮಾರಿಂದ ಯಾಕೆ ರಾಜೀನಾಮೆ ಕೊಡಿಸಲಾಯಿತು, ಇದರಿಂದ ಸಂಸ್ಥೆಯ ಮೇಲೆ ಆಗುವ ಸಕಾರಾತ್ಮಕ ಪರಿಣಾಮವೇನು?
ಮಾರ್ಚ್ 15ರೊಳಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ Paytm ಪಾವತಿ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆದೇಶಿಸಿದ ನಂತರದ ಕ್ರಮಗಳ ಸರಣಿಯಲ್ಲಿ ವಿಜಯ್ ಶೇಖರ್ ರಾಜೀನಾಮೆ ಬಂದಿದೆ. ಗ್ರಾಹಕರ ಗುರುತಿನ ದಾಖಲೆಗಳ ಪರಿಶೀಲನೆಗಳ ಅಸಮರ್ಪಕ ನಿರ್ವಹಣೆ, ಪೋಷಕ ಕಂಪನಿಯಾದ Paytmನ ಆಂತರಿಕ ನಿಯಂತ್ರಣದಲ್ಲಿ ಇಲ್ಲದಿರುವುದು ಸೇರಿದಂತೆ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ RBI ಕ್ರಮ ಕೈಗೊಳ್ಳಲು ವಿವಿಧ ಕಾರಣಗಳಿವೆ.
ಇದೀಗ ವಿಜಯ್ ಶೇಖರ್ ರಾಜೀನಾಮೆಯ ಜೊತೆಗೆ ಪಾವತಿ ಬ್ಯಾಂಕ್ ಮಂಡಳಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ಬ್ಯಾಂಕ್ ಆಫ್ ಬರೋಡಾ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ಭಾರತೀಯ ಆಡಳಿತ ಸೇವೆಯ (IAS) ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸೇರ್ಪಡೆ ಮಾಡುವುದರೊಂದಿಗೆ ಸಂಸ್ಥೆಯ ಕೂಲಂಕಷ ಪರೀಕ್ಷೆಗೆ ಮುಂದಾಗಿದೆ. ಆರ್‌ಬಿಐ ನಿಯಂತ್ರಕ ಮಾನದಂಡಗಳನ್ನು ಅನುಸರಿಸಲು, ಪರಿಸ್ಥಿತಿ ಕೈತಪ್ಪಿ ಹೋಗದಂತೆ ರಕ್ಷಿಸಲು ಪೇಟಿಎಂ ಮಾಡಿರುವ ಪ್ರಯತ್ನವಾಗಿ ಈ ಕ್ರಮಗಳು ಕಂಡುಬರುತ್ತಿವೆ. ಬೋರ್ಡ್ ಪುನರ್ನಿರ್ಮಾಣ ಮಾಡಬೇಕು ಎಂದೇನೂ ಆರ್‌ಬಿಐ ಕಡ್ಡಾಯಗೊಳಿಸಿಲ್ಲ. ಆದರೆ ಈ ಕ್ರಮವು ಆರ್‌ಬಿಐ ನಿಯಮಗಳಿಗೆ ಬದ್ಧವಾಗಿರಲು Paytmನ ಬದ್ಧತೆಯ ಬಗ್ಗೆ ಅದಕ್ಕೆ ಭರವಸೆ ನೀಡುವ ಗುರಿಯನ್ನು ಹೊಂದಿದೆ ಎಂದು ಊಹಿಸಲಾಗಿದೆ.
ವಿಜಯ್ ಶೇಖರ್ ಶರ್ಮಾ ಪದತ್ಯಾಗ ಏಕೆ?
ಶರ್ಮಾ ಅವರು Paytm ಪಾವತಿ ಬ್ಯಾಂಕ್‌ನಲ್ಲಿ 51 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಪೇಟಿಎಂ ಸಂಸ್ಥೆಯ ಮೂಲಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಇದರ ಇತರ ಪಾಲನ್ನು ಹೊಂದಿದೆ. ಸಂಸ್ಥೆಗೆ ಸ್ವತಂತ್ರ ನಿರ್ದೇಶಕರ ನೇಮಕ, ಬೋರ್ಡ್ ಸದಸ್ಯರ ನೇಮಕ ಹಾಗೂ ಹೆಚ್ಚಿನ ಆಡಳಿತಾತ್ಮಕ ಕ್ರಮಗಳನ್ನು ತಮ್ಮ ರಾಜೀನಾಮೆಯು ಸುಗಮಗೊಳಿಸಲಿದೆ ಎಂದು ಶರ್ಮಾ ಹೇಳಿದ್ದಾರೆ. Paytm ಅನ್ನು ಪೇಟಿಎಂ ಪಾವತಿ ಬ್ಯಾಂಕ್ ಘಟಕದಿಂದ ಬೇರ್ಪಡಿಸುವ ಮತ್ತು ಅದನ್ನು ಸ್ವತಂತ್ರ ಘಟಕವಾಗಿ ಇರಿಸುವ ಪ್ರಯತ್ನವಾಗಿಯೂ ಈ ರಾಜೀನಾಮೆ ಕಂಡುಬಂದಿದೆ.
Paytm ಎದುರಿಸುತ್ತಿರುವ ನಿಯಂತ್ರಕ ಕ್ರಮಗಳು ಅದರ ಸ್ಟಾಕ್ ಮೌಲ್ಯದ ಮೇಲೆ ಪರಿಣಾಮ ಬೀರಿದೆ. RBIನ ಆದೇಶದ ನಂತರ ಗಮನಾರ್ಹ ಕುಸಿತ ಕಂಡಿದೆ. ಇತ್ತೀಚೆಗೆ ಷೇರು ಸ್ವಲ್ಪ ಚೇತರಿಕೆಯ ಲಕ್ಷಣಗಳನ್ನು ತೋರಿಸಿದೆ. ಹೊಸ ಬ್ಯಾಂಕಿಂಗ್ ಘಟಕಗಳೊಂದಿಗೆ Paytmನ ಪಾಲುದಾರಿಕೆ ಫಲಪ್ರದವಾಗಿದ್ದು, RBIಯು ಪಾವತಿ ಬ್ಯಾಂಕ್‌ನ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸುವ ಗಡುವನ್ನು ವಿಸ್ತರಿಸಿದೆ.
ನಿರ್ಮಲಾ ಸೀತಾರಾಮನ್ ಅವರ ಕ್ರಮ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman) ಸೋಮವಾರ ಫಿನ್‌ಟೆಕ್ (Fintech) ಉದ್ಯಮದ ಪ್ರತಿನಿಧಿಗಳೊಂದಿಗೆ ಪೇಟಿಎಂನ ಕಾಳಜಿ ಮತ್ತು ಸಮಸ್ಯೆಗಳನ್ನು ಚರ್ಚಿಸಲು ಸಭೆ ನಡೆಸಿದರು. ಆದರೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿನ ಬೆಳವಣಿಗೆಗಳನ್ನು ಈ ಸಭೆಯಲ್ಲಿ ನಿರ್ದಿಷ್ಟವಾಗಿ ತಿಳಿಸಲಾಗಿಲ್ಲ ಎಂದು ಹಾಜರಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಮುಂದಿನ ದಿನಗಳಲ್ಲಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುವ ಯೋಜನೆಯನ್ನು ಹಣಕಾಸು ಸಚಿವಾಲಯ ಪ್ರಕಟಿಸಿದೆ. ಈ ಮುಂಬರುವ ಸಭೆಯು ಫಿನ್‌ಟೆಕ್ ಸಂಸ್ಥೆಗಳು ಮತ್ತು ವಿವಿಧ ಕಾಯಿದೆ ಜಾರಿ ಏಜೆನ್ಸಿಗಳ ನಡುವೆ ಸಂವಹನವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Paytm Employee: ಉದ್ಯೋಗ ಕಳೆದುಕೊಳ್ಳುವ ಭೀತಿ; ಪೇಟಿಎಂ ಉದ್ಯೋಗಿ ಆತ್ಮಹತ್ಯೆ