Site icon Vistara News

ವಿಸ್ತಾರ ಸಂಪಾದಕೀಯ: ಮಹಿಳೆಯರ ಬಾಕ್ಸಿಂಗ್‌ ವಿಕ್ರಮ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಪಾರ ನಿರೀಕ್ಷೆ

Women's Boxing Championship; Expectations are high at the Paris Olympics

#image_title

ನವದೆಹಲಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ, ಭಾರತದ ಲವ್ಲಿನಾ ಬೊರ್ಗೊಹೈನ್​ ಅವರು ಚಿನ್ನದ ಪದಕ ಜಯಿಸಿದ್ದಾರೆ. ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಈವರೆಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ. ಇದೊಂದು ಗಣನೀಯ ಸಾಧನೆಯೇ ಸರಿ. ಈ ಮೂಲಕ, ತೀರಾ ಇತ್ತೀಚಿನವರೆಗೂ ಗಂಡಸರ ಕ್ರೀಡೆಯೆಂದೇ ಪರಿಗಣಿಸಲಾಗಿದ್ದ ಬಾಕ್ಸಿಂಗ್‌ನಲ್ಲಿ ನಮ್ಮ ಮಹಿಳೆಯರು ಪಾರಮ್ಯ ಸಾಧಿಸಿರುವುದು ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ವಿಶ್ವಮಟ್ಟದಲ್ಲಿ ಗಣನೀಯ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮೇರಿ ಕೋಮ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬಳಿಕ ಬಾಕ್ಸಿಂಗ್‌ನತ್ತ ಭಾರತದ ಬಾಲಕಿಯರು ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಮೇರಿ ಕೋಮ್ ಬಗ್ಗೆ ಸಿನಿಮಾ ಕೂಡ ಆಗಿ ಜನಪ್ರಿಯವಾಗಿದೆ. ಮೇರಿ ಕೋಮ್‌ ಅವರು ಎರಡು ದಶಕಗಳಿಂದ ಭಾರತೀಯ ಬಾಕ್ಸಿಂಗ್‌ ಅನ್ನು ಆಳಿದ್ದು ಮಾತ್ರವಲ್ಲದೆ, ಆರು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. ಅಂದು ಮೇರಿ ಕೋಮ್‌ ಅವರ ಬಾಕ್ಸಿಂಗ್‌ ಅನ್ನು ವೀಕ್ಷಿಸುತ್ತ ಬೆಳೆದ ಮಹಿಳೆಯರ ತಲೆಮಾರು ಇಂದು ಬಾಕ್ಸಿಂಗ್‌ನಲ್ಲಿ ಪಾರಮ್ಯವನ್ನು ಸಾಧಿಸಿದೆ. ಲೊವ್ಲೀನಾ ಬೋರ್ಗೊಹೈನ್‌, ನಿಖತ್‌ ಜರೀನ್‌, ನೀತು ಗಂಗಾಸ್‌, ಸ್ವೀಟಿ ಬೂರಾ, ಮಂಜು ರಾಣಿ ಮುಂತಾದವರು ಈ ಕ್ರೀಡೆಯಲ್ಲಿ ಇತಿಹಾಸ ಬರೆಯುತ್ತಿದ್ದಾರೆ. ಇವರಲ್ಲಿ ಹಲವರು ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತದ ವಿಜಯಧ್ವಜವನ್ನು ಹಾರಿಸುವ ಸಾಮರ್ಥ್ಯ ಹೊಂದಿದವರು.

ಬಾಕ್ಸಿಂಗ್‌ ಹಾಗೂ ಕುಸ್ತಿಗಳಲ್ಲಿ ನಮ್ಮ ಮಹಿಳೆಯರು ಪರಿಣಿತರಾಗಿದ್ದು, ʼದಂಗಲ್‌ʼನಂಥ ಚಿತ್ರಗಳು ನಮ್ಮ ದೇಶದ ಮಹಿಳಾ ಕುಸ್ತಿಪಟುಗಳ ಸಾಧನೆಯ ನೈಜ ಕಥೆಗಳಿಂದ ಪ್ರೇರೇಪಿತಗೊಂಡು ಜನಪ್ರಿಯತೆ ಗಳಿಸಿವೆ. ಇದೆಲ್ಲ ಎಲ್ಲಿಂದ ಆರಂಭವಾಯಿತು? ಯಾರೋ ಒಬ್ಬಿಬ್ಬರು ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ, ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಮೆರೆದು, ಪದಕಗಳನ್ನು ಗೆದ್ದು ಪ್ರಸಿದ್ಧರಾದರು. ಸಹಜವಾಗಿಯೇ ಈ ಕ್ರೀಡೆಯ ಬಗೆಗೆ ಆಸಕ್ತಿಯನ್ನು ಹೊಂದಿದ್ದ ಆದರೆ ಯಾವ ಪ್ರೋತ್ಸಾಹವನ್ನೂ ಅದುವರೆಗೆ ಪಡೆದಿರದಿದ್ದ ಗ್ರಾಮೀಣ ಪ್ರತಿಭೆಗಳು ಈ ಕ್ರೀಡೆಗಳಲ್ಲಿಯೂ ಭವಿಷ್ಯವಿದೆ ಎಂಬುದನ್ನು ಕಂಡುಕೊಂಡರು. ಕ್ರೀಡೆಗಳು ಜನಪ್ರಿಯವಾಗತೊಡಗಿದಂತೆ ಸರ್ಕಾರದ ಪ್ರೋತ್ಸಾಹ ಹೆಚ್ಚಿತಲ್ಲದೆ, ಕೋಚಿಂಗ್‌ ಸೌಲಭ್ಯ ಕೂಡ ಹೆಚ್ಚಿತು. ಜನರ ಕುತೂಹಲ ಹಾಗೂ ಕ್ರೀಡೆಗೆ ಪೋಷಣೆ ಕೂಡ ಹೆಚ್ಚಿತು. ಇದೊಂದು ಬಗೆಯ ಸರಣಿ ಪ್ರತಿಕ್ರಿಯೆ. ಆದ್ದರಿಂದ ನಾವು ಈ ಕ್ರೀಡೆಗಳ ಮೊದಲ ತಲೆಮಾರಿನ ಸಾಧಕಿಯರಿಗೆ ಕೃತಜ್ಞರಾಗಿರಬೇಕು.

ಮಹಿಳೆಯರ ಬಾಕ್ಸಿಂಗ್‌, ಕುಸ್ತಿ, ಕ್ರಿಕೆಟ್‌, ಕಬಡ್ಡಿಯಲ್ಲೂ ಈ ಬಗೆಯ ಬೆಳವಣಿಗೆಯನ್ನು ನಾವು ಗಮನಿಸಬಹುದು. ಇಂದು ಭಾರತದ ಪುರುಷ ಕ್ರೀಡಾಪಟುಗಳಿಗಿಂತಲೂ ಮಹಿಳಾ ಕ್ರೀಡಾಳುಗಳೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಿಂಚುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆ ಏನಲ್ಲ. ಆದರೆ ಪೋಷಣೆ ಇನ್ನಷ್ಟು ಬೇಕಿದೆ. ಮುಖ್ಯವಾಗಿ ಗ್ರಾಮೀಣ ಪರಿಸರದಲ್ಲಿ ಈ ಕ್ರೀಡೆಗಳಿಗೆ ಬೇಕಾದ ಕೋಚಿಂಗ್‌ ಲಭ್ಯವಿಲ್ಲ. ಪ್ರತಿಭೆಗಳನ್ನು ಗುರುತಿಸುವ ವ್ಯವಸ್ಥೆಯೂ ಇಲ್ಲ. ಇದು ಸಿದ್ಧವಾಗಬೇಕು. ಮಹಿಳಾ ಬಾಕ್ಸರ್‌ಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು, ಕ್ರೀಡಾ ಪ್ರಾಧಿಕಾರಗಳು ಮತ್ತಷ್ಟು ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಇವರು ಇನ್ನಷ್ಟು ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರತಿಭೆಗಳೂ ಸಿದ್ಧರಾಗುತ್ತಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಹೆಚ್ಚು ಹೆಚ್ಚು ಪದಕ ಗೆಲ್ಲುವ ಆಶಾಕಿರಣ ಮೂಡಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವ್ಯಾಪಕ ಉದ್ಯೋಗ ನಷ್ಟ; ಭರವಸೆಯ ಕ್ರಮಗಳು ನಡೆಯಲಿ

ವಾಸ್ತವವಾಗಿ, ಕಳೆದ ಕೆಲವು ವರ್ಷಗಳ ದಾಖಲೆ ತೆಗೆದು ನೋಡಿದರೆ ಪುರುಷ ಕ್ರೀಡಾಳುಗಳಿಗಿಂತಲೂ ಹೆಚ್ಚಿನ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಮಹಿಳೆಯರೇ ನಮಗೆ ತಂದುಕೊಟ್ಟಿದ್ದಾರೆ. ಆದರೆ ಇವರಿಗೆ ಸೂಕ್ತ ಪ್ರೋತ್ಸಾಹ, ಅಭ್ಯಾಸಕ್ಕೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಕ್ರಿಕೆಟ್‌ನ ಕಣ್ಣು ಕೋರೈಸುವ ಜನಪ್ರಿಯತೆ ಹಾಗೂ ಶ್ರೀಮಂತಿಕೆಯ ಮುಂದೆ ಇತರ ಕ್ರೀಡೆಗಳು ಮಂಕಾಗದಂತೆ ನೋಡಿಕೊಳ್ಳಬೇಕಿದೆ.

Exit mobile version